ಮೈಸೂರು: ಹುಲಿಯೊಂದು ರಾಜಾರೋಷವಾಗಿ ಓಡಾಡಿರುವ ಘಟನೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಬೆಮೆಲ್ (BEML) ಕಂಪನಿ ಆವರಣದಲ್ಲಿಯೇ ನಡೆದಿದೆ.
ಶುಕ್ರವಾರ ರಾತ್ರಿ ಹುಲಿ ಕಾಂಪೌಂಡ್ ಬಳಿ ಇಲವಾಲದಲ್ಲಿರುವ ಬೆಮೆಲ್ ಕಚೇರಿಯ ಆವರಣದಲ್ಲಿ ಬಂದು ಹೋಗುತ್ತಿರುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಸೆರೆ ಹಿಡಿದು, ಮಾಧ್ಯಮಗಳಿಗೆ ನೀಡಿದ್ದಾರೆ.
ಇಲ್ಲಿ ಹುಲಿ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಇಳಿದಿದೆ. ಆದರೀಗ ಬೆಮೆಲ್ ಕಾರ್ಖಾನೆಯೊಳಗೆ ಅಡ್ಡಾಡಿರುವುದರಿಂದ ನೌಕರರು ಬೆಚ್ಚಿ ಬಿದ್ದಿದ್ದಾರೆ. ಇಲವಾಲದ ಕಿರು ಅರಣ್ಯ ಪ್ರದೇಶದ ಸಮೀಪದ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡು ಭಯ ಹುಟ್ಟಿಸಿತ್ತು.
ಈ ಬಗ್ಗೆ ಬೆಮೆಲ್ ಅಧಿಕಾರಿಗಳು, ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಇತ್ತೀಚಿಗೆ ಮೈಸೂರು ಜಿಲ್ಲೆಯಲ್ಲಿ ಹುಲಿಗಳ ಹಾವಳಿ ಹೆಚ್ಚಾಗಿದೆ. ಅಕ್ಟೋಬರ್ 16ರಂದು ಬಡಗಲಪುರದ ರೈತನ ಮೇಲೆ ನಡೆದ ಹುಲಿ ದಾಳಿಯಿಂದ ಶುರುವಾದ ಬೇಟೆ ಅಲ್ಲಿಂದ ಇಲ್ಲಿಯವರಗೆ 3 ಜನ ರೈತರನ್ನು ಬಲಿ ಪಡೆದಿದೆ. ದಾಳಿ ನಡೆಸಿದ ಹುಲಿ ಸೇರಿದಂತೆ ಕಾಡಂಚಿನ ಗ್ರಾಮಗಳಲ್ಲಿ ಇರುವ ಸುಮಾರು 7 ದೊಡ್ಡ ಹುಲಿ ಹಾಗೂ 8 ಮರಿಗಳು ಸೇರಿದಂತೆ ಒಟ್ಟು 15 ಹುಲಿಗಳನ್ನು ಸೆರೆ ಹಿಡಿಯಲಾಗಿದೆ.
ಸೆರೆ ಹಿಡಿದ 7 ದೊಡ್ಡ ಹುಲಿಗಳು ಹಾಗೂ ಮರಿಗಳನ್ನು ಮೈಸೂರಿನ ಕೂರ್ಗಳಿಯ ಪುನವರ್ಸತಿ ಕೇಂದ್ರಕ್ಕೆ ಮತ್ತೆ ಹುಲಿ ಮರಿಗಳನ್ನು ಬನ್ನೇರುಘಟ್ಟಕ್ಕೆ ಹಾಗೂ ಮತ್ತೆ ಕೆಲವು ತಾಯಿ ಮತ್ತು ಮರಿಗಳನ್ನು ಕಾಡಿಗೆ ಬಿಡಲಾಗಿದೆ. ಸೆರೆ ಸಿಕ್ಕ ಹುಲಿಯಲ್ಲಿ ಒಂದು ಮಾತ್ರ ಗಾಯಗೊಂಡಿದ್ದು ಅದಕ್ಕೆ ಚಿಕಿತ್ಸೆ ನೀಡಲಾಗಿದೆ. ಕಳೆದ 32 ದಿನಗಳಲ್ಲಿ 15 ಹುಲಿ ಮತ್ತು ಮರಿಗಳನ್ನು ಸೆರೆ ಹಿಡಿದಿರುವುದರಿಂದ ಆತಂಕದಲ್ಲಿದ್ದ ಸ್ಥಳೀಯರು ಮತ್ತು ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ಕಾಡಂಚಿನ ಗ್ರಾಮಗಳಲ್ಲಿ ಹುಲಿ ಬರಲು ಪ್ರಮುಖ ಕಾರಣಗಳು ಹಲವು ಇವೆ. ಅಂಗವೈಕಲ್ಯಗೊಂಡ ಹುಲಿ ಸುಲಭ ಆಹಾರ ಸಿಗುವ ಕಾಡಂಚಿನ ಗ್ರಾಮಗಳಿಗೆ ಬರುತ್ತದೆ. ಪ್ರದೇಶವಾರು ಹೋರಾಟದಲ್ಲಿ ಸೋತ ಹುಲಿಗಳು ಕಾಡಂಚಿನ ಗ್ರಾಮಗಳತ್ತ ಸುಲಭವಾಗಿ ಸಿಗುವ ಸಾಕು ಪ್ರಾಣಿಗಳ ಬೇಟೆಗಾಗಿ ಬರುತ್ತವೆ. ಮುಖ್ಯವಾಗಿ ಹೆಣ್ಣು ಹುಲಿ ತನ್ನ ಮರಿಗಳೊಂದಿಗೆ ಕಾಡಂಚಿನ ಗ್ರಾಮಗಳಲ್ಲಿ ಆಹಾರ ಆರಸಿ ಬರುವುದು ಸಹಜ ಎಂದು ತಜ್ಞರು ಹೇಳುತ್ತಾರೆ.
ಬಂಡೀಪುರ ಹಾಗೂ ನಾಗರಹೊಳೆ ಅರಣ್ಯ ಪ್ರದೇಶಗಳ ಕಾಡಂಚಿನ ಗ್ರಾಮಗಳ ಪ್ರದೇಶದಲ್ಲಿ ಸುಮಾರು 20 ಹುಲಿಗಳು ಓಡಾಟ ಮಾಡುತ್ತಿವೆ ಎಂದು ಕಳೆದವಾರವಷ್ಟೇ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದರು.
ಇದನ್ನೂ ನೋಡಿ : ಕಾರ್ಖಾನೆ ಕಾರ್ಮಿಕರ ಸಂಕಟಗಳು |CITU | ಕಾರ್ಮಿಕರು Janashakthi Media
