ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್ ಪಕ್ಷವು ಹಮ್ಮಿಕೊಂಡಿರುವ ಕಾರ್ಯಕ್ರಮದ ಅಂಗವಾಗಿ ನಗರದ ಹಡ್ಸನ್ ವೃತ್ತದಲ್ಲಿ ಬ್ಯಾನರ್‌ಗಳನ್ನು ಅಳವಡಿಸಿದ್ದರು. ಹಿಂದೂ ಕಾರ್ಯಕರ್ತರು ಟಿಪ್ಪು ಸುಲ್ತಾನ್ ಭಾವಚಿತ್ರವಿರುವ ಬ್ಯಾನರ್ ಅನ್ನು ಹರಿದು ಹಾಕಿರುವ ಘಟನೆ ನಡೆದಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್ ಪಕ್ಷವು ಸೋಮವಾರ(ಆಗಸ್ಟ್ 15) ಪಾದಯಾತ್ರೆ ಹಮ್ಮಿಕೊಂಡಿರುವ ನಗರದೆಲ್ಲೆಡೆ ಬ್ಯಾನರ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಾವಚಿತ್ರಗಳನ್ನು ಅಳವಡಿಸಿ ಪ್ರಚಾರ ಕೈಗೊಂಡಿದೆ.
ಹಡ್ಸನ್ ವೃತ್ತದಲ್ಲಿ ಅಳವಡಿಸಿರುವ ಬ್ಯಾನರ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಎಂದು ಬರೆಯಲಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕೇಸರಿ ಶಾಲು ಧರಿಸಿದ್ದ ರಾಷ್ಟ್ರ ರಕ್ಷಣಾ ಪಡೆ ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರಾದ ಹಿಂದೂ ಕಾರ್ಯಕರ್ತರು ಟಿಪ್ಪು ಭಾವಚಿತ್ರವಿರುವ ಬ್ಯಾನರ್ ಅನ್ನು ಹರಿದು ಹಾಕಿದ್ದಾರೆ. ಈ ವಿಚಾರವಾಗಿ ಕಾಂಗ್ರೆಸ್ ಹಾಗೂ ಹಿಂದೂ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ.
ನಗರದ ಹಡ್ಸಲ್ ವೃತ್ತ ಮಾತ್ರವಲ್ಲದೆ, ಕೆ.ಆರ್.ವೃತ್ತದಲ್ಲಿಯೂ ಕಾಂಗ್ರೆಸ್ ಅಳವಡಿಸಿದ ಟಿಪ್ಪು ಭಾವಚಿತ್ರ ಇದ್ದ ಬ್ಯಾನರ್ ಅನ್ನು ಹರಿದು ಹಾಕಿದ್ದು, ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಭಾವಚಿತ್ರ ವಿವಾದ ಎಬ್ಬಿಸಿದ ಪ್ರತಿಕಾರವಾಗಿ ಕಾಂಗ್ರೆಸ್ ಪಕ್ಷ ಅಳವಡಿಸಿದ್ದ ಟಿಪ್ಪು ಭಾವಚಿತ್ರದ ಫ್ಲೆಕ್ಸ್ ಹರಿದು ಹಾಕಲಾಗಿದೆ. 8ರಿಂದ 10 ಮಂದಿಯ ತಂಡ ಈ ಕೃತ್ಯವನ್ನು ಎಸಗಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಸಂಸದ ಡಿ.ಕೆ.ಸುರೇಶ್ ಅವರು, ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕೂಡಲೇ ಕ್ರಮಕ್ಕೆ ಒತ್ತಾಯಿಸಿದರು. ಡಿ.ಕೆ.ಶಿವಕುಮಾರ್ ಅವರು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ ಗೌಡ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡು, ಬ್ಯಾನರ್ ಹರಿದು ಹಾಕಿರುವವರ ವಿರುದ್ಧ ಕ್ರಮವಹಿಸುವಂತೆ ಆಗ್ರಹಿಸಿದರು.
ಹಡ್ಸನ್ ಸರ್ಕಲ್ ಮಾತ್ರವಲ್ಲ ಒಟ್ಟು ಎರಡು ಕಡೆಗಳಲ್ಲಿ ಬ್ಯಾನರ್ ಹರಿಯಲಾಗಿದೆ. ಪೊಲೀಸರ ಭದ್ರತೆ ನಡುವೆಯೂ ಈ ಕೃತ್ಯ ನಡೆದಿದೆ ಎಂದಿರುವ ಡಿ ಕೆ ಶಿವಕುಮಾರ್, ಕಾನೂನು ರೀತಿ ಕ್ರಮ ಕೈಗೊಳ್ಳೋದಾಗಿ ಪೊಲೀಸರು ಹೇಳಿದ್ದಾರೆ. ಕೂಡಲೇ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಪರಿಸ್ಥಿತಿ ಗಂಭೀರವಾಗಲಿದೆ. ಈ ಬಗ್ಗೆ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ನಾವು ದೇಶಕ್ಕಾಗಿ ಹೋರಾಡಿದವರ ಚರಿತ್ರೆ ಓದಿದ್ದೇವೆ. ರಾಷ್ಟ್ರಪತಿಯಾಗಿದ್ದ ರಾಮನಾಥ್ ಕೋವಿಂದ್ ಅವರು ಕೂಡ ಬಂದು ಪಾಠ ಹೇಳಿದ್ದಾರೆ. ಆದರೆ ಇವತ್ತು ಟಿಪ್ಪು ಸುಲ್ತಾನ್ ಭಾವಚಿತ್ರ ಇರುವ ಬ್ಯಾನರ್ ಅನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ನಾನು ಘಟನಾ ಸ್ಥಳಕ್ಕೆ ಬಂದು ನೋಡಿದ್ದೇನೆ. ಪೊಲೀಸರು ಕಾವಲು ಇದ್ದ ಸಂದರ್ಭದಲ್ಲಿಯೇ ಬ್ಯಾನರ್ ಹರಿದು ಹೋಗಿದ್ದಾರೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಭಾರತೀಯ ಪುರಾತತ್ವ ಇಲಾಖೆ ಟಿಪ್ಪು ಪ್ಯಾಲೆಸ್ ಅನ್ನು ದೀಪಾಲಂಕಾರ ಮಾಡಿದ್ದಾರೆ. ಆ ಮೂಲಕ ಸಂಭ್ರಮದಿಂದ ಅಮೃತಮಹೋತ್ಸವನ್ನು ಆಚರಿಸಲಾಗುತ್ತಿದೆ. ಕೇಂದ್ರ ಸರ್ಕಾರ ಕೂಡ ಗೌರವದಿಂದ ಕಾಣುತ್ತಿದೆ. ಇಷ್ಟಿದ್ದರೂ ಈ ರೀತಿ ಮಾಡುತ್ತಿದ್ದಾರೆ ಅನ್ನೋದೆ ವಿಪರ್ಯಾಸ ಎಂದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಆಗಸ್ಟ್ 15ರಂದು ನಗರದಲ್ಲಿ‘ಅಮೃತ ನಡಿಗೆ’ ಕಾರ್ಯಕ್ರಮ ನಡೆಯಲಿದೆ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಈಗಾಗಲೇ 62,394 ಮಂದಿ ಹೆಸರು ನೋಂದಣಿ ಮಾಡಿಕೊಂಡಿದ್ದು, ಈ ಪಕ್ಷಾತೀತ ನಡಿಗೆಯಲ್ಲಿಎಲ್ಲರೂ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಯಾತ್ರೆಯ ಮಾರ್ಗ: ರೈಲು ನಿಲ್ದಾಣ ಬಳಿಯ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮಧ್ಯಾಹ್ನ 2 ಗಂಟೆಗೆ ಪಾದಯಾತ್ರೆ ಆರಂಭ. ಕೆ.ಆರ್.ವೃತ್ತ, ಹಡ್ಸನ್ ಸರ್ಕಲ್, ಜೆ.ಸಿ. ರಸ್ತೆ, ಮಿನರ್ವ ವೃತ್ತ, ವಿ.ವಿ ಪುರಂ ವೃತ್ತ ಮಾರ್ಗವಾಗಿ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನ ಪ್ರವೇಶಿಸಲಿದೆ.