ಬೆಂಗಳೂರು: ಭಾಷಾವಾರು ಅನುದಾನ ಹಂಚಿಕೆಯಲ್ಲಿ ರಾಜ್ಯ ಸರಕಾರವು ತಾರತಮ್ಯ ಮಾಡುತ್ತಿದೆ ಎಂದು ವಿವರಿಸುವ ಮತ್ತು ಆಯ್ದು ತೆಗೆದ ಕೆಲವು ಅಂಕಿ ಅಂಶಗಳನ್ನು ಮಾತ್ರ ಪ್ರಸ್ತುಪಡಿಸುವ ಯಾರದೇ ವ್ಯಕ್ತಿಯ ಅಥವಾ ಸಂಸ್ಥೆಯ ಹೆಸರಿಲ್ಲದ ಪೋಸ್ಟರೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅನುದಾನ
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, “ಇಂತಹ ಸುಳ್ಳುಗಳನ್ನು ಹಂಚಿ, ಸಾಮಾಜಿಕ ಸಾಮರಸ್ಯವನ್ನು ಕೆಡಿಸುವ ಉದ್ದೇಶ ಈ ಪೋಸ್ಟರಿಗೆ ಇದ್ದಂತಿದೆ” ಎಂದು ತಿಳಿಸಿದ್ದಾರೆ.
ರಾಜ್ಯ ಸರಕಾರದ 2025-26ನೇ ಸಾಲಿನ ಆಯವ್ಯಯದಲ್ಲಿ ಹಿಂದಿನ ವರ್ಷದ ಖರ್ಚು ಮತ್ತು ಪ್ರಸಕ್ತ ವರ್ಷದ ಬೇಡಿಕೆಯನ್ನು ಪರಿಶೀಲಿಸಿ ಹಣ ತೆಗೆದಿರಿಸಲಾಗಿದೆ. ಇದರಲ್ಲಿ ಕನ್ನಡಕ್ಕೆ ಸರಕಾರವು ಮೊದಲ ಆದ್ಯತೆಯನ್ನು ನೀಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ಎಂಎಲ್‌ಸಿ ಎನ್ ರವಿಕುಮಾರ್ ವಿರುದ್ಧ ಕ್ರಮಕ್ಕೆ ಮಹಿಳಾ ಸಂಘ ಆಗ್ರಹ
ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಒಟ್ಟು ಬಜೆಟ್‍ನ ಶೇ.11.07ರಷ್ಟು ಒದಗಿಸಲಾಗಿದೆ. ಇದು ಕಳೆದ ಬಾರಿಗಿಂತ 864 ಕೋಟಿ ರೂ.ಹೆಚ್ಚು. ಶಿಕ್ಷಣ ಇಲಾಖೆಗೆ 45,286 ಕೋಟಿ ರೂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ 274.80 ಕೋಟಿ ರೂ.ಒಟ್ಟು 45,860.80 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಕನ್ನಡದ ಉಪ ಭಾಷೆಗಳಾದ ತುಳು, ಕೊಂಕಣಿ, ಕೊಡವ, ಬ್ಯಾರಿ, ಅರೆಭಾಷೆಗೆ 10 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಉರ್ದು ಭಾಷಾ ಅಕಾಡಮಿಗೆ ಎರಡು ಕೋಟಿ ರೂ.ತೆಗೆದಿರಿಸಲಾಗಿದೆ. ಉರ್ದು ಶಾಲೆಗಳ ಅಭಿವೃದ್ಧಿಗೆ ಸುಮಾರು ನೂರು ಕೋಟಿ ರೂ.ತೆಗೆದಿರಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಉರ್ದು ಶಾಲೆಗಳಲ್ಲಿ ಕನ್ನಡವನ್ನೂ ಕಲಿಸಲಾಗುತ್ತಿದೆ ಎಂದು ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮದ ಅಡಿಯಲ್ಲಿ ಮುಸ್ಲಿಮರು, ಕ್ರೈಸ್ತರು, ಜೈನರು, ಬೌದ್ಧರು ಮತ್ತು ಸಿಖ್ಖರು ಬರುತ್ತಾರೆ. ಇವರೆಲ್ಲರಿಗೂ ಸೇರಿ ಒಟ್ಟು 4510 ಕೋಟಿ ರೂ.ಗಳನ್ನು ನೀಡಲಾಗಿದೆ. ಸುಳ್ಳು ಪೋಸ್ಟರ್‍ಗಳನ್ನು ನಂಬದೆ, ಸತ್ಯಾಂಶವನ್ನು ತಿಳಿದುಕೊಳ್ಳಬೇಕೆಂದು ಅವರು ಕೋರಿದ್ದಾರೆ.
ಇದನ್ನೂ ನೋಡಿ: ಗಾಂಧೀ ಸೆಂಟರ್ ಅಫ್ ಸೈನ್ಸ್‌ಗೆ ಆಹ್ವಾನ ನೀಡಿದ್ದೇ ಡಾ. ಎಸ್. ಬಾಲಚಂದ್ರ ರಾವ್ – ಪಾಲಹಳ್ಳಿ ವಿಶ್ವನಾಥ್
