ಬೆಂಗಳೂರು: ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ ಮಾಡಿ ಆಟೋರಿಕ್ಷಾ ಸೇವೆ ನೀಡುತ್ತಿದ್ದ ಆಯಪ್ ಆದಾರಿತ ಓಲಾ, ಉಬರ್ ಟ್ಯಾಕ್ಸಿ ಸಂಸ್ಥೆಗಳಿಗೆ ಸಾರಿಗೆ ಇಲಾಖೆ ಶಾಕ್ ನೀಡಿದೆ.
ಈ ಕುರಿತು ಪ್ರಯಾಣಿಕರಿಂದ ಸಾಕಷ್ಟು ದೂರು ದಾಖಲಾದ ಹಿನ್ನಲೆಯಲ್ಲಿ ಸಾರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ. ಈ ಕುರಿತು ವಿವರಣೆ ಕೋರಿ ಗುರುವಾರ ನೋಟಿಸ್ ನೀಡಲಾಗಿದೆ ಎಂದು ಸಾರಿಗೆ ಆಯುಕ್ತ ಟಿಎಚ್‌ಎಂ ಕುಮಾರ್ ತಿಳಿಸಿದ್ದಾರೆ. “ಅಗ್ರಿಗೇಟರ್‌ಗಳು ಅತಿಯಾದ ದರವನ್ನು ವಿಧಿಸುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ದೂರುಗಳ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ, ಅಗ್ರಿಗೇಟರ್‌ಗಳ ನಿಯಮಗಳ ವಿಷಯವು ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದೆ. ಆದರೆ, ಪರಿಸ್ಥಿತಿಯ ಲಾಭ ಪಡೆದು ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದ್ದಾರೆ. ಇಲ್ಲಿ ಚಾಲಕರ ತಪ್ಪಿಲ್ಲ. ನಿಯಮ ಉಲ್ಲಂಘಿಸಿ ಶುಲ್ಕ ವಸೂಲಿ ಮಾಡುತ್ತಿರುವುದರಿಂದ ಅಗ್ರಿಗೇಟರ್ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ’ ಎಂದು ಆಯುಕ್ತರು ತಿಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಆಟೋ ಸಂಚಾರಕ್ಕೆ ಕನಿಷ್ಟ ದರ 30 ರೂ. ನಿಗದಿಪಡಿಸಲಾಗಿದ್ದರೂ ಆ್ಯಪ್ ಆಧಾರಿತ ಅಗ್ರಿಗೆಟರ್ಗಳು ಕನಿಷ್ಠ ದರವಾಗಿ 100 ರೂಪಾಯಿಯನ್ನು ಪ್ರಯಾಣಿಕರಿಂದ ವಸೂಲು ಮಾಡುತ್ತಿರುವುದಕ್ಕೆ ಸಾರಿಗೆ ಇಲಾಖೆ ಆಕ್ಷೇಪ ವ್ಯಕ್ತಪಡಿಸಿ ಓಲಾ, ಉಬರ್ ಟ್ಯಾಕ್ಸಿ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದೆ.