ವಾರದಲ್ಲಿ ಇತ್ಯರ್ಥಕ್ಕೆ ಬಾರದೆ ಹೋದರೆ ಕಾರ್ಖಾನೆಗೆ ಬೀಗ ಜಡಿಯಲು ಕಾರ್ಮಿಕರ ನಿರ್ಧಾರ.
ರಾಮನಗರ, ಜ 29 : ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಆಡಳಿತ ಮಂಡಳಿಯ ವಿರುದ್ದ ಅಲ್ಲಿನ ಕಾರ್ಮಿಕರು ನಡೆಸುತ್ತಿರುವ ಹೋರಾಟ 82 ನೇ ದಿನ ತಲುಪಿದೆ. ಹೋರಾಟ ಆರಂಭವಾಗಿ ಮೂರು ತಿಂಗಳಾಗುತ್ತ ಬಂದರೂ ರಾಜ್ಯ ಸರ್ಕಾರವಾಗಲಿ, ಆಡಳಿತ ಮಂಡಳಿಯಾಗಲಿ ಯಾವುದೆ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಕಂಪನಿಯ ಕಾರ್ಮಿಕರು ಇಂದು ಬೃಹತ್ ಪಾದಯಾತ್ರೆ ನಡೆಸಿದರು.
ಪಟ್ಟಣದ ಬಿಜಿಎಸ್ ವೃತ್ತದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಸಾವಿರಾರು ಕಾರ್ಮಿಕರು ಮತ್ತು ಅವರ ಕುಟುಂಬಸ್ತರು ಭಾಗವಹಿಸಿದ್ದರು. ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಕಾರ್ಮಿಕ ಪರ ಘೋಷಣೆ ಕೂಗುತ್ತ ಕಾಲ್ನಡಿಗೆ ಹೊರಟು ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯ ಮುಂಭಾಗ ಸಮಾವೇಶಗೊಳ್ಳಲಾಯಿತು. ರಾಮನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ ಮೊದಲಾದ ಜಿಲ್ಲೆಗಳಿಂದ ಪ್ರಗತಿಪರ ಸಂಘಟನೆಗಳ ಮುಖಂಡರು ಪಾದಯಾತ್ರೆಗೆ ಸಾಥ್ ನೀಡಿದ್ದರು. ಸಂಸದ ಡಿ.ಕೆ. ಸುರೇಶ್, ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಮುಖಂಡರು ಭಾಗಿವಹಿಸಿದ್ದರು.
ಕಾರ್ಖಾನೆಯ ಮುಂಭಾಗ ಪಾದಯಾತ್ರೆ ಉದ್ದೇಶಿಸಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್, ಸಮಸ್ಯೆ ಇತ್ಯರ್ಥಕ್ಕೆ ಟೊಯೊಟಾ ಆಡಳಿತ ಮಂಡಳಿಗೆ ಒಂದು ವಾರದ ಗಡುವು ನೀಡಿದರು. ಅಷ್ಟರೊಳಗೆ ಕಾರ್ಮಿಕರ ಜೊತೆ ಮಾತುಕತೆ ನಡೆಸಿ, ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳದೇ ಹೋದರೆ ಕಾರ್ಖಾನೆಗೆ ಬೀಗ ಜಡಿಯುವುದಾಗಿ ಸುರೇಶ್ ಎಚ್ಚರಿಕೆ ನೀಡಿದ್ದಾರೆ.
ಈ ರೀತಿಯ ಬಿಕ್ಕಟ್ಟು ಉಲ್ಬಣಕ್ಕೆ ಕಾರ್ಖಾನೆಯ ಹಠಮಾರಿ ಧೋರಣೆ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರ ನಿರ್ಲಕ್ಷ್ಯವೇ ಕಾರಣ’, ಸರಕಾರ ಮಧ್ಯಪ್ರವೇಶಿಸಲು ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಆರೋಪಿಸಿದರು.
ಡಿ.ಕೆ.ಸುರೇಶ್ ಹೇಳಿಕೆಯನ್ನು ಬೆಂಬಲಿಸಿದ ಕಾರ್ಮಿಕರು ಮುಂದಿನ ಗುರುವಾರದೊಳಗೆ ಸಮಸ್ಯೆ ಇತ್ಯರ್ಥಕ್ಕೆ ಬಾರದೆ ಹೋದರೆ ಬೀಗ ಜಡೆಯುವುದಾಗು ಘೋಷಣೆಗಳನ್ನು ಮೊಳಗಿಸಿದರು.