ಚನ್ನರಾಯಪಟ್ಟಣದ ರೈತರ ಹೋರಾಟದ ಎತ್ತುತ್ತಿರುವ ಪ್ರಶ್ನೆ

ಸ್ವಿಗ್ಗಿ-ಜೊಮೋಟೋದಿಂದ – ‘ಫಿಜ್ಜಾ-ಬರ್ಗರ್’ ಬರಬೇಕಾದರೂ ರೈತರು-ತರಕಾರಿ ಕಾಳು-ಕಡಿ ಬೆಳೀಲೇಬೇಕಲ್ಲವೇ…?
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಎಂಬ ಆ ಹೋಬಳಿ ಕೇಂದ್ರದಿಂದ ಹೊರಟ ನಮಗೆ ಎದುರಾದದ್ದು ಪ್ರಶಾಂತವಾದ ಹಳ್ಳಿಗಳು. ಹಾಡ್ಯಾಳ, ನಲ್ಲಪ್ಪನಹಳ್ಳಿ ಇನ್ನೂ ಹೀಗೆ. ಸುಯ್ಯನೆ ಬೀಸುವ ಆಷಾಢದ ಗಾಳಿ. ಎಲ್ಲಿ ನೋಡಿದರೂ ಹಸಿರು. ರಾಗಿ, ಜೋಳದ ಹೊಲಗಳು. ದ್ರಾಕ್ಷಿ, ಮಾವು ಮುಂತಾಗಿ ಹಣ್ಣು ಬೆಳೆವ ತೋಟಗಳು. ಹಲಸು, ಚಕ್ಕೋತ, ನೇರಳೆ, ಅರಳಿ, ಬೇಲ ಮುಂತಾದ ಮರಗಳು. ಕ್ಯಾಮರಾ ಕಣ್ಣಲ್ಲಿ ತುಂಬಿಕೊಳ್ಳಲು ಕಷ್ಟವಾಗುವಷ್ಟು ದೊಡ್ಡ ಆಲದ ಮರಗಳು. ಹಳ್ಳಿಗಳಲ್ಲಿ ಹುಲ್ಲು ಮೇಯವ ದನ-ಕರುಗಳು, ನೆಲ ಕೆದಕಿ ಹುಳು ಹುಪ್ಪಟೆ ಹುಡುಕುವ ಕೋಳಿ, ಕುರಿ-ಮೇಕೆಗಳು.

-ಆರ್. ರಾಮಕೃಷ್ಣ

ಕಪ್ಪು ಹಾವಿನಂತೆ ಹರಿದು ಹೋಗಿರುವ ರಸ್ತೆಗಳಲ್ಲಿ ಆಗೊಂದು ಈಗೊಂದು ಎಂಬಂತೆ ಬೈಕುಗಳು-ಕಾರುಗಳು. ಅದು ಬಿಟ್ಟರೆ ಬೆಂಗಳೂರಿನ ಕಡೆಗೆ ತರಕಾರಿ, ಹಾಲು-ಹಣ್ಣು ಮುಂತಾದ ‘ಸರಕು’ ಕೊಂಡೊಯ್ಯುವ ಸಮೃದ್ಧ ವಾಹನಗಳು. ಊರು ಪ್ರಶಾಂತವೆಂಬಂತೆ ಕಂಡರು. ರೈತರ ಮನಸ್ಸಿನಲ್ಲಿ ದುಗುಡ. ದುಮ್ಮಾನ. ಇಲ್ಲಿ ತಲೆತಲಾಂತರಗಳಿಂದ ಆರಂಭ ಮಾಡಿಕೊಂಡು ಬಂದ ದೇವನಹಳ್ಳಿ ತಾಲ್ಲೂಕಿನ ಈ ರೈತ ಬಂಧುಗಳ ಮನದಾಳದಲ್ಲಿ, ಕೈಗಾರಿಕಾ ಪ್ರದೇಶದ ಅಭಿವೃದ್ಧಿಯ ಹೆಸರಿನಲ್ಲಿ ಕೆ.ಐ.ಎ.ಡಿ.ಬಿ. ನೋಟಿಸ್ ನೀಡಿದಾಗಿನಿಂದಲೂ ಎದ್ದಿರುವ ತಳಮಳಗಳನ್ನು ಹಿಡಿದಿಡುವ ಸಣ್ಣ ಪ್ರಯತ್ನ ಇದು.

‘ಆರಂಭ’ ಬಿಟ್ಟು ಬೇರೇನೂ ಗೊತ್ತಿಲ್ಲದ ನಾರಾಯಣಮ್ಮ ಮತ್ತು ಕುಟುಂಬ

ಈ ಚಿತ್ರದಲ್ಲಿ ಇರುವವರು ನಾರಾಯಣಮ್ಮ. ನಲ್ಲಪ್ಪನಹಳ್ಳಿಯ ಹಳ್ಳಿಯ ರೈತ ಮಹಿಳೆ. ವಯಸ್ಸು 80. ಕುಟುಂಬಕ್ಕೆ ಮೂರು ಎಕರೆ ಜಮೀನು ಇದೆ. ನೀರಾವರಿ ಸೌಕರ್ಯ ಇಲ್ಲ. ಮಳೆಯನ್ನು ಆಶ್ರಯಿಸಿ ರಾಗಿ, ಜೋಳ ಬೆಳೆಯುತ್ತಾರೆ. 4 ಮಕ್ಕಳು ನಾಲ್ಕೂ ಜನ ವ್ಯವಸಾಯವನ್ನೇ ನೆಚ್ಚಿಕೊಂಡಿರುವವರು. ಒಬ್ಬ ಮಗ ಮಾತ್ರ 7 ತರಗತಿವರೆಗೆ ಓದಿಕೊಂಡಿದ್ದಾನೆ ಅಷ್ಟೆ. ಉಳಿದವರು ಓದಿಯೂ ಇಲ್ಲ. ಕುಟುಂಬಕ್ಕೆ 10 ಕುರಿ, 4 ಹಸುಗಳಿವೆ. ಮನೆಯ ಬಳಿಯ ಒಂದಷ್ಟು ಕೋಳಿಗಳನ್ನು ಸಾಕಿಕೊಂಡಿದ್ದಾರೆ. ಭೂಮಿಯನ್ನೇ ನಂಬಿ ಬದುಕು ಕಟ್ಟಿಕೊಂಡಿರುವವರು ಇವರು.

ಇದೀಗ ನಾವು ಕೈಗಾರಿಕೆ ಮಾಡ್ತೀವಿ ಅಂತ ಹೇಳ್ಕೊಂಡು ಬಂಡವಾಳಿಗರು, ರಿಯೆಲ್ ಎಸ್ಟೇಟ್ ಮಾಲಿಕರು ಸರಕಾರದ ಮುಖವಾಡ ಮುಂದಿಟ್ಟುಕೊಂಡು ಭೂಮಿ ಕಿತ್ತುಕೊಳ್ಳಲು ಬಂದರೆ ಈ ಬಡವರು ಎಲ್ಲಿಗೆ ಹೋಗಬೇಕು. ಏನು ಮಾಡಬೇಕು. ಸರಕಾರ ಕೊಡುವ ಪರಿಹಾರದ ಹಣ ತಗೊಂಡು ಇವರು ಏನು ಮಾಡಬಹುದು. ? ಅದು ಎಷ್ಟು ದಿನ ಬರುತ್ತದೆ ? ಏನೂ ನಷ್ಟ-ಅನಾಹುತ ಆಗದಂತೆ ಯಾವುದಾದರೂ ವ್ಯಾಪಾರ ವಹಿವಾಟನ್ನೋ, ಸಣ್ಣ ಪುಟ್ಟ ಕೈಗಾರಿಕೆಯನ್ನೋ ನಡೆಸುವ ತಿಳುವಳಿಕೆ, ಛಾತಿ-ಅನುಭವ ಈ ಕುಟುಂಬದ ಸದಸ್ಯರಿಗೆ ಇದೆಯಾ ? ಭೂಮಿ ಕೊಟ್ಟ ಮೇಲೆ ಈ ಕುಟುಂಬಗಳಿಗೆ ಉಳಿಯೋ ಆಯ್ಕೆಗಳೇನು ? ಇಲ್ಲಿ ಯಾವುದಾದಡಿಗೆ ಕೈಗಾರಿಕೆ(ಕೈಗಾರಿಕೆ ಬಂದರೆ)ಯಲ್ಲಿ ವಾಚ್‌ಮನ್ ಕೆಲಸ, ಇಲ್ಲಾಂದರೆ ಕಸ ಗುಡಿಸೋ ಕೆಲಸ ಇಂಥದ್ದೇನಾದರೂ ಮಾಡಬೇಕು ಅಲ್ಲವೇ ? ಹಚ್ಚ ಹಸಿರಿನ ಫಲವತ್ತಾದ ಭೂಮಿಯ ಮಾಲಿಕರಾಗಿ, ಯಾರ ತಂಟೆಗೂ ಹೋಗದೇ ತಮ್ಮ ಪಾಡಿಗೆ ತಾವು, ದುಡಿಯುತ್ತಾ ಇರುವವರು ಇವರು. ಕುವೆಂಪು ಅವರು ಹೇಳುವ ‘ನೇಗಿಲ ಯೋಗಿಗಳು’ ಎಂದರೆ ಇವರೇ.

ಇದನ್ನೂ ಓದಿ: ಕರ್ನಾಟಕ ಗುರುಪಂಥ

ಮತ್ಯಾರು ಅಲ್ಲ. ತಮ್ಮ ಕುಟುಂಬಕ್ಕೂ, ಬೆಂಗಳೂರಿನಂತಹ ನಗರಕ್ಕೂ ಅನ್ನ ಬೆಳೆದುಕೊಡುತ್ತಿರುವ ಇವರು ಭೂಮಿ ಕಳೆದುಕೊಂಡು ಹೀಗೆ ಬೀದಿ ಪಾಲಾಗಬೇಕೇ? ಎಂಬ ಪ್ರಶ್ನೆ ಗಂಭೀರವಾಗಿ ಎದ್ದು ಬಂದಿದೆ. ಮೊಬೈಲ್ ಡೇಟಾದಿಂದ ಹೊಟ್ಟೆ ತುಂಬುವುದಿಲ್ಲ ತಾನೆ ? ಕಂಪ್ಯೂಟರ್-ಲ್ಯಾಪ್‌ಟಾಪ್-ಟ್ಯಾಬ್‌ಗಳೊಗಿನ ಬದನೆಕಾಯಿ, ಹೀರೇಕಾಯಿ, ಮೂಲಂಗಿ-ಪರಂಗಿಗಳನ್ನು ‘ಡೌನ್ ಲೋಡ್’ ಮಾಡಿಕೊಂಡು ಅಡುಗೆ ಮಾಡೋದಕ್ಕೆ, ಇಲ್ಲ ತಿನ್ನೋದಕ್ಕೆ ಆಗೋದಿಲ್ಲ ತಾನೆ.!! ಹಾಗಿದ್ದ ಮೇಲೆ ಆಳುವವರಿಗೆ ಕೊಂಚ ವಿವೇಕ ಬೇಕು ತಾನೇ ?? ಪರಂಗಿಯವರ ಥರಾನೇ ಬಂಡವಾಳಿಗರು ಕೈತೋರಿದ ಭೂಮಿ ಕಿತ್ತು ಕೊಡುತ್ತೇವೆ ಎಂದರೆ ಒಪ್ಪಬಹುದೇ ?

ಹಳ್ಳಿಗಳನ್ನೇ ಇಲ್ಲವಾಗಿಸುತ್ತಾ ಹೋದರೆ

ಬೆಂಗಳೂರಿನಂತಹ ಮಹಾನಗರಗಳಲ್ಲಿ ಹುಟ್ಟಿ ಬೆಳೆಯುವ ಈಗಿನ ಕಾಲದ ಎಷ್ಟೋ ಮಕ್ಕಳಿಗೆ ತಾವು ನಂದಿನಿ ಬೂತ್‌ನಿಂದ ಅಥವಾ ಅಂಗಡಿಗಳಿಂದ ತರುವ ‘ನಂದಿನಿ’ ಹಾಲೋ, ‘ದೊಡ್ಲ’ನೋ ಅಥವಾ ‘ಹೆರಿಟೇಜ್’ದೋ ಹಾಲಿನ ಪಾಕೆಟ್‌ಗಳಲ್ಲಿ ತುಂಬಿರುವ ಹಾಲು ಎಲ್ಲಿಂದ ಬರುತ್ತದೆ ಎಂಬುದು ಗೊತ್ತಿರುವುದಿಲ್ಲ. ಹಾಲು, ಮಳಿಗೆ ಅಥವಾ ಅಂಗಡಿಯಲ್ಲಿ ಉತ್ಪಾದನೆ ಆಗುವುದಿಲ್ಲ. ಹಸು-ಎಮ್ಮೆಗಳು ಹಾಲು ಕೊಡುತ್ತವೆ ಎಂಬುದು ಮಕ್ಕಳಿಗೆ ಬೇಗ ಮನವರಿಕೆ ಆಗುವುದಿಲ್ಲ. ಈಗಿನ ದಿನಗಳಲ್ಲಿ ಜೊಮೊಟೋ, ಸ್ವಿಗ್ಗಿಗಳಲ್ಲಿ ಈಗ ಮನೆ ಬಾಗಿಲಿಗೆ ಊಟ, ಫಿಜ್ಞಾ, ಬರ್ಗರ್ ಡೆಲಿವರಿ ಕೊಟ್ಟು ಬಿಡುತ್ತಾರೆ. ದವಸ-ಧಾನ್ಯ, ಕಾಳು-ಕಡಿಗಳು ಸಹ ಹಾಗೆ ಆನ್ ಲೈನ್ ಬುಕ್ಕಿಂಗ್‌ನಿಂದ ಬಂದು ಬೀಳುತ್ತವೆ.

ಇವನ್ನಷ್ಟೇ ನೋಡುವ ಮಕ್ಕಳಿಗೆ ಹೊಲ, ಗದ್ದೆ, ತೋಟಗಳ ಕಲ್ಪನೆ, ರೈತರ ಬದುಕಿನ ಸಂಕಟ-ಸಂಭ್ರಮಗಳ ಅಂದಾಜೇ ಸಿಕ್ಕುವುದಿಲ್ಲ. ಫಿಡ್ಜಾ, ಬರ್ಗರ್, ಬಿಸ್ಕತ್ತು, ಬನ್ನು ತಯಾರಿಸಬೇಕಾದರೂ ರೈತರು ಬೆಳೆಯುವ ಸೊಪ್ಪು-ತರಕಾರಿ, ದವಸ-ಧಾನ್ಯ, ಕಾಳು-ಕಡಿ ಬೇಕು, ಅದಕ್ಕೆ ರೈತರ ಕೈಯಲ್ಲಿ ಭೂಮಿ ಇರಬೇಕು ಎಂಬುದು ಅವರಿಗೆ ಅರ್ಥವಾಗುವುದಿಲ್ಲ. ಮಕ್ಕಳಿಗೇನೋ ಅರ್ಥವಾಗುವುದಿಲ್ಲ ಸರಿ. ಈ ಸರಕಾರ ನಡೆಸುವ ದೊಡ್ಡ ಜನಗಳಿಗೂ ಅದು ಅರ್ಥವಾಗುವುದಿಲ್ಲ ಎಂದರೆ ಏನು ಕತೆ ? ಸರಕಾರ ರೈತರ ಮಾತನ್ನು ಕೇಳಿಸಿಕೊಳ್ಳೋದಕ್ಕೆ ತಯಾರಿಲ್ಲ. ಆದರೆ ಆರಂಭವನ್ನೇ ನೆಚ್ಚಿಕೊಂಡಿರುವ ಇಂತಹ ರೈತರ ಮಾತನ್ನು ರಾಜ್ಯದ ಜನ ಕೇಳಿಸಿಕೊಳ್ಳಬೇಕು ಅವರ ಜೊತೆಗೆ ನಿಲ್ಲಬೇಕು.

ರೈತರು ಬೆಳೆ ಬೆಳೀಲಿಲ್ಲ ಅಂದ್ರೆ ಸಿಟಿ ಜನ ಏನ್ ತಿನ್ತರೆ?

ಮನೆಯಲ್ಲಿ ನಾನು ನನ್ನ ಗಂಡ ಮತ್ತು ಇಬ್ಬರು ಮಕ್ಕಳು ಇದ್ದೀವಿ. ನಮಗೆ 3 ಎಕರೆ ಜಮೀನಿದೆ. 2 ಎಕರೇಲಿ ದಾಕ್ಷಿ ಹಾಕಿದೀವಿ. ರಾಗಿ, ಕಂಬಳಿ ಸೊಪ್ಪು(ಹಿಪ್ಪು ನೇರಳೆ) ಬೆಳೀತೀವಿ. ವ್ಯವಸಾಯದ ಕೆಲಸಕ್ಕೆ ಕೂಲಿಗಳು ಸಿಗಲ್ಲ. ರಾತ್ರಿ ಮೂರು ಗಂಟೆ ಹೊತ್ತು ಮಾತ್ರ ಕರೆಂಟು ಕೊಡ್ತರೆ. ರಸಗೊಬ್ಬರ ಬೆಲೆ ಸಿಕ್ಕಾಪಟ್ಟೆ ಜಾಸ್ತಿ ಆಗಿದೆ. ತಿಪ್ಪೆ ಗೊಬ್ಬರಕ್ಕೂ ಲೋಡ್‌ಗೆ 10,000 ರೂಪಾಯಿ ಕೊಡ್ಬೇಕು. ಇಷ್ಟರ ಮಧ್ಯೆನೂ ಕಷ್ಟಪಟ್ಟು ವ್ಯವಸಾಯ ಮಾಡ್ತಾ ಇದ್ದೀವಿ.

ನಾವು ಬೆಳೆದಿದ್ ದ್ರಾಕ್ಷಿಗೆ ಕೆ.ಜಿ.ಗೆ 10-12 ರೂಪಾಯಿ ಸಿಗುತ್ತೆ. ಜಾಸ್ತಿ ಅಂದರೆ 20 ರೂಪಾಯಿ. ಅದೇ ದ್ರಾಕ್ಷಿನ ಕೆ.ಆರ್.ಪುರಂ ನಲ್ಲಿ ಕೆ.ಜಿ.ಗೆ 80 ರೂಪಾಯಿಗೆ ಮರ‍್ತಾರೆ. ಸರಕಾರ ಕರೆಂಟು, ನಾವ್ ಬೆಳಿದ್ದಿದ್ದಕ್ಕೆ ಸರಿಯಾದ ಬೆಲೆ ಕೊಡಿಸ್ ಕೊಟ್ರೆ ಇನ್ನೂ ಚೆನ್ನಾಗಿ ವ್ಯವಸಾಯ ಮಾಡ್ತೀವಿ. ಈಗ ಹಸು-ಎಮ್ಮೆ, ಕುರಿ-ಕೋಳಿ ಸಾಕ್ಕೊಂಡ್ ಎಂಗೋ ಬದುಕ್ತಾ ಇದ್ದೀವಿ. ಈಗ ನಮ್ಮ ಜಮೀನು ಕಿತ್‌ಕೊಂಡ್ರೆ ನಾವೇನು ತಿನ್ನೋದು. ರೈತರು ಬೆಳೆ ಬೆಳೀಲಿಲ್ಲ ಅಂದ್ರೆ ಸಿಟಿ ಜನ ಏನ್ ತಿನ್ತರೆ ?

ಅನಸೂಯಮ್ಮ, ರೈತ ಮಹಿಳೆ.
ನಲ್ಲಪ್ಪನಹಳ್ಳಿ.

ನಾವು ಭೂಮಿ ಕೊಡಲ್ಲ, ಹಣ್ಣು ತರಕಾರಿ ಬೆಳೀತೀವಿ.

ನಮ್ಮ ಕುಟುಂಬಕ್ಕೆ ಎರಡು ಎಕರೆ ಜಮೀನಿದೆ. ಅದರಲ್ಲಿ ದ್ರಾಕ್ಷಿ, ಬಾಳೆ ಬೆಳೀತೀವಿ. ಕ್ಯಾಬೇಜ್, ಶುಂಟಿಯನ್ನೂ ಬೆಳೀತೀವಿ. ಬಾಳೇಹಣ್ಣಿಗೆ ಕೇಜಿಗೆ 15-20 ರೂಪಾಯಿ ಸಿಕ್ಕರೆ ಅದೇ ಜಾಸ್ತಿ. ಕ್ಯಾಬೇಜ್(ಎಲೆಕೋಸು)ಗೆ ಒಂದು ಕೇಜಿಗೆ 1 ರೂಪಾಯಿಯಿಂದ 20-25 ರೂಪಾಯಿರ‍್ಗೂ ಎಷ್ಟು ಸಿಗುತ್ತೋ ಗ್ಯಾರಂಟಿ ಇಲ್ಲ. ಇಷ್ಟಾದರೂ ನಾವು ವ್ಯವಸಾಯ ಬಿಡೋದಿಲ್ಲ.

ಭೂಮಿ ಕೊಟ್ಟರೆ ಕೆಲಸ ಕೊಡ್ತೀವಿ ಅಂತಾರೆ. ಹುಡುಗ್ರಾಗಿರೋರಿಗೆ ಎಂಥದ್ದೋ ಕೆಲಸ ಕೊಡುತ್ತಾರೆ. ಆದರೆ ಸ್ವಲ್ಪ ವಯಸ್ಸಾದವರಿಗೆ ಅವರು ಕೆಲ್ಸ ಕೊಡಲ್ಲ. ಅವರು ಏನು ಮಾಡ್ಬೇಕು. ಬೆಂಗಳೂರಿನ ಜನಕ್ಕೆ ನಾವು ಬೆಳೆಯೋ ಹಣ್ಣು, ತರಕಾರಿ ಬೇಕೇ ಬೇಕು ತಾನೆ. ನಾವು ಹಣ್ಣು ತರಕಾರಿ ಬೆಳೀತೀವಿ. ಭೂಮಿ ಕೊಡಲ್ಲ.

ಪ್ರೇಮ, ರೈತ ಮಹಿಳೆ.
ನಲ್ಲಪ್ಪನಹಳ್ಳಿ.

ಸರಕಾರ ನಮ್ಮ ಕಷ್ಟ ಕೇಳ್ಬೇಕು ಜಮೀನು ಕೇಳಬಾರದು

ನಮಗೆ 2 ಎಕರೆ ಜಮೀನಿದೆ. 1 ಎಕರೇಲಿ ರಾಗಿ ಬೆಳ್ಕೋತೀವಿ. ಉಳಿದಿದ್ರಲ್ಲಿ ಗುಲಾಬಿ ಗಿಡ ಹಾಕಿದೀವಿ. ಕೆ.ಜಿ.ಗೆ 50 ರೂಪಾಯಿ, ಜಾಸ್ತಿ ಅಂದರೆ 100 ರೂಪಾಯಿ ಸಿಗುತ್ತೆ. ಮಳೆ ಜಾಸ್ತಿ ಬಂದರೆ ಅರಿಷಿನ ರೋಗ ಬರುತ್ತೆ. ಹವಾಗುಣ ಏರುಪೇರು ಆದರೆ ಹೂವ ಹಾಳಾಗುತ್ತೆ. ನಮ್ಮ ಕಷ್ಟ ಕೇಳೋರಿಲ್ಲ. ಸರಕಾರ ನಮ್ಮ ಕಷ್ಟ ಕೇಳ್ಬೇಕು. ಜಮೀನು ಕೇಳಬಾರದು. ನಾವು ಭೂಮಿ ಕೊಡಲ್ಲ.

‘ಪುಷ್ಪ’ ಬೆಳೆದುಕೊಡುವ ‘ಪುಷ್ಪ’
ನಲ್ಲಪ್ಪನಹಳ್ಳಿ.

23 ದಾಖಲೆ ಕೊಟ್ಟು ಅಲೆಯಬೇಕು ಲಂಚವನ್ನೂ ಕೊಡಬೇಕು ; ಸೋ, ಭೂಮಿ ಕೊಡಲ್ಲ..

ಇವರ ಹೆಸರು ಮುಕುಂದ್. ವಯಸ್ಸು 45. ಬೆಂಗಳೂರಿನ ವಿವೇಕಾನಂದ ಕಾಲೇಜಿನಲ್ಲಿ ಬಿ.ಎ. ಓದಿದ್ದಾರೆ. ವ್ಯವಸಾಯ, ಹೈನುಗಾರಿಕೆ, ಕೋಳಿ ಸಾಕಾಣಿಕೆ ಎಲ್ಲದರ ಕಷ್ಟನಷ್ಟ ಬಲ್ಲ ರೈತರು. ‘’ಸರಕಾರ ಏನೇ ಮಾಡಿದರೂ, ಏನೇ ಆದರೂ ನಾವು ನಮ್ಮ ಜಮೀನನ್ನು ಕೊಡುವುದಿಲ್ಲ.’’ ಎನ್ನುತ್ತಾರೆ ಅವರು. ಅದಕ್ಕೆ ಸರಿಯಾದ ಕಾರಣವನ್ನೂ ಕೊಡುತ್ತಾರೆ. ಮುಂದೆ ಇರುವುದು ಅವರದೇ ಮಾತುಗಳು ಓದಿ. ‘’ನಮ್ಮ ತಂದೆ-ಚಿಕ್ಕಪ್ಪ-ಇಬ್ಬರು ಅತ್ತೆಯರ ಒಟ್ಟು ಕುಟುಂಬಕ್ಕೆ ಪೋಲನಹಳ್ಳಿ, ಮುದ್ದೇನಹಳ್ಳಿಯಲ್ಲಿ ಒಟ್ಟು 15 ಎಕರೆ ಜಮೀನಿದೆ. ಅದರಲ್ಲಿ 4 ಎಕರೆ ಮಾವು, ಗೋಡಂಬಿ 4 ಎಕರೆಯಲ್ಲಿ, ನೀಲಗಿರಿ 2 ಎಕರೆಯಲ್ಲಿ ಬೆಳೆದಿದ್ದೇವೆ. ಇನ್ನು ಉಳಿದಂತೆ ರಾಗಿ ಬೆಳೆಯುತ್ತೇವೆ. ಈಗಾಗಲೇ ದೇವನಹಳ್ಳಿ ವಿಮಾನ ನಿಲ್ಲಾಣ ಸಮೀಪದ ‘ಏರೋ ಸ್ಪೇಸ್ ಕೈಗಾರಿಕಾ ಪ್ರದೇಶ’ ಹೆಸರಿನ ಯೋಜನೆಗೆ ನಮ್ಮ ಸಂಬಂಧಿಕರು ಭೂಮಿ ಕೊಟ್ಟಿದ್ದಾರೆ.

ಅವರ ಅನುಭವ ಏನು ಅಂತ ನೋಡಬೇಕು. ಸರಕಾರ ರೈತರ ಭೂಮಿಗೆ ಪರಿಹಾರ ಕೊಡುತ್ತೇನೆಂದರೂ, ಅದು ಎಕರೆಗೆ 1.10 ಕೋಟಿ. ಇದರಲ್ಲಿ ಶೇ. 10 ರಷ್ಟು ಹಣವನ್ನು ಅಧಿಕಾರಿಗಳಿಗೆ ಲಂಚವಾಗಿ ಕೊಡಲೇ ಬೇಕು. (ಯಾವ ಅಧಿಕಾರಿಯೂ ನೇರವಾಗಿ ಲಂಚ ಕೇಳುವುದಿಲ್ಲ. ಆದರೆ ಅದಕ್ಕಾಗೇ ಬ್ರೋಕರ್‌ಗಳ ದೊಡ್ಡ ದಂಡೇ ಇದೆ.) ಭೂಮಿಗೆ ಪರಿಹಾರ ಕೊಡಬೇಕಾದರೆ ಸರಕಾರ ಒಟ್ಟು 23 ದಾಖಲೆಗಳನ್ನು ಕೇಳುತ್ತದೆ. ಎಲ್ಲವೂ ಸರಿ ಇರಬೇಕು. ಏನಾದರೂ ಸಣ್ಣ ಪುಟ್ಟ ಕ್ವೆöÊರಿ(ಆಕ್ಷೇಪಣೆ) ಇದ್ದರೆ ಪರಿಹಾರದಲ್ಲಿ ಅಧಿಕಾರಿಗಳಿಗೆ ಶೇ.20 ಪರಿಹಾರದ ಹಣ ಕೊಡಬೇಕು. (ಏಜೆಂಟರು ಯಾರಿಂದಲಾದರೂ ಆಕ್ಷೇಪಣೆ ಹಾಕಿಸುತ್ತಾರೆ.) ಜಮೀನಿನ ಮೇಲೆ ಕೇಸುಗಳಿದ್ದರೆ ಶೇ. 30 ಲಂಚ ಕೊಡಬೇಕು. ದುರಸ್ತಿ ಆಗಿಲ್ಲ ಅಂದರೆ ಅದು ಬೇರೆ. ಆಗ ಶೇ.25 ಲಂಚ. ‘ಪಿ-ನಂಬರ್’ ಅಂದರೆ ಗೋಮಾಳ, ಗ್ರಾಂಟ್ ಜಮೀನು(ಸರ್ಕಾರ ಅನುದಾನ ನೀಡಿದ್ದು.)ಸರಕಾರಿ ಜಮೀನು ಉಳುಮೆ ಮಾಡುತ್ತಿದ್ದುದಾದರೆ ಶೇ. 25 ಲಂಚ. ಪೋಡಿ-ದುರಸ್ತಿ ಆಗಿಲ್ಲ ಅಂದರೆ ಇನ್ನೂ ಜಾಸ್ತಿ. ಕೋರ್ಟುಗಳಲ್ಲಿ ವ್ಯಾಜ್ಯ ನಡೆಯುತ್ತಿದ್ದರೆ ಬೇರೆ ಬೇರೆ ಲೆವೆಲ್ ಲಂಚ. ಸಿವಿಲ್ ಸೂಟ್‌ಗೆ ಬೇರೆ, ಕ್ರಿಮಿನಲ್ ಸೂಟಿಗೆ ಬೇರೆ.

ಪರಿಹಾರ ಪಡೆದುಕೊಳ್ಳೊದಕ್ಕೆ ಕಚೇರಿಯಿಂದ ಕಚೇರಿಗಳಿಗೆ ಸಾಕಷ್ಟು ಅಲೀಬೇಕು. ಅಷ್ಟು ಹೋಗಿ ಬಂದು ಮಾಡಿ ಪರಿಹಾರ ಬಂದರೂ, ಸ್ನೇಹಿತರು-ಬಂಧುಗಳ ಮುತ್ತಿಕೊಳ್ಳುತ್ತಾರೆ. ಕೊಡದೇ ಇರಕ್ಕಾಗಲ್ಲ. ಮಕ್ಕಳು ಮರಿಗಳು, ದುಂದು ವೆಚ್ಚಕ್ಕೆ, ‘ಎಣ್ಣೆ’ಗೆ ದಾಸರಾಗಬಹುದು. ಜವಾಬ್ದಾರಿಯಿಂದ ಖರ್ಚು ಮಾಡ್ತೀವಿ ಅಂತ ಹೊರಟವರೂ, ಕಾರು-ಒಡವೆ ಅಂತ, ‘ಒಂದು ಒಳ್ಳೆ ಮನೆ’ ಕಟ್ಟಿಕೊಳ್ಳೋಣ ಅಂತ ಹೋಗಿ ಯಾವ-ಆದಾಯ-ಲಾಭವನ್ನೂ ತರದೇ ಇರೋ ಕಾರ-ಮನೆ, ಮದುವೆಗೆ ಹಣ ಖರ್ಚು ಮಾಡಿಕೊಂಡು ಖಾಲಿ ಆಗಿದ್ದಾರೆ. ಎಷ್ಟೋ ಮನೆಗಳಲ್ಲಿ ಮಕ್ಕಳು, ಅಗತ್ಯ ಇಲ್ಲದಿದ್ದರೂ ಬೈಕ್ ಅದು-ಇದು ಅಂತ, ಹಠ ಮಾಡಿ ಕೊಡಿಸಿಕೊಂಡು, ಊರೂರು ತಿರುಗಿ ಪರೋಡಿಗಳಾಗಿ, ಪೋಲಿ ಬಿದ್ದಿದ್ದಾರೆ. ಮತ್ತೊಂದು ಕಡೆ ಮೊದಲ ಹಂತದಲ್ಲಿ ವಶಪಡಿಸಿಕೊಂಡ 1,282 ಎಕರೆ ಭೂಮಿಯಲ್ಲಿ ಬಹಳಷ್ಟು ಬಳಕೆ ಆಗಿಲ್ಲ. ಬ್ರಿಗೇಡ್ ಬಿಲ್ರ‍್ಸ್ನಂತಹ ಖಾಸಗಿ ನಿರ್ಮಾಣ ಸಂಸ್ಥೆಗಳಿಗೆ(73 ಎಕರೆ), ಚಾಣಕ್ಯ ಯೂನಿವರ್ಸಿಟಿಯಂತ ಖಾಸಗಿ ಸಂಸ್ಥೆಗಳಿಗೆ(117 ಎಕರೆ) ಅಗ್ಗದ ಬೆಲೆಗೆ ಕೊಡಲಾಗಿದೆ. (ರೈತರಿಗೆ 1.2 ಕೋಟಿ ಕೊಟ್ಟು ಖರೀದಿಸಿದ ಭೂಮಿಯನ್ನು ಚಾಣಕ್ಯ ವಿವಿಗೆ ಎಕರೆಗೆ 50 ಲಕ್ಷಕ್ಕೆ ನೀಡಲಾಗಿದೆ.)

ಮೊದಲ ಹಂತದಲ್ಲೂ ಭೂಸ್ವಾಧೀನ ಬಿಟ್ಟಿಲ್ಲ

ಮೊದಲ ಹಂತದ ‘ಏರೋ ಸ್ಪೇಸ್’ ಯೋಜನೆಯಲ್ಲಿ ಭೂಸ್ವಾಧೀನ ಮಾಡಿಕೊಳ್ಳಲು ನೋಟಿಫೈ ಮಾಡಿರುವ ನಮ್ಮ ಕುಟುಂಬದ ಪೋಲನಹಳ್ಳಿ ಜಮೀನಿನಲ್ಲಿ, 12.5 ಎಕರೆ ಜಾಗದಲ್ಲಿ ಕೋಳಿ ಫಾರಂ ನಡೆಸುತ್ತಿದ್ದೇವೆ. ಸದ್ಯ 25 ಸಾವಿರ ಕೋಳಿಗಳನ್ನು ಸಾಕುತ್ತಿದ್ದೇವೆ. ಇದಲ್ಲದೇ ಬಾದಾಮಿ, ಮಲ್ಲಿಕಾ, ಸೇಂದೂರ, ರಸಪುರಿ, ಬೈಗಾನ್‌ಪಲ್ಲಿ ಮುಂತಾದ ತಳಿಗಳ 600 ಮಾವಿನ ಮರಗಳಿವೆ.

ಸಪೋಟ, ಸೀಬೆ, ಬೆಟ್ಟದ ನೆಲ್ಲಿಕಾಯಿ, ಚಕ್ಕೋತ, ‘ಬೆಂಗಳೂರು ಬ್ಲೂ’ ತಳಿಯ ಕಪ್ಪು ದ್ರಾಕ್ಷಿ, ಲಿಚಿ ಹಣ್ಣಿನ ಮರಗಳು, ನೈಸರ್ಗಿಕವಾಗಿ ಬೆಳೆದಿರುವ ಶ್ರೀಗಂಧ ಎಲ್ಲವೂ ಇವೆ. ‘ಹಾಲೋ ಬ್ರಿಕ್ಸ್’ ಯೂನಿಟ್ ಇದೆ. ಬೆಂಗಳೂರು ಮತ್ತು ಸುತ್ತಮುತ್ತಲ ನಗರಗಳಿಗೆ ಬೇಕಾದ ಮೊಟ್ಟೆ-ಮಾಂಸ-ಹಣ್ಣು-ಹಂಪಲು-ಇಟ್ಟಿಗೆ ಉತ್ಪಾದಿಸಿ ಕೊಡುತ್ತಿದ್ದೇವೆ. ಮೊದಲ ಹಂತದ ಭೂಸ್ವಾಧೀನದ ವಿಷಯದಲ್ಲಿ ನಾವು ಕೋರ್ಟಿಗೆ ಹೋಗಿದ್ದೇವೆ ಮೊದಲ ಹಂತದ ಯೋಜನೆಯಲ್ಲಿ ಕೃಷಿ ಭೂಮಿ ಬಹಳ ಕಡಿಮೆ ಇತ್ತು. ಹಾಗಾಗಿ ಒಂದಷ್ಟು ಜನ ಭೂಮಿ ಕೊಟ್ಟಿದ್ದಾರೆ. ಆದರೆ ನಾವು ನಮ್ಮ ಕೃಷಿ ಭೂಮಿಯ ಸ್ವಾಧೀನ ಬಿಟ್ಟಿಲ್ಲ.

ಏನಾದರಾಗಲಿ ಹೋರಾಡ್ತಿವಿ. ಈಗ ಎರಡನೇ ಹಂತದ ಭೂಸ್ವಾಧೀನ ಯೋಜನೆಯಲ್ಲಿ ನೋಟಿಫಿಕೇಷನ್ ಹೊರಡಿಸಿರುವುದರಿಂದ ರೈತರ ಕೃಷಿಗೂ ಸಮಸ್ಯೆಯಾಗಿದೆ. ಬೋರ್ ಕೊರೆಸಬೇಕು. ಹಣ ಹಾಕಿದರೆ ಮುಂದೆ ಏನಾಗುವುದೋ ಎಂಬ ಆತಂಕ ರೈತರಿಗೆ. ಹಲವು ಬೆಳೆಗಳು ಒಣಗುತ್ತಿವೆ. ಏನಾದರಾಗಲಿ ನಾವು ಭೂಮಿ ಕೊಡೋದಿಲ್ಲ. ಹೋರಾಡ್ತಿವಿ.’’

– ಮುಕುಂದ್, ರೈತರು.
ಚೀಮಾಚನಹಳ್ಳಿ

ಇದನ್ನೂ ನೋಡಿ: ಉದ್ಯೋಗ ಸಂಬಂಧಿತ ಪ್ರೋತ್ಸಾಹ ಯೋಜನೆ(ELI) ಎನ್ನುವ ವಂಚನೆಯ ಆಳ‌ ಅಗಲ.. Janashakthi Media

Donate Janashakthi Media

Leave a Reply

Your email address will not be published. Required fields are marked *