‘ವಾವ್! ನನ್ನ ಒಂದು ಮಾತಿನಿಂದ ಎಷ್ಟು ಜನಕ್ಕೆ ಏಟುಬಿತ್ತು ಎಷ್ಟು ಜಗಳ!’- ಬಿಜೊಯ್ ಅಂದುಕೊಂಡ. ಸುಳ್ಳು ಅವನಿಗೆ ಮೋಜಿನ ಸಂಗತಿಯಾಯಿತು. ಅವನನ್ನು ಯಾರಾದರೂ ದೂಡಿದರೋ ಇಲ್ಲವೋ, ಗೊತ್ತಿಲ್ಲ. ವಿಷಯ ಜಾತಿ ಮತದ ವರೆಗೂ ಹೋಯಿತು. ಸತ್ಯ ಎಲ್ಲೋ ಕಳೆದುಹೋಗಿತ್ತು. ಸತ್ಯ
-ಚಂಪಾ ಜಯಪ್ರಕಾಶ್
ಬಿಹಾರಿನಿಂದ ಬಹಳ ಮಂದಿ ಕೆಲಸಕ್ಕೆಂದು ದಕ್ಷಿಣ ಭಾರತಕ್ಕೆ ಬರುವುದು ಸಾಮಾನ್ಯ ವಿಷಯ. ಹೀಗೆ ಒಬ್ಬ ಬಿಜೊಯ್ ಯಾದವ್ ಎನ್ನುವ ಐದು ವರ್ಷದ ಬಿಹಾರಿ ಹುಡುಗ ನಮ್ಮ ವಿಶೇಷ ಮಕ್ಕಳ ಶಾಲೆಯಲ್ಲಿ ಭರ್ತಿಯಾಗಿದ್ದಾನೆ. ಅವನು ಬಹಳ ತುಂಟನೆಂದು, ಇತರ ಶಾಲೆಗಳಲ್ಲಿ ಅವನನ್ನು ಸೇರಿಸಿಕೊಂಡಿರಲಿಲ್ಲ. ಅವನಿಗೆ ನೀಡ ಬೇಕಾದ ಚಿಕಿತ್ಸಾ ವಿದಾನಗಳನ್ನು ನಾನೇ ನನಗೆ ಬರುವ ಹಿಂದಿಯಲ್ಲಿ ಅವನೊಂದಿಗೆ ಮಾತಾಡುತ್ತ ಮಾಡಿಸುತ್ತಿದ್ದೆ. ಕ್ರಮೇಣ ಅವನ ಅತಿ ತುಂಟತನ ಸ್ವಲ್ಪ ಸ್ವಲ್ಪವಾಗಿ ಕಡಿಮೆಯಾಗ ತೊಡಗಿತು. ಸತ್ಯ
ಆದರೆ ನಮಗೆ ಅವನ ಇನ್ನೊಂದು ಮುಖ ಗೋಚರವಾಯಿತು. ಸತ್ಯ
ಅವನ ಮನೆಯ ಬೀದಿಯಲ್ಲಿ ಅವರ ಊರಿನವರೇ ಬಹಳಷ್ಟು ಮಂದಿ ವಾಸ ಮಾಡುತ್ತಿದ್ದಾರೆ. ಒಂದು ದಿನ ಅವರ ಮನೆ ಬದಿಯ ರಸ್ತೆಯಲ್ಲಿ ದೇವರ ಉತ್ಸವ ಮೂರ್ತಿಯ ಮೆರವಣಿಗೆ ಬರುತ್ತಿತ್ತು. ಅದನ್ನು ನೋಡಲು ಅವರ ಸುತ್ತಮುತ್ತಲ ಮನೆಯ ಮಕ್ಕಳೆಲ್ಲ ಓಡತೊಡಗಿದರು. ಮಕ್ಕಳಲ್ಲಿ ನಾಮುಂದು ತಾಮುಂದು ಎನ್ನುವ ಪೈಪೋಟಿ ಇದ್ದೇ ಇರುತ್ತದೆ. ಹಾಗೆ ಆತುರವಾಗಿ ಓಡುವಾಗ ಬಿಜಯ್ ಮುಗ್ಗರಿಸಿ ಬಿದ್ದ. ರಸ್ತೆಯಂಚಿನ ಕಲ್ಲಿಗೆ ಅವನ ಮುಖ ಜೋರಾಗಿ ತಗುಲಿ, ಅವನ ಬಲಗಣ್ಣ ಹುಬ್ಬಿನ ಬಳಿಯಿಂದ ದಳ ದಳನೆ ರಕ್ತ ಸುರಿಯ ತೊಡಗಿತು. ಸತ್ಯ
ಇದನ್ನೂ ಓದಿ: ಕ್ರಿಕೆಟಿಗ ರಿಷಭ್ ಪಂತ್ರನ್ನು ಅಪಘಾತದಿಂದ ರಕ್ಷಿಸಿದ್ದ ವ್ಯಕ್ತಿ ಸ್ಥಿತಿ ಗಂಭೀರ
ಅದರಲ್ಲಿ ಕೆಲವು ಮಕ್ಕಳು ಇದನ್ನು ಗಮನಿಸದೆ, ಮೆರವಣಿಗೆ ನೋಡಲು ಓಡಿದರು, ಕೆಲವರು, “ಅಯ್ಯೋ ಬಿಜೊಯ್, ಕ್ಯಾ ಹುವಾರೆ?”ಎನ್ನುತ್ತ ಅಳುತ್ತಿದ್ದ ಅವನನ್ನು ಮನೆಗೆ ಕರೆತಂದು ಅವನ ಅಮ್ಮ ಮೀನಳಿಗೆ ಒಪ್ಪಿಸಿದರು. ಸತ್ಯ
ಮೀನ ಗಾಬರಿಗೊಂಡು, ಮನೆಯಲ್ಲಿದ್ದ ಅರಿಶಿಣ ಪುಡಿ, ಕಾಫಿ ಪುಡಿ ಎಲ್ಲವನ್ನು ಅವನ ಹಣೆಯ ಮೇಲೆ ಸುರಿದು ರಕ್ತಸ್ರಾವ ನಿಲ್ಲಿಸುವ ಪ್ರಯತ್ನ ಮಾಡಿದಳು. ಆದರೆ ಹಾಗಾಗದೆ, ಅವನ ಹಣೆಯ ಭಾಗದಲ್ಲಿ ಊತ ಆರಂಭವಾಯಿತು. ಮೀನ ಆತಂಕದಿಂದಲೇ ಅವನನ್ನು ಬಳಿಯಲ್ಲಿದ್ದ ಪ್ರೈಮರಿ ಹೆಲ್ಥ್ ಸೆಂಟರಿಗೆ ಕರೆದೊಯ್ದಳು. ಅಲ್ಲಿ ಅವರು ನೀಡಿದ ತುರ್ತು ಚಿಕಿತ್ಸೆಗೆ ಅವನ ರಕ್ತಸ್ರಾವ ನಿಲ್ಲದಿದ್ದಕ್ಕೆ ಅವರು ಅವನಿಗೆ ಸ್ಕಾನಿಂಗ್ ಮಾಡಿಸಬೇಕಾಗುತ್ತದೆ, ಎಂದು ಬೇರೆ ಕಡೆ ಹೋಗಲು ಸಲಹೆ ಕೊಟ್ಟರು. ಬಿಜೊಯ್ ಅಳುತ್ತಲೇ ಅಮ್ಮ ಎಳೆದೊಯ್ದಲ್ಲೆಲ್ಲ ನಡೆದು ಕೊಂಡೇ ಹೋಗುತ್ತಿದ್ದ. ಸತ್ಯ
ಲೀಲ, ಅವಳ ಗಂಡ ಮುಕುಂದನಿಗೆ ಕರೆ ಮಾಡಿ ಕರೆಸಿ ಕೊಂಡಳು. ಬಿಜೊಯ್ ಅಮ್ಮ ಅಪ್ಪ ನೊಡನೆ ಖಾಸಗೀ ಕ್ಲೀನಿಕ್ಕಿಗೆ ಬಂದರು. ಅವನ ಪರಿಸ್ಥಿತಿಯನ್ನು ನೋಡಿ ನರ್ಸ್ ಒಬ್ಬಳು ಅವರನ್ನು ಕೂಡಲೆ ಡಾಕ್ಟರ್ ಬಳಿ ಕರೆದೊಯ್ದಳು. ಡಾಕ್ಟರ್ ತಪಾಸಣೆ, ಸ್ಕ್ಯಾನ್, ಇಂಜೆಕ್ಶನ್, ಗಾಯಕ್ಕೆ ಹೊಲಿಗೆ, ಬ್ಯಾಂಡೇಜ್, ಎಲ್ಲ ಸೇರಿ ಆರು ಸಾವಿರ ಬಿಲ್ ಬಂತು. ಮುಕುಂದ ಅವರಿವರ ಹತ್ತಿರ ಕೇಳಿ ಹಣ ತಂದು ಕೊಟ್ಟನಂತರ ಅವರನ್ನು ಕ್ಲೀನಿಕ್ ನಿಂದ ಹೊರಗಡೆ ಬಿಟ್ಟರು. ಸತ್ಯ
ಬಿಜೊಯನ್ನು ಮೀನ ಹತ್ತಾರು ಬಾರಿ “ನೀನು ಹೇಗೆ ಬಿದ್ದೆ?”ಎಂದು ಕೇಳಿದ್ದಳು. ಸತ್ಯ
ಆದರೆ ಅದು ಅವನಿಗೇ ಅರಿವಿಲ್ಲದಂತೆ ನಡೆದಿತ್ತು. ಏನೂ ಹೇಳದೆ ಅವನು ಅಳುತ್ತಿದ್ದ. ಮನೆಗೆ ಬಂದ ನಂತರ ಅಕ್ಕ ಪಕ್ಕದವರೆಲ್ಲ ಬಂದು, ‘ಏನಾಯಿತು, ಡಾಕ್ಟರ್ ಏನು ಹೇಳಿದರು?’ಎಂದು ವಿಚಾರಿಸಲು ಬಂದರು. ಅದರಲ್ಲಿ ಚುಟ್ಕಿ ಎನ್ನುವ ಆರು ವರ್ಷ ವಯಸ್ಸಿನ ಹುಡುಗಿಯೂ ಅವಳ ಅಮ್ಮನ ಕೈ ಹಿಡಿದು ತನ್ನ ಗೆಳೆಯನಿಗೆ ಏನಾಯಿತೋ ಎಂದು ತಿಳಿದು ಕೊಳ್ಳಲು ಬಂದಿದ್ದಳು.
ಬಿಜೊಯ್ ಇದ್ದಕ್ಕಿದ್ದಂತೆ ಅವಳನ್ನು ತೋರಿಸಿ “ಇಸ್ನೆ ಮುಜೆ ದಕ್ಕ ಮಾರ” ಎಂದ.
ಅವಳ ಅಮ್ಮ, ಲೀಲಳಿಂದ ಹಿಡಿದು ಎಲ್ಲರೂ ಅವಳ ಮೇಲೆ ಹರಿಹಾಯ್ದರು. ಅವರೆಲ್ಲರ ಆಕ್ರೋಶದ ಕೊರಲಲ್ಲಿ ಚುಟ್ಕಿಯ ಕ್ಷೀಣ ದನಿ ಯಾರಿಗೂ ಕೇಳಲಿಲ್ಲ. ಅಮ್ಮನಿಂದ ಹೊಡೆತ ತಿನ್ನುತ್ತ ಅಳುತ್ತ ಅವಳು ಹೇಳುತ್ತಲೇ ಇದ್ದಳು. “ಮೈನೆ ಕುಚ್ ನಹಿ ಕಿಯ.” ಅವಳಿಗೆ ಅವನು ಬಿದ್ದದ್ದೇ ಮೆರವಣಿಗೆ ನೋಡಿ ವಾಪಸ್ ಬಂದ ನಂತರ ಗೊತ್ತಾಗಿತ್ತು. ಅವಳ ಮಾತನ್ನು ಯಾರೂ ಗಣನೆಗೆ ತೆಗೆದು ಕೊಳ್ಳಲಿಲ್ಲ.
ಈಗ ಮೀನ, ಮೈಮೇಲೆ ದೆವ್ವ ಬಂದವರ ಹಾಗೆ ಆಡ ತೊಡಗಿದಳು.
ಚುಟ್ಕಿ ತಾಯಿಯನ್ನು ಉದ್ದೇಶಿಸಿ, “ನಿನ್ನ ಮಗಳಿಂದನೇ ನನ್ನ ಮಗನಿಗೆ ಇಂಥ ಗಾಯವಾಗಿದ್ದು, ಗಾಯ ಏನಾದರು ಇನ್ನು ಸ್ವಲ್ಪ ಕೆಳಗೆ ಬಿದ್ದಿದ್ದರೆ, ಅವನ ಒಂದು ಕಣ್ಣೇ ಹೋಗಿಬಿಡುತ್ತಿತ್ತು, ಯಾರಾದರು ಇನ್ನೊಂದು ಮಗುವನ್ನು ಹೀಗೆ ರಸ್ತೆಯಲ್ಲಿ ತಳ್ಳಿಬಿಡುತ್ತಾರ? ನಿನ್ನಮಗಳಿಗೆ ಅಷ್ಟೂ ತಿಳಿಯುವುದಿಲ್ಲವಾ?”ಎಂದು ಆವೇಶದಿಂದ ಬುಸುಗುಟ್ಟುತ್ತಿದ್ದಳು.
ಚುಟ್ಕಿಯ ಅಮ್ಮ ಲೀಲ ಸ್ವಲ್ಪ ಹೊತ್ತು ತಪ್ಪಿತಸ್ತ ಭಾವದಿಂದ ತಲೆತಗ್ಗಿಸಿ ನಿಂತಿದ್ದಳು. ಅವಳಿಗೆ ಅವಳ ಮಗಳು ತಳ್ಳಿದ್ದರಿಂದಲೇ ಅವನು ಬಿದ್ದನಾ ಎಂಬ ವಿಷಯ ತಿಳಿಯದು, ಆದರೂ, “ಮಾಫ್ ಕರೊ ದೀದಿ.” ಎಂದಳು.
ಮೀನಳಿಗೆ ಅವಳು ಕೇಳಿದ ಕ್ಷಮೆ ಲೆಕ್ಕಕ್ಕೆ ಬರಲಿಲ್ಲ. ಮತ್ತೆ ದೆವ್ವಮೈಮೇಲೆ ಏರಿದವಳಂತೆ, ಮತ್ತಷ್ಟು ಜೋರಾಗಿ ಕಿರುಚಾಡ ತೊಡಗಿದಳು.
“ಈಗ ನಿನ್ನ ಮಗಳಿಂದಲೇ ಇವನಿಗೆ ಇಷ್ಟೆಲ್ಲ ಆಗಿರೋದು, ಇವನ ಇಲಾಜಿಗೆ ಆರು ಸಾವಿರ ಖರ್ಚಾಯ್ತು, ಅದನ್ನು ನೀನೇ ಕೊಡ ಬೇಕು.”
“ಅಯ್ಯೋ ಅಷ್ಟೊಂದು ಹಣ ನಾನೆಲ್ಲಿಂದ ತರಲಿ? ನನ್ನ ಬಳಿ ಅಷ್ಟು ಇಲ್ಲ ದೀದಿ.”
“ಅವೆಲ್ಲ ನನಗೆ ಗೊತ್ತಿಲ್ಲ, ನಿನ್ನ ಮಗಳಿಂದ ನನ್ನ ಮಗನಿಗೆ ಹೀಗಾಗಿದೆ ನೀನೇ ಅದರ ಹಣ ಕೊಡಬೇಕು.” ಎಂದು ಪಟ್ಟು ಹಿಡಿದು ಕುಳಿತಳು ಮೀನ. ಅಲ್ಲಿದ್ದವರಿಗೆ, ಯಾರು ಯಾರ ಪರ ವಹಿಸಬೇಕೋ ತಿಳಿಯದೆ ಅವರೆಲ್ಲ ಜಾಗ ಖಾಲಿ ಮಾಡಿದರು.
ಲೀಲ ದಿನಗೂಲಿ ಕೆಲಸಕ್ಕೆ ಹೊಟೆಲೊಂದರಲ್ಲಿ ಪಾತ್ರೆ ತೊಳೆಯಲು ಹೋಗುತ್ತಿದ್ದಳು. ಅವತ್ತಿನ ಸಂಪಾದನೆ ಅವತ್ತಿಗೆ ಆದರೆ ಸಾಕು ಎನ್ನುವಂಥ ಪರಿಸ್ಥಿತಿಯಲ್ಲಿ ಅವಳಿದ್ದಳು. ಅವಳ ಗಂಡ ಕುಡುಕ, ಅವನು ಒಂದು ದಿನ ಕೆಲಸಕ್ಕೆ ಹೋದರೆ ಇನ್ನು ಎರಡು ದಿನ ಹೋಗುತ್ತಿರಲಿಲ್ಲ. ಅವನ ದಿನಗೂಲಿಯ ಹಣ ಅವನ ಕುಡಿತಕ್ಕೇ ಸಾಲುತ್ತಿರಲಿಲ್ಲ.
ಬಹಳ ಸಮಯ ವಾಗ್ವಾದದ ನಂತರ ಲೀಲ ತನ್ನ ಮನೆಗೆ ವಾಪಸ್ ಆದಳು. ಅವಳು ತನ್ನ ಮಗಳು ಚುಟ್ಕಿಯನ್ನು ಗಟ್ಟಿಯಾಗಿ ಹಿಡಿದು, ಉಲುಕುತ್ತಾ ಕೇಳಿದಳು, “ನಿನಗೆ ಮೈಮೇಲೆ ನಿಗ ಇಲ್ಲವ? ಅವನನ್ನು ಯಾಕೆ ತಳ್ಳಿದೆ?”
ಇದನ್ನೂ ಓದಿ : ಗಾಯ ಕಥಾ ಸರಣಿ | ಸಂಚಿಕೆ 24| ಜೈಲಿನಿಂದ ಬಿಡುಗಡೆಯಾದ ಧಣಿ…
“ಅಮ್ಮ, ನನಗೆ ನಿಜವಾಗಲೂ ಅವನು ಬಿದ್ದ ವಿಷಯವೇ ಆಮೇಲೆ ಗೊತ್ತಾಯಿತು, ನಾನು ತಳ್ಳಿಲ್ಲಮ್ಮ .”
ಚುಟ್ಕಿ ಕಣ್ಣುಗಳಲ್ಲಿ ಸತ್ಯ ಅಡಗಿತ್ತು. ಲೀಲ ಅವಳನ್ನು ಒಂದು ಮಾತೂ ಕೇಳದೆ, ಅವಳನ್ನು ನಂಬದೆ ಎಲ್ಲರ ಮುಂದೆ ಅವಳನ್ನು ಹೊಡೆದದ್ದಕ್ಕೆ ಬೇಸರವಾಯಿತು.
“ಮತ್ತೆ ಅವನು ಯಾಕೆ ನಿನ್ನನ್ನು ತೋರಿಸಿ ಹೇಳಿದ?”
“ನನಗೆ ಗೊತ್ತಿಲ್ಲಮ್ಮ, ಅವನು ನಾನು ದಿನಾ ಆಟಾ ಆಡ್ತೀವಿ, ಅವನು ನನ್ನ ಫ್ರೆಂಡು.”
“ಆಟ ಆಡೋವಾಗ ಏನಾದ್ರು ಜಗಳ ಆಯ್ತ?”
“ಹಂಗೇನಿಲ್ಲ. ದಿನಾ ಜಗಳ ಆಡ್ತೀವಿ ದಿನಾ ಆಟ ಆಡ್ತೀವಿ. ಅವನು ಯಾಕೆ ನನ್ನ ಹೆಸರು ಹೇಳಿದ ಅಂತ ನನಗೂ ಗೊತ್ತಿಲ್ಲ.”
“ನೀನು ತಳ್ಳಿಲ್ಲ ಅಲ್ವ? ಬಿಡು ಅಷ್ಟು ಸಾಕು.”
ಮಾರನೆ ದಿನ ಮೀನ ಒಂದು ಕೈಯಲ್ಲಿ ಬಿಜೊಯನನ್ನು ಹಿಡಿದುಕೊಂಡು, ಲೀಲ ಮನೆಗೆ ಬರೋವೇಳೆಗೆ ಲೀಲ ಕೆಲಸಕ್ಕೆ ಹೋಗಿದ್ದಳು. ಅವಳ ದೊಡ್ಡ ಮಗಳು ಹದಿಮೂರು ವರ್ಷದ ಗುಡ್ಡುವನ್ನು ಕುರಿತು ಮೀನ ಕೇಳಿದಳು, “ಎಲ್ಲಿ ನಿಮ್ಮಮ್ಮ? ನನ್ನ ಮಗನಿಗೆ ಇಷ್ಟೆಲ್ಲ ಮಾಡಿ ಈಗ ದುಡ್ಡು ಕೊಡದೆ ಕೆಲಸಕ್ಕೆ ಹೋಗಿಬಿಟ್ಟಳ? ನನ್ನ ಮಗನಿಗೆ ಆದಂಗೆ ನಿನಗೂ ಮಾಡಲ?”ಎನ್ನುತ್ತ ಗುಡ್ಡುಗೆ ನಾಲ್ಕು ಏಟು ಹಾಕಿದಳು.
ತನ್ನದು ಯಾವ ತಪ್ಪೂ ಇಲ್ಲದೆ ಹಠಾತ್ತನೆ ತನ್ನ ಮೇಲೆ ಹಲ್ಲೆ ನಡೆದಾಗ ಒಂದು ಕ್ಷಣ ತಬ್ಬಿಬ್ಬಾದ ಗುಡ್ಡು, ನಂತರ ಸಾವರಿಸಿಕೊಂಡು ಎಂದಳು-
“ನನ್ನ ಹೊಡೆದರೆ ನಿಮ್ಮ ಮಗನಿಗೆ ಸರಿ ಹೋಗುತ್ತ? ಹಾಗಾದರೆ ಇನ್ನೂ ಹೊಡಿರಿ. ನಮ್ಮ ಅಮ್ಮನ ಹತ್ತಿರ ನಿಮಗೆ ಕೊಡೋಷ್ಟು ದುಡ್ಡಿಲ್ಲ.”
ಗುಡ್ಡುಗೆ, ಕುಡುಕ ಅಪ್ಪನಿಂದ, ಕೋಪ ಬಂದಾಗ ಅಮ್ಮನಿಂದ ಏಟು ತಿಂದು ಅಭ್ಯಾಸ ವಾಗಿತ್ತು, ಅವಳ ಈ ಮಾತು ಮೀನಳನ್ನು ಮತ್ತಷ್ಟು ಕೆರಳಿಸಿತು. ಇದೆಲ್ಲವನ್ನೂ ಬಿಜೊಯ್ ಗಮನಿಸುತ್ತಿದ್ದ. ಅವನಿಗೆ ತನ್ನ ಮಾತನ್ನು ಅಮ್ಮ ಅಷ್ಟು ಗಂಭೀರವಾಗಿ ಪರಿಗಣಿಸಿ ಇತರರಿಗೆ ಹೊಡೆಯುತ್ತಿರುವುದು ಒಂದು ರೀತಿಯ ಮೋಜೆನಿಸಿತು. ತಾನು ಏನು ಹೇಳಿದರೂ ಅಮ್ಮ ನಂಬುತ್ತಾರೆ, ಸುತ್ತಲಿನವರೂ ನಂಬುತ್ತಾರೆ, ಅದನ್ನು ನಿಜವೋ ಸುಳ್ಳೊ ಎಂದು ಕೂಡ ಪರಿಶೀಲಿಸುವುದಿಲ್ಲ ಎಂಬುದು ಖಾತ್ರಿ ಯಾಯಿತು. ಅವನು ಬಿದ್ದಾಗ ಅವನ ಪಕ್ಕದಲ್ಲಿ ಯಾರಿದ್ದರು ಎಂದು ಕೂಡ ಅವನಿಗೆ ಅರಿವಿರಲಿಲ್ಲ. ಚುಟ್ಕಿಯನ್ನು ನೋಡಿದ ಕೂಡಲೆ ಅವಳ ಮೇಲೆ ದೂರು ಹೇಳಬೇಕೆನಿಸಿತು, ಹೇಳಿದ್ದ. ‘ಅವಳಿಗೂ ಅವಳ ಅಮ್ಮನಿಂದ ಚೆನ್ನಾಗಿ ಏಟು ಬಿದ್ದಿದೆ ಹಾಗೇ ಆಗಬೇಕು.’ ಎಂದುಕೊಂಡ.
ಬಿಜೊಯ್ ತುಂಟತನದಿಂದ ಮಾಡುವ ಚೇಷ್ಟೆಗಳನ್ನು ಚುಟ್ಕಿ ಮೀನಳ ಬಳಿ ಆಗಾಗ ದೂರು ನೀಡುತ್ತಿದ್ದಳು, ಆದರೆ ಬಿಜೊಯ್ ಅದಾವುದನ್ನೂ ಒಪ್ಪಿಕೊಳ್ಳುತ್ತಿರಲಿಲ್ಲ, ಆಗೆಲ್ಲ ಅವನ ಅಮ್ಮ ಅವನನ್ನೇ ನಂಬುತ್ತಿದ್ದಳು. ಕೆಲವೊಮ್ಮೆ ಅವನ ಮೇಲೆ ಶಾಲೆಯಿಂದ ದೂರು ಬಂದಾಗ ಅವನನ್ನು ಮನೆಯೊಳಗೆ ಕೂಡಿಹಾಕಿ ಕೆಲಸಕ್ಕೆ ಹೋಗುತ್ತಿದ್ದಳು. ಮನೆಗೆ ಬಂದ ನಂತರ ಅವನ ಅಪಾಯಕಾರಿ ಚೇಷ್ಟೆಗಳ ಬಗ್ಗೆ ತಿಳಿಯುತ್ತಿತ್ತು. ಆದರೂ ಅವನು ನಾನು ಮಾಡಿಲ್ಲವೆಂದರೆ ಅವನನ್ನು ನಂಬುತ್ತಿದ್ದಳು – ತಾಯಿಯ ಅಂಧ ಮಮತೆಯಿಂದ.
ಆ ದಿನ ರಾತ್ರಿ ಲೀಲ ಕೆಲಸದಿಂದ ಬರುವ ವರೆಗೂ ಕಾದು, ಮೀನ ಅವಳ ಮನೆಗೆ ಬಿಜೊಯನೊಂದಿಗೆ ಹೋದಳು,“ನನ್ನ ಮಗನ ಆಸ್ಪತ್ರೆ ಖರ್ಚನ್ನು ಕೊಡು”ಎಂದು ಗಲಾಟೆ ಮಾಡಿದಳು.
ಲೀಲ ಆ ದಿನದ ಕೂಲಿಯೊಂದಿಗೆ ಮನೆಯ ಅಡುಗೆ ಸಾಮಾನುಗಳ ನಡುವೆ ಬಚ್ಹಿಟ್ಟಿದ್ದ ಹಣವನ್ನೂ ಸೇರಿಸಿ “ದೀದಿ, ನನ್ನ ಹತ್ತಿರ ಆರು ನೂರು ರೂಪಾಯಿ ಇದೆ ಅಷ್ಟೆ, ಅದಕ್ಕೆ ಮೇಲೆ ನನ್ನ ಬಳಿ ಒಂದು ಪೈಸಕೂಡ ಇಲ್ಲ, ಇದನ್ನ ಇಟ್ಟುಕೊಳ್ಳಿ.” ಎಂದು ಅವಳ ಬಳಿ ಕೊಟ್ಟಳು.
“ಹೇ ಲೀಲ ಆರು ಸಾವಿರ ಕೇಳಿದರೆ ಆರು ನೂರು ರೂಪಾಯಿ ಕೊಟ್ಟು ನನ್ನ ಬಾಯಿ ಮುಚ್ಚಿಸುತ್ತೀಯ? ನಾವು ಯಾದವರು, ನೀನು ಚಮಾರ್ ಕಿ ಚುಡೆಲ್.”ಎಂದು ಅವಳ ಜುಟ್ಟು ಹಿಡಿದು ಕಿತ್ತಾಡಿ, ಅವಳ ಬಟ್ಟೆ ಹರಿಯುವಂತೆ ಅವಳ ಮೇಲೆ ಹಲ್ಲೆ ಮಾಡಿದಳು.
ಆಗ ತಾನೆ ಕುಡಿದು ಬಂದ ಲೀಲಳ ಗಂಡ, ಇವರ ಜಗಳವನ್ನು ನೋಡಿ ಹೆದರಿ ಮೂಲೆಯಲ್ಲಿ ಕೂತ. ಭಯಗೊಂಡು ಗುಡ್ಡು ಓಡಿ ಹೋಗಿ ಅಕ್ಕ ಪಕ್ಕದವರನ್ನು ಕರೆದಳು, ಮೀನಳ ಗಂಡನೂ ಹೆಂಡತಿಯ ಜೊತೆಗೂಡುವಂತೆ ಮೂಲೆಯಲ್ಲಿದ್ದ ಲೀಲಳ ಗಂಡನ ಕತ್ತು ಹಿಸುಕಲು ತಯಾರಾಗಿದ್ದ.
ಅಷ್ಟರಲ್ಲಿ ಅವರ ನೆಂಟಪಾಂಡು ಬಂದು ಜಗಳ ಬಿಡಿಸಿ ಮೀನ ಮತ್ತು ಮುಕುಂದನನ್ನು ಮನೆಗೆ ಕರೆದೊಯ್ದ.
ಈಗ ಜಗಳ ಪಾಂಡು ಮೇಲೆ ತಿರುಗಿತು. ಮೀನ ಕೇಳಿದಳು, “ನೀನು ನಮ್ಮ ಯಾದವಕುಲದವನು ತಾನೆ? ಮತ್ತೇಕೆ ಆ ದಲಿತ ಚಾಮರ್ ಪರ ವಹಿಸಿದ್ದೀಯ?”
ಬಿಜೊಯ್ ಅಂದುಕೊಂಡ, ‘ವಾವ್!ನನ್ನ ಒಂದು ಮಾತಿನಿಂದ ಎಷ್ಟು ಜನಕ್ಕೆ ಏಟುಬಿತ್ತು ಎಷ್ಟು ಜಗಳ!’
ಚುಟ್ಕಿ ಬಿಜೊಯ್ ಜೊತೆ ಆಡುವುದಕ್ಕೆ ಹೆದರುತ್ತಿದ್ದಳು, ಆದರೂ ಅವಳನ್ನು ನೋಡಿದಾಗೆಲ್ಲ,“ಇರು ಅಮ್ಮನ ಹತ್ತಿರ ಹೇಳ್ಕೊಡುತ್ತೀನಿ,” ಎನ್ನುತ್ತಿದ್ದ. ಸುಳ್ಳು ಅವನಿಗೆ ಮೋಜಿನ ಸಂಗತಿಯಾಯಿತು. ಅವನನ್ನು ಯಾರಾದರೂ ದೂಡಿದರೋ ಇಲ್ಲವೋ, ಯಾರಿಗೂ ಗೊತ್ತಿಲ್ಲ. ಈ ವಿಷಯ ಜಾತಿ ಮತದ ವರೆಗೂ ಹೋಯಿತು.
ಮೀನ ಮನೆಯವರಿಂದ ಮತ್ತೆ ಮತ್ತೆ ಲೀಲಗೆ ಬೆದರಿಕೆ ಜಗಳ ಆಗುತ್ತಿತ್ತು, ಆದ್ದರಿಂದ ಅವರು, ಮನೆ ಬದಲಿಸಿಕೊಂಡು ದೂರ ಹೋಗಲು ತಯಾರಾದರು. ಸತ್ಯ ಎಲ್ಲೋ ಕಳೆದುಹೋಗಿತ್ತು.
(ಲೇಖಕಿ ವಿಶೇಷ ಮಕ್ಕಳ ಶಿಕ್ಷಣ ತಜ್ಞೆ-21ನೇ ಕ್ರೋಮೋಸೋಮ್ ಮತ್ತು ಇತರ ಕಥನಗಳು, ಸುಬ್ಬರಾಯನ ಕುಂಟೆ ಮತ್ತು ಅಂಟಿ ಅಂಟದ ನಂಟು ಇವರ ಪ್ರಕಟಿತ ಕೃತಿಗಳು)
ಇದನ್ನೂ ನೋಡಿ: ಡಾ. ಬಂಜಗೆರೆಯವರ ಸಾಂಸ್ಕೃತಿಕ ಅಧ್ಯಯನದಲ್ಲಿ ಜನರ ದನಿ ಕಾಣುತ್ತದೆ – ಡಾ. ರವಿಕುಮಾರ್ ಬಾಗಿ Janashakthi Media