ಕೊಪ್ಪಳ: ಫೆಬ್ರವರಿ 18ರಂದು ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿ ಪತ್ರಿಕಾಗೋಷ್ಠಿಯನ್ನು ನಡೆಸಿತು. ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮೊದಲು ಕಾಂಗ್ರೆಸ್ ಸರ್ಕಾರವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ವಾರ್ಷಿಕ 200 ಕೋಟಿಯನ್ನು ಮೀಸಲಿಡುವುದಾಗಿ ಘೋಷಿಸಿತ್ತು. ಆದರೆ ಇನ್ನೂ ಈಡೇರಿಸಿಲ್ಲ ಎಂದು ಲಿಂಗತ್ವ ಅಲ್ಪಸಂಖ್ಯಾತ ಹಕ್ಕುಗಳ ಹೋರಾಟಗಾರ್ತಿ ರಮ್ಯಕೃಷ್ಣ ಆರೋಪಿಸಿದ್ದಾರೆ.
ಕೊಪ್ಪಳದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ವಾಗ್ದಾನ ಮಾಡಿದ ಸರ್ಕಾರ ಈಗ ತನ್ನ ಮಾತು ಉಳಿಸಿಕೊಳ್ಳುವ ಹೊಣೆಗಾರಿಕೆಯಿಂದ ಹಿಂದೆ ಸರಿಯಬಾರದು. 2026ರ ಮಾರ್ಚ್ ಮೊದಲ ವಾರದಲ್ಲಿ ಆರಂಭವಾಗಲಿರುವ ಬಜೆಟ್ ಅಧಿವೇಶನದಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಪ್ರತ್ಯೇಕವಾಗಿ ಮತ್ತು ಕಡ್ಡಾಯವಾಗಿ ಅನುದಾನ ಘೋಷಿಸಲೇಬೇಕು. ಇದು ದಯೆ ಅಥವಾ ಉಪಕಾರವಲ್ಲ – ಇದು ನಮ್ಮ ಹಕ್ಕು.
ನಮ್ಮ ಪ್ರಮುಖ ಹಕ್ಕೊತ್ತಾಯಗಳು
1. ಕರ್ನಾಟಕ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವನ್ನು ತಕ್ಷಣ ಸ್ಥಾಪಿಸಬೇಕು.
2. ಸರ್ವತೋಮುಖ ಅಭಿವೃದ್ಧಿಗಾಗಿ ಕನಿಷ್ಠ 250 ಕೋಟಿಗಳ ಪ್ರತ್ಯೇಕ ಬಜೆಟ್ ನೀಡಬೇಕು.
ಇದನ್ನೂ ಓದಿ: ಅಭಿವೃದ್ಧಿ ಮಾದರಿಯೂ ಪರಿಸರ ವಿನಾಶವೂ – ಭಾಗ 1
ವಸತಿ
1. ವಸತಿ, ಹಾಸ್ಟೆಲ್ ಮತ್ತು ಶಾರ್ಟ್ ಸ್ಟೇ ಹೋಮ್ಗಳನ್ನು ತಕ್ಷಣ ಒದಗಿಸಬೇಕು.
2. ಪ್ರತಿ ವರ್ಷ ಕನಿಷ್ಠ 500 ಮನೆಗಳನ್ನು ಹಂಚಿಕೆ ಮಾಡಬೇಕು.
ಜೀವನೋಪಾಯ, ಆಹಾರ ಮತ್ತು ಸಾಮಾಜಿಕ ಭದ್ರತೆ
1. ಕೃಷಿಯಲ್ಲಿ ಆಸಕ್ತಿ ಹೊಂದಿರುವ ಪ್ರತಿ ವ್ಯಕ್ತಿಗೆ 2 ಎಕರೆ ಕೃಷಿಯೋಗ್ಯ ಭೂಮಿಯನ್ನು ನೀಡಬೇಕು. ಗೋಮಾಳ ಜಮೀನನ್ನು ಗುತ್ತಿಗೆ ಆಧಾರದಲ್ಲಿ ಹಂಚಿಕೆ ಮಾಡಬೇಕು.
2. ಉದ್ಯಮಶೀಲತೆಗೆ ಬ್ಯಾಂಕ್-ಲಿಂಕ್ ಆಧಾರಿತ ಯೋಜನೆ ಜಾರಿಗೆ ತಂದು ಪ್ರತಿ ವ್ಯಕ್ತಿಗೆ 2,00,000/- ಸಬ್ಸಿಡಿ ನೀಡಬೇಕು.
3. ಸ್ವಸಹಾಯ (ಉಳಿತಾಯ-ಸಾಲ) ಗುಂಪುಗಳನ್ನು ರಚಿಸಲು ಮತ್ತು ಬಲಪಡಿಸಲು ಸಮುದಾಯ/ಸರ್ಕಾರೇತರ ಸಂಸ್ಥೆಗಳಿಗೆ ಅನುದಾನ ನೀಡಬೇಕು.
4. ಬಡ್ಡಿರಹಿತ ಸಾಲಗಳನ್ನು ಒದಗಿಸಬೇಕು.
5. ಮೈತ್ರಿ ಪಿಂಚಣಿಯನ್ನು ತಿಂಗಳಿಗೆ 2,000/-ಕ್ಕೆ ಹೆಚ್ಚಿಸಬೇಕು.
6. ಲಿಂಗತ್ವ ಅಲ್ಪಸಂಖ್ಯಾತರಿಗೆ ತಿಂಗಳಿಗೆ 5,000/- ವೃದ್ಧಾಪ್ಯ ಪಿಂಚಣಿ ನೀಡಬೇಕು.
7. ಶೇಕಡಾ 1% ಮೀಸಲಾತಿಯನ್ನು ಕೇವಲ ಘೋಷಣೆಯಾಗಿ ಉಳಿಸದೇ, ಸರ್ಕಾರಿ ಉದ್ಯೋಗಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಮತ್ತು ಕೋಚಿಂಗ್ ನೀಡಬೇಕು.
ಆರೋಗ್ಯ
ಉಚಿತ ಲಿಂಗತ್ವ ದೃಢೀಕರಣ ಶಸ್ತ್ರಚಿಕಿತ್ಸೆಗಳನ್ನು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜಾರಿಗೊಳಿಸಬೇಕು. 2) ಶಸ್ತ್ರಚಿಕಿತ್ಸೆಯ ನಂತರ ಕನಿಷ್ಠ 6 ತಿಂಗಳು ಪ್ರತಿ ತಿಂಗಳು 5,000/- ಪುನರ್ವಸತಿ ನೆರವು ನೀಡಬೇಕು. 3) ಪ್ರತಿಯೊಂದು ಜಿಲ್ಲೆಯಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಕನಿಷ್ಠ 1 ವಿಶೇಷ ಆರೋಗ್ಯ ಕೇಂದ್ರ ತೆರೆಯಬೇಕು.
ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಬದುಕು ದಾನಾಧಾರಿತ ಯೋಜನೆಗಳ ಮೇಲೆ ನಿಲ್ಲಬಾರದು. ಗೌರವಯುತ ಜೀವನ, ಭದ್ರತೆ, ಉದ್ಯೋಗ, ಆರೋಗ್ಯ – ಇವು ಸಂವಿಧಾನಾತ್ಮಕ ಹಕ್ಕುಗಳು, ಸರ್ಕಾರ ತನ್ನ ಚುನಾವಣಾ ವಾಗ್ದಾನವನ್ನು ಈ ಬಜೆಟ್ನಲ್ಲಿ ನೈಜವಾಗಿ ಅನುಷ್ಠಾನಗೊಳಿಸಬೇಕು. ವಾಗ್ದಾನ ಉಳಿಸದಿದ್ದರೆ ರಾಜ್ಯದಾದ್ಯಂತ ಹೋರಾಟ ತೀವ್ರಗೊಳ್ಳಲಿದೆ ಎಂದು ಚಳುವಳಿ ಎಚ್ಚರಿಸಿದೆ.
ಇದನ್ನೂ ನೋಡಿ: “ಪಶುಗಳು ಮೇವು ತಿನ್ನುವುದಿಲ್ಲವೇ? ಕಾರಣಗಳೇನು?” | ಡಾ. ಎನ್. ಬಿ ಶ್ರೀಧರ Janashakthi Media
