ಚೆನ್ನೈ: ಕೇಂದ್ರ ಸರ್ಕಾರ ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಿದ ಮೂರು ಕ್ರಿಮಿನಲ್ ಕಾನೂನು ಮಸೂದೆಗಳ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ತಮಿಳುನಾಡು ಮತ್ತು ಪುದುಚೇರಿಯ ವಕೀಲರ ಸಂಘಗಳ ಒಕ್ಕೂಟ ಸೋಮವಾರ ಘೋಷಿಸಿದೆ. ಕೇಂದ್ರ ಸರ್ಕಾರ ಅಂಗೀಕರಿಸಿದ ಈ ಮಸೂದೆಯು ಬ್ರಿಟಿಷರ ಕಾಲದ ಕಾನೂನುಗಳನ್ನು ರದ್ದುಗೊಳಿಸುವ ಪ್ರಯತ್ನ ಎಂದು ಹೇಳಲಾಗುತ್ತಿದೆಯಾದರೂ ವಾಸ್ತವದಲ್ಲಿ ಇದು ಹಿಂದಿ ಹೇರಿಕೆಯ ಹುನ್ನಾರವಾಗಿದೆ ಎಂದು ಅಖಿಲ ಭಾರತ ವಕೀಲರ ಒಕ್ಕೂಟ ಆರೋಪಿಸಿದ್ದು, ವಿವಾದಿತ ಮೂರು ಮಸೂದೆಗಳನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿದೆ.
ಒಕ್ಕೂಟ ಸರ್ಕಾರವು ಇತ್ತೀಚೆಗೆ, ಭಾರತೀಯ ನ್ಯಾಯ ಸಂಹಿತಾ-2023; ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ-2023 ಮತ್ತು ಭಾರತೀಯ ಸಾಕ್ಷಿ ಮಸೂದೆ – 2023 ಎಂಬ ಮೂರು ಮಸೂದೆಗಳನ್ನು ಮಂಡಿಸಿತ್ತು. ಈ ಮೂರು ಮಸೂದೆಗಳನ್ನು ಕ್ರಮವಾಗಿ ಭಾರತೀಯ ದಂಡ ಸಂಹಿತೆ-186o, ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ-1973 ಮತ್ತು ಭಾರತೀಯ ಸಾಕ್ಷಿ ಕಾಯಿದೆ- 1872 ಯ ಬದಲಾಗಿ ಪರಿಚಯಿಸಲಾಗಿದೆ.
ಇದನ್ನೂ ಓದಿ: “ಮುಸ್ಲಿಂ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಬಹಿಷ್ಕಾರಕ್ಕೆ ಸತತ ಕರೆ” ಗಳ ವಿರುದ್ಧ ಸುಪ್ರಿಂ ಕೋರ್ಟಿಗೆ ಬೃಂದಾ ಕಾರಟ್ ಅರ್ಜಿ
ತಮಿಳುನಾಡು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಾದ್ಯಂತ 10 ದಿನಗಳಿಗಿಂತ ಹೆಚ್ಚು ಕಾಲ ಪ್ರತಿಭಟನೆ ನಡೆಸಲಿದೆ ಎಂದು ವಕೀಲರ ಒಕ್ಕೂಟವು ಎಚ್ಚರಿಸಿದೆ. ಪ್ರತಿಭಟನೆಯಲ್ಲಿ ಮೂರು ಮಸೂದೆಗಳನ್ನು ತಕ್ಷಣವೇ ಹಿಂಪಡೆಯಲು ಒತ್ತಾಯಿಸಲಾಗುತ್ತದೆ. ಈ ಬಗ್ಗೆ ತಮಿಳುನಾಡು ಮತ್ತು ಪುದುಚೇರಿ ವಕೀಲರ ಜಂಟಿ ಕ್ರಿಯಾ ಸಮಿತಿ ಹಲವು ನಿರ್ಣಯಗಳನ್ನು ಅಂಗೀಕರಿಸಿದೆ. ಜಂಟಿ ಕ್ರಿಯಾ ಸಮಿತಿಯು ಕೆಳ ನ್ಯಾಯಾಲಯಗಳ ವಕೀಲರನ್ನು ಕೂಡಾ ಒಳಗೊಂಡಿದೆ.
ವಿಧೇಯಕಗಳಿಗೆ ನೀಡಲಾದ ಸ್ಥಳೀಯ ಭಾಷೆಯ ಶೀರ್ಷಿಕೆಗಳು ಭಾರತೀಯ ಸಂವಿಧಾನದ 348 ನೇ ವಿಧಿಯ ಉಲ್ಲಂಘನೆಯಾಗಿದೆ (ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಲ್ಲಿ ಮತ್ತು ಕಾಯಿದೆಗಳು, ಮಸೂದೆಗಳು ಇತ್ಯಾದಿಗಳಲ್ಲಿ ಬಳಸಬೇಕಾದ ಭಾಷೆ. ) ಎಂದು ಸಮಿತಿಯ ಸಾಮಾನ್ಯ ಸಭೆಯು ತಿರುಚ್ಚಿಯಲ್ಲಿ ಅಂಗೀಕರಿಸಿದ ನಿರ್ಣಯವು ಹೇಳಿದೆ.
ಈ ಮಸೂದೆಗಳನ್ನು ಹಿಂಪಡೆಯುವಂತೆ ನಿರ್ಣಯವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಕೇಂದ್ರ ಸರ್ಕಾರ ಮಸೂದೆಗಳನ್ನು ಹಿಂಪಡೆಯಲು ನಿರಾಕರಿಸಿದರೆ ರಾಜ್ಯಾದ್ಯಂತ ಪ್ರತಿಭಟನೆಗಳು ತೀವ್ರಗೊಳ್ಳುವ ನಿರೀಕ್ಷೆಯಿದೆ. ಇಷ್ಟೆ ಅಲ್ಲದೆ, ತಮಿಳುನಾಡಿನ ವಕೀಲರ ಸಂಘಗಳು ಈ ಮಸೂದೆಗಳನ್ನು ಹಿಂಪಡೆಯಲು ಆಗಸ್ಟ್ 23 ರಂದು ವಿವಿಧ ನ್ಯಾಯಾಲಯಗಳ ಮುಂದೆ ಪ್ರತಿಭಟನೆ ನಡೆಸಲಿವೆ ಎಂದು ನಿರ್ಣಯವು ಹೇಳಿದೆ. ತಿರುಚ್ಚಿಯಲ್ಲಿ ನಡೆಯಲಿರುವ ಧರಣಿಯ ನಂತರ “ಬೃಹತ್ ರ‍್ಯಾಲಿ” ನಡೆಸಲಾಗುವುದು ಎಂದು ನಿರ್ಣಯವು ಹೇಳಿದೆ.
ಇದನ್ನೂ ಓದಿ: ಗೋಡ್ಸೆ ವೈಭವೀಕರಣ: ಸಾರಿಗೆ ಇಲಾಖೆಯ ಮೆನ್ಷನ್ ಮಾಡಿ ಸುಮ್ಮನಾಯ್ತೆ ಬೆಂಗಳೂರು ನಗರ ಪೊಲೀಸ್?
ಕೇಂದ್ರ ಸರ್ಕಾರ ಅಂಗೀಕರಿಸಿದ ಮಸೂದೆಯು ಬ್ರಿಟಿಷರ ಕಾಲದ ಕಾನೂನುಗಳನ್ನು ರದ್ದುಗೊಳಿಸುವ ಪ್ರಯತ್ನವಾಗಿ ಕಂಡರೂ, ಅವುಗಳು ವಾಸ್ತವದಲ್ಲಿ ಹಿಂದಿ ಭಾಷೆಯ ಹೇರಿಕೆಯ ಹುನ್ನಾರವಾಗಿದೆ ಎಂದು ಅಖಿಲ ಭಾರತ ವಕೀಲರ ಒಕ್ಕೂಟ ಹೇಳಿದೆ. “ಕೇಂದ್ರ ಸರ್ಕಾರವು ವಸಾಹತುಶಾಹಿ ಚಿಂತನೆಯನ್ನು ನಿರ್ಮೂಲನೆ ಮಾಡುತ್ತಿದ್ದೇವೆ ಎಂದು ಹೇಳುವ ಮೂಲಕ, ಹಿಂದಿ ಭಾಷೆಯ ಪ್ರಾಬಲ್ಯ ಹೆಚ್ಚಿಸುತ್ತಿದ್ದಾರೆ” ಎಂದು ಒಕ್ಕೂಟವು ಹೇಳಿದೆ.
ಮದ್ರಾಸ್ ಹೈಕೋರ್ಟ್‌ನ ವಕೀಲರು ಆಗಸ್ಟ್ 25 ರಂದು ಮಸೂದೆಗಳ ವಿರುದ್ಧ ಆಂದೋಲನ ನಡೆಸಲಿದ್ದಾರೆ ಎಂದು ಅಲ್ಲಿನ ವಕೀಲರು ಖಚಿತಪಡಿಸಿದ್ದಾರೆ. ಮದ್ರಾಸ್ ಹೈಕೋರ್ಟ್‌ನ ಹಿರಿಯ ವಕೀಲ ಸಿ.ವಿಜಯಕುಮಾರ್ ಮಾತನಾಡಿ, “ಮೂರು ವಿಧೇಯಕಗಳನ್ನು ಅಪ್ರಜಾಸತ್ತಾತ್ಮಕ ರೀತಿಯಲ್ಲಿ ಮಂಡಿಸಲಾಗಿದೆ” ಎಂದು ಹೇಳಿದ್ದಾರೆ.
“ಉದ್ದೇಶಿತ ಮೂರು ಶಾಸನಗಳಲ್ಲಿನ ಅನೇಕ ನಿಬಂಧನೆಗಳು ಪ್ರಶ್ನಾರ್ಹವಾಗಿವೆ. ಮಣಿಪುರ ಹೊತ್ತಿ ಉರಿಯುತ್ತಿರುವಾಗ ದಿಢೀರ್ ಆಗಿ ಬಿಲ್‌ಗಳನ್ನು ಬದಲಾಯಿಸಲಾಗಿದೆ. ಕೇಂದ್ರ ಸರ್ಕಾರದ ಈ ನಡೆ ಅಪ್ರಜಾಸತ್ತಾತ್ಮಕ ಮತ್ತು ದುರುದ್ದೇಶದಿಂದ ಕೂಡಿದೆ. ಇದರಲ್ಲಿ ಸಾರ್ವಜನಿಕ ಹಿತಾಸಕ್ತಿಯಿಲ್ಲ. ಮೂರು ಮಸೂದೆಗಳನ್ನು ತಕ್ಷಣವೇ ಹಿಂಪಡೆಯಬೇಕು” ಎಂದು ಅವರು ಹೇಳಿದ್ದು, 2024ರಲ್ಲಿ ನಡೆಯಲಿರುವ ಸಂಸತ್ತಿನ ಚುನಾವಣೆಗೆ ಮುನ್ನ ಈ ಮೂರು ವಿಧೇಯಕಗಳನ್ನು ಮಂಡಿಸುವ ತುರ್ತು ಏನಿತ್ತು ಎಂದು ಅವರು ಕೇಳಿದ್ದಾರೆ.
ವಿಡಿಯೊ ನೋಡಿ: ಗಾಂಧಿ ಪ್ರತಿಮೆಗೆ ಹಾನಿ, ಉದ್ವಿಗ್ನ ಸ್ಥಿತಿ: ಹೆದ್ದಾರಿ ತಡೆ Janashakthi Media