ಪ್ರಕಾಶ ಕಾರಟ್
ಆಗಸ್ಟ್ 26-27ರಂದು ದಿಲ್ಲಿಯ ಸಿಂಘು ಗಡಿಯಲ್ಲಿ ನಡೆದ ರಾಷ್ಟ್ರೀಯ ಸಮಾವೇಶದ ಕರೆಯ ಮೇರೆಗೆ ನಡೆದ ಮುಝಫ್ಫರ್‌ನಗರ ರ‍್ಯಾಲಿ ರೈತರ ಐಕ್ಯತೆಯ ಮತ್ತು ಕೋಮು ಸಾಮರಸ್ಯದ ಪ್ರದರ್ಶನ ನೀಡಿದೆ, ಜನಗಳು ಕೋಮುವಾದಿ ವಿಭಜನೆಗೆ ಬಲಿಯಾಗುವುದಿಲ್ಲ ಎಂದು ಸಾರಿದೆ. ಎರಡು ದಿನಗಳ ನಂತರ ಹರ‍್ಯಾಣದಲ್ಲಿ ನಡೆದಿರುವ ಘಟನೆಗಳಿಂದ ರೈತ ಆಂದೋಲನ ಈಗಲೂ ತನ್ನ ಚೈತನ್ಯವನ್ನು ಕಾಪಾಡಿಕೊಂಡಿದೆ, ತನ್ನ ಹಿತಾಸಕ್ತಿಗಳನ್ನು ಸಮರಶೀಲವಾಗಿ ರಕ್ಷಿಸಿಕೊಳ್ಳುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕೆಂಬ ರೈತರ ಆಗ್ರಹ ಈಗ ಮೋದಿ ಸರಕಾರದ ವಿರುದ್ಧ ವಿಶಾಲ ವೇದಿಕೆಯ ಭಾಗವಾಗಿ ಬಿಟ್ಟಿದೆ. ಸೆಪ್ಟೆಂಬರ್ 27ರ ಭಾರತ್ ಬಂದ್ ಕರೆಯನ್ನು ಯಶಸ್ವಿಗೊಳಿಸಲು ವ್ಯಾಪಕವಾದ ಅಣಿನೆರಿಕೆಗೆ ರಂಗ ಸಿದ್ಧಗೊಂಡಿದೆ.
ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ಸಂಘಟಿಸಿದ ಸೆಪ್ಟೆಂಬರ್ 5ರ ಮುಝಫ್ಫರ್‌ನಗರ ಮಹಾಪಂಚಾಯತ್ ದೇಶದ ರೈತ ಆಂದೋಲನದ ಇತಿಹಾಸದ ಪುಟಗಳಲ್ಲಿ ಒಂದು ಮೈಲಿಗಲ್ಲಾಗಿ ದಾಖಲಾಗಲಿದೆ. ಉತ್ತರಪ್ರದೇಶ, ಹರ‍್ಯಾಣ, ಪಂಜಾಬಿನಿಂದ ಲಕ್ಷಾಂತರ ರೈತರು, ಜತೆಗೆ ಬೇರೆ ಹಲವು ರಾಜ್ಯಗಳ ರೈತರ ತಂಡಗಳು ಇದರಲ್ಲಿ ಭಾಗವಹಿಸಿದರು.
ಇದನ್ನು ಓದಿ: ಸಂಯುಕ್ತ ಕಿಸಾನ್ ಮೋರ್ಚಾ ಕರೆ: ಸೆಪ್ಟೆಂಬರ್ 25ರಂದು ಭಾರತ್ ಬಂದ್
ಈ ಮಹಾಪಂಚಾಯತ್‌ಗೆ ಆಗಸ್ಟ್ 26-27ರಂದು ದಿಲ್ಲಿಯ ಸಿಂಘು ಗಡಿಯಲ್ಲಿ ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ಕರೆ ನೀಡಲಾಯಿತು. ಅದು ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಸರಕಾರಗಳನ್ನು ಕೆಳಗಿಳಿಸುವ ಅಭಿಯಾನದ ಆರಂಭ ಎಂದು ಹೇಳಲಾಯಿತು. ಆ ಸಮಾವೇಶ ಸೆಪ್ಟಂಬರ್ 25 ರಂದು ‘ಭಾರತ ಬಂದ್’ಗೆ ಕರೆಯನ್ನೂ ಕೊಟ್ಟಿತು (ನಂತರ ಇದನ್ನು ಸೆಪ್ಟೆಂಬರ್ 27ಕ್ಕೆ ಬದಲಾಯಿಸಲಾಗಿದೆ).
ರಾಷ್ಟ್ರೀಯ ಸಮಾವೇಶದಲ್ಲಿ ಅಂಗೀಕರಿಸಲಾದ ಠರಾವುಗಳು ಈ ಒಂಭತ್ತು ತಿಂಗಳು ನಡೆದಿರುವ ರೈತ ಆಂದೋಲನದ ದಿಗಂತ ವ್ಯಾಪಕಗೊಂಡಿರುವುದನ್ನು ತೋರಿಸುತ್ತವೆ. ಮೂರು ಕೃಷಿ ಕಾಯ್ದೆಗಳ ರದ್ದತಿ, ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆಯ ವಾಪಸಾತಿ ಮತ್ತು ಸಿ2+50% ಸೂತ್ರದಂತೆ ಕನಿಷ್ಟ ಬೆಂಬಲ ಬೆಲೆಯ ಖಾತ್ರಿ ಈಗಲೂ ಕೇಂದ್ರ ಆಗ್ರಹಗಳಾಗಿದ್ದರೂ, ರೈತ ಆಂದೋಲನ ಹೆಚ್ಚು ಸಮಗ್ರವಾದ ಒಂದು ಕಣ್ಣೋಟವನ್ನು ಅಂಗೀಕರಿಸಿದೆ-ಅದು ದುಡಿಯುವ ಜನಗಳ ಇತರ ವಿಭಾಗಗಳನ್ನು-ಕಾರ್ಮಿಕ ವರ್ಗ, ಕೃಷಿ ಕೂಲಿಕಾರರು, ಗ್ರಾಮೀಣ ಕಾರ್ಮಿಕರು ಮತ್ತು ಆದಿವಾಸಿಗಳನ್ನು ಒಳಗೊಂಡಿದೆ. ಇದು ನಾಲ್ಕು ಕಾರ್ಮಿಕ ಸಂಹಿತೆಗಳ ರದ್ಧತಿ, ಮನರೇಗಾದ ಅಡಿಯಲ್ಲಿ ಕೂಲಿಗಳ ವಿಸ್ತರಣೆ, ಅರಣ್ಯ ಹಕ್ಕುಗಳ ಕಾಯ್ದೆಯ ಅನುಷ್ಠಾನ, ಮಹಿಳೆಯರ ಮೇಲೆ ಅತ್ಯಾಚಾರಗಳ ವಿರುದ್ಧ ಮತ್ತು ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ಸರಕುಗಳ ಬೆಲೆಯೇರಿಕೆಗಳಿಗೆ ತಡೆ ಮುಂತಾದ ಠರಾವುಗಳಲ್ಲಿ ಬಿಂಬಿತವಾಗಿದೆ.
ಮುಝಫ್ಫರ್‌ನಗರ ರ‍್ಯಾಲಿ ಅದರಲ್ಲಿ ಜನ ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿದರು ಎಂಬ ಕಾರಣಕ್ಕಷ್ಟೇ ಗಮನಾರ್ಹವಾಗಿಲ್ಲ. ಅದರಲ್ಲಿ ಇನ್ನೊಂದು ರಾಜಕೀಯ ಮಹತ್ವವೂ ಇತ್ತು. ಎಂಟು ವರ್ಷಗಳ ಹಿಂದೆ, 2013ರಲ್ಲಿ, ಮುಝಫ್ಫರ್‌ನಗರ ಜಿಲ್ಲೆಯನ್ನು ಕೋಮುವಾದಿ ಹಿಂಸಾಚಾರ ಆವರಿಸಿತ್ತು. ಅದರಲ್ಲಿ 80ಕ್ಕೂ ಹೆಚ್ಚು ಮಂದಿ ಪ್ರಾಣ ಕಳಕೊಂಡರು, ಹಲವಾರು ಮಹಿಳೆಯರ ಮಾನಭಂಗವಾಯಿತು ಮತ್ತು ನೂರಾರು ಮನೆಗಳು ಧ್ವಂಸಗೊಂಡವು. ಇದು ಉಂಟು ಮಾಡಿದ ಕೋಮು ವಿಭಜನೆ, ಮುಖ್ಯವಾಗಿ ಪ್ರಬಲ ರೈತ ಸಮುದಾಯವಾದ ಜಾಟರು ಮತ್ತು ಮುಸ್ಲಿಮರ ನಡುವಿನ ವಿಭಜನೆಯನ್ನು 2014ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಸಂಪೂರ್ಣವಾಗಿ ಬಳಸಿಕೊಂಡಿತು. ಉತ್ತರಪ್ರದೇಶದ ಪಶ್ಚಿಮ ಭಾಗದಲ್ಲಿ ಬಿಜೆಪಿ ಭಾರೀ ಚುನಾವಣಾ ಗೆಲುವನ್ನು ಪಡೆಯಿತು ಮತ್ತು ಕೋಮು ಧ್ರುವೀಕರಣದ ಪರಿಣಾಮ ಹರ‍್ಯಾಣ ಮತ್ತು ರಾಜಸ್ತಾನದ ಕೆಲವು ಭಾಗಗಳ ಮೇಲೂ ಆಯಿತು.
ಇದನ್ನು ಓದಿ: ರೈತರ ಪ್ರತಿಭಟನೆಗೆ ಮಣಿದ ಸರಕಾರ: ಲಾಠಿ ಚಾರ್ಜ್ಗೆ ಆದೇಶಿಸಿದ್ದ ಐಎಎಸ್ ಅಧಿಕಾರಿಗೆ ಕಡ್ಡಾಯ ರಜೆ – ತನಿಖೆಗೆ ಆದೇಶ
ಆ ಸಮಯದಲ್ಲೂ, ಸೆಪ್ಟೆಂಬರ್ 7, 2013ರಂದು ಮುಝಫ್ಫರ್‌ನಗರದ ಸಮೀಪದ ಸಿಖಾರಾ ಗ್ರಾಮದಲ್ಲಿ ಒಂದು ‘ಮಹಾಪಂಚಾಯತ್’ ನಡೆಯಿತು. ಅದರಲ್ಲಿ ನರೇಶ್ ಟಿಕಾಯ್ತ್ ಮತ್ತು ರಾಕೇಶ್ ಟಿಕಾಯ್ತ್ ರಂತಹ ಖಾಪ್ ಮುಖಂಡರು ಭಾಗವಹಿಸಿದ್ದರು. ಬಿಜೆಪಿ ಶಾಸಕರಾದ ಸಂಗೀತ್ ಸೋಮ್ ಮತ್ತು ಸುರೇಶ ರಾಣಾ ಹಾಗೂ ಸದಾ ದೊಂಬಿಯೆಬ್ಬಿಸುವ ಸಾಧ್ವಿ ಪ್ರಾಚಿ ಮುಸ್ಲಿಮರ ವಿರುದ್ಧ ದ್ವೇಷದ ಬೆಂಕಿ ಹಚ್ಚುವ ಭಾಷಣಗಳನ್ನು ಮಾಡಿದರು, ಇದು ಒಂದು ವ್ಯಾಪಕ ದಳ್ಳುರಿಯನ್ನೇ ಹಬ್ಬಿಸಿತ್ತು.
ಸೆಪ್ಟಂಬರ್ 5, 2021ರ ರೈತ ಮಹಾಪಂಚಾಯತ್ ಈಗ ನಡೆದಿರುವಂತಕ್ಕಿಂತಲೂ ಹೆಚ್ಚು ಭಿನ್ನವಾಗಿರಲು ಸಾಧ್ಯವಿರಲಿಲ್ಲ. ಎಸ್‌ಕೆಎಂನಲ್ಲಿ ಒಬ್ಬ ಪ್ರಮುಖ ನೇತಾರರಾಗಿರುವ ರಾಕೇಶ್ ಟಿಕಾಯ್ತ್ ಜನಗಳು ಕೋಮುವಾದಿ ವಿಭಜನೆಗೆ ಬಲಿಯಾಗುವುದಿಲ್ಲ ಎಂದು ಸಾರಿದರು, “ಅಲ್ಲಾಹು ಅಕ್ಬರ್” ಮತ್ತು “ಹರಹರ ಮಹಾದೇವ್” ಎಂಬ ಘೋಷಣೆಗಳೊಂದಿಗೆ ನೇತೃತ್ವ ನೀಡಿದರು.
ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮರೂ ಇದ್ದ ಈ ರ‍್ಯಾಲಿಯಲ್ಲಿ ಮಾತನಾಡಿದ ಪ್ರತಿಯೊಬ್ಬ ಭಾಷಣಕಾರರೂ ಧರ್ಮದ ಬೇಧಭಾವವಿಲ್ಲದೆ ಐಕ್ಯತೆಯಿಂದಿರಬೇಕು ಮತ್ತು ಉತ್ತರಪ್ರದೇಶದಲ್ಲಿ ಬಿಜೆಪಿಯ ವಿರುದ್ಧ ಐಕ್ಯ ಹೋರಾಟ ನಡೆಸಬೇಕು ಎಂದು ಒತ್ತಿ ಹೇಳಿದರು.
ರೈತರ ಐಕ್ಯತೆಯ ಮತ್ತು ಕೋಮು ಸಾಮರಸ್ಯದ ಈ ಪ್ರದರ್ಶನ ಆದಿತ್ಯನಾಥ ಸರಕಾರ ಮತ್ತು ಬಿಜೆಪಿ-ಆರೆಸ್ಸೆಸ್ ಕೂಟದ ಉನ್ನತ್ತ ಕೋಮುವಾದಿ ಅಜೆಂಡಾಕ್ಕೆ, ಅದು ಮುಸ್ಲಿಮರ ವಿರುದ್ಧ ದ್ವೇಷ ಪ್ರಚಾರದಲ್ಲಿ ಮುಳಗಿರುವುದಕ್ಕೆ, ‘ಲವ್ ಜಿಹಾದ್’ನಂತಹ ಕಾಯ್ದೆಗಳನ್ನು ರೂಪಿಸಿರುವದಕ್ಕೆ ಮತ್ತು ದೈಹಿಕ ಹಲ್ಲೆಗಳಿಗೆ ಮುಸ್ಲಿಮರನ್ನು ಗುರಿಮಾಡಿರುವುದಕ್ಕೆ ಕಣ್ಣಿಗೆ ರಾಚುವಷ್ಟು ತದ್ವಿರುದ್ಧವಾಗಿದೆ. ಮುಝಫ್ಫರ್‌ನಗರದ ರ‍್ಯಾಲಿ ಈ ವಿಭಜನಕಾರೀ ಮತ್ತು ದ್ವೇಷಭರಿತ ರಾಜಕೀಯಕ್ಕೆ ಸವಾಲೊಡ್ಡಿದೆ.
ರೈತ ಆಂದೋಲನ ಈಗಲೂ ತನ್ನ ಚೈತನ್ಯವನ್ನು ಕಾಪಾಡಿಕೊಂಡಿದೆ, ತನ್ನ ಹಿತಾಸಕ್ತಿಗಳನ್ನು ಸಮರಶೀಲವಾಗಿ ರಕ್ಷಿಸಿಕೊಳ್ಳುತ್ತದೆ ಎಂಬುದು ಹರ‍್ಯಾಣದಲ್ಲಿ ನಡೆದಿರುವ ಘಟನೆಗಳಿಂದ ಸ್ಪಷ್ಟವಾಗುತ್ತದೆ. ಈ ಒಂಭತ್ತು ತಿಂಗಳ ಅವಧಿಯಾದ್ಯಂತ ಬಿಜೆಪಿ ರಾಜ್ಯ ಸರಕಾರ ಒಂದು ವೈಷಮ್ಯಪೂರ್ಣ ಮತ್ತು ದಮನಕಾರೀ ನಿಲುವನ್ನು ತಳೆಯುತ್ತ ಬಂದಿದೆ- ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ತಡೆಗಟ್ಟೆಗಳು, ಲಾಠೀ ಪ್ರಹಾರಗಳು ಮತ್ತು ಅಶ್ರುವಾಯು ಪ್ರಯೋಗಗಳಲ್ಲದೆ, 40,000ಕ್ಕೂ ಹೆಚ್ಚು ರೈತರ ಮೇಲೆ ಮೊಕದ್ದಮೆಗಳನ್ನು ಹಾಕಿದೆ. ಕಟ್ಟರ್ ಸರಕಾರ ಈ ಆಂದೋಲನವನ್ನು ದಬಾಯಿಸಲು ವಿವಿಧ ಕಾರ್ಯತಂತ್ರಗಳನ್ನು ಪ್ರಯತ್ನಿಸಿತು, ಆದರೆ ಯಶಸ್ವಿಯಾಗಲಿಲ್ಲ. ಪೊಲೀಸ್ ದಮನದ ಪ್ರತಿಯೊಂದೂ ಕೃತ್ಯವನ್ನು ರೈತರು ಹುಮ್ಮಸ್ಸಿನ ಪ್ರತಿಭಟನೆಗಳೊಂದಿಗೆ ಎದುರಿಸಿದರು.
ಆಗಸ್ಟ್ 28ರಂದು ಕರ್ನಾಲ್‌ನಲ್ಲಿ ರೈತರ ಮೇಲೆ ಲಾಠೀ ಪ್ರಹಾರ ಅಮಾನುಷತೆಯ ಹೊಸ ಎತ್ತರಕ್ಕೇ ಏರಿತು. ಒಬ್ಬ ರೈತ, ಸುಶೀಲ್ ಕಾಜಲ್ ಪೊಲೀಸ್ ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡು ಹೃದಯಾಘಾತದಿಂದ ಸತ್ತಿದ್ದಾರೆ. ಅಲ್ಲಿನ ಎಸ್‌ಡಿಎಂ ಆಗಿದ್ದ ಐಎಎಸ್ ಅಧಿಕಾರಿ ಆಯುಷ್ ಸಿನ್ಹರವರ ಪೊಲೀಸ್ ಬಂದೋಬಸ್ತನ್ನು ಮುರಿಯುವವರ ʻತಲೆ ಒಡೆಯಿರಿ’ ಎಂಬ ಸಂದೇಶ ವೀಡಿಯೋದಲ್ಲಿ ಸೆರೆಯಾದ ಹುರಿದುಂಬಿಕೆ ವ್ಯಾಪಕ ಆಕ್ರೋಶವನ್ನು ಹುಟ್ಟು ಹಾಕಿದೆ. ಮುಝಫ್ಫರ್‌ನಗರದ ರ‍್ಯಾಲಿಯ ಎರಡು ದಿನಗಳ ನಂತರ, ಸಾವಿರಾರು ರೈತರು ಕರ್ನಾಲ್‌ನ ಮಿನಿ ಸಚಿವಾಲಯಕ್ಕೆ ಮುತ್ತಿಗೆ ಹಾಕಿದ್ದಾರೆ, ಆ ಐಎಎಸ್ ಅಧಿಕಾರಿಯನ್ನು ತನಿಖೆ ಮುಗಿಯುವವರೆಗೆ ಅಮಾನತ್ತಿನಲ್ಲಿ ಇಡಬೇಕು, ಅಮಾನುಷ ಲಾಠೀ ಪ್ರಹಾರಕ್ಕೆ ಕಾರಣರಾದ ಪೊಲೀಸ್ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕೆಂಬ ರೈತರ ಆಗ್ರಹ ಈಗ ಮೋದಿ ಸರಕಾರದ ವಿರುದ್ಧ ವಿಶಾಲ ವೇದಿಕೆಯ ಭಾಗವಾಗಿ ಬಿಟ್ಟಿದೆ. 19 ಪ್ರತಿಪಕ್ಷಗಳು ಸೆಪ್ಟಂಬರ್ 20 ರಿಂದ 30ರವರೆಗೆ ನಡೆಸಲು ಕೊಟ್ಟಿರುವ ಪ್ರತಿಭಟನಾ ಕಾರ್ಯಾಚರಣೆಯ ಕರೆಯ ಹೇಳಿಕೆಯಲ್ಲಿ ರೈತರ ಈ ಆಗ್ರಹಗಳು ಅಗ್ರಸ್ಥಾನ ಪಡೆದಿವೆ. ಸೆಪ್ಟೆಂಬರ್ 27ರ ಭಾರತ್ ಬಂದ್ ಕರೆಯನ್ನು ಯಶಸ್ವಿಗೊಳಿಸಲು ವ್ಯಾಪಕವಾದ ಅಣಿನೆರಿಕೆಗೆ ರಂಗ ಸಿದ್ಧಗೊಂಡಿದೆ.