ಬೆಂಗಳೂರು: ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಗೂಂಡಾ ದಾಳಿಯನ್ನು ಖಂಡಿಸಿರುವ ಸಿಐಟಿಯು ಸಂಘಟನೆಯು ಇದು, ರಾಜ್ಯಕ್ಕೆ ಮತ್ತು ಕನ್ನಡಿಗರಿಗೆ ಆದ ಬಹಳ ದೊಡ್ಡ ಅವಮಾನ ಎಂದು ತಿಳಿಸಿದೆ.
ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ರಾಜ್ಯ ಅಧ್ಯಕ್ಷೆ ಎಸ್. ವರಲಕ್ಷ್ಮಿ ಅವರು, ರೈತ ಸಂಘದ ಸಭೆಯೊಂದರಲ್ಲಿ ಭಾಗಿಯಾಗಿದ್ದ ರಾಕೇಶ್ ಟಿಕಾಯತ್ ಮೇಲೆ ತುಂಬಿದ ಸಭೆಯಲ್ಲೇ ದೈಹಿಕ ಹಲ್ಲೆ ನಡೆಸಿ, ಮುಖಕ್ಕೆ ಮಸಿ ಬಳಿದಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವ ಸಂಕೇತವಾಗಿದೆ. ರಾಜ್ಯ ಬಿಜೆಪಿ ಸರ್ಕಾರವು ರಾಜ್ಯವನ್ನು ಗೂಂಡಾಗಳ ಕೈಗೆ ನೀಡಿದಂತೆ ಭಾಸವಾಗುತ್ತಿದೆ ಎಂದಿದ್ದಾರೆ.
ಇದನ್ನು ಓದಿ: ರಾಕೇಶ್ ಟಿಕಾಯಿತ್ ಮೇಲೆ ಹಲ್ಲೆ ಖಂಡಿಸಿ ಮೇ 31ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಸಂಯುಕ್ತ ಕರ್ನಾಟಕ ಹೋರಾಟ ಕರೆ
ಕೇಂದ್ರ ಬಿಜೆಪಿ ಸರ್ಕಾರ ಜಾರಿಗೊಳಿಸಲು ಹೊರಟಿದ್ದ ರೈತ ವಿರೋಧಿ, ದೇಶ ವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ, ಅದರ ವಾಪಸ್ಸಾತಿಗಾಗಿ ರೈತರು ದೆಹಲಿ ಗಡಿಗಳಲ್ಲಿ ನಡೆಸಿದ ಐತಿಹಾಸಿಕ ಹೋರಾಟದ ಮುಂಚೂಣಿ ನಾಯಕನ ಮೇಲೆ ಈ ರೀತಿಯ ದಾಳಿ ನಡೆದಿರುವುದು ಪ್ರಭುತ್ವ ಪ್ರಾಯೋಜಿತ ಕೃತ್ಯವೇ ಎಂಬ ಅನುಮಾನಗಳು ಮೂಡಿವೆ. ಹಲ್ಲೆ ನಡೆಸಿ, ಮಸಿ ಬಳಿದವರು ಮೋದಿ ಮೋದಿ ಎಂದು ಕೂಗುತ್ತಿರುವ ವಿಡಿಯೋ, ಹಾಗೆಯೇ, ಕೃತ್ಯ ನಡೆಸಿದ ವ್ಯಕ್ತಿ ರಾಜ್ಯ ಬಿಜೆಪಿ ನಾಯಕರ ಜೊತೆಯಲ್ಲಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಅವರು, ಕಳೆದ ವರ್ಷ್ ನಡೆದ ರೈತ ಹೋರಾಟವು ಕೇಂದ್ರ ಸರ್ಕಾರದ ಸೊಕ್ಕನ್ನು ಅಡಗಿಸಿತ್ತು. ಚುನಾವಣಾ ಗೆಲುವಿನ ಠಸ್ಸೆಯ ಮೇಲೆ ಯಾವುದೇ ತೀರ್ಮಾನಕ್ಕೂ ಸೈ ಎಂದು ಸೊಕ್ಕಿನಲ್ಲಿ ಮುಳುಗಿದ್ದ ಕೇಂದ್ರ ಸರ್ಕಾರವನ್ನು ರೈತರ ಧೀರೋದ್ಧಾತ ಹೋರಾಟ ಮಣಿಸಿತ್ತು. ಹೀಗಾಗಿ ರಾಕೇಶ್ ಟಿಕಾಯತ್ ಅವರನ್ನು ಗುರಿಯಾಗಿಸಿ ನಡೆಸಲಾದ ಈ ದಾಳಿ ರೈತ ಸಮುದಾಯದ ವಿರುದ್ಧದ ಸೇಡಿನ ದಾಳಿಯಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನು ಓದಿ: ರೈತ ನಾಯಕ ರಾಕೇಶ ಟಿಕಾಯತ್ ಮೇಲೆ ಕಪ್ಪು ಮಸಿ ಬಳೆದು ಹಲ್ಲೆ
ದಾಳಿಕೋರ ಗೂಂಡಾಗಳನ್ನು ಕೂಡಲೇ ಬಂಧಿಸಿ, ಕಠಿಣ ಕ್ರಮಕ್ಕೆ ಮುಂದಾಗಬೇಕೆಂದು ಸಿಐಟಿಯು ರಾಜ್ಯ ಸಮಿತಿಯು ಸರ್ಕಾರವನ್ನು ಒತ್ತಾಯಿಸಿದೆ. ರಾಷ್ಟ್ರೀಯ ನಾಯಕೊಬ್ಬರ ಮೇಲಿನ ಈ ದಾಳಿಯು ರಾಜ್ಯದ ಪೊಲೀಸ್ ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸಿಐಟಿಯು ಆಗ್ರಹಿಸಿದೆ.