ಎಸ್.ಐ.ಐ. ಮತ್ತು ಭಾರತ್ ಬಯೋಟೆಕ್ ಈ ಎರಡೂ ಸಂಸ್ಥೆಗಳು ಮಂಡಿಸಿರುವ ಪ್ರತಿಯೊಂದು ವಾದವೂ ಅಪ್ರಾಮಾಣಿಕ ವಾದವೇ. ಲಸಿಕೆ ತಯಾರಿಸುವ ಈ ಎರಡೂ ಸಂಸ್ಥೆಗಳು ಕೊರೊನಾ ಬಿಕ್ಕಟ್ಟನ್ನು ಲಾಭದ ಹಪಾಹಪಿಗಾಗಿ ಬಳಸಿಕೊಳ್ಳುತ್ತಿವೆ. ಈ ಅಂಶವು ಕೇಂದ್ರ ಸರ್ಕಾರಕ್ಕೆ ತಿಳಿದಿಲ್ಲವೆಂದರೆ, ಅದು ಸಂಪೂರ್ಣವಾಗಿ ಅಸಮರ್ಥವಾಗಿದೆ ಎಂದಾಗುತ್ತದೆ. ಒಂದು ವೇಳೆ ತಿಳಿದಿದ್ದರೆ, ಈ ವಂಚನೆಯಲ್ಲಿ ಭಾಗಿಯಾಗಿದೆ ಎಂದಾಗುತ್ತದೆ. ಹಾಗಾಗಿ, ಈ ಬಗ್ಗೆ ಒಂದು ತನಿಖೆ ನಡೆಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಮಾಡಬೇಕಾಗಿರುವುದು ಏನು ಎಂಬ ಪ್ರಶ್ನೆ ಎದುರಾಗುತ್ತದೆ. ಈ ಸಂಬಂಧವಾಗಿ, ಧೈರ್ಯದ ಪ್ರಮಾಣದ ಇಳಿಕೆಯ ಕ್ರಮದಲ್ಲಿ ನಾಲ್ಕು ಅನ್ಯ ಮಾರ್ಗಗಳಿವೆ ಎಂದು ಪ್ರೊ. ಪ್ರಭಾತ್ ಪಟ್ನಾಯಕ್ ಅವರು ಲೇಖನ.
ಕಳೆದ ನೂರು ವರ್ಷಗಳಲ್ಲಿ ವಿಶ್ವವು ಕಂಡಿರದ ಭೀಕರ ಆರೋಗ್ಯ ಬಿಕ್ಕಟ್ಟನ್ನು ಭಾರತವೂ ಎದುರಿಸುತ್ತಿದೆ. ಕೋವಿಡ್-19ರ ಎರಡನೆಯ ಅಲೆ ಅಪ್ಪಳಿಸಲು ಆರಂಭವಾದ ಮಾರ್ಚ್ ತಿಂಗಳ ಮೊದಲ ವಾರದಿಂದಲೂ ಸಾಂಕ್ರಾಮಿಕ ಪೀಡಿತರ ಸಂಖ್ಯೆಯು ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಹೊಸ ಪ್ರಕರಣಗಳು ದಿನಕ್ಕೆ ನಾಲ್ಕು ಲಕ್ಷವನ್ನು ದಾಟಿದೆ. ಪಿಡುಗಿನಿಂದ ಸಾಯುತ್ತಿರುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಸಾವಿನ ದೈನಿಕ ಸಂಖ್ಯೆಯು ಈಗ ಸುಮಾರು ನಾಲ್ಕು ಸಾವಿರದ ಆಸುಪಾಸಿನಲ್ಲಿದೆ. ಲಸಿಕೆಗಳು ಸಾವು ನೋವುಗಳನ್ನು ತಗ್ಗಿಸುತ್ತವೆ ಎನ್ನುವ ಭರವಸೆಯೊಂದಿಗೆ ಆರಂಭವಾದ ಲಸಿಕಾ ಕಾರ್ಯಕ್ರಮವು ಆರಂಭಗೊಳ್ಳುತ್ತಿದ್ದಂತೆಯೇ ಹೊಸ ಪ್ರಕರಣಗಳು ಆಸ್ಫೋಟಗೊಳ್ಳುತ್ತಿರುವ ಸನ್ನಿವೇಶದಲ್ಲಿ, ಕೋವಿಡ್-ಲಸಿಕೆ ತಯಾರಕರು ಮೋದಿ ಸರ್ಕಾರದ ಅದಕ್ಷತೆಯನ್ನು ಅಥವಾ ಅದರ ಶಾಮೀಲುತನವನ್ನು (ಈ ಕೃತ್ಯವನ್ನು ನಿಮಗಿಷ್ಟವಾಗುವ ರೀತಿಯಲ್ಲಿ ಬಣ್ಣಿಸಬಹುದು) ಬಳಸಿಕೊಂಡು ಭರ್ಜರಿ ಲಾಭವನ್ನು ಜೇಬಿಗಿಳಿಸಿಕೊಳ್ಳಲು ಹೊರಟಿದ್ದಾರೆ.
ಎರಡು ಸಮಸ್ಯೆಗಳು
ಲಸಿಕೆಗೆ ಸಂಬಂಧಿಸಿದ ಎರಡು ಸಮಸ್ಯೆಗಳನ್ನು ಆರಂಭದಲ್ಲಿಯೇ ಪ್ರತ್ಯೇಕವಾಗಿ ನೋಡಬೇಕಾಗುತ್ತದೆ: ಮೊದಲನೆಯ ಸಮಸ್ಯೆ ಎಂದರೆ, ಗ್ರಾಹಕರು ಪಾವತಿಸಬೇಕಾದ ಕೋವಿಡ್ ಲಸಿಕೆಯ ಬೆಲೆ ಎಷ್ಟಿರಬೇಕು ಎಂಬುದು. ಈ ಬೆಲೆ ಸೊನ್ನೆಯಾಗಿರಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಮೋದಿ ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಡಾ. ಅರವಿಂದ ಸುಬ್ರಮಣ್ಯಂ ಕೂಡ ಈ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದರು.
ಇದನ್ನು ಓದಿ: ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ಅದರ ಖಾಸಗೀಕರಣ
ಎರಡನೆಯ ಸಮಸ್ಯೆಯೆಂದರೆ, ಲಸಿಕೆ ತಯಾರಕರಿಗೆ ಪಾವತಿಸಬೇಕಾದ ಬೆಲೆ ಎಷ್ಟು ಎಂಬುದು. ಮೋಸ ಇರುವುದು ಇಲ್ಲಿಯೇ. ಕೇಂದ್ರ ಸರ್ಕಾರವು ತಮಗೆ ಮಾತ್ರ ಪ್ರತಿ ಡೋಸ್ ಲಸಿಕೆಗೆ 150 ರೂ.ಗಳಂತೆ ಮಾರಾಟ ಮಾಡಬೇಕು, ಉಳಿದವರಿಗೆ ಮಾರುವ ಲಸಿಕೆಯ ದರ ಎಷ್ಟಿರಬೇಕು ಎಂಬುದು ನಿಮಗೆ ಬಿಟ್ಟದ್ದು ಎಂದು ತಯಾರಕರಿಗೆ ಹೇಳಿದೆ. ಹಾಗಾಗಿ, ಹಾಲು ಬೀಳುವಲ್ಲಿ ತುಪ್ಪವೇ ಬಿದ್ದ ಖುಷಿಯಲ್ಲಿರುವ ಲಸಿಕೆ ತಯಾರಕರು, ರಾಜ್ಯ ಸರ್ಕಾರಗಳಿಗೆ ಮತ್ತು ಖಾಸಗಿ ನರ್ಸಿಂಗ್ ಹೋಂಗಳಿಗೆ ಮಾರುವ ಲಸಿಕೆಯ ಬೆಲೆಗಳನ್ನು ದುಬಾರಿ ಮಟ್ಟದಲ್ಲಿ ನಿಗದಿಪಡಿಸಿದ್ದಾರೆ.
ಈ ಬೆಲೆ ನಿಗದಿಯನ್ನು ಅನೇಕ ಆಧಾರ-ರಹಿತ ತರ್ಕಗಳು, ಹೊರಳು ಮಾತುಗಳು ಮತ್ತು ಸುಳ್ಳುಗಳ ಮೂಲಕ ಸಮರ್ಥಿಸಿಕೊಳ್ಳಲಾಗಿದೆ. ಹಾಗಾಗಿ, ವಿಷಯವನ್ನು ಎಲ್ಲಿಂದ ಆರಂಭಿಸಬೇಕೆಂಬುದೇ ತಿಳಿಯದು. ಆಕ್ಸ್‌ಫರ್ಡ್-ಆಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು ಬಳಸಿಕೊಂಡು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ತಯಾರಿಸಿದ ಕೋವಿಶೀಲ್ಡ್ ಬಗ್ಗೆ ಮೊದಲು ನೋಡೋಣ. ಈ ಲಸಿಕೆಯ ಪ್ರತಿ ಡೋಸ್‌ಅನ್ನು ರಾಜ್ಯ ಸರ್ಕಾರಗಳಿಗೆ 400 ರೂ ಗಳಿಗೂ ಮತ್ತು ಖಾಸಗಿ ಖರೀದಿದಾರರಿಗೆ 600 ರೂ ಗಳಿಗೂ ಮಾರುವುದಾಗಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಮಾಲೀಕ ಆದರ್ ಪೂನಾವಾಲಾ ಘೋಷಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಮಾರಾಟ ಮಾಡುವ ದರ ಇನ್ನೂ ಸ್ಪಷ್ಟವಾಗಿಲ್ಲ – 150 ರೂ ಎಂದು ಕೇಂದ್ರ ಹೇಳುತ್ತದೆ; 400 ರೂ ಎಂದು ಎಸ್‌ಐಐ ಹೇಳುತ್ತದೆ. ಈಗ, ಪ್ರತಿ ಡೋಸ್‌ಗೆ ಡಾಲರ್ ಲೆಕ್ಕದಲ್ಲಿ, (ಅಂದರೆ, ಕೋವಿಡ್-19ರ ಎರಡನೆಯ ಅಲೆಯ ಪರಿಣಾಮವಾಗಿ ರೂಪಾಯಿ ಅಪಮೌಲ್ಯಗೊಂಡಿರುವ ಮಟ್ಟದಲ್ಲಿ) 600 ರೂ ಗಳೆಂದರೆ $8, ಮತ್ತು 400 ರೂ ಗಳೆಂದರೆ $5.33 ಆಗುತ್ತದೆ. ಆದರೆ, ಆಸ್ಟ್ರಾಜೆನೆಕಾ ಇದೇ ಲಸಿಕೆಯನ್ನು ಯುರೋಪಿನ ದೇಶಗಳಿಗೆ ಪ್ರತಿ ಡೋಸ್‌ಗೆ $2.18ರಂತೆ ಮಾರುತ್ತದೆ. ಅಮೇರಿಕಾಗೆ ಪ್ರತಿ ಡೋಸ್‌ಗೆ $4.00ರಂತೆ ಮಾರುವ ಅಂದಾಜಿನಲ್ಲಿದೆ. ದಕ್ಷಿಣ ಆಫ್ರಿಕಾಕ್ಕೆ ಪ್ರತಿ ಡೋಸ್‌ಗೆ $5.25ರಂತೆ ರಫ್ತು ಮಾಡುತ್ತದೆ. ಈ ಬೆಲೆಗಳು ಭಾರತದ ಯಾವುದೇ ಖರೀದಿದಾರನಿಗೆ ಮಾರುವುದಕ್ಕಿಂತಲೂ ಕೆಳ ಮಟ್ಟದಲ್ಲಿವೆ. ಅಂದರೆ, ವಾಸ್ತವವಾಗಿ, ಭಾರತವು ಈ ಲಸಿಕೆಯನ್ನು ಕೊಳ್ಳುವ ದರವು ಅತಿ ಹೆಚ್ಚಿನ ಮಟ್ಟದಲ್ಲಿದೆ.
ಟೊಳ್ಳು-ಸುಳ್ಳು ವಾದಗಳು
ಈ ರೀತಿಯ ಬೆಲೆ ನಿಗದಿಗೆ ಎಸ್.ಐ.ಐ. ಕೊಡುವ ಸಮರ್ಥನೆಗಳು ಬದಲಾಗುತ್ತಲೇ ಇವೆ. ಸಾರ್ವತ್ರಿಕ ರೋಗ-ನಿರೋಧಕ ಕಾರ್ಯಕ್ರಮಗಳಿಗೆ ಬಳಸುವ ಲಸಿಕೆಗಳನ್ನು ಸರ್ಕಾರಗಳಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಒಮ್ಮೆ ಹೇಳುತ್ತದೆ. ಆದರೆ, ಖಾಸಗಿ ಖರೀದಿದಾರರಿಗೆ ಮಾರುವ ಲಸಿಕೆಗಳು ದುಬಾರಿಯಾಗಿವೆ. ಇದು ಹೀಗಿರಬೇಕು ಏಕೆ ಎಂಬುದು ಸ್ಪಷ್ಟವಿಲ್ಲ. ಅಂದರೆ, ಖಾಸಗಿ ಆಸ್ಪತ್ರೆಗಳು ಲಸಿಕೆಯನ್ನು ಖರೀದಿಸುವ ಬದಲು, ಸರ್ಕಾರವೇ ಇಡೀ ದಾಸ್ತಾನನ್ನು ಖರೀದಿಸಿ ಖಾಸಗಿ ಆಸ್ಪತ್ರೆಗಳಿಗೆ ವಿತರಿಸಿದರೆ, ಲಸಿಕೆಯ ಬೆಲೆ ಕಡಿಮೆಯಾಗುತ್ತದೆ ಎಂಬುದನ್ನು ಸೂಚ್ಯವಾಗಿ ಒಪ್ಪಿಕೊಂಡಂತಾಗುತ್ತದೆ. ಮೇಲಾಗಿ, ಬೇರೆ ಯಾವ ದೇಶದಲ್ಲೂ ಖಾಸಗಿ ಆಸ್ಪತ್ರೆಗಳು ಕೋವಿಡ್-19 ಲಸಿಕೆಗಳನ್ನು ಖರೀದಿಸುವಂತಿಲ್ಲ. ಆದ್ದರಿಂದ, ಲಸಿಕೆಗಳ ಖಾಸಗಿ ಮಾರಾಟಕ್ಕೆ ಅನುಮತಿಸಿರುವುದರಿಂದಾಗಿಯೇ ಖಾಸಗಿ ಆಸ್ಪತ್ರೆಗಳು ಹೆಚ್ಚಿನ ಶುಲ್ಕ ವಿಧಿಸಲು ಮೋದಿ ಸರ್ಕಾರವು ಕಾರಣವಾಗಿದೆ. ಹಾಗಾಗಿ, ಲಸಿಕೆಯ ಬೆಲೆಗಳನ್ನು ತಯಾರಕರು ತಮ್ಮ ಮನಸ್ಸಿಗೆ ಬಂದಂತೆ ನಿಗದಿಪಡಿಸಿದ್ದಾರೆ ಮತ್ತು ಲಸಿಕೆ ತಯಾರಿಕೆಗೆ ತಗುಲಿದ ವೆಚ್ಚಗಳಿಗೂ ಮತ್ತು ನಿಗದಿಪಡಿಸಿದ ಬೆಲೆಗಳಿಗೂ ಅಜ ಗಜಾಂತರವಿದೆ ಎಂಬುದೂ ಸಹ ಸ್ಪಷ್ಟವಾಗುತ್ತದೆ.
ಇದನ್ನು ಓದಿ: ದೇಶದಲ್ಲಿ ಕೋವಿಡ್‌ಗಿಂತ ಭೀಕರ ಮತ್ತು ಗಂಭೀರ ಪರಿಸ್ಥಿತಿ
ಕೋವಿಡ್-19 ಪಿಡುಗಿನ ಬಿಕ್ಕಟ್ಟನ್ನು ನಿಭಾಯಿಸಲು ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸುವ ಸಲುವಾಗಿ ಲಸಿಕೆಯನ್ನು ಹೆಚ್ಚಿನ ದರದಲ್ಲಿ ಮಾರುವ ಮೂಲಕ ಸಂಪನ್ಮೂಲಗಳನ್ನು ಒದಗಿಸಿಕೊಳ್ಳಬೇಕಾಗುತ್ತದೆ ಎಂದು ಇನ್ನೊಮ್ಮೆ ಹೇಳುತ್ತದೆ. ಇದೂ ಸಹ ಟೊಳ್ಳು ವಾದವೇ. ಏಕೆಂದರೆ, ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ಕೇವಲ ವಿಸ್ತರಿಸುವ ಸಲುವಾಗಿಯೇ ಕೇಂದ್ರ ಸರ್ಕಾರವು 3,000 ಕೋಟಿ ರೂ.ಗಳನ್ನು ಎಸ್‌ಐಐಗೆ ಕೊಟ್ಟಿದೆ ಮತ್ತು ಎಸ್‌ಐಐ ಅದನ್ನು ಸ್ವೀಕರಿಸಿದೆ ಕೂಡ. ಆದ್ದರಿಂದ, ಲಸಿಕೆಯ ಬೆಲೆ ಏರಿಸಿ ಸಂಪನ್ಮೂಲವನ್ನು ಕ್ರೋಢೀಕರಿಸಿಕೊಳ್ಳುವ ಅಗತ್ಯವಿಲ್ಲ. ಅಲ್ಲದೆ, ಈ ಯಾವುದೇ ವಾದವೂ ಸಹ, ಭಾರತದಲ್ಲಿ ಮಾರುವ ಲಸಿಕೆಯ ದರವು ರಫ್ತಿಗಿಂತಲೂ ಹೆಚ್ಚಾಗಿದೆ ಏಕೆ ಎಂಬುದನ್ನು ವಿವರಿಸುವುದಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ಎಲ್ಲ ವಾದಗಳೂ, ಉರಿಯುತ್ತಿರುವ ಮನೆಯಲ್ಲಿ ಹಿರಿದದ್ದೇ ಲಾಭ ಎನ್ನುವಂತೆ, ಸಾಂಕ್ರಾಮಿಕ ಪರಿಸ್ಥಿತಿಯ ಲಾಭ ಪಡೆಯುವುದನ್ನು ಮುಚ್ಚಿಹಾಕಲು ಮಂಡಿಸುವ ಸುಳ್ಳು ವಾದಗಳೇ.
ದುಪ್ಪಟ್ಟು ದುರಾಸೆ
ಭಾರತದಲ್ಲೇ ಅಭಿವೃದ್ಧಿಪಡಿಸಿದ ಕೊವಾಕ್ಸಿನ್ ಲಸಿಕೆಯ ಉತ್ಪಾದಕ ಭಾರತ್ ಬಯೋಟೆಕ್‌ನ ದುರಾಸೆ, ಸುಲಿಗೆಯ ಸ್ವಭಾವಗಳಿಗೆ ಹೋಲಿಸಿದರೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಏನೇನೂ ಅಲ್ಲ. ತನ್ನ ಉತ್ಪಾದನೆಯ ಅರ್ಧದಷ್ಟನ್ನು ಕೇಂದ್ರ ಸರ್ಕಾರಕ್ಕೆ ಪೂರೈಸುವ ಭಾರತ್ ಬಯೋಟೆಕ್, ಲಸಿಕೆಯ ಪ್ರತಿ ಡೋಸ್‌ಗೆ 150 ರೂ ಬೆಲೆ ನಿಗದಿಪಡಿಸಿದೆ. ಉಳಿದ ಅರ್ಧವನ್ನು ರಾಜ್ಯ ಸರ್ಕಾರಗಳಿಗೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಪೂರೈಸುವ ಲಸಿಕೆಯ ದರವನ್ನು ಪ್ರತಿ ಡೋಸ್‌ಗೆ ಅನುಕ್ರಮವಾಗಿ 600 ರೂ ಮತ್ತು 1,200 ರೂ ಎಂದು ನಿಗದಿಪಡಿಸಿದೆ. ಕೇಂದ್ರ ಸರ್ಕಾರಕ್ಕೆ ಪೂರೈಸುವ ಪ್ರತಿ ಡೋಸ್‌ಗೆ ಲಸಿಕೆಯ ದರವನ್ನು 150 ರೂ ಗಳಿಗೆ ನಿಗದಿಪಡಿಸಿರುವಾಗ, ಅದರ ನಾಲ್ಕು ಪಟ್ಟು ಹೆಚ್ಚು (600ರೂ) ದರವನ್ನು ರಾಜ್ಯ ಸರ್ಕಾರಗಳಿಗೆ ನಿಗದಿಪಡಿಸಿರುವುದು ಏಕೆ ಎಂಬ ಪ್ರಶ್ನೆ ಮತ್ತು ಅಗತ್ಯ ಪ್ರಮಾಣದ ಲಸಿಕೆಗಳನ್ನು ಪಡೆಯಲು ರಾಜ್ಯ ಸರ್ಕಾರಗಳು ಖಾಸಗಿ ಆಸ್ಪತ್ರೆಗಳೊಂದಿಗೆ ಸ್ಪರ್ಧಿಸಬೇಕು ಏಕೆ ಎಂಬ ಪ್ರಶ್ನೆ ನಿಗೂಢವಾಗಿವೆ. ಕೇಂದ್ರ ಸರ್ಕಾರಕ್ಕೆ ಕಡಿಮೆ ದರದಲ್ಲಿ ಮಾರಿದ ನಷ್ಟವನ್ನು ಸರಿದೂಗಿಸಿಕೊಳ್ಳಲು (ಕ್ರಾಸ್-ಸಬ್ಸಿಡಿ) ರಾಜ್ಯಗಳಿಗೆ ಹೆಚ್ಚು ದರವನ್ನು ನಿಗದಿಪಡಿಸಲಾಗಿದೆ ಎಂಬುದು ಅರ್ಥವಿಲ್ಲದ ಮಾತು. ಏಕೆಂದರೆ, ಸರ್ಕಾರದ ಈ ಎರಡೂ ಸ್ತರಗಳ ಸೇವೆಗಳು ಸಲ್ಲುವುದು ಅದೇ ಜನರಿಗೇ. ಅದೇನೇ ಇರಲಿ, ನಾನು ಈಗ ಕೇವಲ ಒಂದು ಅಂಶವನ್ನು ಮಾತ್ರ ಇಲ್ಲಿ ತೆಗೆದುಕೊಳ್ಳುತ್ತೇನೆ: ಎಸ್‌ಐಐ ಘೋಷಿಸಿರುವ ಕೋವಿಶೀಲ್ಡ್ ಲಸಿಕೆಯ ದುಬಾರಿ ದರಗಳಿಗೆ ಹೋಲಿಸಿದರೆ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಯ ದರಗಳು ಇನ್ನೂ ಹೆಚ್ಚಾಗಿವೆ ಏಕೆ?
ಇದನ್ನು ಓದಿ: ಆಳುವ ಯೋಗ್ಯತೆ ಇಲ್ಲದಿದ್ದರೆ ಹೊರಟುಬಿಡಿ ಪ್ಲೀಸ್…
ಈ ಪ್ರಶ್ನೆಗೆ ಭಾರತ್ ಬಯೋಟೆಕ್ ಕೊಟ್ಟಿರುವ ಉತ್ತರಗಳು ಎಷ್ಟು ಹಾಸ್ಯಾಸ್ಪದವಾಗಿವೆಯೋ ಅಷ್ಟೇ ಅಸಂಬದ್ಧವಾಗಿಯೂ ಇವೆ ಮತ್ತು ಬದಲಾಗುತ್ತಲೂ ಇವೆ. ಮೊದಲನೆಯ ಉತ್ತರವೆಂದರೆ, ಕೊವಾಕ್ಸಿನ್ ಲಸಿಕೆಯ ಸಂಶೋಧನೆ ಮತ್ತು ವೈದ್ಯಕೀಯ ಪ್ರಯೋಗಗಳಿಗಾಗಿ ತಮ್ಮ ಸ್ವಂತದ 350 ಕೋಟಿ ರೂ ಹಣವನ್ನು ಖರ್ಚು ಮಾಡಿರುವುದರಿಂದ ಅದನ್ನು ಮರಳಿ ಪಡೆಯಬೇಕಾಗಿದೆ ಮತ್ತು ಕೋವಿಶೀಲ್ಡ್ ಲಸಿಕೆಯ ಸಂಶೋಧನೆ ಮತ್ತು ವೈದ್ಯಕೀಯ ಪ್ರಯೋಗಗಳಿಗಾಗಿ ಎಸ್‌ಐಐ ತನ್ನ ಸ್ವಂತ ಹಣವನ್ನು ಖರ್ಚು ಮಾಡಿರಲಿಲ್ಲ ಎಂದು ಭಾರತ್ ಬಯೋಟೆಕ್ ಹೇಳುತ್ತದೆ. ಆದರೆ, ಇದು ಶುದ್ಧ ಸುಳ್ಳು. ಏಪ್ರಿಲ್ 26ರ ಸ್ಕ್ರಾಲ್.ಇನ್ ಪತ್ರಿಕೆಯಲ್ಲಿ ಬರೆದಿರುವ ತಮ್ಮ ಲೇಖನದಲ್ಲಿ ಟಿ.ಐ.ಎಸ್.ಎಸ್.ನ ಪ್ರೊ. ರಾಮ್ ಕುಮಾರ್, ಕೊವಾಕ್ಸಿನ್‌ನ ಅಭಿವೃದ್ಧಿಗೆ ಸಾಕಷ್ಟು ಸಾರ್ವಜನಿಕ ಧನಸಹಾಯ ದೊರೆತಿರುವ ಅಂಶವನ್ನು ಅದರ ಬಗ್ಗೆ ಪ್ರಕಟವಾಗಿರುವ ಸಮಾನ ಮನಸ್ಕ ವಿಮರ್ಶಾ ಪ್ರಬಂಧಗಳಲ್ಲಿ ಒಪ್ಪಿಕೊಂಡಿರುವುದನ್ನು ವಿವರವಾಗಿ ತಿಳಿಸಿದ್ದಾರೆ. ಮೇಲಾಗಿ, ಐ.ಸಿ.ಎಂ.ಆರ್.ನ ಅಧ್ಯಕ್ಷರು ಈ ಎಲ್ಲಾ ಪ್ರಬಂಧಗಳ ಸಹ-ಲೇಖಕರೂ ಆಗಿರುವುದರಿಂದ ಇದು ಮತ್ತಷ್ಟು ಸ್ಪಷ್ಟವಾಗುತ್ತದೆ.
ವಾದಕ್ಕಾಗಿ ನಾವು ಭಾರತ್ ಬಯೋಟೆಕ್ ಮಂಡಿಸಿದ ವಾದವನ್ನು ಸರಿ ಎಂದೇ ಒಪ್ಪಿಕೊಳ್ಳೋಣ. ತನ್ನ ಉತ್ಪಾದನಾ ಸಾಮರ್ಥ್ಯವನ್ನು ವರ್ಷಕ್ಕೆ 70 ಕೋಟಿ ಡೋಸ್‌ಗಳಿಗೆ ಏರಿಸಲು ಭಾರತ್ ಬಯೋಟೆಕ್ ಉದ್ದೇಶಿಸಿದೆ. ಸಧ್ಯಕ್ಕೆ, ಮುಂದಿನ ತಿಂಗಳು ಮೂರು ಕೋಟಿ ಡೋಸ್ ಲಸಿಕೆಗಳನ್ನು ಉತ್ಪಾದಿಸಲಿದೆ. ಮುಂದಿನ ತಿಂಗಳಿನಿಂದ ಕೇಂದ್ರಕ್ಕೆ, ರಾಜ್ಯಗಳಿಗೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಮಾರಾಟದ ಅನುಪಾತವನ್ನು ಕ್ರಮವಾಗಿ 1/2: 1/4: 1/4 ಎಂದು ತೆಗೆದುಕೊಂಡರೆ (ಈ ಅಂಕಿಅಂಶಗಳು ನನ್ನ ವಾದಕ್ಕೆ ಅನುಕೂಲಕರವಾಗಿಲ್ಲದಿದ್ದರೂ ಸಹ ಅವುಗಳನ್ನು ನಾನು ಬೇಕೆಂದೇ ತೆಗೆದುಕೊಳ್ಳುತ್ತೇನೆ), ಖಾಸಗಿ ಆಸ್ಪತ್ರೆಗಳಿಗೆ ಮಾತ್ರ, ಮುಂದಿನ ತಿಂಗಳು 75 ಲಕ್ಷ ಡೋಸ್‌ಗಳು ಮಾರಾಟವಾಗಲಿವೆ. ಕೋವಿಶೀಲ್ಡ್ ಬೆಲೆಗೆ ಹೋಲಿಸಿದರೆ, ಪ್ರತಿ ಡೋಸ್ ಕೊವಾಕ್ಸಿನ್‌ನ ಬೆಲೆ 600ರೂ ಗಳಷ್ಟು ಅಧಿಕವಾಗಿರುವುದರಿಂದ, ಭಾರತ್ ಬಯೋಟೆಕ್, ಕೊವಾಕ್ಸಿನ್ ಲಸಿಕೆಯ ಸಂಶೋಧನೆ ಮತ್ತು ವೈದ್ಯಕೀಯ ಪ್ರಯೋಗಗಳಿಗಾಗಿ ಖರ್ಚು ಮಾಡಿದ 350 ಕೋಟಿ ರೂ ಗಳನ್ನು ಕೇವಲ 23 ದಿನಗಳಲ್ಲಿ ಗಳಿಸಿಕೊಳ್ಳಲಿದೆ! ಹಾಗಾದರೆ, ಖಾಸಗಿ ಆಸ್ಪತ್ರೆಗಳಿಗೆ ಎಸ್.ಐ.ಐ ತನ್ನ ಲಸಿಕೆಯನ್ನು ಮಾರಲು ಉದ್ದೇಶಿಸಿರುವ ಮಟ್ಟಕ್ಕಿಂತ ಎರಡು ಪಟ್ಟು ಹೆಚ್ಚು ಬೆಲೆಯನ್ನು ಖಾಯಮ್ಮಾಗಿ ನಿಗದಿಪಡಿಸಲು ಭಾರತ್ ಬಯೋಟೆಕ್‌ಗೆ ಇರುವ ಸಮರ್ಥನೆಯಾದರೂ ಏನು?
ಇದನ್ನು ಓದಿ: ಕೋವಿಡ್ ನಿರ್ವಹಣೆ : ವೈದ್ಯಕೀಯ ಸಿಬ್ಬಂದಿ ಕೊರತೆ ಎದುರಾಗಲಿದೆ – ಡಾ. ದೇವಿಶೆಟ್ಟಿ ಎಚ್ಚರಿಕೆ
ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನಿಂದ ಎಸ್.ಐ.ಐ. 300 ಮಿಲಿಯನ್ ಡಾಲರ್ ಧನ ಸಹಾಯ ಪಡೆದಿದೆ. ತನಗೆ ಅಂತಹ ಯಾವುದೇ ಸಹಾಯ ದೊರಕದ ಕಾರಣದಿಂದಾಗಿ ತನ್ನ ಬಂಡವಾಳ ವೆಚ್ಚಗಳು (ಅಂದರೆ, ಭೂಮಿ, ಕಟ್ಟಡ, ಯಂತ್ರಗಳು ಮುಂತಾದ ವೆಚ್ಚಗಳು) ಹೆಚ್ಚಾಗಿವೆ. ಅವುಗಳನ್ನು ಹೆಚ್ಚಿನ ಬೆಲೆಗಳ ಮೂಲಕವೇ ತುಂಬಿಸಿಕೊಳ್ಳಬೇಕಾಗುತ್ತದೆ ಎಂದು ಭಾರತ್ ಬಯೋಟೆಕ್ ವಾದಿಸುತ್ತದೆ. ಈಗ ನಾವು ಭಾರತ್ ಬಯೋಟೆಕ್ ತನ್ನ ಲಸಿಕೆಗಳನ್ನು ಕೇಂದ್ರಕ್ಕೆ, ರಾಜ್ಯಗಳಿಗೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಅದೇ ಅನುಪಾತದಲ್ಲಿ ಮಾರುತ್ತದೆ ಎಂದು ಊಹಿಸಿಕೊಂಡರೆ, ಕೊವಾಕ್ಸಿನ್‌ನ ತೂಗಿ ಅಳೆದ ಸರಾಸರಿ ಬೆಲೆ 525 ರೂ ಆಗುತ್ತದೆ. ಅದೇ ರೀತಿಯಲ್ಲಿ, ಕೋವಿಶೀಲ್ಡ್ ನ ತೂಗಿ ಅಳೆದ ಸರಾಸರಿ ಲೆಕ್ಕದ ಬೆಲೆಯು 325 ರೂ ಗೆ ಬರುತ್ತದೆ. 200 ರೂ ಗಳ ಬೆಲೆ ಅಂತರದಲ್ಲಿ ಮತ್ತು ತಿಂಗಳಿಗೆ ಮೂರು ಕೋಟಿ ಡೋಸ್‌ಗಳ ಉತ್ಪಾದನಾ ಮಟ್ಟದಲ್ಲಿ, ತನ್ನ ಸ್ವಂತ ಮೂಲಗಳಿಂದ ಖರ್ಚು ಮಾಡಿದ $300 ಮಿಲಿಯನ್ ಬಂಡವಾಳ ವೆಚ್ಚಗಳನ್ನು ನಾಲ್ಕು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಭಾರತ್ ಬಯೋಟೆಕ್ ತುಂಬಿಸಿಕೊಳ್ಳಲಿದೆ. ಖರ್ಚು ಮಾಡಿದ ಬಂಡವಾಳ ವೆಚ್ಚಗಳನ್ನು ನಾಲ್ಕು ತಿಂಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಪಡೆಯುವುದು ಸಾಧ್ಯವಿರುವಾಗ, ಲಸಿಕೆಯ ಬೆಲೆಯನ್ನು ಖಾಯಮ್ಮಾಗಿ ಹೆಚ್ಚಿನ ಮಟ್ಟದಲ್ಲಿಡುವುದು ದುರಾಸೆಯೇ. ಸುಲಿಗೆಯೇ.
ವಾಸ್ತವವಾಗಿ, ಎಸ್.ಐ.ಐ. ಮತ್ತು ಭಾರತ್ ಬಯೋಟೆಕ್ ಈ ಎರಡೂ ಸಂಸ್ಥೆಗಳು ಮಂಡಿಸಿರುವ ಪ್ರತಿಯೊಂದು ವಾದವೂ ಅಪ್ರಾಮಾಣಿಕ ವಾದವೇ. ವೇಗವಾಗಿ ರೂಪಾಂತರಗೊಳ್ಳುತ್ತಿರುವ ವೈರಸ್‌ಗೆ ಅನುಗುಣವಾಗಿ ಹೊಸ ಲಸಿಕೆಯನ್ನು ನಿರಂತರವಾಗಿ ಶೋಧಿಸಬೇಕಾಗುತ್ತದೆ ಎಂಬ ನೆಲೆಯಲ್ಲಿ ಹೆಚ್ಚಿನ ದರ ನಿಗದಿಯನ್ನು ಅವರು ಸಮರ್ಥಿಸಿಕೊಳ್ಳುತ್ತಾರೆ. ಈ ಸಮರ್ಥನೆಗೆ ಅರ್ಥವಿಲ್ಲ. ಏಕೆಂದರೆ, ಈ ಉದ್ದೇಶಕ್ಕಾಗಿ ಮೀಸಲಿಡುವ ಹಣವೆಷ್ಟು ಎಂಬುದರ ಬಗ್ಗೆ ಅವರು ಯಾವುದೇ ಅಂಕಿಅಂಶವನ್ನೂ ಒದಗಿಸಿಲ್ಲ. ಅಂತೆಯೇ, ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಲು ಹೆಚ್ಚುವರಿ ಹೂಡಿಕೆ ಮಾಡಬೇಕಾಗಿದೆ ಎಂಬ ನೆಲೆಯ ಹೆಚ್ಚಿನ ದರ ನಿಗದಿಗೂ ಯಾವ ಸಮರ್ಥನೆಯೂ ಇಲ್ಲ. ಏಕೆಂದರೆ, ಈ ಉದ್ದೇಶಕ್ಕಾಗಿಯೇ ಸರ್ಕಾರದಿಂದ ಈ ಎರಡೂ ಸಂಸ್ಥೆಗಳು ಹಣ ಪಡೆಯುತ್ತವೆ – ಎಸ್.ಐ.ಐ ಗಾಗಿ ಕೇಂದ್ರ ಸರ್ಕಾರವು 3,000 ಕೋಟಿ ರೂ.ಗಳನ್ನು ತೆಗೆದಿಟ್ಟಿದೆ, ಜೊತೆಗೆ, ಭಾರತ್ ಬಯೋಟೆಕ್ 1,500 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರದಿಂದ ಪಡೆಯಲಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಲಸಿಕೆ ತಯಾರಿಸುವ ಈ ಎರಡೂ ಸಂಸ್ಥೆಗಳು ಕೊರೊನಾ ಬಿಕ್ಕಟ್ಟನ್ನು ಲಾಭದ ಹಪಾಹಪಿಗಾಗಿ ಬಳಸಿಕೊಳ್ಳುತ್ತಿವೆ. ಈ ಅಂಶವು ಕೇಂದ್ರ ಸರ್ಕಾರಕ್ಕೆ ತಿಳಿದಿಲ್ಲವೆಂದರೆ, ಅದು ಸಂಪೂರ್ಣವಾಗಿ ಅಸಮರ್ಥವಾಗಿದೆ ಎಂದಾಗುತ್ತದೆ. ಒಂದು ವೇಳೆ ತಿಳಿದಿದ್ದರೆ, ಈ ವಂಚನೆಯಲ್ಲಿ ಭಾಗಿಯಾಗಿದೆ ಎಂದಾಗುತ್ತದೆ. ಹಾಗಾಗಿ, ಈ ಬಗ್ಗೆ ಒಂದು ತನಿಖೆ ನಡೆಸುವ ಅಗತ್ಯವಿದೆ.
ನಾಲ್ಕು ಮಾರ್ಗಗಳಿವೆ
ಈ ಹಿನ್ನೆಲೆಯಲ್ಲಿ ಸರ್ಕಾರವು ಮಾಡಬೇಕಾಗಿರುವುದು ಏನು ಎಂಬ ಪ್ರಶ್ನೆ ಎದುರಾಗುತ್ತದೆ. ಈ ಸಂಬಂಧವಾಗಿ, ಧೈರ್ಯದ ಪ್ರಮಾಣದ ಇಳಿಕೆಯ ಕ್ರಮದಲ್ಲಿ ನಾಲ್ಕು ಅನ್ಯ ಮಾರ್ಗಗಳನ್ನು ಸೂಚಿಸಬಹುದು.
ಮೊದಲನೆಯದು, ಕೋವಿಡ್-ಲಸಿಕೆಯ ಉತ್ಪಾದನೆಯನ್ನು ರಾಷ್ಟ್ರೀಕರಣ ಮಾಡುವುದೇ ಅತ್ಯುತ್ತಮ ಕ್ರಮ.
ಎರಡನೆಯದು, ಮೊದಲನೆಯದು ಕೈಲಾಗದಿದ್ದರೆ, ಲಸಿಕೆಗಳ ಅತಿಯಾದ ಬೆಲೆಯನ್ನು ತಡೆಗಟ್ಟುವ ಸಲುವಾಗಿ, ಬಿಕ್ಕಟ್ಟು ಕೊನೆಗೊಳ್ಳುವವರೆಗೆ, ಮತ್ತು, ಬಿಕ್ಕಟ್ಟು ಮುಗಿದ ನಂತರ ಅವುಗಳನ್ನು ಹಿಂದಿರುಗಿಸುವ ಭರವಸೆಯೊಂದಿಗೆ, ಸರ್ಕಾರವು ಎಸ್.ಐ.ಐ ಮತ್ತು ಭಾರತ್ ಬಯೋಟೆಕ್ ಈ ಎರಡೂ ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಬೇಕು. ಸ್ಪೇನ್ ನಂತಹ ಯುರೋಪಿನ ದೇಶಗಳು ಖಾಸಗಿ ಆಸ್ಪತ್ರೆಗಳನ್ನು ಸ್ವಾಧೀನಪಡಿಸಿಕೊಂಡಿದ್ದವು ಎಂಬುದನ್ನು ಜ್ಷಾಪಿಸಿಕೊಳ್ಳಬಹುದು.
ಮೂರನೆಯದು, ಕೃಷಿ ವೆಚ್ಚಗಳು ಮತ್ತು ಬೆಲೆ ಆಯೋಗದ ಮಾದರಿಯಲ್ಲಿ, ಲಸಿಕೆ ಉತ್ಪಾದನಾ ವೆಚ್ಚಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರವು ಪಾವತಿಸಬೇಕಾದ ಬೆಲೆಯನ್ನು ಶಿಫಾರಸು ಮಾಡುವ ಒಂದು ಆಯೋಗವನ್ನು ಸ್ಥಾಪಿಸುವುದು (ಆಸ್ಟ್ರಾಜೆನೆಕಾದೊಂದಿಗಿನ ಹೊಂದಾಣಿಕೆಯ ಪ್ರಕಾರ ಕೆಲವು ದೇಶಗಳು ಲಸಿಕೆಯನ್ನು ಕೊಳ್ಳಲು ಒಂದಕ್ಕಿಂತ ಹೆಚ್ಚು ಬೃಹತ್ ಖರೀದಿದಾರರನ್ನು ನೇಮಿಸಿರುವ ಕ್ರಮದ ಅನುಸರಣೆಯೂ ಸೇರಿದಂತೆ).
ಅಂತಿಮವಾಗಿ, ಪ್ರಸ್ತುತ ಲಸಿಕೆ ತಯಾರಕರ ಏಕಸ್ವಾಮ್ಯವನ್ನು ಮುರಿಯುವುದು. ಕಡ್ಡಾಯ ಪರವಾನಗಿ(ಕಂಪಲ್ಸರಿ ಲೈಸೆನ್ಸಿಂಗ್) ಅಧಿಕಾರವನ್ನು ಬಳಸಿಕೊಂಡು ಸ್ಪರ್ಧಾತ್ಮಕ ಬಿಡ್ ಮೂಲಕ ಹೊಸ ಉತ್ಪಾದಕರಿಗೆ ಅನುಮತಿ ಕೊಡುವುದು. ಲಸಿಕೆಯನ್ನು ತಯಾರಿಸಿ ಅದನ್ನು ಅತಿ ಕಡಿಮೆ ಬೆಲೆಯಲ್ಲಿ ಮಾರುವ ಕಂಪೆನಿಯನ್ನು ಆಯ್ಕೆ ಮಾಡಿಕೊಳ್ಳಬೇಕು.
ಅನು: ಕೆ.ಎಂ.ನಾಗರಾಜ್