ಚಾಮರಾಜನಗರ: ನಗರದ ಸತ್ತಿ ರಸ್ತೆಯಲ್ಲಿರುವ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ತಡೆ (ಸಿಇಎನ್) ಪೊಲೀಸ್ ಠಾಣೆಯ ಆವರಣದಲ್ಲಿ ನಿಲ್ಲಿಸಿದ್ದ ಬೈಕನ್ನು ಕಳ್ಳರು ಕದ್ದೊಯ್ದ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಸತ್ತಿ ರಸ್ತೆಯಲ್ಲಿರುವ ಸೆನ್ ಪೊಲೀಸ್ ಠಾಣೆಯ ಆವರಣದಲ್ಲಿ ನಿಲ್ಲಿಸಿದ್ದ ಬೈಕ್ ಕಳವಾಗಿದ್ದು, ನೆನ್ನೆ ಭಾನುವಾರ ಈ ಘಟನೆಯು ಬೆಳಕಿಗೆ ಬಂದಿದೆ. ಈ ಬಗ್ಗೆ ಠಾಣೆಯ ಪೊಲೀಸ್ ಸಿಬ್ಬಂದಿ ಶಿವಕುಮಾರ್ ಪಟ್ಟಣ ಪೊಲೀಸ್ ಠಾಣೆಗೆ ಅಂದೇ ದೂರು ನೀಡಿದ್ದರು.
ಇದನ್ನೂ ಓದಿ: ದೆಹಲಿ ವಿಧಾನಸಭಾ ಚುನಾವಣೆ: ಎಎಪಿ ಗೆಲುವಿಗೆ ಕಾಂಗ್ರೆಸ್ ಅಡ್ಡಿ
ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ ಪೊಲೀಸರು, ಠಾಣೆಯ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಶನಿವಾರ ಮಂಜಾನೆ 1:20ರ ಸುಮಾರಿಗೆ ಇಬ್ಬರು ಠಾಣೆಯ ಕಾಂಪೌಂಡ್ ನಿಂದು ಜಿಗಿದು ಠಾಣೆಯ ಆವರಣಕ್ಕೆ ನುಗ್ಗಿರುವುದು ಕಂಡುಬಂದಿದೆ. ಸುಮಾರು ಅರ್ಧ ತಾಸು ಅಲ್ಲೇ ಇದ್ದು, ಬಳಿಕ ಕಾಂಪೌಂಡ್ ಹಾರಿ ಹೊರಗಡೆ ಹೋದ ಕಳ್ಳರು, ಗೇಟ್ ಬೀಗವನ್ನು ರಾಡಿನಿಂದ ಮುರಿದು ಒಳ ಬಂದಿದ್ದಾರೆ. ಬಳಿಕ ಠಾಣೆಯ ಶೆಡ್ ನಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದನ್ನು ಕಳ್ಳತನ ಮಾಡಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸಿಸಿಟಿವಿ ಕ್ಯಾಮರಾದ ದೃಶ್ಯಾವಳಿಯನ್ನು ಆಧರಿಸಿ ಆರೋಪಿಗಳಾದ ಇರ್ಫಾನ್ ಚೋಟು ಹಾಗೂ ಅರ್ಫಾಝ್ ಖಾನ್ ಎಂಬವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಅವರಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇದನ್ನೂ ನೋಡಿ: ಜಸ್ಟೀಸ್ ನಾಗಮೋಹನ್ ದಾಸ್ ಸಮಿತಿJanashakthi Media