ಬೆಂಗಳೂರು: ಅಂಗಡಿಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಪಟಾಕಿ ಸ್ಪೋಟಗೊಂಡು ಮೂವರು ಸಾವನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆಯ ರಾಯನ್ ಸರ್ಕಲ್ ಬಳಿಯ ನ್ಯೂ ತಗರುಪೇಟೆಯಲ್ಲಿ ಇಂದು ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದೆ.
ಸ್ಫೋಟದಲ್ಲಿ ಮೂವರ ದೇಹಗಳು ಛಿದ್ರ ಛಿದ್ರವಾಗಿದೆ. ಇಬ್ಬರು ಗಾಯಾಳುಗಳಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿವೆ.
ಚಾಮರಾಜಪೇಟೆ ಬಳಿಯ ಲಾರಿ ದುರಸ್ತಿ ಅಂಗಡಿಯಲ್ಲಿಟ್ಟಿದ್ದ ಪಟಾಕಿಗಳು ಸ್ಫೋಟಗೊಂಡು ಅವಘಡ ಸಂಭವಿಸಿದ್ದು, ಮೂವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ‘ಲಾರಿ ದುರಸ್ತಿ ಅಂಗಡಿಯಲ್ಲಿ ಪಟಾಕಿ ಶೇಖರಿಸಲಾಗಿತ್ತು. ಮಧ್ಯಾಹ್ನ ಪಟಾಕಿಗಳಿಗೆ ಬೆಂಕಿ ಹೊತ್ತಿಕೊಂಡು ಸಿಡಿದಿವೆ. ದುರಸ್ತಿ ಕೊಠಡಿಯಲ್ಲಿದ್ದ ಮೂವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಮಳಿಗೆಯಲ್ಲಿ ಅಕ್ರಮವಾಗಿ ಪಟಾಕಿ ಸಂಗ್ರಹಿಸಲಾಗಿತ್ತು. ಪಟಾಕಿಗೆ ಬೆಂಕಿ ಹೊತ್ತಿ, ಅನಾಹುತ ಸಂಭವಿಸಿದೆ. ಪಟಾಕಿ ಸದ್ದು ಕೇಳಿಸಿ, ಸ್ಥಳೀಯರು ಸಹ ಗಾಬರಿಯಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ’ ಎಂದೂ ಸ್ಥಳೀಯರೊಬ್ಬರು ಹೇಳಿದರು.
ಘಟನೆಯಲ್ಲಿ 10ಕ್ಕೂ ಹೆಚ್ಚು ಬೈಕ್ಗಳು ಸುಟ್ಟು ಕರಕಲಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಕ್ಕಪಕ್ಕದ ಮನೆಗಳಲ್ಲಿದ್ದವರಿಗೂ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ. ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಮನೆಗಳ ಕಿಟಕಿ ಗಾಜು ಪುಡಿಪುಡಿಯಾಗಿವೆ. ಸ್ಫೋಟದಿಂದ ಚಿಲ್ಲರೆ ಅಂಗಡಿ ಸಂಪೂರ್ಣ ಜಖಂ ಆಗಿದೆ. ಟೀ ಕುಡಿಯಲು ಬಂದಿದ್ದ ವ್ಯಕ್ತಿಯ ಮೃತದೇಹವೂ ಛಿದ್ರ ಛಿದ್ರವಾಗಿದೆ.
ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದೆ. ಸದ್ಯ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸುತ್ತಿದ್ದಾರೆ. ಗೋಡೌನ್ ತುಂಬಾ ಹೆಚ್ಚು ಪಟಾಕಿ ಇರುವ ಹಿನ್ನೆಲೆಯಲ್ಲಿ ಮತ್ತೆ ಸ್ಪೋಟವಾಗುವ ಸಾಧ್ಯತೆ ಇರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಫೈರ್ ಇಂಜಿನ್ ಮೂಲಕ ನೀರು ಹಾಕಲಾಗುತ್ತಿದೆ.