ತಿರುಪತಿ ಲಡ್ಡು ಕಲಬೆರಕೆ: ಭಕ್ತರ ಭಾವನೆಗಳ ಜೊತೆ ಆಟವಾಡುವುದು ಬೇಡ, ನಿಜ ಏನೆಂದು ತಿಳಿಯಬೇಕಿದೆ

-ಸಿ.ಸಿದ್ದಯ್ಯ

ತಿರುಮಲ ಲಡ್ಡುಗಳ ತಯ್ಯಾರಿಕೆಗೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಲಾಗಿದೆ ಎಂಬ ವರದಿಯು ಕೋಟ್ಯಂತರ ತಿರುಮಲ ಭಕ್ತರನ್ನು ತೀವ್ರ ಚಿಂತೆಗೀಡುಮಾಡಿದೆ. ಲಡ್ಡು ಜತೆಗೆ ಟಿಟಿಡಿಯಲ್ಲಿ ನಡೆಯುತ್ತಿರುವ ಹಲವು ಭ್ರಷ್ಟಾಚಾರ, ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಟಿಟಿಡಿಯಲ್ಲಿ ಹಲವು ಅಕ್ರಮಗಳು ನಡೆಯುತ್ತಿದ್ದರೆ ಆ ಮಂಡಳಿಯ ಸದಸ್ಯರಾಗಿರುವ ಬಿಜೆಪಿ ನಾಯಕರು ಏನು ಮಾಡುತ್ತಿದ್ದರು? ಭಕ್ತರಿಗೆ ಬೇಕಾಗಿರುವುದು ಮತಾಂಧತೆ ಅಲ್ಲ. ರಾಜಕೀಯ ನಾಯಕರ ಸವಾಲುಗಳು, ಪ್ರತಿ ಸವಾಲುಗಳಲ್ಲ. ವೈಯುಕ್ತಿಕ ನಂಬಿಕೆಯಾಗಿರಬೇಕಿದ್ದ ಭಕ್ತಿಯನ್ನು ವ್ಯಾಪಾರ-ರಾಜಕೀಯವಾಗಿ ಪರಿವರ್ತಿಸಿ, ಭಕ್ತಿಗಿಂತ ಸ್ವಾರ್ಥ ವ್ಯಾಪಾರ, ರಾಜಕೀಯ ಹಿತಾಸಕ್ತಿಯಲ್ಲಿಯೇ ಹೆಚ್ಚು ಆಸಕ್ತಿ ತೋರುತ್ತಿವೆ.

ತಿರುಮಲ ಲಡ್ಡುಗಳ ತಯ್ಯಾರಿಕೆಗೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಲಾಗಿದೆ ಎಂಬ ವರದಿಯು ಸಾಕಷ್ಟು ಕೋಲಾಹಲವನ್ನು ಹುಟ್ಟುಹಾಕಿದೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ ಕುರಿತು ಹಿಂದಿನ ಸರ್ಕಾರದ ವಿರುದ್ದ ಆರೋಪ ಮಾಡಿದ್ದಾರೆ. ಕೆಲವು ರಾಜಕಾರಣಿಗಳು, ಹಿಂದುತ್ವ ಸಂಘಟನೆಗಳ ನಾಯಕರು ಇದನ್ನು “ಹಿಂದೂ ಜನಾಂಗದ ಮೇಲಿನ ಕಳಂಕ” “ನಮ್ಮ ಸನಾತನ ಧರ್ಮವನ್ನು ಹಾಳುಗೆಡವಲು ಹಿಂದೂ ವಿರೋಧಿಗಳು ಮಾಡುವ ಕುತಂತ್ರ” ಎಂದೆಲ್ಲಾ ಆಕ್ರೋಶಭರಿತವಾಗಿ ಮಾತನಾಡುತ್ತಿದ್ದಾರೆ. ಎಲ್ಲಕ್ಕಿಂತ ಹೆ್ಚ್ಚಾಗಿ ವೆಂಕಟೇಶ್ವರನ ಭಕ್ತರ ಮನಸ್ಸನ್ನು ಈ ವರದಿ ತೀವ್ರವಾಗಿ ಕಲಕಿದೆ. ಅದು ನಡೆದಿದ್ದರೆ ಅದೊಂದು ಕ್ರಿಮಿನಲ್ ಕೃತ್ಯವಾಗುತ್ತದೆ. ಅದಕ್ಕೆ ಕಾರಣರಾಗಿರುವ ಅಪರಾಧಿಗಳನ್ನು ಕಾನೂನಿನ ಕುಣಿಕೆಯಲ್ಲಿ ಸಿಲುಕಿಸಿ ಶಿಕ್ಷೆಗೆ ಗುರಿಪಡಿಸುವ ಕೆಲಸ ಮಾಡಬೇಕು. ಆದರೆ, ಅಂತಹ ಕ್ರಿಮಿನಲ್ ಕೃತ್ಯಗಳನ್ನು ಪವನ್ ಕಲ್ಯಾಣ್ ಭಾವನತ್ಮಕವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ.

ವ್ಯಾಪಾರ-ರಾಜಕೀಯವಾಗಿ ಪರಿವರ್ತನೆ

ತಿರುಮಲ ತಿರುಪತಿ ದೇವಸ್ಥಾನವು ದೇಶದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದು. ಪ್ರತಿ ವರ್ಷ ಐದು ಸಾವಿರ ಕೋಟಿ ಬಜೆಟ್, 18 ಸಾವಿರ ಕೋಟಿ ಠೇವಣಿ ಮತ್ತು ಸಾವಿರ ಕಿಲೋ ಚಿನ್ನವನ್ನು ಹೊಂದಿರುವ ಶ್ರೀಮಂತ ದೇವಸ್ಥಾನ. ಇಲ್ಲಿ ಪ್ರತಿನಿತ್ಯ ಕೋಟ್ಯಂತರ ರೂಪಾಯಿ ಖರೀದಿ ಮತ್ತು ಮಾರಾಟ ವ್ಯವಹಾರ ನಡೆಯುತ್ತಿದೆ. ಹೀಗಾಗಿ ಟಿಟಿಡಿ ಅಧ್ಯಕ್ಷ ಸ್ಥಾನ ಹಾಗೂ ಅದರ ಸದಸ್ಯರಾಗಲು ರಾಜಕೀಯ ನಿರುದ್ಯೋಗಿಗಳು, ದೊಡ್ಡ ಉದ್ಯಮಿಗಳು, ಭ್ರಷ್ಟ ಮಾಜಿ ಅಧಿಕಾರಿಗಳು ದೊಡ್ಡ ಮಟ್ಟದಲ್ಲಿ ಪೈಪೋಟಿ ನಡೆಸುತ್ತಿದ್ದಾರೆ. ಆಡಳಿತ ಪಕ್ಷಗಳ ನಾಯಕರು ಕೋಟ್ಯಂತರ ರೂಪಾಯಿ ಕೊಟ್ಟು ಟಿಟಿಡಿ ಹುದ್ದೆ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂಬ ಟೀಕೆಗಳಿವೆ. ವೈಯುಕ್ತಿಕ ನಂಬಿಕೆಯಾಗಿರಬೇಕಿದ್ದ ಭಕ್ತಿಯನ್ನು ವ್ಯಾಪಾರ-ರಾಜಕೀಯವಾಗಿ ಪರಿವರ್ತಿಸಿ ಹಣ ಗಳಿಸುತ್ತಿರುವ ಪಕ್ಷಗಳು ಈಗ ಭಕ್ತಿಗಿಂತ ಸ್ವಾರ್ಥಕ್ಕಾಗಿ ವ್ಯಾಪಾರ ಮತ್ತು ರಾಜಕೀಯ ಹಿತಾಸಕ್ತಿಯಲ್ಲಿಯೇ ಹೆಚ್ಚು ಆಸಕ್ತಿ ತೋರುತ್ತಿವೆ.

ಲಾಭ ಬರುವುದಿದ್ದರೆ ಏನನ್ನಾದರೂ ಕಲಬೆರಕೆ ಮಾಡುತ್ತಾರೆ

ಹೆಚ್ಚೆಚ್ಚು ಲಾಭ ಗಳಿಸಬೇಕೆಂಬ ವ್ಯಾಪಾರಿಗಳು ಮತ್ತು ಉದ್ಯಮಿಗಳ ದುರಾಸೆ, ಪ್ರತಿಯೊಂದು ವ್ಯವಹಾರದಲ್ಲಿಯೂ ಕಮಿಷನ್ ಪಡೆಯಲೇ ಬೇಕೆಂಬ ಭ್ರಷ್ಟ ಜನಪ್ರತಿನಿಧಿಗಳು ಮತ್ತು ಭ್ರಷ್ಟ ಅಧಿಕಾರಿಗಳು, ಧಾರ್ಮಿಕ ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಮಾಡಿಕೊಳ್ಳುವ ರಾಜಕಾರಣಿಗಳು ಹಾಗೂ ಧಾರ್ಮಿಕ ಮೂಲಭೂತವಾದಿಗಳ ಆಟದಲ್ಲಿ ನಿಜವಾದ ದೈವ ಭಕ್ತರು ಬಲಿಪಶುಗಳಾಗಿದ್ದಾರೆ. ಒಂದು ಲಡ್ಡುವೇ ಅಲ್ಲ, ಯಾವುದಾದರೂ ಕಲಬೆರಕೆ ನಡೆಯುತ್ತಿದೆ ಎಂದರೆ ಅದು ಲಾಭಕ್ಕಾಗಿಯೇ ತಾನೆ. ಗುಣಮಟ್ಟಕ್ಕಿಂತ ಕಲಬೆರಕೆ ಮಾಡುವುದು ಅದರ ತಯ್ಯಾರಿಕೆಯ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಇದರಿಂದ ಲಾಭ ಹೆಚ್ಚಾಗುತ್ತದೆ. ತಿರುಪತಿಗೆ ಸರಬರಾಜಾಗುತ್ತಿರುವ ಸರಕುಗಳಲ್ಲಿ ಗುಣಮಟ್ಟವಿಲ್ಲ ಎನ್ನುವುದಾದರೆ, ಅಲ್ಲಿನ ಭಕ್ತರ ಭಾವನೆಗಳಿಗಿಂತ ತಮ್ಮ ಲಾಭವೇ ಮುಖ್ಯ ಎಂದು ಕೆಲ ವ್ಯಾಪಾರಿಗಳು ಭಾವಿಸಿದ್ದಾರೆ ಎಂದಾಯಿತು. ಇಂತಹ ವಂಚಕರು ಲಾಭ ಬರುವುದಿದ್ದರೆ ಏನನ್ನಾದರೂ, ಯಾವುದಕ್ಕಾದರೂ ಕಲಬೆರಕೆ ಮಾಡುತ್ತಾರೆ. ಇವರ ಅಕ್ರಮಗಳನ್ನು ನೋಡಿಯೂ ಮೌನವಾಗಿದ್ದ ಟಿಟಿಡಿಯ ಮುಖ್ಯಸ್ಥರು, ಅದರ ಸದಸ್ಯರು ಮತ್ತು ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದಾಗುತ್ತದೆ.

ಗುಜರಾತ್ ಲ್ಯಾಬ್ ಗೆ ಕಳುಹಿಸಿದ್ದೇಕೆ!!

ಈ ವರ್ಷ ಜೂನ್ 14 ರಂದು ಟಿಟಿಡಿ ಇಒ ಆಗಿ ಅಧಿಕಾರ ವಹಿಸಿಕೊಂಡ ಶ್ಯಾಮಲಾ ರಾವ್, ಅದೇ ದಿನ ತಿರುಮಲದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಲಡ್ಡು ಗುಣಮಟ್ಟದ ಬಗ್ಗೆ ಭಕ್ತರು ಮತ್ತು ಲಡ್ಡು ತಯಾರಿಸುವ ಕಾರ್ಮಿಕರು ಅನೇಕ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆಂದೂ, ಲಡ್ಡು ಗುಣಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ಯಾವುದೇ ರಾಜಿ ಇಲ್ಲ ಎಂದೂ ಘೋಷಿಸಿದರು. ಅವರು ಹೇಳಿದಂತೆ, ಎ.ಆರ್. ಡೈರಿ ಫುಡ್ಸ್ ಸರಬರಾಜು ಮಾಡಿದ ತುಪ್ಪದಿಂದ ನಾಲ್ಕು ಮಾದರಿಗಳನ್ನು ಗುಜರಾತಿನ ನ್ಯಾಷನಲ್ ಡೈರಿ ಡೆವಲಪ್ ಮೆಂಟ್ ಬೋರ್ಡ್ ಗೆ ಸೇರಿದ ಸಿ.ಎ.ಎಲ್.ಎಫ್. ಗೆ ಕಳುಹಿಸಿದರು. ಆಂಧ್ರದಲ್ಲೇ ಹಲವು ಲ್ಯಾಬ್ ಗಳು ಲಭ್ಯವಿರುವಾಗ, ಯಾವತ್ತೂ ಕಳುಹಿಸದ ಈ ಗುಜರಾತ್ ಲ್ಯಾಬ್ ಗೆ ಸ್ಯಾಂಪಲ್ ಗಳನ್ನು ಏಕೆ ಕಳುಹಿಸಿದರು ಎಂಬ ಅನುಮಾನವಿದೆ. ಈ ತುಪ್ಪದಲ್ಲಿ ಸಸ್ಯಜನ್ಯ ಎಣ್ಣೆ, ಪ್ರಾಣಿಗಳ ಕೊಬ್ಬು, ಮೀನಿನ ಎಣ್ಣೆ ಮತ್ತಿತರ ಪದಾರ್ಥಗಳು ಕಲಬೆರಕೆಯಾಗಿದೆ ಎಂಬ ವರದಿಯನ್ನು ಎನ್.ಡಿ.ಡಿ.ಬಿ. ಕೊಟ್ಟಿದೆ ಎಂದು ತೆಲುಗು ದೇಶಂ ನಾಯಕರು, ಆ ನಂತರ ಟಿಟಿಡಿ ಇಒ ಸೆಪ್ಟೆಂಬರ್ 20ರಂದು ಪ್ರಕಟಿಸಿದರು. ತಕ್ಷಣವೇ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೀಡಿದ ಇದೇ ಹೇಳಿಕೆ ದೇಶದೆಲ್ಲೆಡೆ ಸಂಚಲನ ಉಂಟುಮಾಡಿತು.

ಇದನ್ನು  ಓದಿ : ಡಾ. ಹರಿಣಿ ಅಮರಸೂರಿ ಶ್ರೀಲಂಕಾದ ಪ್ರಧಾನಿಯಾಗಿ ನೇಮಕ

ಏಳರಿಂದ ಎಂಟು ಹಂತಗಳಲ್ಲಿ ತಪಾಸಣೆ

ಇಲ್ಲಿಗೆ ಬರುವ ಭಕ್ತರು ಲಡ್ಡು ತೆಗೆದುಕೊಳ್ಳದೆ ವಾಪಸ್ ಹೋಗುವುದಿಲ್ಲ. ಅದಕ್ಕಾಗಿಯೇ ತಿರುಮಲದಲ್ಲಿ ಪ್ರತಿದಿನ ಸರಾಸರಿ 15 ಸಾವಿರ ಕೆಜಿ ತುಪ್ಪದಿಂದ ಸುಮಾರು ಮೂರೂವರೆ ಲಕ್ಷ ಲಡ್ಡುಗಳನ್ನು ತಯಾರಿಸಲಾಗುತ್ತದೆ. ಈ ಲಡ್ಡುಗಳನ್ನು ತಯಾರಿಸಲು ಕಡಲೆಬೇಳೆ ಹಿಟ್ಟು, ಸಕ್ಕರೆ, ಏಲಕ್ಕಿ, ಒಣದ್ರಾಕ್ಷಿ, ಕಲಕಂಡ ಮತ್ತು ಗೋಡಂಬಿ ಜೊತೆಗೆ ಹಸುವಿನ ತುಪ್ಪವನ್ನು ಬಳಸಲಾಗುತ್ತದೆ. ಈ ಎಲ್ಲಾ ಸರಕುಗಳನ್ನು ಟಿಟಿಡಿ ಆಡಳಿತ ಮಂಡಳಿಯು ಆರು ತಿಂಗಳಿಗೊಮ್ಮೆ ಇ-ಟೆಂಡರ್ ಮೂಲಕ ಖರೀದಿಸುತ್ತದೆ. ಒಳಬರುವ ಸರಕುಗಳ ಗುಣಮಟ್ಟವನ್ನು ಪರೀಕ್ಷಿಸಲು ಟಿಟಿಡಿ ಹಲವು ವರ್ಷಗಳ ಹಿಂದೆ ವ್ಯವಸ್ಥೆಯನ್ನು ಸ್ಥಾಪಿಸಿಕೊಂಡಿದೆ. ಏಳರಿಂದ ಎಂಟು ಹಂತಗಳಲ್ಲಿ ತಪಾಸಣೆ ಮಾಡಲಾಗುತ್ತದೆ.

ಪ್ರಸ್ತುತ ಐದು ಕಂಪನಿಗಳು ‘ಪ್ರೀಮಿಯರ್ ಅಗ್ರಿ ಫುಡ್ಸ್’, ಕೃಪರಮ್ ಡೈರಿ, ವೈಷ್ಣವಿ, ಶ್ರೀ ಪರಾಗ್ ಮಿಲ್ಕ್ ಮತ್ತು ಎಆರ್ ಡೈರಿ ಇವುಗಳು ಲಡ್ಡುಗಳಿಗೆ ಬಳಸುವ ತುಪ್ಪವನ್ನು ಪೂರೈಸುತ್ತಿವೆ. ಮಾರ್ಚ್ 12, 2024 ರಂದು ನಡೆದ ಟೆಂಡರ್‌ಗಳಲ್ಲಿ ತುಪ್ಪ ಪೂರೈಕೆಯ ಗುತ್ತಿಗೆ ಪಡೆದ ತಮಿಳುನಾಡಿನ ಎಆರ್ ಡೈರಿ ಫುಡ್ಸ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಕಂಪನಿಯು ಜುಲೈ 6 ಮತ್ತು ಜುಲೈ 12 ರಂದು ತಿರುಮಲಕ್ಕೆ ನಾಲ್ಕು ಟ್ಯಾಂಕರ್ ತುಪ್ಪವನ್ನು ಕಳುಹಿಸಿದೆ. ಈ ತುಪ್ಪವೇ ಪ್ರಸ್ತುತ ವಿವಾದದ ಕೇಂದ್ರವಾಗಿದೆ. ತಿರುಮಲದಲ್ಲಿ ಲಡ್ಡು ತಯಾರಿಕೆ ಸೇರಿದಂತೆ, ದೇವಾಲಯದಲ್ಲಿ ಬಳಸುವ ಎಲ್ಲಾ ರೀತಿಯ ವಸ್ತುಗಳನ್ನು ಟೆಂಡರ್ ಮೂಲಕ ಖರೀದಿಸಲಾಗುತ್ತದೆ. ಕಡಿಮೆ ಬೆಲೆಗೆ ಟೆಂಡರ್ ಮಾಡಿದವರಿಂದ ಸರಕುಗಳನ್ನು ಖರೀದಿಸಲಾಗುತ್ತದೆ.

ತುಪ್ಪವನ್ನು ಪೂರೈಸುವ ಯಾವುದೇ ಕಂಪನಿಯು ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಮೈಸೂರಿನಲ್ಲಿ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸುತ್ತದೆ ಮತ್ತು ಟ್ಯಾಂಕರ್ ತಿರುಪತಿಗೆ ಹೊರಡುವ ಮೊದಲು ಅವರ ಪ್ರಮಾಣಪತ್ರದೊಂದಿಗೆ ತಿರುಪತಿಗೆ ಬರುತ್ತದೆ. ಅಲ್ಲಿಗೆ ಬರುವ ಟ್ಯಾಂಕರ್‌ಗಳನ್ನು ಟಿಟಿಡಿ ತಹಶೀಲ್ದಾರರು ಒಮ್ಮೆ ತಿರುಮಲ ಬೆಟ್ಟದ ಕೆಳಗೆ ಮತ್ತು ಮತ್ತೊಮ್ಮೆ ತಿರುಮಲದಲ್ಲಿ ಗುಣಮಟ್ಟದ ಪರೀಕ್ಷೆ ಮಾಡುತ್ತಾರೆ. ಪ್ರಸ್ತುತ ಅಂತಹ ಪರೀಕ್ಷೆಗಳನ್ನು ನಡೆಸಲು ಸಿಎಫ್‌ಟಿಆರ್‌ಐನಲ್ಲಿ 12 ಲ್ಯಾಬ್ ತಜ್ಞರು ಮತ್ತು ಒಬ್ಬ ನಿವೃತ್ತ ಹಿರಿಯ ವಿಜ್ಞಾನಿ ಸೇರಿದಂತೆ 13 ಸಿಬ್ಬಂದಿ ಇದ್ದಾರೆ. ಸರಕುಗಳ ಗುಣಮಟ್ಟದ ಬಗ್ಗೆ ಅವರಿಗೆ ಯಾವುದೇ ಅನುಮಾನಗಳಿದ್ದರೆ, ಅವರು ಮಾದರಿಗಳನ್ನು ತೆಗೆದುಕೊಂಡು ದೃಢೀಕರಿಸಲು ವಿವಿಧ ಪ್ರಯೋಗಾಲಯಗಳಿಗೆ ಕಳುಹಿಸುತ್ತಾರೆ.

ಪ್ರಮುಖರಿಗೆ ತಿಳಿಯದಂತೆ ಏನನ್ನೂ ಖರೀದಿಸುವುದಿಲ್ಲ

ಕೇಂದ್ರ ಗೃಹ ಸಚಿವರ ಶಿಫಾರಸಿನ ಮೇರೆಗೆ ಏಳು ವರ್ಷಗಳಿಂದ ಟಿಟಿಡಿ ಆಡಳಿತ ಮಂಡಳಿ ಸದಸ್ಯರಾಗಿರುವ ಪ್ರಮುಖರಿಗೆ ತಿಳಿಯದಂತೆ ಏನನ್ನೂ ಖರೀದಿಸುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಬಿಜೆಪಿ ಉನ್ನತ ನಾಯಕರಿಗೆ ಗೊತ್ತಿರುವ ಸತ್ಯ ಇದು. ಹಾಗಾಗಿಯೇ ಜಗನ್ ಮೋಹನ್ ರೆಡ್ಡಿ ‘ಟಿಟಿಡಿಯಲ್ಲಿ ಏನಾಗುತ್ತಿದೆ ಎಂದು ಬಿಜೆಪಿಗೆ ಗೊತ್ತಿಲ್ಲವೇ, ಅದರಲ್ಲಿ ನಿಮ್ಮ ಬಿಜೆಪಿಯ ಎಷ್ಟು ಮಂದಿ ಇದ್ದಾರೆ ಎಂದು ನಿಮಗೆ ಗೊತ್ತಿಲ್ಲವೇ’ ಎಂಬ ಪ್ರಶ್ನೆಗಳು ಸಾಮಾನ್ಯ ಭಕ್ತರಿಗೆ ಅರ್ಥವಾಗದಿದ್ದರೂ ಭಕ್ತರ ವೇಷದಲ್ಲಿರುವ ವಂಚಕರಿಗೆ ಚೆನ್ನಾಗಿ ಅರ್ಥವಾಗುತ್ತದೆ.

ಟಿಟಿಡಿ ಸದಸ್ಯರಾಗಿರುವ ಬಿಜೆಪಿ ನಾಯಕರು ಏನು ಮಾಡುತ್ತಿದ್ದರು?

ಟಿಟಿಡಿಯಲ್ಲಿ ಹಲವು ಅಕ್ರಮಗಳು ನಡೆಯುತ್ತಿದ್ದರೆ ಆ ಮಂಡಳಿಯ ಸದಸ್ಯರಾಗಿರುವ ಬಿಜೆಪಿ ನಾಯಕರು ಏನು ಮಾಡುತ್ತಿದ್ದರು? ಜುಲೈ 23 ರಂದೇ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್.ಡಿ.ಡಿ.ಬಿ.) ವರದಿ ನೀಡಿದೆ. ಇದನ್ನು ಸುಮಾರು ಎರಡು ತಿಂಗಳ ಕಾಲ ಮುಚ್ಚಿಟ್ಟಿದ್ದೇಕೆ? ದೇಶಾದ್ಯಂತ ಚರ್ಚೆಯಾಗುತ್ತಿರುವ ಈ ಕಲಬೆರಕೆ ಪ್ರಕರಣದ ಬಗ್ಗೆ ಕಾನೂನು, ಅದರಲ್ಲೂ ದೇವಸ್ಥಾನದ ಅರ್ಚಕರು, ದೇವಸ್ಥಾನದ ತನಿಖಾಧಿಕಾರಿಗಳು ಮೌನವಾಗಿರುವುದೇಕೆ? ಇಂತಹ ಹಲವು ಅನುಮಾನಗಳನ್ನು ಕೂಡಲೇ ನಿವಾರಿಸಬೇಕಿದೆ.

ಲಡ್ಡು ಜತೆಗೆ ಟಿಟಿಡಿಯಲ್ಲಿ ನಡೆಯುತ್ತಿರುವ ಹಲವು ಭ್ರಷ್ಟಾಚಾರ, ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಅದಕ್ಕಾಗಿ ಕಾನೂನು ತನ್ನ ಕೆಲಸವನ್ನು ಮಾಡಬೇಕು. ಈ ಕೆಲಸವನ್ನು ಸರಿಯಾಗಿ ಮಾಡಬೇಕಾದ ಆಡಳಿತಗಾರರು ಅನ್ಯ ಧರ್ಮದವರನ್ನು ಕೆರಳಿಸುವ ಮಾತುಗಳನ್ನಾಡುವ ಮೂಲಕ ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವ ಪ್ರಯತ್ನ ಮಾಡತೊಡಗಿದ್ದಾರೆ. ಇಂತಹ ಚಟುವಟಿಕೆಗಳು ಭಯೋತ್ಪಾದಕ ಸಂಘಟನೆಗಳ ಬಲವರ್ಧನೆಗೆ ಸಹಕಾರಿಯಾಗುತ್ತದೆ ಎಂಬ ಪ್ರಜ್ಞೆ ಇಲ್ಲದಂತೆ ಕೆಲವು ರಾಜಕೀಯ ಪಕ್ಷಗಳು ನಡೆದುಕೊಳ್ಳುತ್ತಿವೆ. ಮತಾಂಧ ಶಕ್ತಿಗಳು ಕೋಮುಗಲಭೆಗಳನ್ನು ಪ್ರಚೋದಿಸುವ ಅವಕಾಶವನ್ನಾಗಿ ಇದನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿವೆ.

ಭಕ್ತರಿಗೆ ಬೇಕಾಗಿರುವುದು ಮತಾಂಧತೆ ಅಲ್ಲ. ಸವಾಲುಗಳು, ಪ್ರತಿ ಸವಾಲು ಅಲ್ಲ. ದೀಕ್ಷೆಗಳು ಮತ್ತು ಪ್ರಮಾಣಗಳು ಬೇಕಿಲ್ಲ . ಜನರಿಗೆ ನಿಜ ಏನೆಂದು ತಿಳಿಯಬೇಕು. ಲಡ್ಡು ತಯಾರಿಕೆಯಲ್ಲಿ ಏನು ನಡೆದಿದೆ ಎಂಬುದು ತಿಳಿಯಬೇಕು. ಆ ಸತ್ಯವನ್ನು ತಜ್ಞರ ಪರೀಕ್ಷೆಗಳಿಂದ ದೃಢಪಡಿಸಬೇಕಾಗಿದೆ. ಸತ್ಯ ಹೊರಬರುವವರೆಗೂ ರಾಜಕಾರಣಿಗಳ ಬಾಯಿ ಮುಚ್ಚಿಸಬೇಕು, ಮತಾಂಧತೆಯ ಹುಚ್ಚಾಟಿಕೆ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು. ರಾಜಕಾರಣಿಗಳ ಈ ಷಡ್ಯಂತ್ರಗಳಿಗೆ ಬಲಿಯಾಗದಂತೆ ಜನರು ಮತ್ತು ಭಕ್ತರನ್ನು ರಕ್ಷಿಸಬೇಕಿದೆ.

ಇದನ್ನು ನೋಡಿ : ಮಹಿಳೆಯನ್ನು ಕೇವಲ ಸರಕಾಗಿ ಬಳಸಿಕೊಳ್ಳಲಾಗುತ್ತಿದೆ – ಸಾಹಿತಿ ರೂಪ ಹಾಸನ Janashakthi Media

Donate Janashakthi Media

Leave a Reply

Your email address will not be published. Required fields are marked *