ಬೆಂಗಳೂರು: ಕಳೆದ ಹಲವು ದಿನಗಳಿಂದ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನರಗನಹಳ್ಳಿ ಗ್ರಾಮದಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ದಿನಪೂರ್ತಿ ಹೊಲದಲ್ಲಿ ಕೆಲಸ, ಜಾನುವಾರುಗಳ ಆರೈಕೆ ಎಂದು ಕೆಲಸ ಮಾಡಿ ಮನೆಗೆ ಬರುವ ಜನರು ನಿದ್ದೆಗೆ ಜಾರುತ್ತಿದ್ದಂತೆ ಮನೆ ಬಳಿಗೆ ಬರುವ ಪುಂಡರು, ಬಾಗಿಲುಗಳನ್ನ ಬಡೆದು ಪರಾರಿ ಆಗುತ್ತಿದ್ದಾರೆ ಎಂದು ದೂರು ದಾಖಲಾಗಿದೆ.
ಮಹಿಳೆಯೊಬ್ಬರು ಕಳೆದ ಮೂರು ದಿನಗಳ ಹಿಂದೆ ತಡರಾತ್ರಿ ಶೌಚಾಲಯಕ್ಕೆ ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಕಿಡಿಗೇಡಿಗಳು, ಆಕೆಯ ಬಾಯಿ ಮುಚ್ಚಿ, ನಿರ್ಜನ ಪ್ರದೇಶಕ್ಕೆ ಎಳೆದೊಯ್ದಿದ್ದು, ಸರಗಳ್ಳತನಕ್ಕೆ ಯತ್ನಿಸಿದ್ದಾರೆ. ಆದರೆ ಮಹಿಳೆ ಸರಗಳ್ಳತನ ಮಾಡಲು ಬಿಡದಿದಕ್ಕೆ ಹಲ್ಲೆ ನಡೆಸಿ, ನಂತರ ಆಕೆಯ ಬಟ್ಟೆಗಳನ್ನ ಹರಿದು ಪ್ರಜ್ಞೆ ತಪ್ಪಿಸಿ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ ಎಂದು ಮಾಧ್ಯಮಗಳಿಗೆ ವಿವರಿಸಿದರು.
ನಿರ್ಜನ ಪ್ರದೇಶದಲ್ಲಿ ಪ್ರಜ್ಞಾಹೀನವಾಗಿ ಬಿದ್ದಿದ್ದ ಮಹಿಳೆಯನ್ನ ಕುಟುಂಬಸ್ಥರು ಆಸ್ವತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು, ನಂತರ ಕಿಡಿಗೇಡಿಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಆದ್ರೆ, ಗ್ರಾಮದಲ್ಲಿ ರಾತ್ರಿ ವೇಳೆ ಬೀದಿ ದೀಪಗಳಿಲ್ಲದ ಕಾರಣ ಅಪರಿಚಿತರು ಯಾರು ಎನ್ನುವುದು ಗೊತ್ತಾಗಿಲ್ಲ. ಈ ಹಿನ್ನಲೆ ಗ್ರಾಮಸ್ಥರೆಲ್ಲರೂ ರಾತ್ರಿ ವೇಳೆ ಬಾಗಿಲು ಬಡಿಯುವ ಖದೀಮರು ಯಾರು ಎಂಬುದನ್ನು ಪತ್ತೆ ಹಚ್ಚಲು ರಾತ್ರಿಯಿಡಿ ಕಾದು ಕುಳಿತಿದ್ದಾರೆ.
ಇದನ್ನೂ ಓದಿ: ರಾಜಭವನ ಮಾಹಿತಿ ಸೋರಿಕೆ ಹೇಗಾಯ್ತು?: ರಾಜ್ಯಪಾಲರ ಪ್ರಶ್ನೆ
ಹೀಗಾಗಿ ಕಳೆದ ರಾತ್ರಿ ಗ್ರಾಮಕ್ಕೆ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ಬಾಗಿಲು ಬಡಿಯುತ್ತಿದ್ದಂತೆ, ಗ್ರಾಮಸ್ಥರು ಅವರನ್ನು ಹಿಡಿಯಲು ಮುಂದಾಗಿದ್ದು, ಅವರು ತಮ್ಮ ಬೈಕ್‌ನ್ನು ಗ್ರಾಮದಲ್ಲೆ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಬಳಿಕ ಗ್ರಾಮಸ್ಥರು ಬೈಕ್ ಸಮೇತ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಪುಂಡಾಟಿಕೆಗೆ ಮಹಿಳೆಯರು ಸೇರಿದಂತೆ ಪುರುಷರು ಸಹ ಬೆಚ್ಚಿ ಬಿದ್ದಿದ್ದಾರೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ಗ್ರಾಮಸ್ಥರು ದೂರು ನೀಡಿದ್ದು, ಪೊಲೀಸರು ಪುಂಡರನ್ನು ಪತ್ತೆ ಹಚ್ಚಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ನೋಡಿ: ದಲಿತ ವ್ಯಕ್ತಿಗೆ ಕ್ಷೌರ ನಿರಾಕರಿಸಿ ಕೊಲ ಪ್ರಕರಣ – ಜನಪರ ಸಂಘಟನೆಗಳಿಂದ ಸಂಗನಹಾಳ ಚಲೋ Janashakthi Media