ಬೆಂಗಳೂರು: ಕರ್ನಾಟಕದ ಹೊಸ ಸರಕಾರದ ಬಜೆಟ್ ಮಂಡನೆಯಾಗಿದೆ. ಚುನಾವಣಾ ಪೂರ್ವದ ವಾಗ್ದಾನಗಳನ್ನು ಈಡೇರಿಸುವ ನಿಟ್ಟಿನಲ್ಲಿ ಈ ಬಜೆಟ್ ಕೂಡಾ ಇದೆ. ಮಹಿಳಾ ಮತ್ತು ಮಕ್ಕಳ ಇಲಾಖೆಗೆ 7% ಬಜೆಟ್ ಕೊಡಲಾಗಿದೆ. ಗ್ಯಾರಂಟಿಗಳ ಭರವಸೆಯನ್ನು ಈಡೇರಿಸಿದ್ದನ್ನು ಸ್ವಾಗತಿಸುತ್ತೇವೆ. ಆದರೆ ರಾಜ್ಯದ ಮಹಿಳೆಯರ ಎಲ್ಲ ಸಮಸ್ಯೆಗಳನ್ನು ಈ ಗ್ಯಾರಂಟಿಗಳ ಮೂಲಕವೇ ಈಡೇರಿಸಲು ಸಾಧ್ಯವಿಲ್ಲ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವಿಶ್ಲೇಷಿಸಿದೆ.
ದೌರ್ಜನ್ಯಗಳ ನಿರ್ಮೂಲನೆಯತ್ತ ಹೆಜ್ಜೆ ಹಾಕುವತ್ತ ಸ್ಪಷ್ಟ ದಾರಿಗಳನ್ನು ಸೂಚಿಸುವ ಅಗತ್ಯವಿದೆ. ಹೆಣ್ಣುಮಕ್ಕಳ ಮತ್ತು ಬಡವರ ಮಕ್ಕಳನ್ನು ಶಿಕ್ಷಣದ ಕಕ್ಷೆಯಿಂದ ಹೊರ ತಳ್ಳುವ ಅಂಶಗಳನ್ನೊಳಗೊಂಡ ರಾಷ್ಟ್ರೀಯ ಶಿಕ್ಷಣ ನೀತಿಗೆ ಬದಲಾಗಿ ರಾಜ್ಯ ಶಿಕ್ಷಣ ನೀತಿ ತರುವ ಪ್ರಸ್ತಾಪವನ್ನೂ ಸ್ವಾಗತಿಸುತ್ತೇವೆ. ಆದರೆ ಅದೇ ಸಂದರ್ಭದಲ್ಲಿ ಸರಕಾರದ ಎಲ್ಲ ಯೋಜನೆಗಳನ್ನು ಜನರಿಗೆ ತಲುಪಿಸುವ ವಾಹಕರಾದ ಸ್ಕೀಂ ವರ್ಕರ್ಸ್ ಗೆ ರಾಜ್ಯ ಸರಕಾರದ ಕಡೆಯಿಂದ ಘೋಷಣೆಯಾಗಬೇಕಿದ್ದ ವೇತನ ಹೆಚ್ಚಳ ಮತ್ತಿತರ ಸೌಲಭ್ಯಗಳ ಪ್ರಸ್ತಾಪ ಕಾಣುತ್ತಿಲ್ಲ ಎಂದಿದೆ.
ಇದನ್ನೂ ಓದಿ:ಬಡವರ ಅನ್ನ ಕಸಿದು ನೀಚತನ – ಕೇಂದ್ರದ ವಿರುದ್ಧ ಜನವಾದಿ ಮಹಿಳಾ ಸಂಘಟನೆ ಕಿಡಿ
ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುವ ದೌರ್ಜನ್ಯ ಗಳನ್ನು ನಿರ್ಮೂಲನೆ ಮಾಡಲು ಒಂದು ಸಶಕ್ತ ಕ್ರಮದ ಅಗತ್ಯವಿದೆ. ಸ್ತ್ರೀ ಶಕ್ತಿ, ಸ್ವ ಸಹಾಯ ಸಂಘಗಳ ಬಲ ವರ್ಧನೆಗೆ ಅವರ ಕೌಶಲ್ಯ ಹೆಚ್ಚಿಸಿ, ಆದಾಯತರುವ ರೀತಿಯ ಕ್ರಮಗಳು ಅಗತ್ಯವಿದೆ. ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಬೇಕಾದ ಕ್ರಮಗಳನ್ನು ಬಜೆಟ್ ನಲ್ಲಿ ಪ್ರಸ್ತಾಪ ಮಾಡಿಲ್ಲ. ಪೌಷ್ಟಿಕಾಂಶ ಪೂರೈಕೆಯನ್ನು ಉತ್ತಮಗೊಳಿಸಲು 9 ಮತ್ತು 10 ನೇ ತರಗತಿಯ ವರೆಗೆ ಮೊಟ್ಟೆ ಕೊಡುವುದನ್ನು ವಿಸ್ತರಿಸಿರುವುದು ಸ್ವಾಗತಾರ್ಹ. ನೌಕರರಿಗಾಗಿ ವಿಮಾ ಯೋಜನೆ, ಯುವ ನಿಧಿ ಇವುಗಳು ತಾತ್ಕಾಲಿಕ ಪರಿಹಾರವಾಗಿ ಸ್ವಾಗತಾರ್ಹವಾದರೂ ಯುವಜನರ ಮತ್ತು ಆ ಮೂಲಕ ಸಮಾಜದ ನಿಜವಾದ ಪ್ರಗತಿಗೆ ಅಗತ್ಯವಾದ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಗಮನದ ಅಗತ್ಯವಿದೆ ಎಂದಿದೆ.
ಸರಕಾರಿ ನೌಕರರ ಬೇಡಿಕೆಯಾದ ಓ.ಪಿ.ಎಸ್ ಬಗ್ಗೆಯೂ ಬಜೆಟ್ ನಲ್ಲಿ ಪ್ರಸ್ತಾಪಗಳಿಲ್ಲ. ಜೀವನ ಭದ್ರತೆ ಯ ಪ್ರಮುಖ ಸಂಗತಿಗಳತ್ತ ಇನ್ನಷ್ಟು ಗಮನದ ಅಗತ್ಯವಿದೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕರ್ನಾಟಕ ರಾಜ್ಯ ಸಮಿತಿ ಅಭಿಪ್ರಾಯ ಪಡುತ್ತದೆ ಎಂದು ರಾಜ್ಯಾಧ್ಯಕ್ಷರಾದ ಮೀನಾಕ್ಷಿ ಬಾಳಿ, ಪ್ರಧಾನ ಕಾರ್ಯದರ್ಶಿ ದೇವಿ ಹೇಳಿದ್ದಾರೆ.