ಟಿಪ್ಪು ಸುಲ್ತಾನ್‌ 100 ಅಡಿ ಎತ್ತರದ ಪ್ರತಿಮೆ ನಿರ್ಮಾಣ ನಿಶ್ಚಿತ: ಶಾಸಕ ತನ್ವೀರ್‌ ಸೇಠ್‌

ಮೈಸೂರು: ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ 100 ಅಡಿ ಎತ್ತರದ ಟಿಪ್ಪು ಪ್ರತಿಮೆ ನಿರ್ಮಾಣ ಖಚಿತ ಎಂದು ಶಾಸಕ ತನ್ವೀರ್ ಸೇಠ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತಂತೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಕಂಚಿನ ಪ್ರತಿಮೆನಾ ಅಥವಾ ಪಂಚಲೋಹದ ಪ್ರತಿಮೆನಾ ಎನ್ನುವ ತೀರ್ಮಾನ ಸದ್ಯದಲ್ಲಿಯೇ ಮಾಡುತ್ತೇವೆ ಎಂದರು.

ರಾಜೀವ್‌ ನಗರ ಅಲ್‌ ಬದರ್‌ ಮೈದಾನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಟಿಪ್ಪು ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಮೆ ಸ್ಥಾಪನೆ ಇಸ್ಲಾಂ ಧರ್ಮದಲ್ಲಿ ನಿಷೇಧ ಇದ್ದರೂ, ಇಂದಿನ ಪರಿಸ್ಥಿತಿಗಾಗಿ ಪ್ರತಿಮೆ ನಿರ್ಮಾಣ ಮಾಡುವುದು ಅನಿವಾರ್ಯ. ಇದ್ದಿದ್ದರೇ ಮನೆಗೊಂದರಂತೆ ಟಿಪ್ಪು ಪ್ರತಿಮೆ ನಿರ್ಮಾಣವಾಗುತ್ತಿತ್ತು. ನಮ್ಮನ್ನು ಒಗ್ಗಟ್ಟಾಗಿಸುವ ಶಕ್ತಿ ಟಿಪ್ಪು ಹೆಸರಿಗಿದೆ. ಇಂದು ವಿವಿಧ ಪಕ್ಷಗಳಲ್ಲಿರುವ ಒಂದೇ ಸಮುದಾಯದ ಮುಖಂಡರು ಟಿಪ್ಪು ಹೆಸರಲ್ಲಿ ಒಂದಾಗಿರುವುದೇ ಇದಕ್ಕೆ ಸಾಕ್ಷಿ ಎಂದರು.

ಪ್ರತಿಮೆ ಸ್ಥಾಪನೆಗೆ ಮುನ್ನವೇ ಅದನ್ನು ಕೆಡವುವ ಮಾತು ಬಂದಿವೆ. ಪ್ರಮೋದ್ ಮುತಾಲಿಕ್  ಕಟ್ಟುವ ಕಾರ್ಯದಲ್ಲಿ ಯಾವತ್ತೂ ಇಲ್ಲ. ಬರೀ ಕೆಡವುವ ಕಾರ್ಯದಲ್ಲಿ ಅವರು ಮುಂದಿದ್ದಾರೆ. ಯಾರ ವಿರೋಧಕ್ಕೂ ನಾವು ಬಗ್ಗುವುದಿಲ್ಲ. ನಮ್ಮ ರಕ್ಷಣೆಗೆ ಸಂವಿಧಾನವಿದೆ ಎಂದು ಭರವಸೆ ನೀಡಿದರು.

ಟಿಪ್ಪುವನ್ನು ವಿರೋಧಿಸಿದರೆ ತಮಗೆ ಲಾಭ ಎಂದು ಬಿಜೆಪಿ ಭ್ರಮೆಯಲ್ಲಿದೆ. ಸರ್ಕಾರದ ಕುಮ್ಮಕ್ಕಿನಿಂದ ಮೈಸೂರಿನ ರಂಗಾಯಣದಲ್ಲಿ ಟಿಪ್ಪು ವಿರುದ್ಧದ ನಾಟಕ ಪ್ರದರ್ಶನಕ್ಕೆ ಸಿದ್ಧವಾಗಿದೆ. ಇದಕ್ಕೆ ನನ್ನ ವಿರೋಧವಿದ್ದು ಇದನ್ನು ತಡೆಯಲು ಕೋರ್ಟ್ ಮೊರೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ.

ಟಿಪ್ಪು ಹೆಸರಿಗೆ ಅನೇಕ ಅಪಚಾರಗಳನ್ನು ಮಾಡಲಾಗುತ್ತಿದೆ. ಸುಳ್ಳು ಕತೆಗಳನ್ನು ಸೃಷ್ಟಿಸಿ ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಟಿಪ್ಪು ಅಭಿಮಾನಿಗಳು, ನಮ್ಮ ಸಮುದಾಯ ಎಲ್ಲವನ್ನೂ ಮೌನವಾಗಿ ಸಹಿಸುತ್ತಿದೆ. ಕಾಲ ಬಂದಾಗ ಅದಕ್ಕೆ ಸ್ಪಷ್ಟ ಉತ್ತರ ನೀಡುತ್ತೇವೆ ಎಂದು ಎಚ್ಚರಿಸಿದರು.

ರಾಷ್ಟ್ರದ ಏಕತೆ, ಅಭಿವೃದ್ಧಿ ಎಲ್ಲವೂ ಭಾರತದ ಸಂವಿಧಾನದ ಅಡಿಯಲ್ಲಿ ನಡೆಯಬೇಕು. ನಾನು ಯಾರಿಗೆ ಉತ್ತರ ಕೊಡುವ ಅಗತ್ಯವಿಲ್ಲ ಎಂದಿರುವ ಶಾಸಕ ತನ್ವೀರ್‌ ಸೇಠ್‌,  ರಾಜ್ಯ ಮತ್ತು ಕೇಂದ್ರ ಸರ್ಕಾರ ಅಭಿವೃದ್ಧಿಯಲ್ಲಿ ಶೂನ್ಯ. ಟಿಪ್ಪು ಆಳ್ವಿಕೆಯ ನೈಜ್ಯ ಸಂಗತಿಯನ್ನ ಯುವ ಪೀಳಿಗೆಗೆ ತಿಳಿಸಲು ಪ್ರತಿಮೆ ಮಾಡುತ್ತೇವೆ ಎಂದರು.

ಅಲ್ಲಾಹ್‌ ನನ್ನು ಸಾಕ್ಷೀಕರಿಸಿ ಜನಪರ ಆಡಳಿತ ನಡೆಸಿದ ಟಿಪ್ಪು ಸುಲ್ತಾನ್‌ ಮೈಸೂರು ರಾಜ್ಯವನ್ನಾಳಿದರು. 260 ವರ್ಷಗಳ ಹಿಂದೆಯೇ ಶ್ರೀರಂಗಪಟ್ಟಣದ ಗುಂಬಜ್‌ ದ್ವಾರದ ಮೇಲೆ ರಿಯಾಸತೇ ದಖನ್‌ ಕರ್ನಾಟಕ್‌ ಎಂದು ಬರೆಸಿದ್ದಾರೆ. ಅಂದರೆ ಕರ್ನಾಟಕ ಎಂಬ ಹೆಸರಿನ ಕಲ್ಪನೆಯೇ ಇಲ್ಲದ ಅವರ ಆಳ್ವಿಕೆಯಲ್ಲಿ ಈ ರಾಜ್ಯವನ್ನು ಕರ್ನಾಟಕ ಎಂದು ಮೊಟ್ಟಮೊದಲ ಬಾರಿಗೆ ಸಂಬೋಧಿಸಿದ ಕೀರ್ತಿ ಟಿಪ್ಪುಗೆ ಸಲ್ಲುತ್ತದೆ ಎಂದರು.

Donate Janashakthi Media

Leave a Reply

Your email address will not be published. Required fields are marked *