ಶಾಲೆಯ ಮೇಲ್ಛಾವಣಿ ಕುಸಿದು ಬಿದ್ದು ನಾಲ್ಕು ಜನ ವಿದ್ಯಾರ್ಥಿಗಳಿಗೆ ಗಾಯ ಆಸ್ಪತ್ರೆಗೆ ದಾಖಲು

ಧಾರವಾಡ: ತಾಲೂಕಿನ ಬೋಗೂರು ಗ್ರಾಮದಲ್ಲಿ ಶಾಲೆಯ ಮೇಲ್ಛಾವಣಿ ಕುಸಿದು ಬಿದ್ದು ನಾಲ್ಕು ಜನ ವಿದ್ಯಾರ್ಥಿಗಳು ಗಾಯಗೊಂಡಿದ್ದು, 24 ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.

ಕಳೆದ 2 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿದು ಬಿದ್ದಿದ್ದರಿಂದ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಸರ್ಕಾರಿ ಶಾಲೆಯ 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳ ಕೊಠಡಿ ಕುಸಿದುಬಿದ್ದಿರುವ ಕಾರಣದಿಂದ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡು ಗರಗ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಈ ಘಟನೆಯಿಂದ ಪೋಷಕರು ಆತಂಕಕ್ಕೊಳಗಾಗಿದ್ದಾರೆ.

ಇದನ್ನೂ ಓದಿ:ಶಾಲಾ ಕಟ್ಟಡದ ಮೇಲ್ಛಾವಣಿ ಕುಸಿತ: ಐದು ಜನ ವಿದ್ಯಾರ್ಥಿಗಳಿಗೆ ಗಾಯ

ಈ ಸರ್ಕಾರಿ ಶಾಲೆಯ ಕಟ್ಟಡ ಬಹಳ ಹಳೆಯದಾದ ಕಟ್ಟಡವಾಗಿದ್ದರಿಂದ ಮಳೆಗೆ ಕುಸಿದು ಬಿದ್ದಿದೆ. ಶಾಲೆಯ ಇನ್ನೂ ಸುಮಾರು ಮೂರು ಕೊಠಡಿಗಳು ಬೀಳುವ ಹಂತದಲ್ಲಿವೆ. ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯ ಕಟ್ಟಡ ಹಳೆಯದಾಗಿದ್ದು, ಶಾಲೆಯನ್ನು ದುರಸ್ತಿಗೊಳಿಸುವಂತೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಗಮನ ಹರಿಸಿಲ್ಲ. ಹೀಗಾಗಿ ಇಂದು ಏಕಾಏಕಿ ನಿರಂತರವಾಗಿ ಸುರಿದ ಮಳೆಗೆ ಇದೀಗ ಶಾಲಾ ಕಟ್ಟಡದ ಮೇಲ್ಛಾವಣಿ ಕುಸಿದು ಬಿದ್ದಿದೆ. ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಇದರಿಂದಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಶಾಲೆಯ ಕಟ್ಟಡವನ್ನು ಪುನರ್​ ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮೊದಲಿಗೆ, ಏನಾಗುತ್ತಿದೆ ಎಂದು ನಮಗೆ ಊಹಿಸಲು ಸಾಧ್ಯವಾಗಲಿಲ್ಲ. ಸ್ಲ್ಯಾಬ್ ಒಮ್ಮೆಗೆ ಬೀಳಲಿಲ್ಲ ಆದರೆ ಕಾಂಕ್ರೀಟಿನ ಸಣ್ಣ ತುಂಡುಗಳು ಬೀಳುತ್ತಲೇ ಇದ್ದವು ಎಂದು ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ. “ಕಟ್ಟಡದಲ್ಲಿ ಸೋರಿಕೆಯಾಗಿರುವುದನ್ನು ನಾವು ಮೊದಲು ಗಮನಿಸಿದ್ದೇವೆ ಆದರೆ ಮಳೆಯ ಸಮಯದಲ್ಲಿ ಇದು ಸಾಮಾನ್ಯ ಎಂದು ನಾವು ಭಾವಿಸಿದ್ದೆವು. ಅದು ಕುಸಿದು ಬೀಳುತ್ತದೆ ಎಂದು ನಾವ್ಯಾರೂ ಊಹಿಸಿರಲಿಲ್ಲ. ಈಗ ಕಟ್ಟಡದ ಸ್ಥಿತಿಯ ಬಗ್ಗೆ ನಮ್ಮ ಪೋಷಕರು  ಭಯಭೀತರಾಗಿದ್ದಾರೆ. ಶಿಕ್ಷಕರು ತಕ್ಷಣ ನಮ್ಮನ್ನು ತರಗತಿಯಿಂದ ಹೊರಗೆ ಬರುವಂತೆ ಹೇಳಿದರು ಮತ್ತು ನಮ್ಮನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು” ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಜಿಲ್ಲೆಯ 1,118 ಶಾಲೆಗಳು, 13 ಪ್ರೌಢಶಾಲೆಗಳು ಮತ್ತು 333 ಪ್ರಾಥಮಿಕ ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ ಎಂದು ಶಿಕ್ಷಣ ಇಲಾಖೆಯ ಮೂಲಗಳಿಂದ ಮಾಹಿತಿ ದೊರೆತಿದೆ. ಘಟನೆ ನಡೆದ ಕಟ್ಟಡವನ್ನು 30 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ಬೋಗೂರು ಶಾಲೆಯಲ್ಲಿ 208 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈಗ ನಾವು ಪರ್ಯಾಯ ವ್ಯವಸ್ಥೆ ಮಾಡಲು ಶಾಲೆಗೆ ಕೇಳಿದ್ದೇವೆ,” ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಅಂತಹ ಶಾಲೆಗಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಡಳಿತ ಸೂಚಿಸಿದೆ. ತರಗತಿಗಳನ್ನು ನಡೆಸಲು ಪರ್ಯಾಯ ವ್ಯವಸ್ಥೆ ಮಾಡುವಂತೆಯೂ ಒತ್ತಾಯಿಸಿದ್ದಾರೆ.

ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳಲ್ಲಿ ವಿದ್ಯಾರ್ಥಿಗಳನ್ನು ಕೂಡಿಸದಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ ನೀಡಿದ್ದಾರೆ. ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗಿದ್ದು, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಾಲಾ ಕಟ್ಟಡಗಳ ಸ್ಥಿತಿಗತಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *