ಮೈಸೂರು: ಕಳೆದ ಒಂದು ತಿಂಗಳಿನಿಂದ ತಿ. ನರಸೀಪುರ ತಾಲೂಕಿನ ಜನರ ನೆಮ್ಮದಿ ಕೆಡಿಸಿದ್ದ ಚಿರತೆ ಕೊನೆಗೂ ಸೆರೆ ಸಿಕ್ಕಿದೆ. ಅರಣ್ಯ ಇಲಾಖೆ ಕೈಗೊಂಡ ಕಾರ್ಯಾಚರಣೆಯಿಂದ ಸೆರೆ ಸಿಕ್ಕಿದ್ದು, ಜನತೆ ನಿಟ್ಟಿಸುರು ಬಿಟ್ಟಿದ್ದಾರೆ. ಇದರೊಂದಿಗೆ, ಸ್ಥಳೀಯ ಗ್ರಾಮಸ್ಥರು ಸೆರೆ ಹಿಡಿರುವ ಚಿರತೆಯನ್ನು ತೋರಿಸಬೇಕೆಂದು ಪಟ್ಟು ಹಿಡಿದಿರುವ ಘಟನೆಯೂ ನಡೆದಿದೆ.
ತಿ.ನರಸೀಪುರ ತಾಲೂಕಿನ ಉಕ್ಕಲಗೆರೆ ಗ್ರಾಮದ ಮಲ್ಲಿಕಾರ್ಜುನಸ್ವಾಮಿ ಬೆಟ್ಟದ ಬಳಿ ಬೀದಿಗಿಳಿದು ಪಟ್ಟು ಹಿಡಿದ ಗ್ರಾಮಸ್ಥರು ನಿಜವಾಗಿಯೂ ಚಿರತೆಯನ್ನು ಸೆರೆ ಹಿಡಿಯಲಾಗಿದೆಯೇ ಎಂದು ಖಾತ್ರಿಪಡಿಸಬೇಕೆಂದು ಆಗ್ರಹಿಸಿದ್ದಾರೆ. ಇದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಇದನ್ನು ಓದಿ: ಅರಣ್ಯ ಇಲಾಖೆ ಬೋನಿಗೆ ಬಿದ್ದ ಚಿರತೆ: ಮಾರಶೆಟ್ಟಿ ಗ್ರಾಮಸ್ಥರು ನಿಟ್ಟುಸಿರು
ಚಿರತೆಯನ್ನು ತೋರಿಸದ ಕಾರಣ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಅನುಮಾನಗೊಂಡರು. ನಿಜವಾಗಿಯೂ ಚಿರತೆಯನ್ನು ಸೆರೆ ಹಿಡಿದಿದ್ದರೆ, ಗ್ರಾಮಸ್ಥರಿಗೆ ತೋರಿಸುತ್ತಿದ್ದರು. ಈ ರೀತಿ ಗೌಪ್ಯತೆ ಯಾಕೆ ಕಾಪಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಶಾಸಕ ಅಶ್ವಿನ್ ಕುಮಾರ್ ಸ್ಥಳಕ್ಕಾಗಮಿಸಿ, ಸಾರ್ವಜನಿಕರ ಒತ್ತಾಯದ ಮೇರೆಗೆ ಸೆರೆಹಿಡಿದ ಚಿರತೆಯನ್ನು ತೋರಿಸಿ, ಗ್ರಾಮಸ್ಥರ ಅನುಮಾನ ಬಗೆಹರಿಸಿದರು.
ಕಳೆದ 23 ದಿನಗಳಿಂದ ಸತತವಾಗಿ ಕಾರ್ಯಾಚರಣೆ ನಡೆಸಿದರೂ ಚಿರತೆ ಬಲೆಗೆ ಬಿದ್ದಿಲ್ಲ. ಇಂದು ಬೆಳಗ್ಗೆ 9.30ರ ಸಮಯದಲ್ಲಿ ಬನ್ನೂರು ಬಳಿಯ ಎಂ.ಎಲ್. ಹುಂಡಿ ಸಮೀಪ ಇರುವ ಮಲ್ಲಿಕಾರ್ಜುನ ಬೆಟ್ಟದಲ್ಲಿ ಚಿರತೆ ಬೋನಿಗೆ ಬಿದ್ದಿದೆ. ಚಿರತೆಯನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆ ಹಿಡಿದಿದೆ.
ಇದನ್ನು ಓದಿ: ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ರೂ.15 ಲಕ್ಷ ಪರಿಹಾರ: ಬಸವರಾಜ ಬೊಮ್ಮಾಯಿ
ತಿ. ನರಸೀಪುರ ತಾಲೂಕಿನ ಬನ್ನೂರು ವ್ಯಾಪ್ತಿಯಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ಏಳು ವರ್ಷದ ಗಂಡು ಚಿರತೆಯನ್ನು ಸೆರೆ ಹಿಡಿಯಲಾಗಿದೆ. ದಿನನಿತ್ಯ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆಯನ್ನು ಹಿಡಿಯಲು ಉಕ್ಕಲಗೆರೆ ಗ್ರಾಮದಲ್ಲಿ ಬೋನಿನೊಳಗೆ ಅರಣ್ಯ ಇಲಾಖೆ ಇರಿಸಿದ್ದ ಕರು ತಿನ್ನಲು ಚಿರತೆ ಬಂದ ಸಂದರ್ಭದಲ್ಲಿ ಅದನ್ನು ಹಿಡಿಯಲಾಗಿದೆ.
ಇಬ್ಬರು ಡಿಸಿಎಫ್, ಒಬ್ಬರು ಸಿಎಫ್ ಸೇರಿ 150ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಥರ್ಮಲ್ ಡ್ರೋಣ್ ಕ್ಯಾಮೆರಾವನ್ನೂ ಈ ಕಾರ್ಯಾಚರಣೆಯಲ್ಲಿ ಬಳಸಲಾಗಿತ್ತು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ