ಟೋಕಿಯೋ: ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇಂದು ಮತ್ತೆ ಎರಡು ಪದಕಗಳು ಭಾರತದ ಕ್ರೀಡಾಪಟುಗಳಿಗೆ ಲಭಿಸಿವೆ. ಶುಕ್ರವಾರ ಮುಂಜಾನೆ ಟಿ64 ಎತ್ತರದ ಜಿಗಿತದ ಸ್ಪರ್ಧೆಯಲ್ಲಿ ಪ್ರವೀಣ್ ಕುಮಾರ್ ಅವರಿಗೆ ಬೆಳ್ಳಿ ಪದಕ ಲಭಿಸಿದೆ. ಈ ಹಿಂದಿನ ಒಟ್ಟು 11 ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ 11 ಪದಕಗಳನ್ನು ಜಯಿಸಲು ಸಾಧ್ಯವಾಗಿತ್ತು. ಆದರೆ ಈ ಬಾರಿ 12 ಪದಕವನ್ನು ಗೆಲ್ಲಲು ಸಾಧ್ಯವಾಗಿದೆ.
ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡೆಯಲ್ಲಿ ವಿಶ್ವದ ಮೂರನೇ ಶ್ರೇಯಾಂಕಿತ ಹೈಜಂಪ್ ಪ್ಯಾರಾಥ್ಲೀಟ್ ಪ್ರವೀಣ್ ಕುಮಾರ್ 2.07 ಮೀಟರ್ ವರೆಗೆ ಎತ್ತರಕ್ಕೆ ಜಿಗಿಯುವ ಮೂಲಕ ಏಷ್ಯನ್ ದಾಖಲೆ ನಿರ್ಮಿಸುವುದರ ಜತೆಗೆ ಪದಕದ ಕಾಣಿಕೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. 18 ವರ್ಷದ ಯುವ ಪ್ಯಾರಾಥ್ಲೀಟ್ ಫೈನಲ್‌ನಲ್ಲಿ ಅಸಾಧಾರಣ ಪ್ರದರ್ಶನ ತೋರುವ ಮೂಲಕ ದೇಶದ ಕೀರ್ತಿಗೆ ಪಾತ್ರರಾಗಿದ್ದಾರೆ.
ಇದನ್ನು ಓದಿ: ಪ್ಯಾರಾಲಿಂಪಿಕ್ಸ್: ಜಾವಲಿನ್ ಥ್ರೋನಲ್ಲಿ ಚಿನ್ನ ಗೆದ್ದ ಸುಮಿತ್ ಅಂತಿಲ್
ಈ ಆಟದ ವಿಭಾಗದಲ್ಲಿ ಬ್ರಿಟನ್ ನ ಜೋನಾಥನ್ ಬ್ರೂಮ್ ಎಡ್ವರ್ಡ್ಸ್ 2.10 ಮೀಟರ್ ಹೈಜಂಪ್ ಮಾಡುವ ಮೂಲಕ ಚಿನ್ನದ ಪದಕ ಜಯಿಸಿದ್ದಾರೆ. ಪೋಲೆಂಡ್ ನ ಮ್ಯಾಕೀಜ್ ಲೆಪಿಯಾಟೊ 2.04 ಮೀಟರ್ ಎತ್ತರಕ್ಕೆ ಜಿಗಿದು ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡರು. ಪ್ರವೀಣ್ ಕುಮಾರ್ ಸಾಧನೆಗೆ ಹಲವು ಗಣ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಪದಕ ಗಳಿಕೆ 12ಕ್ಕೆ ಏರಿದೆ. 2 ಚಿನ್ನ, 6 ಬೆಳ್ಳಿ ಮತ್ತು 4 ಕಂಚಿನ ಪದಕಗಳು ಲಭಿಸಿವೆ.