ಕೋಲ್ಕತ್ತಾ : 2024ರ ಲೋಕಸಭಾ ಚುನಾವಣೆಯಲ್ಲಿ ಜನರು ಕೋಮುವಾದ ಮತ್ತು ಭ್ರಷ್ಟಾಚಾರದ ವಿರುದ್ಧ ಮತ ಚಲಾಯಿಸಲಿದ್ದು ಟಿಎಂಸಿ ಮತ್ತು ಬಿಜೆಪಿಯನ್ನು ಸೋಲಿಸಲಿದ್ದಾರೆ ಎಂದು ಪಶ್ಚಿಮ ಬಂಗಾಳದ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಸಲಿಂ ತಿಳಿಸಿದರು.
ಕೋಲ್ಕತ್ತಾದ ಬ್ರಿಗೇಡ್ ಮೈದಾನದಲ್ಲಿ ಭಾನುವಾರ ಡಿವೈಎಫ್‌ಐ ಪಶ್ಚಿಮ ಬಂಗಾಳ ರಾಜ್ಯ ಘಟಕ ಆಯೋಜಿಸಿದ್ದ ಬೃಹತ್ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ಸರ್ಕಾರಗಳು ಜನರ ಜೀವನೋಪಾಯದ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಮತ್ತು ಕೋಮು ರಾಜಕೀಯ ಹಾಗೂ ಭ್ರಷ್ಟಾಚಾರಗಳ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ಮತ್ತು ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಟೀಕಿಸಿದರು.
“ಒಂದು ಕಾಲದಲ್ಲಿ ಪಾಕಿಸ್ತಾನ ಮತ್ತು ಪುಲ್ವಾಮಾ ದಾಳಿಯ ಹೆಸರಿನಲ್ಲಿ (2019ರ ಲೋಕಸಭಾ ಚುನಾವಣೆಗೆ ಮೊದಲು) ರಾಷ್ಟ್ರೀಯ ಭಾವನೆಗಳನ್ನು ಕೆರಳಿಸಲು ಪ್ರಯತ್ನಿಸಿದವರು ಈಗ ಧರ್ಮ, ಜಾತಿ ಆಧಾರದ ಮೇಲೆ ಜನಸಾಮಾನ್ಯರಲ್ಲಿ ವಿಭಜನೆಯ ವಿಷ ಬೀಜಗಳನ್ನು ಬಿತ್ತುತ್ತಿದ್ದಾರೆ” , ಕೇಂದ್ರದಲ್ಲಿನ ಬಿಜೆಪಿ ಸರ್ಕಾರವು ಸಾಮಾನ್ಯ ಜನರ ಜೀವನೋಪಾಯದ ವೆಚ್ಚದಲ್ಲಿ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ಆದ್ಯತೆ ನೀಡಿದೆ ” ಕೇಂದ್ರ ತನಿಖಾ ಸಂಸ್ಥೆಗಳಿಂದ ತನ್ನ ನಾಯಕರನ್ನು ರಕ್ಷಿಸಲು ಟಿಎಂಸಿ ಬಿಜೆಪಿಯೊಂದಿಗೆ ಮೌನ ಒಪ್ಪಂದವನ್ನು ಹೊಂದಿದೆ, ಹಾಗಾಗಿ ಟಿಎಂಸಿಯ ಭ್ರಷ್ಟಾಚಾರ ಹೆಚ್ಚಿದೆ ಹಾಗೂ ಅದನ್ನು ಬಿಜೆಪಿ ರಕ್ಷಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಮೀನಾಕ್ಷಿ ಮುಖರ್ಜಿ ಮಾತನಾಡಿ, ಟಿಎಂಸಿ ಸರ್ಕಾರ ದೊಡ್ಡ ಪ್ರಮಾಣದ ಭ್ರಷ್ಟಾಚಾರದಲ್ಲಿ ಮುಳುಗಿದೆ. ಯುವಜನತೆ ನಿರುದ್ಯೋಗದಲ್ಲಿ ಇದ್ದಾರೆ. ಟಿಎಂಸಿ ಸಚಿವರು ಸರ್ಕಾರಿ ನೇಮಕಾತಿಗಾಗಿ ಹಣ ಪಡೆಯುತ್ತಿದ್ದಾರೆ. ಇದರ ವಿರುದ್ದ ಹೋರಾಟ ನಡೆಸಿರುವ ನಾವು ಆಹಾರ, ಉದ್ಯೋಗ ಮತ್ತು ಪ್ರಾಮಾಣಿಕತೆಯ ಹಕ್ಕುಗಾಗಿ ಹೋರಾಡುತ್ತೇವೆ “ಎಂದು ಹೇಳಿದರು.
ಡಿವೈಎಫ್‌ಐ ಅಖಿಲ ಭಾರತ ಅಧ್ಯಕ್ಷ ಎ. ಎ. ರಹೀಮ್ ಮಾತನಾಡಿ, ನಿರುದ್ಯೋಗ ಮತ್ತು ಭ್ರಷ್ಟಾಚಾರ ದೇಶ ಎದುರಿಸುತ್ತಿರುವ ನಿಜವಾದ ಸವಾಲುಗಳಾಗಿವೆ. 23.5 ರಷ್ಟು ಭಾರತೀಯ ಯುವಕರು ನಿರುದ್ಯೋಗದ ಆಳದಲ್ಲಿ ಸಿಲುಕಿಕೊಂಡಿದ್ದಾರೆ ಎಂದರು
ಡಿವೈಎಫ್‌ಐ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಹಿಮನ್ ರಾಜ್ ಭಟ್ಟಾಚಾರ್ಯ, “ಎಡಪಂಥೀಯರು ಮಾತ್ರ ಕೋಮು ಶಕ್ತಿಗಳು ಮತ್ತು ಪಶ್ಚಿಮ ಬಂಗಾಳದ ಭ್ರಷ್ಟ ಸರ್ಕಾರದ ವಿರುದ್ಧ ಹೋರಾಡುತ್ತಿದ್ದಾರೆ” ಎಂದು ಹೇಳಿದರು.
ಮಹಾ ನಡಿಗೆ : ʻನ್ಯಾಯಕ್ಕಾಗಿ ನಡಿಗೆʼ ಎಂಬ ಘೋಷಣೆಯಡಿ 50 ದಿನಗಳ ಕಾಲ ಪಾದ ಯಾತ್ರೆ ನಡೆಸಿದೆ. ಏಳು ಪ್ರದೇಶದಲ್ಲಿ ನಡೆದ ಪಾದಯಾತ್ರೆ 2200 ಕಿ.ಮಿ ಪೂರ್ಣಗೊಳಿಸಿ ಕೋಲ್ಕತ್ತಾದಲ್ಲಿ ಬೃಹತ್ ಮೆರವಣಿಗೆ ಮತ್ತು ಬಹಿರಂಗ ಸಭೆ ನಡೆಸಿದರು. ಲಕ್ಷಾಂತರ ಜನ ಯುವಕರು ಭಾಗವಹಿಸಿದ್ದರು. ಕಣ್ಣು ಹಾಯಿಸಿದಷ್ಟು ಜನ ಸಾಗರ ಕಾಣುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಣದಲ್ಲಿ ಸದ್ದು ಮಾಡಿವೆ. ಚುನಾವಣಾ ಸಮಯದಲ್ಲಿ ನಡೆದ ಈ ಜಾಥಾ ಹಾಗೂ ಬಹಿರಂಗ ಸಭೆ ಕಾರ್ಯಕ್ರಮ ಪಶ್ಚಿಮ ಬಂಗಾಲದಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಿದೆ.