ಎಐಕೆಎಸ್ ನೇತೃತ್ವದ ರೈತ ಹೋರಾಟಕ್ಕೆ ಮಂಡಿಯೂರಿದ ಉತ್ತರ ಪ್ರದೇಶ ಸರ್ಕಾರ

ಉತ್ತರ ಪ್ರದೇಶ: ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ನೇತೃತ್ವದಲ್ಲಿ 60 ದಿನಗಳ ಕಾಲ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ನಡೆಸಿದ್ದ ರೈತರ ಮುಂದೆ ರಾಜ್ಯದ ಗ್ರೇಟರ್ ನೋಯ್ಡಾ ಪ್ರಾಧಿಕಾರ ಮಂಡಿಯೂರಿದ್ದು, ಹೋರಾಟಗಾರರು ವಿಜಯದ ನಗೆ ಬೀರಿದ್ದಾರೆ. ಜೂನ್ 24 ರ ಶನಿವಾರದಂದು ಪ್ರತಿಭಟನಾ ನಿರತ ರೈತರು ಮತ್ತು ಆಡಳಿತದ ನಡುವೆ ರಾಜಿ ಏರ್ಪಟ್ಟಿದೆ. ಹೀಗಾಗಿ ಜುಲೈ 15 ರವರೆಗೆ ಆಂದೋಲನವನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.

ಲಿಖಿತ ಒಪ್ಪಂದದ ಪ್ರಕಾರ, ಕಳೆದ 18 ದಿನಗಳಿಂದ ಜೈಲಿನಲ್ಲಿರುವ 33 ರೈತರ ಬಿಡುಗಡೆ, ಪ್ರಕರಣಗಳ ಹಿಂಪಡೆಯುವಿಕೆ, ಇತರೆ ಸಮಸ್ಯೆಗಳ ಶೀಘ್ರ ಇತ್ಯರ್ಥಕ್ಕೆ ಉನ್ನತಾಧಿಕಾರ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಆಡಳಿತದ ಪ್ರತಿನಿಧಿಗಳು, ಸಾರ್ವಜನಿಕ ಪ್ರತಿನಿಧಿಗಳು ಮತ್ತು ರೈತ ಪ್ರತಿನಿಧಿಗಳು ಇರಲಿದ್ದಾರೆ. ಕೂಡಲೇ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮತ್ತೊಮ್ಮೆ ಹೋರಾಟಕ್ಕೆ ಮುಂದಾಗುವುದಾಗಿ ರೈತರು ತಿಳಿಸಿದ್ದಾರೆ.


ಗೆಲುವು ಸಂಭ್ರಮಿಸಿದ ರೈತರು

ಒಪ್ಪಂದದಂತೆ 10%ರಷ್ಟು ವಸತಿ ನಿವೇಶನಗಳು ಹಾಗೂ ಇತರೆ ಎಲ್ಲ ಸಮಸ್ಯೆಗಳಿಗೆ ಅಧಿಸೂಚನೆ ಹೊರಡಿಸಲಿದ್ದು, ಜೂನ್ 30ರೊಳಗೆ ಸರ್ಕಾರದಿಂದ ಉನ್ನತಾಧಿಕಾರ ಸಮಿತಿ ರಚನೆಯಾಗಲಿದೆ. ಸಮಿತಿಯ ಅಧ್ಯಕ್ಷರಾಗಿ ಕೈಗಾರಿಕಾ ಅಭಿವೃದ್ಧಿ ಸಚಿವರು ಇರಲಿದ್ದು, ಸಮಿತಿಯ ಸದಸ್ಯರಾಗಿ ಪ್ರಾಧಿಕಾರದ ಅಧ್ಯಕ್ಷರು, ಮುಖ್ಯ ಕಾರ್ಯದರ್ಶಿ (ಕೈಗಾರಿಕಾ), ಪ್ರಾಧಿಕಾರದ ಸಿಇಒ, ರಾಜ್ಯಸಭಾ ಸಂಸದ ಸುರೇಂದ್ರ ನಗರ, ಲೋಕಸಭೆ ಸಂಸದ ಮಹೇಶ್ ಶರ್ಮಾ, ದಾದ್ರಿ ಶಾಸಕ ತೇಜ್ಪಾಲ್ ಸಿಂಗ್, ಜೇವರ್ ಶಾಸಕ ಠಾಕೂರ್ ಧೀರೇಂದ್ರ ಸಿಂಗ್ ಮತ್ತು ರೈತರ ಪ್ರತಿನಿಧಿಗಳು ಒಳಗೊಂಡಿರುತ್ತಾರೆ.

ಇದನ್ನೂ ಓದಿ: ರೈತರ ಭೂಮಿ ಕಿತ್ತು ರಿಯಲ್ ಎಸ್ಟೇಟ್ ದಂಧೆ!: ನೈಸ್ ಸಂಸ್ಥೆ ವಿರುದ್ಧ ಬೃಹತ್ ಪ್ರತಿಭಟನೆಗೆ ಸಜ್ಜು

ಪರಿಷ್ಕೃತ ವೃತ್ತದ ದರಗಳು ಮತ್ತು ಉದ್ಯೋಗ ನಿರ್ದೇಶನಗಳನ್ನು ಅನುಷ್ಠಾನಗೊಳಿಸುವ ಬಗ್ಗೆಗಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗುತ್ತದೆ. ಭೂರಹಿತರಿಗೆ 40 ಚದರ ಮೀಟರ್ ನಿವೇಶನ, ವಶದಲ್ಲಿ ಇರುವ ಜಮೀನಿನ ವಿಚಾರಣೆ, ಜಮೀನಿನಲ್ಲಿ ಬಾಕಿ ಉಳಿದಿರುವ ಪ್ರಕರಣಗಳು ಮತ್ತು ಪ್ರಾಧಿಕಾರ ಮಟ್ಟದ ಇತರ ಸಮಸ್ಯೆಗಳಿಗೆ ಸಂಬಂಧಿಸಿದ ವಿಷಯಗಳು ಮುಂಬರುವ ಮಂಡಳಿಯ ಸಭೆಯಲ್ಲಿ ತ್ವರಿತವಾಗಿ ತಿಳಿಸಲಾಗುತ್ತುದೆ ಎಂದು ನಿರೀಕ್ಷಿಸಲಾಗಿದೆ.

ಜೂನ್ 6 ರಿಂದ ಜೈಲುವಾಸ ಅನುಭವಿಸಿದ 33 ರೈತರು ಬಿಡುಗಡೆಗೊಂಡಿದ್ದಾರೆ. ಸಭೆಯನ್ನುದ್ದೇಶಿಸಿ ಮಾತನಾಡಿದ ಎಐಕೆಎಸ್ ವಕ್ತಾರ ಡಾ.ರೂಪೇಶ್ ವರ್ಮಾ, ಒಪ್ಪಂದದ ಪ್ರಸ್ತಾವನೆಯನ್ನು ಮಂಡಿಸಿ ಜುಲೈ 15ರವರೆಗೆ ಪ್ರತಿಭಟನೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದರು. ರೈತರು ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸಿಲ್ಲ, ಪ್ರಾಧಿಕಾರ ನೀಡಿದ ಭರವಸೆಯ ಆಧಾರದ ಮೇಲೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದರು.

“ನಮ್ಮ ಬೇಡಿಕೆಗಳನ್ನು ಪರಿಹರಿಸದಿದ್ದರೆ, ಜುಲೈ 15 ರಿಂದ ಗ್ರಾಮ ಸಭೆ ಮತ್ತು ಪಂಚಾಯತ್‌ಗಳನ್ನು ಒಳಗೊಂಡು ಚಳವಳಿಗೆ ಸಿದ್ಧರಾಗಿ ಇದಕ್ಕಿಂತಲೂ ತೀವ್ರವಾದ ಆಂದೋಲನವನ್ನು ಪ್ರಾರಂಭಿಸಲಾಗುವುದು. ಪ್ರತಿಭಟನೆಯನ್ನು ಬೆಂಬಲಿಸುವ ಮುಖಂಡರು ಮತ್ತು ಸಂಘಟನೆಗಳನ್ನು ಈ ಸಭೆಗಳು ಮತ್ತು ಪಂಚಾಯತ್‌ಗಳಲ್ಲಿ ಗುರುತಿಸಲಾಗುವುದು ಮತ್ತು ಧನ್ಯವಾದಗಳನ್ನು ಸಲ್ಲಿಸಲಾಗುವುದು” ಎಂದು ವರ್ಮಾ ಹೇಳಿದರು.

ಇದನ್ನೂ ಓದಿ: ಕೃಷಿ ವಿರೋಧಿ ಮೂರು ಕಾಯಿದೆಗಳನ್ನು ವಾಪಸು ಪಡೆದು ರೈತರನ್ನು ರಕ್ಷಣೆ ಮಾಡಬೇಕು:ಬಯ್ಯಾರೆಡ್ಡಿ,

ಪ್ರತಿಭಟನೆಯಲ್ಲಿ ಮಾತನಾಡಿದ ಎಐಕೆಎಸ್ ಉಪಾಧ್ಯಕ್ಷ ಬ್ರಹ್ಮಪಾಲ್ ಸುಬೇದಾರ್, ”ಬಂಧಿತರಾಗಿರುವ ಎಲ್ಲ ಹೋರಾಟಗಾರರನ್ನು ಅವರವರ ಗ್ರಾಮಗಳಲ್ಲಿ ಸನ್ಮಾನಿಸಲಾಗುವುದು. ಇದರಿಂದ ಸಂಘಟನೆ ಬಲಗೊಳ್ಳುತ್ತದೆ” ಎಂದರು.

ಒಪ್ಪಂದವನ್ನು ಐತಿಹಾಸಿಕ ಎಂದು ಬಣ್ಣಿಸಿದ ವರ್ಮಾ, “ಉನ್ನತಾಧಿಕಾರ ಸಮಿತಿ ರಚನೆಯೇ ಪ್ರಮುಖ ಬೆಳವಣಿಗೆಯಾಗಿದೆ. ಈ ಸಮಿತಿಯು ರೈತರ ಬಾಕಿ ಇರುವ ಎಲ್ಲಾ ಸಮಸ್ಯೆಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಸರ್ಕಾರದ ಸ್ಥಳೀಯ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ” ಎಂದು ಹೇಳಿದರು.

ಒಪ್ಪಂದದಂತೆ ರೈತರ ಮೇಲೆ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಹಿಂಪಡೆಯಲಾಗುವುದು. ಎಐಕೆಎಸ್‌ನ ಜಿಲ್ಲಾ ಸಮಿತಿಯು ಅನುಷ್ಠಾನದ ಬಗ್ಗೆ ಅನುಸರಣೆ ಮತ್ತು ಭವಿಷ್ಯದ ಪ್ರತಿಭಟನೆಗಳಿಗೆ ಕಾರ್ಯತಂತ್ರವನ್ನು ಸಿದ್ಧಪಡಿಸುವ ನಿರೀಕ್ಷೆಯಿದೆ.

ಎಐಕೆಎಸ್ ನೇತೃತ್ವದಲ್ಲಿ ಫೆಬ್ರವರಿ 7 ರಂದು ಅಧಿಕಾರಿಗಳ ವಿರುದ್ಧ ಆಂದೋಲನ ಪ್ರಾರಂಭವಾಗಿತ್ತು. ಮಾರ್ಚ್ 14 ಮತ್ತು ಮಾರ್ಚ್ 23 ರಂದು ಪ್ರತಿಭಟನೆಗಳು ನಡೆದವು. ಎಪ್ರಿಲ್‌ 25ರಿಂದ ಧರಣಿ ಪ್ರಾರಂಭಿಸಲಾಗಿತ್ತು. ಈ ಧರಣಿಯಲ್ಲಿ ಸಾವಿರಾರು ರೈತರು ಜಮಾಯಿಸಿದ್ದರು. ಈ ವೇಳೆ ಪ್ರಾಧಿಕಾರದ ಸಿಇಒ ಅವರೊಂದಿಗೆ ಚರ್ಚೆ ನಡೆಸಲಾಯಿತು, ಆದರೆ ಯಾವುದೇ ವಿಷಯದ ಬಗ್ಗೆ ಒಪ್ಪಂದಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಘೋಷಣೆಯಂತೆ, ರೈತರು ತಮ್ಮ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಆರಂಭಿಸಿದರು. ಇದರ ನಂತರ ಮೇ 2 ರಂದು ದೊಡ್ಡ ಪ್ರಮಾಣದ ಪ್ರತಿಭಟನೆಯನ್ನು ಘೋಷಿಸಲಾಗಿ, ಅಲ್ಲಿ ಸಾವಿರಾರು ರೈತರು ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಿದ್ದರು.

ಇದನ್ನೂ ಓದಿ: ಸಿಎಂ ಜೊತೆ ಚರ್ಚೆ : ರೈತ ವಿರೋಧಿ ಕಾಯ್ದೆಗಳನ್ನು ರದ್ದು ಪಡಿಸಿ – ರೈತ ಸಂಘಟನೆಗಳ ಆಗ್ರಹ

ಜೂನ್ 6 ರಂದು, ಪೊಲೀಸರು 33 ಪ್ರತಿಭಟನಾಕಾರರನ್ನು ಪ್ರತಿಭಟನಾ ಸ್ಥಳದಿಂದ ಬಂಧಿಸಿ ಕರೆದೊಯ್ದಿದ್ದರು. ಆದರೆ, ಕೆಲ ಗಂಟೆಗಳ ನಂತರ ಮಹಿಳೆಯರ ನೇತೃತ್ವದಲ್ಲಿ ಪ್ರತಿಭಟಿಸಿ ರೈತರು ಪ್ರತಿಭಟನಾ ಸ್ಥಳವನ್ನು ವಾಪಸ್ ಪಡೆದರು. ರೈತ ಸಂಘಟನೆಯ ಪ್ರಮುಖ ನಾಯಕರ ಬಂಧನದ ನಂತರ ಈ ಚಳುವಳಿ ಇನ್ನಷ್ಟು ತೀವ್ರವಾದವು. ಇದೀಗ ಸರ್ಕಾರ ರೈತರ ಮುಂದೆ ಮಂಡಿಯೂರಿದ್ದು, ಪ್ರತಿಭಟನೆಯು ಒಪ್ಪಂದದೊಂದಿಗೆ ಸ್ಥಗಿತಗೊಂಡಿದೆ.

ಈ ಬಗ್ಗೆ ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘ (KPRS)ದ ರಾಜ್ಯ ಹಣಕಾಸು ಕಾರ್ಯದರ್ಶಿ ನವೀನ್ ಕುಮಾರ್ ಹಾಸನ, “ಒಗ್ಗಟ್ಟಿನಿಂದ ಪಟ್ಟು ಬಿಡದೇ ನಡೆಸುವ ಹೋರಾಟ ಸೋಲುವುದಿಲ್ಲ ಎಂದು ಭೂ ಸ್ವಾಧೀನ ಒಪ್ಪಂದ ಜಾರಿಗೊಳಿಸುವಂತೆ ಆಗ್ರಹಿಸಿ ನಡೆಯುತ್ತಿದ್ದ ರೈತರ ಹೋರಾಟ ಮತ್ತೊಮ್ಮೆ ಸಾಬೀತುಪಡಿಸಿದೆ. ಉತ್ತರ ಪ್ರದೇಶ ರಾಜ್ಯದ ರಾಜ್ಯಸಭಾ ಸದಸ್ಯ ಸುರೆಂದರ್ ನಗರ್ ರವರು ರೈತರ ಬೇಡಿಕೆ ಈಡೇರಿಸುವ ಲಿಖಿತ ಒಪ್ಪಂದ ಪತ್ರವನ್ನು ಪ್ರತಿಭಟನಾ ನಿರತ ರೈತ ಮುಖಂಡರಿಗೆ ಹಸ್ತಾಂತರಿಸಿದ್ದಾರೆ. ವಾರಗಟ್ಟಲೇ ಜೈಲಿಗೆ ತಳ್ಳಿದ್ದ 33 ರೈತ ಮುಖಂಡರನ್ನು ಸಹ ಬಿಡುಗಡೆ ಮಾಡಲಾಗಿದೆ. ಉತ್ತರ ಪ್ರದೇಶದ ಫ್ಯಾಸಿಸ್ಟ್ ಯೋಗಿ ಆದಿತ್ಯನಾಥ್ ಆಳ್ವಿಕೆಯನ್ನು ಮಣಿಸಿ ಮಹತ್ವದ ವಿಜಯ ಸಾಧಿಸಿದ ರೈತ ಹೋರಾಟವನ್ನು ಮತ್ತು ನೇತೃತ್ವ ನೀಡಿದ ಎಲ್ಲಾ ಮುಖಂಡರಗಳನ್ನು ಬೆಂಬಲಿಸಿದ ಎಲ್ಲಾ ಸಂಘಟನೆಗಳನ್ನು ಕರ್ನಾಟಕ ಪ್ರಾಂತ ರೈತ ಸಂಘ (KPRS) ಅಭಿನಂದಿಸುತ್ತದೆ” ಎಂದು ಹೇಳಿದ್ದಾರೆ.

ಕರ್ನಾಟಕ ಪ್ರಾಂತ ರೈತ ಸಂಘ (KPRS)ದ ರಾಜ್ಯ ಹಣಕಾಸು ಕಾರ್ಯದರ್ಶಿ ನವೀನ್ ಕುಮಾರ್ ಹಾಸನ
ಕರ್ನಾಟಕ ಪ್ರಾಂತ ರೈತ ಸಂಘ (KPRS)ದ ರಾಜ್ಯ ಹಣಕಾಸು ಕಾರ್ಯದರ್ಶಿ ನವೀನ್ ಕುಮಾರ್ ಹಾಸನ
Donate Janashakthi Media

Leave a Reply

Your email address will not be published. Required fields are marked *