ಬಿಜೆಪಿಯಲ್ಲೀಗ ಹೊಸ ಸಿಎಂ ಚರ್ಚೆ ?! ದಾಳ ಉರುಳಿಸಬಹುದಾ ವಲಸಿಗರು?!!

ಗುರುರಾಜ ದೇಸಾಯಿ

ನಾಯಕತ್ವ ಬದಲಾವಣೆ ಬಗ್ಗೆ ಕಳೆದ ಏಳೆಂಟು ತಿಂಗಳಿಂದ ದೊಡ್ಡ ಚರ್ಚೆ ನಡೆಯುತ್ತಿತ್ತು. ಈಗ ನಾಯಕತ್ವ ಬದಲಾವಣೆ ಖಚಿತವಾಗುತ್ತಿದ್ದಂತೆ ಬಿಜೆಪಿಯಲ್ಲಿ ಹೊಸ ಸಿಎಂ ಚರ್ಚೆ ಜೋರಾಗಿ ಶುರುವಾಗಿದೆ.  ಇತ್ತ 17 ಜನ ವಲಸಿಗರು ಸರಕಾರ ಬೀಳಿಸುವ ಆಟಕ್ಕೆ ಮುಂದಾಗಿದ್ದರೆ ಎಂದು ವಿಧಾನಸೌಧದಲ್ಲಿ ಗುಸುಗುಸು ಕೇಳಿ ಬರುತ್ತಿದೆ.

ಈ ಎಲ್ಲಾ ಬೆಳವಣಿಗೆಗಳು ನಿಜವಾದರೆ,  ಯಡಿಯೂರಪ್ಪನವರು ಹೇಳಿದಂತೆ ನಡೆದುಕೊಂಡರೆ, ತೆರವಾಗಲಿರುವ ಈ ಸ್ಥಾನಕ್ಕೆ ಯಾರು ಎಂಬ ಮಿಲಿಯನ್ ಡಾಲರ್ ಪ್ರಶ್ನೆ ರಾಜ್ಯದ ಜನತೆಯನ್ನು ಕಾಡುತ್ತಿದೆ.  ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಜನರ ಹೆಸರುಗಳು ಚರ್ಚೆಯಾಗುತ್ತಿವೆ. ಕೆಲ ಸಚಿವರು ನನಗೆ ಅನುಭವ ಇದೆ ನಾನೇ ಮುಂದಿನ ಸಿಎಂ ಎಂದು ತಮ್ಮ ಆಪ್ತರಲ್ಲಿ ಹೇಳಿ ಕೊಳ್ಳುತ್ತಿದ್ದಾರೆ.  ಹಾಗಾಗಿ ರಾಜಕೀಯ ವಲಯದಲ್ಲಿ ಈಗ  ಮುಂದಿನ ಸಿಎಂ ಯಾರು? ಎಂಬ ಚರ್ಚೆ ಹುಟ್ಟಿಕೊಂಡಿದೆ.

ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲು ಬರೋಬ್ಬರಿ  ಹದಿನಾಲ್ಕು ಜನ ಆಕಾಂಕ್ಷಿಗಳು ಇದ್ದಾರೆ. ಆದರೆ ಈ ಬಾರಿ ವರಿಷ್ಠರು ಸಾಕಷ್ಟು ಅಳೆದು ತೂಗಿ ಅವರ ಸಾಮಥ್ರ್ಯ, ಪೂರ್ವಪರ ಹಿನ್ನೆಲೆ, ವ್ಯಕ್ತಿತ್ವ, ಸಂಘಟನಾ ಸಾಮಥ್ರ್ಯ ಸೇರಿದಂತೆ ಪ್ರತಿಯೊಂದನ್ನು ಅಳೆದು ತೂಗಿಯೇ ಹೊಸ ನಾಯಕನ ಶೋಧಕ್ಕೆ ಚಾಲನೆ ನೀಡುವುದಾಗಿ ಹೇಳುತ್ತಲೆ ಇದ್ದಾರೆ. ಮುಖ್ಯಮಂತ್ರಿಯಾಗುವವರು ಸಂಘನಿಷ್ಟೆ ಇರುವುದು ಮುಖ್ಯ.  ಅಂತವರನ್ನು ಬಿಜೆಪಿಯ ಹೈಕಮಾಂಡ್‌ ಹಾಗೂ ಆರ್‌.ಎಸ್‌.ಎಸ್‌ ಅಂತಿಮ ಮಾಡಲಿದೆ.

ಮೂಲಗಳ ಪ್ರಕಾರ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯ ಸಚಿವರಾದ ಮುರುಗೇಶ್ ನಿರಾಣಿ, ಬಸವರಾಜ್ ಬೊಮ್ಮಾಯಿ, ಆರ್.ಅಶೋಕ್, ಡಿಸಿಎಂ ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಲಕ್ಷ್ಮಣ ಸವದಿ,  ಉಮೇಶ್‌ ಕತ್ತಿ, ಯೋಗೇಶ್ವರ್‌, ಸಂಸದರಾದ  ಅನಂತಕುಮಾರ್‌ ಹೆಗಡೆ, ತೇಜಸ್ವಿ ಸೂರ್ಯ,  ಶಾಸಕರಾದ ಅರವಿಂದ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್ ಮತ್ತಿತರರ ಹೆಸರುಗಳು ಕೇಳಿಬರುತ್ತಿದೆ. ಮಾಜಿ ಕೇಂದ್ರ ಸಚಿವ ಸದಾನಂದ ಗೌಡ, ಸಿಟಿ ರವಿ ಹೆಸರು ಕೇಳಿ ಬರುತ್ತಿದ್ದರೂ ಸಿಟಿ ರವಿ ಈ ಆಟದಿಂದ ಹಿಂದಕ್ಕೆ ಸರಿದಿದ್ದಾರೆ.

ಮುರಗೇಶ್‌ ನಿರಾಣಿ : ಮುಂದಿನ ಮುಖ್ಯಮಂತ್ರಿಯಾರಾಗಬಹುದು ಎಂಬ ಚರ್ಚೆಯಲ್ಲಿ ಮೊದಲು ಕೇಳಿಬಂದ ಹೆಸರು ಸಚಿವ ಮುರಗೇಶ್‌ ನಿರಾಣಿಯವರದ್ದಾಗಿದೆ. ಪಂಚಮಶಾಲಿ ಲಿಂಗಾಯತ ಸಮುದಾಯದ ಮುಖಂಡರಾಗಿದ್ದಾರೆ. ಜೊತೆಗೆ ಯಡಿಯೂರಪ್ಪನವರ ಬಣದಲ್ಲಿ ಗುರುತಿಸಿಕೊಂಡಿರುವ ನಾಯಕರಾಗಿದ್ದಾರೆ.  ಈ ಹಿಂದೆ ಯಡಿಯೂರಪ್ಪ ಅವರ ಅಧಿಕಾರ ಅವಧಿಯಲ್ಲಿ ಕೈಗಾರಿಕಾ ಸಚಿವರಾಗಿ ಕರ್ನಾಟಕಕ್ಕೆ ಬಂಡಾವಳ ಹೂಡಿಕೆಗೆ ರತ್ನಗಂಬಳಿ ಹಾಸಿ ಯಡಿಯೂರಪ್ಪನವರಿಗೆ ನಿಷ್ಟೆ ತೋರಿದವರು.  ಅವರ ಯಡಿಯೂರಪ್ಪನವರ ಸಂಬಂಧ ಎಷ್ಟು ಗಟ್ಟಿ ಎಂದರೆ ಯಡಿಯೂರಪ್ಪ ಅವರ ಜೊತೆಗೆ ವಿವಾದ, ಆರೋಪಗಳನ್ನು ಹೊತ್ತುಕೊಂಡವರು. ಆರ್‌,ಎಸ್‌,ಎಸ್‌ ಗೆ ನಿಷ್ಟೆ ಇರುವ ವ್ಯಕ್ತಿಯಾಗಿದ್ದಾರೆ.  ನಿರಾಣಿ ಒಡೆತನದ ಸಕ್ಕರೆ, ಇಂಧನ ಕ್ಷೇತ್ರದ ಉದ್ಯಮಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ನೌಕರರಿದ್ದಾರೆ.  ಇವರು ಮೂರು ಬಾರಿ ಶಾಸಕರಾಗಿದ್ದಾರೆ. ಇತ್ತೀಚೆಗೆ ಮೋದಿ ಮತ್ತು ಶಾ ಇವರನ್ನು ವಿಶೇಷವಾಗಿ ಆಮಂತ್ರಣ ನೀಡಿ ದೆಹಲಿಗೆ ಕರೆಯಿಸಿಕೊಂಡ ಮಾತನಾಡಿರುವ ವಿಚಾರ ಎಲ್ಲಿರಿಗೂ ಗೊತ್ತಿದೆ. ಹಾಗಾಗಿ ಸಿಎಂ ರೇಸ್‌ ನಲ್ಲಿ ಇವರು ಮೊದಲಿಗರಾಗಿದ್ದಾರೆ.

ಆರ್. ಅಶೋಕ್‌ : ತುರ್ತುಪರಿಸ್ಥಿಯಲ್ಲಿ  ಬಂದನಕ್ಕೊಳಗಾಗುವ ಮೂಲಕ ಎಲ್‌ಕೆ ಅಡ್ವಾನಿಯವರ ಗರಡಿಯಲ್ಲಿ ಬೆಳೆದವರು ಆರ್.‌ ಅಶೋಕ್‌, 1997 ರಿಂದ ಸತತವಾಗಿ ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಬಿಜೆಪಿ ಸರಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದು. ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡವರು. ಸಂಘಪರಿವಾರಕ್ಕೆ ನಿಷ್ಟೆಯಾಗಿರುವ ಆರ್.‌ ಅಶೋಕ್‌ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾದ್ದರಿಂದ ನಿರಾಣಿಗೆ ಕೈ ತಪ್ಪಿದರೆ ಇವರನ್ನೆ ಸಿಎಂ ಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಬಿಜೆಪಿಯಲ್ಲಿ ಕೇಳಿ ಬರುತ್ತಿದೆ.

ಇದನ್ನೂ ಓದಿಸಿಎಂ ಖುರ್ಚಿಯ ಮೇಲೆ ಎಲ್ಲರ ಕಣ್ಣು?!

ಬಸವರಾಜ ಬೊಮ್ಮಾಯಿ: ಎಚ್.ಡಿ.ದೇವೇಗೌಡ, ರಾಮಕೃಷ್ಣ ಹೆಗಡೆ ಕಾಲದ ಜನತಾ ಪರಿವಾರದಿಂದ ಬೆಳೆದು ಬಂದ ಬಸವರಾಜ ಬೊಮ್ಮಾಯಿ ಅವರು ಹಾಲಿ ಗೃಹ ಸಚಿವರಾಗಿದ್ದಾರೆ. ಬಿಎಸ್ ಯಡಿಯೂರಪ್ಪರ ಆಪ್ತ ಬಳಗದಲ್ಲಿರುವ ಬೊಮ್ಮಾಯಿ 2008ರಿಂದ ಬಿಜೆಪಿಯಲ್ಲಿದ್ದಾರೆ. ಜಲ ಸಂಪನ್ಮೂಲ ಖಾತೆ ಸಚಿವರಾಗಿ ಕೂಡಾ ಕಾರ್ಯ ನಿರ್ವಹಿಸಿದ್ದಾರೆ. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿದ್ದು ಯಡಿಯೂರಪ್ಪ ಹಾಗೂ ಜೋಷಿ ಇಬ್ಬರೂ ಇಷ್ಟ ಪಡುವ ವ್ಯಕ ಬಸವರಾಜ ಬೊಮ್ಮಾಯಿ.

ಲಕ್ಷ್ಮಣ ಸವದಿ :  ಲಕ್ಷಣ ಸವದಿ ಶಾಸಕರಾಗಿ ಆಯ್ಕೆಯಾಗದಿದ್ದರೂ ಬಿಎಸ್‌ವೈ ಸರಕಾರದಲ್ಲಿ ಸಚಿವರಾಗಿ ಪ್ರಮುಖ ಖಾತೆಯ ಜವಬ್ದಾರಿಯನ್ನು ಹೊತ್ತವರು.  ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಪ್ರಭಾವ ಹೊಂದಿರುವ ಸವದಿ ಲಿಂಗಾಯತ ಸಮುದಾಯಕ್ಕೆ ಸೇರಿದ್ದು ಬಿಎಸ್‌ವೈ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

ಈ ನಾಲ್ವರ ಜೊತೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಡಿಸಿಎಂ ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವತ್ಥ ನಾರಾಯಣ,  ಸಚಿವರಾದ ಉಮೇಶ್‌ ಕತ್ತಿ, ಯೋಗೇಶ್ವರ್‌, ಸಂಸದರಾದ  ಅನಂತಕುಮಾರ್‌ ಹೆಗಡೆ, ತೇಜಸ್ವಿ ಸೂರ್ಯ,  ಶಾಸಕರಾದ ಅರವಿಂದ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್ ಮಾಜಿ ಸಚಿವ ಸಿಟಿ ರವಿ, ಕೇಂದ್ರದ ಮಾಜಿ ಸಚಿವ ಸದಾನಂದಗೌಡ ಹೆಸರುಗಳು ಕೇಳಿ ಬರುತ್ತಿವೆ.

ದಾಳ ಉರುಳಿಸಬಹುದಾ ವಲಸಿಗರು : ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ.  ಇದರ ಮಧ್ಯೆ ಮಹತ್ವದ ಬೆಳವಣಿಗೆ ಒಂದು ನಡೆದಿದ್ದು, ಕೇವಲ ಬಿ.ಎಸ್.ಯಡಿಯೂರಪ್ಪ ಅವರನ್ನು ನಂಬಿ ಪಕ್ಷಕ್ಕೆ ಬಂದಿದ್ದ ವಲಸಿಗರು ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಸಚಿವರಾದ ಕೆ.ಸುಧಾಕರ್, ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್, ಬಿ.ಸಿ.ಪಾಟೀಲ್ ಸೇರಿದಂತೆ ಬಾಂಬೈ ತಂಡದ ಎಲ್ಲರು ಒಂದೇ ರೀತಿಯ ಪತ್ರಗಳನ್ನು ಹಿಡಿದು ಸಿಎಂ ರವರನ್ನು ಭೇಟಿಯಾಗಿ ಆ ಪತ್ರಗಳನ್ನು ನೀಡಿದ್ದಾರೆ ಎಂದು ವಿಧಾನಸೌಧದ ಮೂಲಗಳು ಖಚಿತ ಪಡಿಸಿವೆ.  ಅವು ರಾಜೀನಾಮೆ ಪತ್ರಗಳಾಗಿರಬಹುದಾ? ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ.

ಮೈತ್ರಿ ಸರ್ಕಾರಕ್ಕೆ ಪತನಕ್ಕೆ ಕಾರಣವಾಗಿದ್ದ ಈ 17 ಮಂದಿ ಕೇವಲ ಬಿ.ಎಸ್.ಯಡಿಯೂರಪ್ಪ ಅವರನ್ನು ನಂಬಿ ಬಿಜೆಪಿಗೆ ಬಂದಿದ್ದರು. ಈಗ ಯಡಿಯೂರಪ್ಪನವರು ಇಲ್ಲಾ ಎಂದರೆ ಬಿಜೆಪಿಯವರು ನಮ್ಮನ್ನು ಮುಗಿಸಿ ಬಿಡುತ್ತಾರೆ. ನಮ್ಮ ಮುಂದಿನ ಭವಿಷ್ಯ ಏನು? ಹೇಗೆ? ಎಂಬ ಪ್ರಶ್ನೆ ಇವರನ್ನು ಕಾಡಿದ್ದು ರಾಜೀನಾಮೆ ನೀಡಿ ಹೈಕಮಾಂಡ್‌ ಮೇಲೆ ಒತ್ತಡಹಾಕಿ ಯಡಿಯೂರಪ್ಪ ನವರನ್ನು ಉಳಿಸಿಕೊಳ್ಳು ಆಟಕ್ಕೆ ಮುಂದಾಗಬಹುದು ಎಂದು ಹೇಳಲಾಗುತ್ತಿದೆ.   ಏನಾಗಬಹುದು ?  26 ರ ವರಗೆ ಕಾಯಬೇಕಿದೆ.

Donate Janashakthi Media

Leave a Reply

Your email address will not be published. Required fields are marked *