ಜನಾರ್ದನ ರೆಡ್ಡಿ ಬಳ್ಳಾರಿಗೆ ಕಾಲಿಡುವವರೆಗೂ ಗಲಾಟೆ ಇರಲಿಲ್ಲ: ಡಿ.ಕೆ.ಶಿ

ಬೆಂಗಳೂರು: ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿಗೆ ಕಾಲಿಡುವವರೆಗೂ ಒಂದೇ ಒಂದು ಗಲಾಟೆ ಇರಲಿಲ್ಲ. ಸಣ್ಣ ಅಹಿತಕರ ಘಟನೆಯೂ ಆಗಿರಲಿಲ್ಲ. ಒಂದು ಸಣ್ಣ ಎಫ್‍ಐಆರ್ ಕೂಡ ಇರಲಿಲ್ಲ. ಅವರು ಬಂದಮೇಲೆ ಗಲಭೆ ಆಗಿದೆ. ಹೀಗಾಗಿ ಅವರಿಗೆ ಮಾತನಾಡುವ ಹಕ್ಕಿಲ್ಲ. ಪಕ್ಷ ನಮ್ಮ ಶಾಸಕ ಭರತ್ ರೆಡ್ಡಿ ಬೆನ್ನಿಗೆ ನಿಲ್ಲಲಿದೆ’ ಎಂದು ಜನವರಿ 3ರಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ನಾವು ನಮ್ಮ ಪಕ್ಷದ ಕಾರ್ಯಕರ್ತನನ್ನು ಕಳೆದುಕೊಂಡಿದ್ದೇವೆ. ಇದಕ್ಕೆ ಕಾರಣ ಯಾರು ಎಂಬುದು ತನಿಖೆಯಿಂದ ಹೊರಬರಲಿದ್ದು, ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.

‘ಮೊದಲ ಬಾರಿಗೆ ಬಳ್ಳಾರಿಯಲ್ಲಿ ನಮ್ಮ ಸರಕಾರ ವಾಲ್ಮೀಕಿ ಮಹರ್ಷಿ ಪುತ್ಥಳಿ ನಿರ್ಮಿಸುತ್ತಿದೆ. ನಮ್ಮ ಶಾಸಕರು ಅದರ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ನಗರದ ಎಲ್ಲೆಡೆ ಅದರ ಪೋಸ್ಟರ್ ಗಳನ್ನು ಹಾಕಿದ್ದರಲ್ಲಿ ತಪ್ಪೇನಿದೆ?, ನಮ್ಮ ಮನೆ ಮುಂದೆಯೂ ಬಿಜೆಪಿಯವರು ಪೋಸ್ಟರ್ ಹಾಕುತ್ತಿರುತ್ತಾರೆ. ಅದನ್ನು ನಾನು ಬೇಡ ಎನ್ನಲು ಸಾಧ್ಯವೇ? ಈ ಪೋಸ್ಟರ್ ಹಾಕುವುದರಿಂದ ಬಿಜೆಪಿಯವರಿಗೆ ಆಗಿರುವ ತೊಂದರೆ ಆದರೂ ಏನು?’ ಎಂದು ಶಿವಕುಮಾರ್ ಪ್ರಶ್ನಿಸಿದರು.

ಇದನ್ನೂ ಓದಿ: ಕೋಗಿಲು ಪ್ರಕರಣ | ಡಿಸಿ ಬದಲಿಗೆ ಬಿಜೆಪಿಯ ಶಾಸಕನನ್ನು ಕರೆತಂದ ಪೊಲೀಸರು

‘ಸರಕಾರಿ ಜಾಗದಲ್ಲಿ ಪೋಸ್ಟರ್ ಹಾಕಿದ್ದಾರೆ?, ಇದರಲ್ಲಿ ರೆಡ್ಡಿ ಜಗಳಕ್ಕೆ ಬರುವ ಅಗತ್ಯವೇನಿತ್ತು. ನಮ್ಮ ಕಾರ್ಯಕರ್ತನನ್ನು ಕಳೆದುಕೊಳ್ಳಲು ಬಿಜೆಪಿಯವರು ಕಾರಣ. ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಈ ಬಗ್ಗೆ ಸಿಎಂ, ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಮಾತನಾಡಿದ್ದಾರೆ. ಪೊಲೀಸರ ತನಿಖೆಯಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಪಕ್ಷದ ವತಿಯಿಂದ ಈ ಘಟನೆ ಬಗ್ಗೆ ಅಧ್ಯಯನ ನಡೆಸಲು ಎಚ್.ಎಂ.ರೇವಣ್ಣ ಅಧ್ಯಕ್ಷತೆಯಲ್ಲಿ ನಿಯೋಗ ಕಳುಹಿಸಿದ್ದೇವೆ. ಬಿಜೆಪಿಯವರಿಗೆ ಬಳ್ಳಾರಿಯಲ್ಲಿ ನಮ್ಮ ಪಕ್ಷದ ಗೆಲುವು ಅರಗಿಸಿಕೊಳ್ಳಲು ಆಗುತ್ತಿಲ್ಲ. ಸೋತ ನಂತರ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಒಂದಾಗಿದ್ದಾರೆ. ಅವರ ನಡುವೆ ಏನೇನೂ, ಎಷ್ಟಿದೆ ಎಂಬುದು ಗೊತ್ತಿದೆ. ಮತ್ತೆ ಬಳ್ಳಾರಿಯಲ್ಲಿ ತಮ್ಮ ರಿಪಬ್ಲಿಕ್ ತರಲು ಪ್ರಯತ್ನಿಸುತ್ತಿದ್ದು, ನಾವು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದರು.

ಈ ಪ್ರಕರಣದ ಬೆನ್ನಲ್ಲೇ ಎಲ್ಲ ಖಾಸಗಿ ಗನ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಗನ್ ವಿತರಣೆ ವಿಚಾರದಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳನ್ನು ಸಿದ್ಧಪಡಿಸಿ, ನಿಯಮಾವಳಿ ರೂಪಿಸುತ್ತೇವೆ ಎಂದ ಅವರು, ಯಾರೂ ಯಾರ ಮನೆಗೆ ಬೆಂಕಿ ಹಚ್ಚುವುದಿಲ್ಲ. ಶಾಸಕರು ಏನಾದರೂ ಹೇಳಿಕೆ ನೀಡಿದ್ದರೆ ನಾನು ಅದನ್ನು ಒಪ್ಪುವುದಿಲ್ಲ. ಮೊದಲು ಅವರ ಹೇಳಿಕೆ ಏನಿದೆ ಎಂದು ಪರಿಶೀಲನೆ ಮಾಡುತ್ತೇನೆ ಎಂದರು.

ಶಾಂತಿ ನೆಲೆಸಬೇಕು: ಯಾರು ಗುಂಡು ಹಾರಿಸಿದ್ದಾರೆಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ. ಈ ಘಟನೆ ತಿಳಿದ ತಕ್ಷಣೆ ಎಸ್ಪಿ ಜೊತೆ ಮಾತನಾಡಿದ್ದೇನೆ. ಎಸ್ಪಿ ಯಾವ ಸ್ಥಿತಿಯಲ್ಲಿ ಮಾತನಾಡಿದರು ಎಂಬುದು ನನ್ನ ಅನುಭವಕ್ಕೇ ಬಂದಿದೆ. ಅವರು ಏನು ಉತ್ತರ ನೀಡಿದ್ದಾರೆಂಬುದು ಗೊತ್ತಿದೆ. ಶ್ರೀರಾಮುಲು ನನಗೆ ಕರೆ ಮಾಡಿ ಈ ಘಟನೆ ಬಗ್ಗೆ ಮಾಹಿತಿ ನೀಡಿದ್ದರು. ನಾನು ತಕ್ಷಣವೇ ಪೊಲೀಸರಿಗೆ ಎಚ್ಚರಿಸಿದ್ದೇನೆ. ಇಲ್ಲಿ ರಾಜಕೀಯ ಮುಖ್ಯವಲ್ಲ. ಶಾಂತಿ ನೆಲೆಸುವುದು ಬಹಳ ಮುಖ್ಯ ಎಂದು ಅವರು ತಿಳಿಸಿದರು.

ಇದನ್ನೂ ನೋಡಿ: ಅಖ್ಲಾಕ್‌ ಗುಂಪು ಹತ್ಯೆ ಪ್ರಕರಣ & ಸೇಂಗಾರ್‌ಗೆ ವಿಧಿಸಲಾದ ಶಿಕ್ಷೆ ಅಮಾನತು ಏನು ಹೇಳುತ್ತಿವೆ? Janashakthi Media

Donate Janashakthi Media

Leave a Reply

Your email address will not be published. Required fields are marked *