ಇದು ನಾವು ಎಚ್ಚರಾಗಬೇಕಾದ ಕಾಲ: ಕೃಷ್ಣ ಬೈರೇಗೌಡ ಕರೆ

ವಿಜಯಪುರ: ಇಂದು ಸಮಾನತೆಯನ್ನು ಪ್ರತಿಪಾದಿಸಿದ ಬುದ್ಧ ಬಸವಣ್ಣನವರನ್ನು ತ್ಯಜಿಸಿದವರಿಂದಲೇ ಅಂಬೇಡ್ಕರ್ ಅವರ ಸಂವಿಧಾನದ ವಿರುದ್ಧ ದಾಳಿ ನಡೆಯುತ್ತಿದೆ. ಇದು ನಾವು ಎಚ್ಚರಾಗಬೇಕಾದ ಕಾಲ ಎಂದು ಸಚಿವ ಕೃಷ್ಣ ಬೈರೇಗೌಡ ಕರೆ ನೀಡಿದರು.

ಇಂದು ವಿಜಯಪುರದಲ್ಲಿ ದಲಿತ ವಿದ್ಯಾರ್ಥಿ ಪರಿಷತ್, ಜಾಗೃತ ಕರ್ನಾಟಕ ಹಾಗೂ ಅನೌಪಚಾರಿಕ ಶಿಕ್ಷಣ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ  ಆಯೋಜಿಸಲಾಗಿದ್ದ ಅಂಬೇಡ್ಕರ್ ಹಬ್ಬ ವಿಚಾರ ಸಂಕಿರಣ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹುಟ್ಟಿನಿಂದ ಇವ್ರು ಮೇಲೆ ಕೆಳಗೆ, ಈತ ಅಸ್ಪೃಶ್ಯ, ಇವರನ್ನು ಮುಟ್ಟಬಾರದು ಊರಿಂದ ಹೊರಗಿಡಬೇಕು ಎಂಬ ಮನುವಾದ ಬಹಳ ಹಿಂದಿನಿಂದಲೂ ಇದೆ. ಈ ಮನುವಾದದ ವಿರುದ್ಧ ಮೊದಲು ದ್ವನಿ ಎತ್ತಿದವರು ಬುದ್ಧ ಅದನ್ನು ಮುಂದುವರೆಸಿದವರು ಬಸವಣ್ಣ ಅದನ್ನು ಸಂವಿಧಾನದ ಆಶಯವನ್ನಾಗಿಸಿದವರು ಅಂಬೇಡ್ಕರ್. ಅದನ್ನೇ ಪ್ರತಿಪಾದಿಸಿದವರು ಕುವೆಂಪು.

ಈ ತದ್ವಿರುದ್ಧ ವಾದಗಳ ನಡುವೆ ಅಂದಿನಿಂದಲೂ ಪ್ರತಿಸ್ಪರ್ಧೆ ಇದೆ. ಮಾನವತಾವಾದವನ್ನು ಪ್ರತಿಪಾದಿಸಿದ ಈ ಎಲ್ಲಾ ಮಹನೀಯರನ್ನು ತ್ಯಜಿಸಿದವರಿಂದಲೇ ಇಂದು ಸಂವಿಧಾನದ ಮೇಲೂ ದಾಳಿ ನಡೆಯುತ್ತಿದೆ. ಹೀಗಾಗಿ ನಾವೆಲ್ಲರೂ ಎಲ್ಲಾ ಕಾಲದಲ್ಲೂ ಜಾಗೃತರಾಗಿರಬೇಕು” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಭಿಪ್ರಾಯ ಪಟ್ಟರು.

ಇದನ್ನೂ ಓದಿ: ಕೋಲ್ಕತ್ತ| ವಕ್ಫ್ ಕಾಯ್ದೆಯ ವಿರುದ್ಧ ಪ್ರತಿಭಟನೆ: 110 ಜನರ ಬಂಧನ

ಬುದ್ಧ-ಬಸವ-ಅಂಬೇಡ್ಕರ್‌-ಫುಲೆ ಇವರ ಎಲ್ಲರ ಆಶಯವೂ ಒಂದೇ ಆಗಿತ್ತು. ಸಂಪ್ರದಾಯವಾದಿಗಳ ವಿರುದ್ಧ ಬುದ್ಧ ಧ್ವನಿ ಎತ್ತಿದ್ದ. ಎಲ್ಲರೂ ಒಂದೇ ಎಂಬ ಸಮಾನತೆಯನ್ನು ಸಾರಿದ್ದ, ಬುದ್ದನ ಆದಿಯಾಗಿ ಬಸವಣ್ಣ, ಫುಲೆ, ಅಂಬೇಡ್ಕರ್‌ ರಿಂದ ವಿಶ್ವಮಾನವ ಕುವೆಂಪುವರೆಗೆ ಎಲ್ಲರೂ ಪಾಲಿಸಿದ್ದು, ಪ್ರತಿಪಾದಿಸಿದ್ದು ಈ ಮಾನವತಾ ವಾದವನ್ನೇ. ಬುದ್ದನ ಈ ವೈಚಾರಿಕತೆಯನ್ನು ಬಸವಣ್ಣ-ಕನಕದಾಸರು ಜನ ಸಾಮಾನ್ಯರಿಗೆ ತತ್ವದ ಭಾಷೆಯಲ್ಲಿ ಹೇಳಿದರೆ, ಅದಕ್ಕೆ ಆಧುನಿಕ ಭಾಷೆಯನ್ನು ಸೇರಿಸಿ ಸಂವಿಧಾನವನ್ನಾಗಿಸಿದವರು ಅಂಬೇಡ್ಕರ್” ಎಂದರು.

“ಇರುವುದು ಒಂದೇ ಕುಲ, ಮಾನವ ಕುಲ. ಇಲ್ಲಿ ಹುಟ್ಟಿನಿಂದ ಯಾರೂ ಮೇಲಲ್ಲ, ಕೀಳೂ ಅಲ್ಲ ಎಂಬ ಸಮಾನತೆಯ ಆಶಯವೇ ನಮ್ಮ ಸಂವಿಧಾನದ ಮೂಲ ತತ್ವ. ಇದಕ್ಕೆ ಸ್ಫೂರ್ತಿ ಬಸವಣ್ಣನೂ ಹೌದು ಬುದ್ಧನೂ ಹೌದು. ಭಾಷೆ 20ನೇ ಶತಮಾನದ್ದಿರಬಹುದು. ಆದರೆ, ಅದರ ಸ್ಪೂರ್ತಿ ಈ ಮಣ್ಣಿನಲ್ಲಿ ಅಡಗಿದೆ. ಅವರು ಬಿತ್ತಿದ ಕಾಳು ಇಂದು ಮರವಾಗಿ ಬೆಳೆದು ಸಂವಿಧಾನದ ರೂಪದಲ್ಲಿ ನಮಗೆ ಸಿಕ್ಕಿದೆ. ಬಸವ ಸಾಹಿತ್ಯ, ದಾಸ ಸಾಹಿತ್ಯದಿಂದ ಕುವೆಂಪು ವರೆಗೆ ಎಲ್ಲರೂ ಇದನ್ನೇ ಪ್ರತಿಪಾದಿಸಿದ್ದು. ಇವರೆಲ್ಲರೂ ಮಾನವತಾವಾದಿಗಳು. ನಾವು ಅನುಸರಿಸಬೇಕಾದ ನಿಜವಾದ ನಾಯಕರು” ಎಂದು ತಿಳಿಸಿದರು.

ವಚನ ಸಾಹಿತ್ಯದ ಮೇಲಿನ ದಾಳಿಯ ಬಗ್ಗೆ ಎಚ್ಚರವಿರಲಿ!

ಬಸವಣ್ಣನವರ ತತ್ವವೇ ನಮ್ಮ ನಾಡಿನ ಗುಣ. ಜಾತಿ- ಕುಲ ಬಿಟ್ಟು ಮನುಷ್ಯರಾಗಿ ಬದುಕಿ ಎಂಬುದೇ ಅವರ ಸಿದ್ದಾಂತ. ಒಡೆದು ಆಳುವ ನೀತಿಯನ್ನು ತಿರಸ್ಕಾರ ಮಾಡಿ ಎಲ್ಲರೂ ನಮ್ಮವರು ಎಂಬುದೇ ನಮ್ಮ ಸಂಸ್ಕೃತಿ ಸಂಪ್ರದಾಯ. ಇದೇ ಕಾರಣಕ್ಕೆ ನಮ್ಮ ಸರ್ಕಾರ ಬಸವಣ್ಣನವರನ್ನು ನಮ್ಮ ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಏಕೆಂದರೆ ಬಸವಣ್ಣನಿಗಿಂತ ನಮ್ಮ ನಾಡಿನ ಗುಣವನ್ನು ಯಾರೂ ಪ್ರತಿಬಿಂಬಿಸಲು ಸಾಧ್ಯವಿಲ್ಲ.

ಆದರೆ, ವಚನಗಳಿಗೆ ಶರಣು ಎಂದವರಿಂದಲೇ ಇಂದು ವಚನ ಸಾಹಿತ್ಯದ ಮೇಲೆ ದಾಳಿ ಶುರುವಾಗಿದೆ. ಬುದ್ಧನನ್ನು ಅವಹೇಳನ ಮಾಡಿದವರು, ಬಸವನನ್ನು ತಿರಸ್ಕರಿಸಿದವರು, ಅಂಬೇಡ್ಕರ್‌ ಅವರ ಸಂವಿಧಾನವನ್ನು ಬದಲಿಸಬೇಕು ಎಂದು ಮಾತನಾಡುತ್ತಿರುವವರು ಇಂದು ವಚನ ಸಾಹಿತ್ಯದ ಮೇಲೂ ದಾಳಿ ನಡೆಸುತ್ತಿದ್ದಾರೆ ಈ ಬಗ್ಗೆಯೂ ನಾವು ಎಚ್ಚರಾಗಿರಬೇಕು” ಎಂದು ಸಚಿವರು ಕರೆ ನೀಡಿದರು.

“ವಚನ ದರ್ಶನ ಎಂಬ ಪುಸ್ತಕ ಬಿಡುಗಡೆ ಮಾಡುವ ಮೂಲಕ ಕೆಲವರು ವಚನ ಸಾಹಿತ್ಯದ ಸಾರಾಂಶವನ್ನು ತಿರುಚಿ ಜನ ಸಾಮಾನ್ಯರು ತಿರಸ್ಕಾರ ಮಾಡುವಂತೆ ಮಾಡಿ, ಶ್ರೇಣೀಕೃತ ವ್ಯವಸ್ಥೆ ಉಳಿಸಲು ಮುಂದಾಗಿದ್ದಾರೆ. ಹೀಗಾಗಿ ನಾವು ಎಚ್ಚರಿಕೆ ವಹಿಸಬೇಕು. ಸತ್ಯ ಕಣ್ಣ ಮುಂದೆ ಇದ್ದರೂ ನೂರು ಬಾರಿ ಸುಳ್ಳನ್ನೇ ಹೇಳೀದರೆ ಅದೇ ಸತ್ಯವಾಗುವ ಕಾಲವಿದು. ಹೀಗಾಗಿ ನಾವು ಸದಾ ಕಾಲ ಎಚ್ಚರಿಕೆ ವಹಿಸಬೇಕಿದೆ” ಎಂದರು.

ಇತ್ತೀಚಿನ ದಿನಗಳಲ್ಲಿ ಬಸವಣ್ಣನವರ ತತ್ವಗಳನ್ನು ಪಾಲಿಸುವ ನಮ್ಮಗಳ ನಡೆ ಹಾಗೂ ನುಡಿಗೆ ಸಾಮರಸ್ಯವೇ ಇಲ್ಲದಂತಾಗಿದೆ. ಬಸವಣ್ಣ ಅಂಬೇಡ್ಕರ್‌ಗೆ ಕೈಮುಗಿದು ಅವರು ಹೇಳಿದ್ದಕ್ಕೆ ವಿರುದ್ಧವಾಗಿ ನಡೆಯುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಈ ಆಚಾರ ವಿಚಾರಕ್ಕೆ ಸಾಮರಸ್ಯ ಇಲ್ಲದ ಢೋಂಗಿಗಳಿಗಳ ಕೈಯಲ್ಲಿ ನಮ್ಮ ಸಾಂಸ್ಕೃತಿಕ ನಾಯಕರು ಕೈಗೊಂಬೆ ಆಗಿದ್ದಾರ? ಎಂಬ ಬಗ್ಗೆಯೂ ಸಂಶಯ ವ್ಯಕ್ತಪಡಿಸಿದರು. ಅಲ್ಲದೆ, ಎಲ್ಲರೂ ಸರ್ವ ಸಮಾನರಂತೆ ಸಾಮರಸ್ಯದ ಜೀವನ ಮಾಡಿದರೆ ಮಾತ್ರ ದೇಶದ ಭವಿಷ್ಯವನ್ನು ಕಟ್ಟಲು ಸಾಧ್ಯ. ಹೀಗಾಗಿ ಜನರನ್ನು ಜಾಗೃತಿಗೊಳಿಸುವ ಇಂತಹ ವಿಚಾರ ಸಂಕಿರಣಗಳು ನಾಡಿನಾದ್ಯಂತ ಆಗಬೇಕು ಎಂದು ಕಿವಿಮಾತು ಹೇಳಿದರು.

ಇದನ್ನೂ ನೋಡಿ: ಬಾಣಂತಿಯರ ಸಾವಿನ ಹೊಣೆ ಯಾರದ್ದು? ಮೆಡಿಸಿನ್ ಮಾಫಿಯಾಗೆ ಕಡಿವಾಣ ಯಾವಾಗ?! Janashakthi Media

Donate Janashakthi Media

Leave a Reply

Your email address will not be published. Required fields are marked *