ಆರ್ಚರಿ: ಚಾಂಪಿಯನ್ ವಿರುದ್ಧ ಅತನು ದಾಸ್ ಭರ್ಜರಿ ಗೆಲುವು- ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶ

ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಚಾಂಪಿಯನ್ ವಿರುದ್ದ ಭಾರತದ ಬಿಲ್ಲುಗಾರ ಅತನು ದಾಸ್ ಅವರು ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪ್ರಿ-ಕ್ವಾರ್ಟರ್ ಫೈನಲ್  ತಲುಪಿದ್ದಾರೆ.

ಒಲಿಂಪಿಕ್ಸ್ ನಲ್ಲಿ ನಡೆದ ಆರ್ಚರಿ ಪುರುಷರ ವೈಯಕ್ತಿಕ ವಿಭಾಗದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಅತನು ದಾಸ್ ಅವರು ವಿಶ್ವದ ರ‍್ಯಾಂಕಿಂಗ್‌ ಪಟ್ಟದಲ್ಲಿ 3ನೇ ಸ್ಥಾನದಲ್ಲಿರುವ ದಕ್ಷಿಣ ಕೊರಿಯಾದ ಓಹ್ ಜಿನ್ ಹಿಯೆಕ್ ವಿರುದ್ಧ 6-5 ಅಂತರದ ರೋಚಕ ಗೆಲುವು ಸಾಧಿಸಿದ್ದಾರೆ.

16ನೇ ಸುತ್ತಿನ ಪಂದ್ಯದಲ್ಲಿ ಕೊರಿಯಾದ ಒಹ್ ಜಿನ್‌ ಹಿಯೆಕ್ ಮೊದಲ ಸೆಟ್‌ನಲ್ಲಿ 26-25 ಅಂಕಗಳ ಮುನ್ನಡೆ ಸಾಧಿಸುವ ಮೂಲಕ 2 ಅಂಕ ಪಡೆದುಕೊಂಡರು. ಎರಡನೇ ಹಾಗೂ ಮೂರನೇ ಸೆಟ್‌ನಲ್ಲಿ ಉಭಯ ದೇಶಗಳ ಆರ್ಚರ್‌ಗಳು ತಲಾ 27-27 ಅಂಕ ಗಳಿಸಿ ತಲಾ ಒಂದೊಂದು ಅಂಕ ಹಂಚಿಕೊಂಡರು. ಇನ್ನು ನಾಲ್ಕನೇ ಸೆಟ್‌ನಲ್ಲಿ ಆತನು ದಾಸ್ 27-22 ಅಂಕಗಳನ್ನು ಗಳಿಸಿದರು. ಐದನೇ ಸೆಟ್‌ನಲ್ಲಿ ಮತ್ತೆ ಉಭಯ ಆಟಗಾರರು ತಲಾ 28 ಅಂಕ ಗಳಿಸಿದ್ದರಿಂದ ಫಲಿತಾಂಶಕ್ಕಾಗಿ ಶೂಟೌಟ್‌ ಮೊರೆ ಹೋಗಲಾಯಿತು.

ಇದನ್ನು ಓದಿ: ಟೋಕಿಯೋ ಒಲಿಂಪಿಕ್ಸ್‌: ಭಾರತಕ್ಕೆ ಮೊದಲ ಪದಕ – ಬೆಳ್ಳಿ ಪದಕ ಗೆದ್ದ ಸೈಕೋಮ್‌ ಮೀರಾಬಾಯಿ ಚಾನು

ಮೊದಲು ಬಾಣ ಪ್ರಯೋಗಿಸಿದ ಕೊರಿಯಾ ಆರ್ಚರ್ 9 ಅಂಕ ಗಳಿಸಿದರೆ, ಆತನುದಾಸ್ 10 ಅಂಕ ಗಳಿಸುವ ಮೂಲಕ ಬಲಿಷ್ಠ ಕೊರಿಯಾ ಆರ್ಚರ್ ಅವರನ್ನು ಒಲಿಂಪಿಕ್ಸ್‌ ಕ್ರೀಡಾಕೂಟದಿಂದ ಹೊರದಬ್ಬುವಲ್ಲಿ ಯಶಸ್ವಿಯಾದರು.

ಮೊದಲ ಸುತ್ತಿನಲ್ಲಿ ಚೀನಾ ತೈಪೆಯ ಯೂ-ಚೆಂಗ್ ವಿರುದ್ಧ ಹಾಗೂ ಬಳಿಕ ಜಿನ್ ಹಿಯೆಕ್ ವಿರುದ್ಧ ಭಾರತದ ಅಗ್ರ ಬಿಲ್ಲುಗಾರ ಅತನು ದಾಸ್  ಗೆಲುವು ಸಾಧಿಸಿ ಪ್ರಿ-ಕ್ವಾರ್ಟರ್‌ ಫೈನಲ್‌ ಪ್ರವೇಶ ಪಡೆದಿದ್ದಾರೆ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಹಾಗೂ ಕಂಚಿನ ಪದಕ ಸಾಧನೆ ಮಾಡಿದ್ದ ಓಹ್‌ ಜಿನ್ ಜಿಯೆಕ್, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ತಂಡದ ವಿಭಾಗದಲ್ಲಿ ಸ್ವರ್ಣ ಪದಕ ಗೆದ್ದಿದ್ದಾರೆ.

ಅತನು ದಾಸ್ ಅವರ ಪತ್ನಿ ದೀಪಿಕಾ ಕುಮಾರಿ ಬುಧವಾರ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ವಿಶ್ವದ ಅಗ್ರ ಶ್ರೇಯಾಂಕಿತೆ ದೀಪಿಕಾ ಭಾರತಕ್ಕೆ ಪದಕ ಗೆಲ್ಲುವ ಭರವಸೆ ಮೂಡಿಸಿ ಆಟದಲ್ಲಿ ಮುನ್ನಡೆದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *