ಬೆಂಗಳೂರು: ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ವಿವಿಧ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಿ ಧಾರವಾಡದಲ್ಲಿ ಪ್ರತಿಭಟನೆ ನಡೆಸಿದ್ದೂ, ಇದೀಗ ಸರ್ಕಾರದ ಅಂಕಿಅಂಶಗಳ ಪ್ರಕಾರ ರಾಜ್ಯದ ವಿವಿಧ ಇಲಾಖೆಗಳಲ್ಲಿ ಒಟ್ಟು 2,84,881 ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿವೆ ಎಂದು ತಿಳಿದುಬಂದಿದೆ.
ಪ್ರಾಥಮಿಕ, ಪ್ರೌಢಶಿಕ್ಷಣ ಇಲಾಖೆಯಲ್ಲಿ ಅತಿಹೆಚ್ಚಿನ ಹುದ್ದೆಗಳು ಖಾಲಿ ಇವೆ. ಈ ಹಿಂದೆ 2019ರಿಂದ 23ರವರೆಗೆ ರಾಜ್ಯದಲ್ಲಿ ಮಹಾಮಾರಿ ಕೋವಿಡ್ 19 ಇದ್ದ ಕಾರಣ ಯಾವುದೇ ಹುದ್ದೆಗಳನ್ನು ತುಂಬಲು ಸಾಧ್ಯವಾಗಿರಲಿಲ್ಲ. ಇಡೀ ಆರ್ಥಿಕ ಚಟುವಟಿಕೆಯೇ ಸಂಪೂರ್ಣವಾಗಿ ಸ್ತಬ್ದಗೊಂಡು ಜನರು ದೈನಂದಿನ ಜೀವನ ನಡೆಸುವುದೇ ದುಸ್ತರವಾಗುವಂತಹ ಸಂದರ್ಭ ಬಂದೊದಗಿತ್ತು.
ಹಾಗಾಗಿ ಅಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಇಲಾಖೆಯಲ್ಲಿ ಖಾಲಿ ಇದ್ದ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಾಗಿರಲಿಲ್ಲ. 2023ರ ವರ್ಷದ ಪ್ರಾರಂಭದಲ್ಲಿ ಕೆಲವು ಇಲಾಖೆಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮಾಯಿ ಸರ್ಕಾರ ಮುಂದಾಗಿತ್ತು.
ಇದನ್ನೂ ಓದಿ: ಅಪ್ರಾಪ್ತ ವಿದ್ಯಾರ್ಥಿನಿಯ ಹೆರಿಗೆ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್.ಎಫ್.ಐ ಆಗ್ರಹ
ಆದರೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾದ ಕಾರಣ ನೀತಿಸಂಹಿತೆ ಜಾರಿಯಲ್ಲಿದುದ್ದರಿಂದ ಈ ಪ್ರಸ್ತಾವನೆಯು ಕೇವಲ ಕಾಗದದಲ್ಲೇ ಉಳಿಯಿತ್ತೇ ಹೊರತು ಅನುಷ್ಠಾನ ರೂಪಕ್ಕೆ ಬರಲಿಲ್ಲ.
ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಇತಿಹಾಸ. ಚುನಾವಣಾ ಪೂರ್ವ ಜನತೆಯ ಮುಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ನಿರುದ್ಯೋಗ ನಿರ್ವಹಣೆಗೆ ನಮ ಸರ್ಕಾರ ಮೊದಲ ಆದ್ಯತೆ ಕೊಡುತ್ತದೆ ಎಂದು ಹೊಸ ಕನಸುಗಳನ್ನು ಬಿತ್ತಿದ್ದರು.
ಇದಾದ ನಂತರ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿಯನ್ನು ಸರ್ಕಾರ ಅನುಷ್ಠಾನಕ್ಕೆ ತಂದಿತಾದರೂ ಹೈಕೋರ್ಟ್‌ನಲ್ಲಿ ಕೆಲವು ಸಂಘಟನೆಗಳು ಪ್ರಶ್ನೆ ಮಾಡಿರುವ ಕಾರಣ ಸರ್ಕಾರ ಕೂಡ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ.
ರಾಜ್ಯದ ವಿವಿಧ ಸರ್ಕಾರಿ ಮತ್ತು ಅರೆ-ಸರ್ಕಾರಿ ಇಲಾಖೆಗಳಲ್ಲಿ ಸುಮಾರು 2.84 ಲಕ್ಷಕ್ಕೂ ಹೆಚ್ಚು (2,84,881) ಹುದ್ದೆಗಳು ಖಾಲಿ ಇವೆ. ಈ ಪೈಕಿ ಅತಿ ಹೆಚ್ಚು ಖಾಲಿ ಹುದ್ದೆಗಳು ಶಿಕ್ಷಣ ಇಲಾಖೆಯಲ್ಲಿದ್ದು (ಸುಮಾರು 79,694), ಒಟ್ಟಾರೆಯಾಗಿ ಆರ್ಥಿಕ ಇಲಾಖೆಯು ಪ್ರಸ್ತುತ 24,300 ಹುದ್ದೆಗಳ ಭರ್ತಿಗೆ ಮಾತ್ರ ಮಂಜೂರಾತಿ ನೀಡಿದೆ.
ಒಟ್ಟು 43 ಇಲಾಖೆಗಳಲ್ಲಿ ಹುದ್ದೆಗಳು ಖಾಲಿಯಿದ್ದು, ಅದರಲ್ಲಿ ವಿವಿಧ ನಿಗಮ ಮಂಡಳಿಗಳಲ್ಲಿ 101420, ವಿಶ್ವವಿದ್ಯಾಲಯಗಳಲ್ಲಿ 14677 ಹುದ್ದೆಗಳು ಸೇರಿ 188037 ಹುದ್ದೆಗಳು ಖಾಲಿಯಿದೆ. ಈಗಾಗಲೇ 24,300 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಆರ್ಥಿಕ ಇಲಾಖೆಯಿಂದ ಅನುಮತಿ ದೊರೆತಿದೆ. ಹೈದರಾಬಾದ್ ಕರ್ನಾಟಕಕ್ಕೆ 371 ಜೆ ಅಡಿ 32,132 ಹುದ್ದೆಗಳು ಭರ್ತಿಯಾಗಬೇಕಿದೆ. ಒಟ್ಟು 56432 ಹುದ್ದೆಗಳ ಭರ್ತಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ.
ಖಾಲಿ ಇರುವ ಹುದ್ದೆಗಳು
1. ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ: 79,694 ಹುದ್ದೆಗಳು (ಅತಿ ಹೆಚ್ಚು).
2. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ: 37,572 ಹುದ್ದೆಗಳು.
3. ಕೃಷಿ – 6876
4. ಪಶುಸಂಗೋಪನೆ – 11020
5. ಹಿಂದುಳಿದ ವರ್ಗಗಳ ಕಲ್ಯಾಣ- 8525
6. ಆರ್ಥಿಕ – 7668
7. ಮೀನುಗಾರಿಕೆ – 838
8. ಆಹಾರ ಮತ್ತು ನಾಗರಿಕ ಪೂರೈಕೆ- 1442
9. ಅರಣ್ಯ – 6478
10. ಉನ್ನತ ಶಿಕ್ಷಣ – 13,599
11. ಒಳಾಡಳಿತ – 28,188
12. ಕಾನೂನು – 7659
13. ಅಲ್ಪಸಂಖ್ಯಾತ ಕಲ್ಯಾಣ- 4972
14. ಕಂದಾಯ – 10867
15. ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ – 10504
16. ಪರಿಶಿಷ್ಟ ಜಾತಿ ಕಲ್ಯಾಣ- 9646
17. ಶಿಕ್ಷಣ – 79,694
18. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ – 3391
