ಮುಸ್ಲಿಮರನ್ನು ಗುರಿಯಾಗಿಸಿ ಟೈಮ್ಸ್ ನೌ ನವಭಾರತ್ ಕಾರ್ಯಕ್ರಮ; ವಿಡಿಯೊ ಡಿಲಿಟ್ ಮಾಡುವಂತೆ NBDSA ಆದೇಶ

ನವದೆಹಲಿ: ಅಪರಾಧ, ಗಲಭೆಗಳು, ವದಂತಿಗಳಿಗೆ ಸಂಬಂಧಿತ ಘಟನೆಗಳನ್ನು ವರದಿ ಮಾಡುವಾಗ ಕೋಮು ಬಣ್ಣ ಹಚ್ಚುವುದನ್ನು ತಡೆಯುವ ಉದ್ದೇಶದಿಂದ ರೂಪಿಸಲಾಗಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದರ ಬಗ್ಗೆ ರಾಷ್ಟ್ರ ಮಟ್ಟದ ಟೈಮ್ಸ್ ನೌ ನವಭಾರತ್ ಮಾಧ್ಯಮಕ್ಕೆ ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಮತ್ತು ಡಿಜಿಟಲ್ ಸ್ಟ್ಯಾಂಡರ್ಡ್ಸ್ ಅಥಾರಿಟಿ (NBDSA) ಎಚ್ಚರಿಕೆ ನೀಡಿದೆ.

ಜನಾಂಗೀಯ ಮತ್ತು ಧಾರ್ಮಿಕ ಸೌಹಾರ್ದತೆಗೆ ಸಂಬಂಧಿಸಿದ ವರದಿಗಳಲ್ಲಿ ಇರಬೇಕಿದ್ದ ನಿರ್ದಿಷ್ಟ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಟೈಮ್ಸ್‌ ನೌ ನವಭಾರತ್‌ನ ನಿರೂಪಕಿ ನವಿಕಾ ಕುಮಾರ್ ಅವರು ಆಯೋಜಿಸಿದ್ದ ‘ಸವಾಲ್ ಪಬ್ಲಿಕ್ ಕಾ’ ಕಾರ್ಯಕ್ರಮದ ಸಂಚಿಕೆಯ ವೀಡಿಯೊವನ್ನು ತೆಗೆದುಹಾಕುವಂತೆ NBDSA ಚಾನಲ್‌ಗೆ ನವೆಂಬರ್ 2ರ ಗುರುವಾರ ನಿರ್ದೇಶಿಸಿದೆ.

ಇದನ್ನೂ ಓದಿ: ತೆಲಂಗಾಣ | ಆಡಳಿತರೂಢ ಬಿಆರ್‌ಎಸ್‌ಗೆ ಓವೈಸಿ ಬೆಂಬಲ

ಗಾರ್ಬಾ ಕಾರ್ಯಕ್ರಮಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಈ ಕಾರ್ಯಕ್ರಮದಲ್ಲಿ ನವಿಕಾ ಕುಮಾರ್ ಚರ್ಚಿಸಿದ್ದರು. ಅದರಲ್ಲಿ ಭಜರಂಗದಳದ ಗೂಂಡಾಗಳು ಗಾರ್ಬಾ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿದ ವೀಡಿಯೊವನ್ನು ಪ್ರಸಾರ ಮಾಡಲಾಗಿತ್ತು. ಟೆಕ್ ಎಥಿಕ್ಸ್ ವೃತ್ತಿಪರ ಇಂದ್ರಜೀತ್ ಘೋರ್ಪಡೆ ಅವರು ಸಲ್ಲಿಸಿದ ದೂರಿನ ಮೇರೆಗೆ ಪ್ರಕರಣವನ್ನು ವಿಚಾರಣೆ ನಡೆಸಿದ ಎನ್‌ಬಿಡಿಎಸ್‌ಎ ಈ ಆದೇಶ ನೀಡಿದೆ.

“ಹಿಂದೂ ಮಹಿಳೆಯರ ವಿರುದ್ಧ ಅಪರಾಧಗಳನ್ನು ಎಸಗಲು ಮುಸ್ಲಿಮರು ಗಾರ್ಬಾ ಕಾರ್ಯಕ್ರಮಗಳಿಗೆ ಬರುತ್ತಾರೆ ಎಂದು ಸೂಚಿಸುವ ಮೂಲಕ ದ್ವೇಷವನ್ನು ಹರಡುವ ಗುರಿಯನ್ನು ನವಿಕಾ ಕುಮಾರ್ ಅವರ ಕಾರ್ಯಕ್ರಮ ಹೊಂದಿದೆ” ಎಂದು ಇಂದ್ರಜೀತ್ ಘೋರ್ಪಡೆ ದೂರಿನಲ್ಲಿ ಆರೋಪಿಸಿದ್ದರು. ನವಿಕಾ ಅವರ ಈ ಕಾರ್ಯಕ್ರಮವು ಅಲ್ಪಸಂಖ್ಯಾತರಿಗೆ ತೊಂದರೆಯಾಗಲಿದ್ದು, ದೇಶದ ಜಾತ್ಯತೀತತೆಗೆ ತೊಂದರೆಯಾಗಲಿದೆ ಎಂದು ದೂರಿನಲ್ಲಿ ಪ್ರತಿಪಾದಿಸಲಾಗಿತ್ತು. ಟೈಮ್ಸ್ ನೌ

ಇದನ್ನೂ ಓದಿ: ಆಂಧ್ರಪ್ರದೇಶ | ಜಾತಿ ಗಣತಿಗೆ ಅನುಮೋದನೆ ನೀಡಿದ ರಾಜ್ಯ ಸಂಪುಟ

ಸೆಪ್ಟೆಂಬರ್ 29, 2022 ರಂದು ಪ್ರಸಾರವಾದ ‘ಗರ್ಬಾ ಬಹನಾ, ಹಿಂದೂ ಬೇಟಿಯಾ ನಿಶಾನಾ’ (ಗರ್ಬಾದ ನೆಪದಲ್ಲಿ ಹಿಂದೂ ಹೆಣ್ಣುಮಕ್ಕಳನ್ನು ಗುರಿಯಾಗಿಸಲಾಗಿದೆ) ಶೀರ್ಷಿಕೆಯ ಅಡಿಯಲ್ಲಿ ನಿರೂಪಕಿ ನವಿಕಾ ಕುಮಾರ್ ಅವರು ಚಾನೆಲ್‌ನಲ್ಲಿ ಕಾರ್ಯಕ್ರಮವನ್ನು ನಡೆಸಿದ್ದರು. ಈ ಕಾರ್ಯಕ್ರಮವನ್ನು ಅವರು ಮುಸ್ಲಿಮರ ವಿರುದ್ಧ ದ್ವೇಷ ಹರುಡುವಂತೆ ನಿರೂಪಿಸಿದ್ದರು.

ಈ ದೂರನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಕೆ ಸಿಕ್ರಿ, ನವೆಂಬರ್ 9, 2023 ರ ಒಳಗೆ ಎಲ್ಲಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ವಿವಾದಿತ ಸಂಚಿಕೆಯ ಎಲ್ಲಾ ವೀಡಿಯೊಗಳನ್ನು ತೆಗೆದುಹಾಕುವಂತೆ ಟೈಮ್ಸ್ ನೌ ನವಭಾರತ್‌ಗೆ ಆದೇಶಿಸಿದ್ದಾರೆ.

ವಿಡಿಯೊ ನೋಡಿ: ಗಾಜಾಪಟ್ಟಿಯನ್ನು ಇಸ್ರೇಲ್ ಗೆಲ್ಲುತ್ತಾ? ಪ್ಯಾಲಿಸ್ಟೈನ್ ತಿರುಗಿ ಬಿದ್ದರೆ ಏನಾಗಬಹುದು? 

Donate Janashakthi Media

Leave a Reply

Your email address will not be published. Required fields are marked *