ಎಸ್ ವೈ ಗುರುಶಾಂತ
ಭಾರತದಲ್ಲಿನ ಹುಲಿ ಅಭಿವೃದ್ಧಿ ಯೋಜನೆಗೆ ಐವತ್ತು ತುಂಬಿದ ಸಂದರ್ಭವನ್ನು ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಗಿದೆ. ೧೯೭೩ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಆರಂಭಿಸಿದ ಯೋಜನೆಯ ಯಶಸ್ವಿಗೆ ಇಂದಿನ ಪ್ರಧಾನಿ ನರೇಂದ್ರ ಮೋದಿಯವರು ಸಾಕ್ಷಿಯಾಗಿದ್ದಾರೆ. ಅದೇ ಮಗ್ಗುಲಲ್ಲಿ ಹುಲಿ ಯೋಜನೆಯಲ್ಲಿ ಸಂತ್ರಸ್ತರಾದ ಆದಿವಾಸಿಗಳು ಅಂದು ಉಪವಾಸ ನಡೆಸುವ ಮೂಲಕ ಕಾಡಿನ ನೆನಪಲ್ಲೇ ನಿಧನರಾದ ಹಿರಿಯರ ಸ್ಮರಣೆಯಲ್ಲಿ ಶೋಕ ದಿನವಾಗಿ `ಸಂಕಟಗಳ ಸತ್ಯಾಗ್ರಹ’ ನಡೆಸಿದ್ದಾರೆ. ಈ ಎರಡೂ ಘಟನೆಗಳು ವನ್ಯಮೃಗಗಳ ಬಗ್ಗೆ ಸರಕಾರಕ್ಕಿರುವ ‘ಪ್ರೀತಿ’ ಮತ್ತು ತನ್ನದೇ ಮೂಲ ನಿವಾಸಿಗಳ ಬಗೆಗಿನ ನಿರ್ಲಜ್ಜ ತಿರಸ್ಕಾರಗಳ ನೀತಿಯ ನಿದರ್ಶನವಾಗಿವೆ.
ನಿಜ, ಅಳಿವಿನಂಚಿನಲ್ಲಿರುವ ಹುಲಿಗಳ ಸಂತತಿಯನ್ನು ಸಂರಕ್ಷಿಸಬೇಕು ಎನ್ನುವ ಪಾರಿಸಾರಿಕ ಕಾಳಜಿಯನ್ನು ಪ್ರಶ್ನಿಸಬೇಕಿಲ್ಲ. ಆದರೆ ವನ್ಯಜೀವಿಗಳ ರಕ್ಷಣೆಯನ್ನು ಅರಣ್ಯದ ಒಂದು ಭಾಗವೇ ಆಗಿರುವ ಮಾನವನನ್ನೂ ಒಳಗೊಂಡು ಇತರೆ ಜೀವ ಸಂಕುಲದ ಸಂರಕ್ಷಣೆಯ ಹೊಣೆಗಾರಿಕೆಯೂ ಕೂಡ ಘನ ಸರಕಾರದ ಜವಾಬ್ದಾರಿ ಎನ್ನುವ ಬದ್ಧತೆ ವಸಾಹತುಶಾಹಿ ಹಾಗೂ ಸ್ವಾತಂತ್ರ್ಯೋತ್ತರದ ಆಡಳಿತಗಳಲ್ಲಿ ಕಂಡು ಬರುವುದಿಲ್ಲ. ಅರಣ್ಯ ಎನ್ನುವುದು ಆಳುವ ಪ್ರಭುತ್ವಗಳ ಮನಸೋ ಇಚ್ಛೆ ಲೂಟಿಗೆ ತೆರೆದ ಮುಕ್ತ ಮೈದಾನ ಎಂದೇ ಭಾವಿಸಿವೆ. ಮಾನವ ಕಾಳಜಿ ಕೇಂದ್ರಿತ ನೀತಿಯೆಂಬುದು ಒಕ್ಕೂಟದ ಸರಕಾರಕ್ಕೆ ಇಲ್ಲವೇ ಇಲ್ಲ.
ದೇಶದಲ್ಲಿ ಕೈಗೊಂಡ ಹುಲಿ ಯೋಜನೆಯಿಂದಾಗಿ ಆರಂಭದಲ್ಲಿದ್ದ ೧೮೨೭ ರಷ್ಟಿದ್ದ ಹುಲಿಗಳ ಸಂಖ್ಯೆ೩೧೬೭ ಕ್ಕೇರಿದೆ. ಇದು ಪ್ರಪಂಚದ ಹುಲಿಗಳ ಸಂಖ್ಯೆಗೆ ಹೋಲಿಸಿದರೆ ಶೇ.೭೫ ರಷ್ಟು ಎನ್ನುವುದು ದಾಖಲೆಯ ಸಂಗತಿ. ೧೯೭೨ ರಲ್ಲಿ ‘ವನ್ಯಜೀವಿ ಸಂರಕ್ಷಣಾ ಕಾಯ್ದೆ’ ಜಾರಿಗೆ ಬಂದ ನಂತರ ಶತಮಾನಗಳಿಂದ ಅರಣ್ಯದಲ್ಲೇ ನೆಲೆ ಮಿಂತಿದ್ದ ಆದಿವಾಸಿ ಸಮುದಾಯಗಳ ಬದುಕು ಅತಂತ್ರವಾಯಿತು. ಸರಕಾರಕ್ಕೆ ವನ್ಯಜೀವಿಗಳ ಸಂರಕ್ಷಣೆಯ ಜೊತೆಯಲ್ಲಿ ಅರಣ್ಯ ಹಕ್ಕು ಸ್ಥಾಪಿಸಿದ್ದ ಆದಿವಾಸಿಗಳನ್ನು ಅಲ್ಲಿಂದ ನಿವಾರಿಸಿಕೊಳ್ಳುವ ಯೋಚನೆಗೂ ಹಚ್ಚು ಇಂಬು ಸಿಕ್ಕಿತು. ಆ ಕಾರಣದಲ್ಲಿ ಕಾಡಿನಲ್ಲಿ ಗೂಡು ಕಟ್ಟಿಕೊಂಡಿದ್ದ ಆದಿವಾಸಿಗಳನ್ನು ರಾತ್ರೋರಾತ್ರಿ ನೆಲೆಗಳಿಂದ ಎತ್ತಂಗಡಿ ಮಾಡಲಾಯಿತು. ಪ್ರತಿರೋಧಿಸಿದವರ ಮೇಲೆ ದೌರ್ಜನ್ಯ, ಕೊನೆಗೆ ಪುನರ್ವಸತಿ ಯೋಜನೆಗಳ ಜಾರು ಬಂಡೆಯೂ ಸೃಷ್ಟಿಯಾಯಿತು. ಈಗ ಶೋಕದಿನ ಆಚರಿಸಿದ ಬಂಡಿಪುರ, ಚಾಮರಾಜನಗರ ಪ್ರದೇಶದ ಆದಿವಾಸಿಗಳಿಗೆ ನೀಡಲಾದ ಭರವಸೆಯಂತೆ ಪುನರ್ವಸತಿ ಯೋಜನೆ ಜಾರಿಯಾಗಲಿಲ್ಲ. ಉಚ್ಛ ನ್ಯಾಯಾಲಯದ ತೀರ್ಪಿಗೂ ಕವಡೆ ಕಿಮ್ಮತ್ತಿನ ಬೆಲೆಯನ್ನು ಸರಕಾರಗಳು ನೀಡಲಿಲ್ಲ. ತಮ್ಮ ನೆಲ, ಸಂಸ್ಕೃತಿ, ಜೀವನ ಕಳೆದುಕೊಂಡ ಆದಿವಾಸಿಗಳ ಬದುಕು ನೀರಿನಿಂದ ಹೊರಗೆಸೆದ ಮೀನಿನಂತಾಗಿದೆ. ಈಗಲೂ ಹುಲಿ ಆವಾಸ ಸ್ಥಾನ ಹೆಚ್ಚಿಸುವ ಹುಲಿ ಕಾರಿಡಾರ್ ಯೋಜನೆ, ಆನೆ ಕಾರಿಡಾರ್, ಜೀವ ವೈವಿಧ್ಯತೆಯ ತಾಣ, ನ್ಯಾಷನಲ್ ಪಾರ್ಕ್, ಸೂಕ್ಷ್ಮ ಪರಿಸರ ವಲಯ ಹೀಗೆ ಹಲವು ಹನ್ನೊಂದು ಯೋಜನೆಗಳು, ಕಸ್ತೂರಿ ರಂಗನ್ ವರದಿಯಂತಹ ಶಿಫಾರಸುಗಳು ಆದಿವಾಸಿಗಳನ್ನು, ಅರಣ್ಯದಂಚಿನಲ್ಲಿ ಬದುಕು ಕಟ್ಟಿಕೊಂಡ ಜನರನ್ನು ನಿರ್ಗತಿಕರನ್ನಾಗಿಸುತ್ತಿವೆ, ಆಗಿಸಲಿವೆ. ಇಲ್ಲಿಯ ಜನತೆಯ ಅಳಲು, ಅರ್ತ ನಾದ ಕೇಳಿಸಿಕೊಳ್ಳದಷ್ಟು ನಿರ್ದಯವಾಗಿವೆ ಸರಕಾರಗಳು.
ಹೆಚ್ಚುತ್ತಿರುವ ವನ್ಯಜೀವಿಗಳು ಮತ್ತು ಮಾನವರ ನಡುವಿನ ಸಂಘರ್ಷದಂತಹ ಜ್ವಲಂತ ಪ್ರಕರಣಗಳ ಬಗ್ಗೆ ವೈಜ್ಞಾನಿಕ ನೀತಿ, ಸಲಹೆಗಳ ಪರಿಹಾರಕ್ಕೂ ಮನಸ್ಸಿಲ್ಲ. ಮಾನವ ಮುಕ್ತರನ್ನಾಗಿಸಬೇಕೆಂಬ ಸರಕಾರಗಳ ನೀತಿ ಯಶಸ್ವಿಯಾದರೆ ಅರಣ್ಯಗಳನ್ನು ಖಾಸಗಿ ಉದ್ಯಮಿಗಳಿಗೆ ಪರಭಾರೆ ಮಾಡಲು ಸಾಧ್ಯ ಎಂಬ ದುಷ್ಟ ಯೋಜನೆ ಅಂತರಂಗದಲ್ಲಿರುವಾಗ ಜನ ಕಾಳಜಿಯ ಕ್ರಿಯಾಶೀಲತೆಯನ್ನು ನಿರೀಕ್ಷಿಸುವುದು ಮೂರ್ಖತನವೇ ಆದೀತು.
ಇದನ್ನೂ ಓದಿ : ಏಪ್ರಿಲ್ 8, 9 : ಬಂಡೀಪುರಕ್ಕೆ ಪ್ರಧಾನಿ ಮೋದಿ ಭೇಟಿ ಹಿನ್ನಲೆ ಸಫಾರಿಗಿಲ್ಲ ಅವಕಾಶ
ಪರಿಸರ ಸಂರಕ್ಷಿಸಬೇಕು ಎನ್ನುವುದಕ್ಕೆ ಜಾಗತಿಕ ತಾಪಮಾನವನ್ನೂ ಒಳಗೊಂಡು ಹಲವು ಹನ್ನೆರಡು ಕಾರಣಗಳಿವೆ. ಕಾಡಿನ ನಾಶ ತಡೆಯಬೇಕು ಎಂಬ ಕಾಳಜಿಯೇನೋ ಸರಿ. ಆದರೆ ಈ ನಾಶದ ಹೊಣೆಯನ್ನು ಅರಣ್ಯದ ಮೂಲ ನಿವಾಸಿಗಳ ಮೇಲೆ ಆರೋಪಿಸುವುದು ಎಷ್ಟು ಸರಿ? ಹುಲಿಗಳನ್ನು ಉಳಿಸಿಕೊಳ್ಳ ಬೇಕು ಎನ್ನುವಾಗ ಕಾಡು ಉಳಿಯ ಬೇಕು ಎನ್ನುವುದೂ ಮುಖ್ಯ ಅಂಶವಾಗಿದೆ. ಕಾಡು ಎನ್ನುವುದು ಇತರೆ ಜೀವಸಂಕುಲಗಳ ಆವಾಸಸ್ಥಾನ. ಆದರೆ ಅಲ್ಲಿಯ ಇತರೆ ಜೀವ ಸಂಕುಲಗಳಿಂದ ಆದಿವಾಸಿಗಳನ್ನು ಹೇಗೆ ಹೊರತು ಪಡಿಸುತ್ತಾರೆ? ಇವರೂ ಈ ಸಂಕುಲದ ಅವಿಭಾಜ್ಯ ಅಂಗ. ಶತ ಶತಮಾನಗಳಿಂದ ಅಲ್ಲಿಯೇ ಹುಟ್ಟಿ, ಬೆಳೆದು, ಆ ವನ್ಯ ಮೃಗಗಳ ಜೊತೆಯಲ್ಲಿಯೇ ಬದುಕಿ ಬಾಳಿದವರು ಅವರು. ಜೀವ ಸಂಕುಲದ ಸಂರಕ್ಷಣೆಯೇ ಅರಣ್ಯ ರಕ್ಷಣೆ ಎನ್ನುವ ವಿವೇಕ ಇರುವವರು. ಹುಲಿಯನ್ನೂ ಒಳಗೊಂಡಂತೆ ಇತರೆ ವನ್ಯ ಮೃಗಗಳ ನಾಶ ಏಕಾಗುತ್ತದೆ? ಇದು ಅಧಿಕಾರಸ್ಥರ ಕಣ್ಣಿಗೆ ಕಾಣಿಸದೇ ನಡೆಯುತ್ತದೆ ಎನ್ನುವುದನ್ನು ಒಪ್ಪುವುದು ಅಸಾಧ್ಯ. ಇವರ ಪಾಲಿಲ್ಲವೆಂದರೆ, ಅದು ಆತ್ಯವಂಚನೆ, ದ್ರೋಹ. ಆಡಳಿತದ ಯಾವುದೋ ಒಂದು ಅಂಗದ ಶಾಮೀಲಿಲ್ಲದೇ ಅಂತಹ ಕಾಡುಗಳ್ಳತನ, ವನ್ಯ ಮೃಗಗಳ ಹನನ ಬಹುತೇಕ ಆಸಾಧ್ಯ.
ಅರಣ್ಯ ಸಂರಕ್ಷಣೆಗೆಂದು ಸರಕಾರ ಕೈಗೊಳ್ಳುವ ಯಾವುದೇ ಕ್ರಮಗಳು ಬಹುತೇಕ ಏಕಪಕ್ಷೀಯವೂ, ಆದಿವಾಸಿಗಳ ಹಾಗೂ ಕಾಡಿನ ಅಂಚನ್ನು ಆಧರಿಸಿದ ಜನ ಸಮೂಹಗಳನ್ನು ಹೊರತು ಪಡಿಸಿಯೇ ಇರುತ್ತವೆ. ಈ ಪಾರಂಪಾರಿಕ ಸಮುದಾಯಗಳನ್ನು ಸದಾವಕಾಲ ಅಪರಾಧಿ ಸ್ಥಾನದಲ್ಲಿ ಇರಿಸಲಾಗುತ್ತದೆ ಮತ್ತು ದಂಡಿಸಲಾಗುತ್ತಿದೆ. ಬ್ರಿಟೀಷರ ಕಾಲದಲ್ಲಿ ೧೮ನೆಯ ಶತಮಾನದಲ್ಲಿ ಅರಣ್ಯವನ್ನು ಅಂಕೆಗೆ ತೆಗೆದುಕೊಳ್ಳುವ ವ್ಯವಸ್ಥಿತ ಪ್ರಯತ್ನಗಳು ೧೮೦೦-೧೮೩೫ ರ ಅವಧಿಯಲ್ಲಿ ನಡೆದವು. ಮೊದಲ ಅರಣ್ಯ ಕಾಯ್ದೆ ೧೮೬೫ ರಲ್ಲಿ ರೂಪುಗೊಂಡಿತು. ಇದು ಆದಿವಾಸಿಗಳು ಮತ್ತು ಅರಣ್ಯ ಅವಲಂಬಿತ ಗ್ರಾಮೀಣ ಸಮುದಾಯಗಳ ಅಭಾದಿತ ಹಕ್ಕನ್ನು ನಿರ್ಭಂದಿಸುವ, ಅರಣ್ಯದ ಮೇಲೆ ಸಮುದಾಯಗಳಿಗೆ ಇದ್ದ ಸಹಜ ಹಕ್ಕನ್ನು ಕಿತ್ತುಕೊಂಡು ಪ್ರಭುತ್ವ ಸ್ಥಾಪಿಸುವ ದಿಕ್ಕಿನಲ್ಲಿ ಹೆಜ್ಜೆ ಇರಿಸಿತು. ಮುಂದೆ ತರಲಾದ ಕಾಯ್ದೆಗಳು ಕಾಡಿನ ಉತ್ಪಾದನೆಗಳ ಸಂಗ್ರಹಕ್ಕೆ ನಿರ್ಭಂದಗಳನ್ನು ವಿಧಿಸಿದವು. ಈ ಎಲ್ಲಾ ಕ್ರಮಗಳು ಅರಣ್ಯ ಸಂಪತ್ತು ಸಮುದಾಯಗಳ ಉಪಯೋಗಕ್ಕೆ ಎನ್ನುವ ಬದಲು ಪ್ರಭುತ್ವದ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಅದರ ಬೆಳವಣಿಗೆಗೆ, ಅಲ್ಲಿನ ಮರ ಗಿಡಗಳ ಯಥೇಚ್ಛ ಲೂಟಿಗೆ, ಕಚ್ಚಾ ವಸ್ತುಗಳ ಸಂಪನ್ಮೂಲವಾಗಿ ಬಳಸಲಾಯಿತು. ಇಂದಿಗೂ ಆಧುನಿಕ ಭಾರತದಲ್ಲಿ ವಸಾಹತುಶಾಹಿಯ ಕಾನೂನುಗಳೇ ಅಲ್ಪಸ್ವಲ್ಪ ತಿದ್ದುಪಡಿಗೊಂಡು ಚಾಲ್ತಿಯಲ್ಲಿವೆ.
ಹುಲಿ ಸಂರಕ್ಷಣಾ ಯೋಜನೆ ಜಾರಿಗೊಳಿಸುವಾಗ ಈ ಪ್ರದೇಶಗಳಲ್ಲಿ ನೆಲೆ ಕಳೆದುಕೊಂಡ, ಕಳೆದುಕೊಳ್ಳುವ ಜನ ಸಮುದಾಯಗಳ ರಕ್ಷಣೆಯೂ ಆದ್ಯತೆ ಆಗಬೇಕು. ಹುಲಿ ಅಭಿವೃದ್ಧಿಯ ಸಂಭ್ರಮದಲ್ಲಿರುವ ಪ್ರಧಾನಿಗಳು ನೊಂದ ಆದಿವಾಸಿಗಳ ಅಳಲು ಕೇಳ ಬೇಕಿತ್ತು. ಆದರೆ ಪ್ರಧಾನಿಗಳ ಸಂಭ್ರಮದಲ್ಲಿ ಎದ್ದು ಕಂಡಿದ್ದು ಜನರ ಬಗೆಗಿನ ನಿಷ್ಕಾಳಜಿ.