ವಿಜಯಪುರ: 40 ದಿನಗಳಿಂದ ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಡೆದಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ರಾಜ್ಯ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಶೀಘ್ರವೇ ಬೆಂಗಳೂರಿಗೆ ಹೋರಾಟ ವಿಸ್ತರಿಸಲಾಗುವುದು. ನಿರ್ಲಕ್ಷ್ಯ ತೋರಿದ್ದಲ್ಲಿ, ತೀವ್ರ ಸ್ವರೂಪದ ಹೋರಾಟ ಕೈಗೊಳ್ಳಲಾಗುವುದು’ ಎಂದು ಚಿಂತಕ ಸಿದ್ದನಗೌಡ ಪಾಟೀಲ ತಿಳಿಸಿದರು.
ಇದನ್ನೂ ಓದಿ : ನವದೆಹಲಿ | 8ನೇ ವೇತನ ಆಯೋಗಕ್ಕೆ ಸಂಪುಟ ಅನುಮೋದನೆ : ಸರ್ಕಾರಿ ನೌಕರರಿಗೆ ಕೇಂದ್ರದಿಂದ ಗುಡ್‌ನ್ಯೂಸ್
‘ಕನಕಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಸಾಧ್ಯವಾಗುವುದಾದರೆ, ವಿಜಯಪುರದಲ್ಲಿ ಯಾಕೆ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು? ಜಿಲ್ಲೆಯ ಶಾಸಕರೊಬ್ಬರಿಗೆ ರಾಜಕೀಯ ಲಾಭಕ್ಕಾಗಿ ಮಾತು ಕೊಟ್ಟಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ’ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಜನರೇ ಹೋರಾಟ ನಡೆಸಿದ್ದು, ಇದರಲ್ಲಿ ಯಾವುದೇ ರಾಜಕೀಯ ಹಿತಾಸಕ್ತಿ ಇಲ್ಲ. ಎಲ್ಲ ಪಕ್ಷದವರು ಜೊತೆಗೂಡಿ ಸರ್ಕಾರದ ಮೇಲೆ ಒತ್ತಡ ಹೇರಿ, ಸರ್ಕಾರಿ ಕಾಲೇಜು ಸ್ಥಾಪನೆಗೆ ಆಗ್ರಹಿಸಬೇಕು’ ಎಂದರು.
‘ವಿಜಯಪುರ ಜಿಲ್ಲೆಯಲ್ಲಿ ನವಜಾತ ಶಿಶು, ತಾಯಿ ಮರಣ, ಅಪೌಷ್ಟಿಕತೆ, ಬಡತನ ಹೆಚ್ಚಿದೆ. ಶೈಕ್ಷಣಿಕವಾಗಿ ಜಿಲ್ಲೆ ಹಿಂದುಳಿದಿದೆ. ಕಾರಣ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಿದರೆ, ಈ ಭಾಗದ ಜನರಿಗೆ ಅನುಕೂಲವಾಗಲಿದೆ’ ಎಂದರು.
ಪ್ರಮುಖರಾದ ಅರವಿಂದ ಮಾಲಗತ್ತಿ, ಬಸವರಾಜ ಸೂಳಿಬಾವಿ, ಜಿ.ಬಿ.ಪಾಟೀಲ, ವಿದ್ಯಾವತಿ ಅಂಕಲಗಿ ಇದ್ದರು.
ಇದನ್ನೂ ನೋಡಿ : ರವೆಗೆ ಉಪ್ಪು ಹಾಕಿದ್ರೆ ಉಪ್ಪಿಟ್ಟು ಸಕ್ಕರೆ ಹಾಕಿದ್ರೆ ಶಿರಾ (ಕೇಸರಿಬಾತ್) – ಇದು “ಹಾಸ್ಟೆಲ್‌ಗಳ ಕಥೆ-ವ್ಯಥೆ”
