ಬೀದರ್: ‘ಶಿಕ್ಷಕರು ಇಲ್ಲಿ ನಮ್ಮನ್ನು ಅಸಹ್ಯವಾಗಿ ನೋಡ್ತಾರೆ, ಅಂಗಾಗಗಳನ್ನು ಮುಟ್ಟುತ್ತಾರೆ. ವಿರೋಧಿಸಿದ್ರೆ ಹಾಲ್ ಟಿಕೆಟ್ ಕೊಡೋಲ್ಲ ಎಂದು ಹೆದರಿಸ್ತಾರೆ. ಹಿಂಗಾಗಿ ಹೆದರಿ ಸುಮ್ಮನಿದ್ದೇವಿ. ಅವರು ಕೊಡ್ತಿರೋ ಟಾರ್ಚರ್‌ಗೆ ಸತ್ತೋಗಬೇಕು ಅನಿಸುತ್ತೆ, ಆದರೆ, ಅಪ್ಪ, ಅಮ್ಮ, ಕುಟುಂಬದವರು ನೆನಪಾಗಿ ಸುಮ್ಮನಾಗ್ತಿವಿ. ಇಲ್ಲಿನ ಸರ್‌ಗಳನ್ನು ತೆಗೆದುಹಾಕಿ ಪುಣ್ಯ ಕಟ್ಟೋಳ್ಳಿ. ಈ ನರಕದಿಂದ ನಮ್ಮನ್ನು ಪಾರು ಮಾಡ್ರಿ’ ಎಂದು ವಿದ್ಯಾರ್ಥಿನಿಯರು ಸಚಿವರ ಬಳಿ ಅಂಗಲಾಚಿದ್ದಾರೆ. ಶಿಕ್ಷಕರು
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತವರು ಕ್ಷೇತ್ರ ಭಾಲ್ಕಿ ತಾಲೂಕಿನ ಕೋನಮೇಳ ಕುಂದಾ ಮೊರಾರ್ಜಿ ವಸತಿ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯರು ತಮ್ಮ ಅಳಲನ್ನು ಸಚಿವರ ಮುಂದೆ ತೋಡಿಕೊಂಡಿದ್ದಾರೆ. ವಸತಿ ಶಾಲೆಯಲ್ಲಿ ನಡೆಯುತ್ತಿರುವ ದೌರ್ಜನ್ಯದ ಕುರಿತು ಖಾಸಗಿ ಮಾಧ್ಯಮವೊಂದು ಬಿತ್ತರ ಮಾಡಿದ ಕೂಡಲೇ ಸಚಿವರು ಸೋಮವಾರ ಶಾಲೆಗೆ ಭೇಟಿ ನೀಡಿದ್ದಾರೆ. ವಸತಿ ಶಾಲೆಯ ಪ್ರಿನ್ಸಿಪಾಲ್, ವಾರ್ಡನ್, ಹಿಂದಿ, ಕನ್ನಡ, ಇಂಗ್ಲೀಷ್ ಭಾಷಾ ಶಿಕ್ಷಕರ ದೌರ್ಜನ್ಯದ ಕುರಿತು ಮಾಧ್ಯಮದೆದುರು ವಿದ್ಯಾರ್ಥಿನಿಯರು ಹೇಳಿದ್ದಾರೆ. ಸರಿಯಾಗಿ ಊಟ ನೀಡಲ್ಲ. ಶುದ್ಧ ಕುಡಿಯುವ ನೀರು ಕೊಡಲ್ಲ. ಅಶುದ್ಧ ನೀರು ಕುಡಿದು ಚರ್ಮರೋಗ ಉಂಟಾಗಿದೆ. ಔಷಧಿ ಕೇಳಿದರೆ ಡೇಟ್ ಮುಗಿದ ಔಷಧಿ ನೀಡುತ್ತಾರೆ ಎಂದು ಮಾಧ್ಯಮದೆದುರು ವಿದ್ಯಾರ್ಥಿನಿಯರು ಹೇಳಿದ್ದಾರೆ.
ಇದನ್ನೂ ಓದಿ: ಸೀತಾರಾಂ ಯೆಚೂರಿ ಸ್ಥಿತಿ ಗಂಭೀರ : ಏಮ್ಸ್‌ನಲ್ಲಿ ಚಿಕಿತ್ಸೆ – ಸಿಪಿಐ(ಎಂ)
ಸಚಿವರು ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಎಲ್ಲಾ ವಿದ್ಯಾರ್ಥಿಗಳನ್ನು ಖುದ್ದಾಗಿ ಭೇಟಿ ನೀಡಿದ್ದೇನೆ. ವೈಯಕ್ತಿಕವಾಗಿ ವಿಚಾರಿಸಿದ್ದು, ಊಟ, ವಸತಿ, ಶಿಕ್ಷಣದ ಕುರಿತು ಸಕಾರಾತ್ಮಕ ಉತ್ತರ ನೀಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಭೇಟಿ ನೀಡಲು ತಿಳಿಸುತ್ತೇನೆ. ಅವ್ಯವಸ್ಥೆ ಏನಾದರೂ ಕಂಡು ಬಂದರೆ ಕ್ರಮ ಕೈಗೊಳ್ಳಲು ತಿಳಿಸುತ್ತೇನೆ ಎಂದು ಹೇಳಿದರು.
ಮೊರಾರ್ಜಿ ವಸತಿ ಶಾಲೆಯಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿವೆ. ಕೋಲಾರದಲ್ಲಿ ಮೊರಾರ್ಜಿ ವಸತಿ ಶಾಲೆಯಲ್ಲಿ ಶಿಕ್ಷಕನೊಬ್ಬ ತನ್ನ ಫೋನ್‌ನಲ್ಲಿ 5000ಕ್ಕೂ ಹೆಚ್ಚು ಅಶ್ಳಿಲ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡಿದ್ದ, ಈ ಘಟನೆ ಕುರಿತು ಕೋರ್ಟ್‌ನಲ್ಲಿ ಚರ್ಚೆ ನಡೆಯುತ್ತಿದೆ. ಹಾಗಾಗಿ ವಸತಿ ಶಾಲೆಗಳ ಮಂಡಳಿ ವಸತಿ ಶಾಲೆಗಳಿಗೆ ಭದ್ರತೆ, ಸಂರಕ್ಷಣೆ ನೀಡಬೇಕಿದೆ.
ಇದನ್ನೂ ನೋಡಿ: ಬೀದರ್: 19 ವರ್ಷದ ಯುವತಿಯ ಮೇಲೆ ಅತ್ಯಾಚಾರ, ಕೊಲೆ