– ನಾ ದಿವಾಕರ
ಅಳಿಸಿ ಹೋದ ನನಗೆ ನೀವೇ ಹೆಸರಿಟ್ಟಿರಿ
‘ನಿರ್ಭಯ’
ಹಾಳೆಯ ಪೆನ್ಸಿಲ್ ಮಾರ್ಕಿನಂತೆ
ಅದ್ಯಾರೋ ಒಡಲ ಹಣತೆ ಆರಿಸಿಬಿಟ್ಟರು
ನೀವು ಮೋಂಬತ್ತಿ ಹಿಡಿದು ಹುಡುಕಿದಿರಿ
ಹನ್ನೆರಡಾಯಿತು ಎಲ್ಲಾದರೂ ಕಂಡಿರಾ
ನನ್ನ ಸಂತತಿಯಲ್ಲಿ ‘ ನಿರ್ಭಯ’ ವನ್ನು ?
ಈಗ ಮತ್ತೊಂದು ಚೀತ್ಕಾರದ ಧ್ವನಿ
ಉಡುಗಿಹೋಯಿತು –
‘ ಅಭಯ’ – ಎಂದುಬಿಟ್ಟಿರಿ
ಮತ್ತೊಂದು ಒಡಲು ಬರಿದಾಯ್ತು
ನಿಮ್ಮ ದನಿ ಇನ್ನೂ ಮೊಳಗುತ್ತಲೇ ಇದೆ
ಇಳೆಯೇ ಕಿವುಡಾಗಿದ್ದಾಳೆ ಬಿಡಿ
ಮುಂದಾದರೂ ‘ಅಭಯ’ದ ಸೂರು ???
ಸತ್ತಿದ್ದೇನೆ,,,
ಕನಸು ಕಾಣಲಾರೆ ಕಣ್ತೆರೆಯಬಲ್ಲೆ
ಸಾಲುಗಟ್ಟಿದ್ದಾರೆ ಸುಟ್ಟು ಬೆಂದವರು
ಇಲ್ಲಿ ಶವಾಗಾರಗಳೆಲ್ಲ ತುಂಬಿವೆ
ಇನ್ನಾದರೂ ನಿಲ್ಲಿಸಿ ಪ್ಲೀಸ್
ಅಲ್ಲಿನ್ನೂ ಮನುಷ್ಯರಿದ್ದಾರೆ ಹೌದಲ್ಲವೇ ?
ಅವರಿಗೆ ಕೂಗಿ ಹೇಳಿ
” ಸಾಕಿನ್ನು ” !!!!