ನವದೆಹಲಿ: ಮಣಿಪುರ ಬೆತ್ತಲೆ ಪ್ರಕರಣದ ಸಂತ್ರಸ್ತೆಯರು ಮಣಿಪುರ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ ಎಂದು ಲೈವ್ ಲಾ ವರದಿ ಮಾಡಿದೆ.
ಪ್ರಕರಣದ ಸಂಬಂಧ ನ್ಯಾಯೋಜಿತ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಅವರು ಕೋರಿದ್ದಾರೆ. ಅಲ್ಲದೇ ತಮ್ಮ ಗುರುತನ್ನು ಬಹಿರಂಗಪಡಿಸಕೂಡದು ಎಂದು ಮನವಿ ಮಾಡಿದ್ದಾರೆ. ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್,ನ್ಯಾಯಮೂರ್ತಿ ಜೆ.ಬಿ ಪರ್ದಿವಾಲ ಹಾಗೂ ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರಿರುವ ಪೀಠ ಇಂದು (ಸೋಮವಾರ)ಜುಲೈ-31 ರಂದು ಅರ್ಜಿಯ ವಿಚಾರಣೆಯನ್ನು ನಡೆಸಲಿದೆ.
ಇದನ್ನೂ ಓದಿ:ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ:ಪ್ರತಿರೋಧವಾಗಿ ಹೊರ ಹೊಮ್ಮಿದ ಕವಿತೆಗಳು
ಇದೇ ಘಟನೆ ಸಂಬಂಧ ಪ್ರಕರಣವನ್ನು ಮಣಿಪುರದಿಂದ ಬೇರೆ ರಾಜ್ಯಕ್ಕೆ ಸ್ಥಳಾಂತರಿಸಬೇಕು ಎಂದು ಭಿನ್ನವಿಸಲಾದ ಅರ್ಜಿಯ ವಿಚಾರಣೆಯೂ ಇಂದೇ ನಡೆಯಲಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಸಾಂವಿಧಾನಿಕ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಅಭಿಪ್ರಾಯಪಟ್ಟಿತ್ತಲ್ಲದೆ, ಈ ಬಗ್ಗೆ ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜುಲೈ 20ರಂದು ಮಣಿಪುರ ಹಾಗೂ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿತ್ತು.
ಇದಕ್ಕೆ ಗುರುವಾರ ಉತ್ತರ ನೀಡಿದ್ದ ಕೇಂದ್ರ ಸರ್ಕಾರ,ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಿದ್ದಾಗಿಯೂ,ಘಟನೆ ಮಣಿಪುರದ ಹೊರಗೆ ವರ್ಗಾಯಿಸಲು ಮನವಿ ಮಾಡಿದ್ದಾಗಿಯೂ ಹೇಳಲಾಗಿತ್ತು.