ಪ್ರಕಾಶ ಕಾರಟ್
ಭಿನ್ನಮತ ಮತ್ತು ವಿರೋಧಿ ದನಿಗಳನ್ನು ಅಡಗಿಸಲು ಯುಎಪಿಎ ಬಳಕೆ ಭೀಮ ಕೊರೆಗಾಂವ್ ಕೇಸಿನ ಹದಿನಾರು ಆರೋಪಿಗಳ ಸಂದರ್ಭದಲ್ಲಿ ಕಣ್ಣಿಗೆ ರಾಚುವಂತಿದೆ. ಪ್ರಖ್ಯಾತ ಚಿಂತಕರು, ಸಾಮಾಜಿಕ ಕಾರ್ಯಕರ್ತರನ್ನು ಜೈಲಿಗೆ ಹಾಕುವುದು ಈ ಭಯೋತ್ಪಾದನಾ-ವಿರೋಧಿ ಕಾಯ್ದೆಯ ಅತ್ಯಂತ ನಗ್ನ ದುರುಪಯೋಗ. ಅಷ್ಟೇ ಅಲ್ಲ, ಅದಕ್ಕೆ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಲಾಗಿದೆ, ಇವರುಗಳ ಬಂಧನದ ಮೊದಲೇ ಎರಡು ವರ್ಷಗಳಿಗೂ ಹೆಚ್ಚು ಕಾಲ ಇಂತಹ ಸುಳ್ಳು ಸಾಕ್ಷ್ಯ ಸೃಷ್ಟಿಸುವ ಕೆಲಸ ನಡೆದಿದೆ ಎಂಬುದೂ ಹೆಚ್ಚೆಚ್ಚು ಬೆಳಕಿಗೆ ಬರುತ್ತಿದೆ. ಇಂತಹ ಒಂದು ತಾಂತ್ರಿಕ ಪರಿಣತಿಯ ಮತ್ತು ದೀರ್ಘಾವಧಿ ಕೆಲಸ ಪ್ರಭುತ್ವದ ಮಾಧ್ಯಮದಿಂದಲ್ಲದೆ ಬೇರೆ ಯಾರಿಂದ ಸಾಧ್ಯ? ಇದು ಪ್ರಭುತ್ವ ಅಧಿಕಾರದ ಒಂದು ಅತ್ಯಂತ ಹೀನ ದುರುಪಯೋಗ. ನ್ಯಾಯವ್ಯವಸ್ಥೆ ವಿಕೃತಗೊಳ್ಳದಂತೆ ತಡೆಯಬೇಕಾದರೆ, ಉನ್ನತ ನ್ಯಾಯಾಂಗ ಇದನ್ನು ಪರಿಣತರ ಪರೀಕ್ಷಣೆಗೆ ಒಳಪಡಿಸಲೇಬೇಕಾಗಿದೆ.
84 ವರ್ಷದ ಫಾದರ್ ಸ್ಟಾನ್ ಸ್ವಾಮಿಗೆ ಕಿರುಕುಳ, ಅಂತಿಮವಾಗಿ ಅವರ ಸಾವಿನಲ್ಲಿ ಪರಿಣಮಿಸಿರುವುದು ಮೋದಿ ಆಳ್ವಿಕೆಯಲ್ಲಿ ಅಪರಾಧ ಸಂಬಂಧೀ ನ್ಯಾಯವ್ಯವಸ್ಥೆ ವಿಕೃತಗೊಂಡಿರುವುದರ ಹಲವು ಅಯಾಮಗಳನ್ನು ಹೊರತಂದಿದೆ.
ಇವೆಂದರೆ: ಕರಾಳ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ)ಯನ್ನು ರಾಜಕೀಯ ಮತ್ತು ಸಾಮಾಜಿಕ ಕಾರ್ಯಕರ್ತರ ವಿರುದ್ಧ ಬಳಸುತ್ತಿರುವುದು; ಆಳುವ ಪಕ್ಷದ ಅಜೆಂಡಾವನ್ನು ಈಡೇರಿಸಲು ಎನ್‌ಐಎ ಮತ್ತು ಇತರ ಕೇಂದ್ರೀಯ ಏಜೆನ್ಸಿಗಳನ್ನು ಬಳಸುವುದು; ನ್ಯಾಯಾಂಗದ ಕೆಲವು ವಿಭಾಗಗಳು “ಕಾರ್ಯಾಂಗೀಯ ನ್ಯಾಯಾಂಗ”ವಾಗಿ ವರ್ತಿಸುತ್ತಿರುವುದು, ಮತ್ತು ನಾಗರಿಕರ ಮೂಲಭೂತ ಹಕ್ಕುಗಳನ್ನು ನಿರಾಕರಿಸುವಲ್ಲಿ ಶಾಮೀಲಾಗಿರುವುದು; ಹಾಗೂ ಕೈದಿಗಳ ಮೂಲ ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಒಂದು ಅಮಾನವೀಯ ಜೈಲು ವ್ಯವಸ್ಥೆ.
ಭೀಮ ಕೊರೆಗಾಂವ್ ಪಿತೂರಿ ಎನ್ನಲಾದ ಕೇಸಿನಲ್ಲಿ ಆರೋಪಿಗಳನ್ನಾಗಿಸಿದ ಸ್ಟಾನ್ ಸ್ವಾಮಿ ಮತ್ತು ಇತರ 15 ಮಂದಿಯ ಜೈಲುವಾಸದಲ್ಲಿ ಈ ಎಲ್ಲ ಅಂಶಗಳು ಕೆಲಸ ಮಾಡುತ್ತಿವೆ.
ಎನ್‌ಐಎ ವಿಶೇಷ ನ್ಯಾಯಾಲಯ ಸ್ಟಾನ್ ಸ್ವಾಮಿಯವರ ಜಾಮೀನು-ಮಧ್ಯಂತರ ಮತ್ತು ನಿಯಮಿತ ಜಾಮೀನು- ಅರ್ಜಿಯನ್ನು ಎರಡು ಬಾರಿ ತಿರಸ್ಕರಿಸಿದೆ. “… ಸಮುದಾಯದ ಸಾಮೂಹಿಕ ಹಿತ ಅರ್ಜಿದಾರನ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿಗಿಂತ ಮಿಗಿಲಾದದ್ದು, ಇದರಿಂದಾಗಿ ಮುದಿವಯಸ್ಸು ಅಥವ ಕಾಯಿಲೆಗಳಿವೆ ಎನ್ನುವುದೆಲ್ಲ ಅವರ ಪರವಾಗಿ ನಿಲ್ಲುವುದಿಲ್ಲ” ಎಂದು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸುತ್ತ ಸಂಬಂಧಪಟ್ಟ ನ್ಯಾಯಾಧೀಶರು ಹೇಳಿದ್ದಾರೆ. ಹೀಗೆ ಹೇಳಿರುವುದು, ಪಾರ್ಕಿನ್ಸನ್ ಕಾಯಿಲೆಯಿಂದ ಪೀಡಿತರಾದ, ನಡೆದಾಡುವುದು ಮತ್ತು ತಾನೇ ಆಹಾರ ಸೇವಿಸುವುದೂ ಕಷ್ಟದಾಯಕವಾಗಿದ್ದ ಒಬ್ಬ 84 ವರ್ಷದ ಮುದಿವಯಸ್ಸಿನ ವ್ಯಕ್ತಿಯ ಬಗ್ಗೆ. ಇದಕ್ಕೆ ಮೊದಲು ಇದೇ ಕೋರ್ಟ್ ದ್ರವ ಕುಡಿಯವುದಕ್ಕೆ ಬಳಸಲು ಒಂದು “ಸಿಪ್ಪರ್” (ಹೀರುನಳಿಕೆ) ಕೊಡಿಸಲು ಆದೇಶ ನೀಡಲು ಕೂಡ ನಿರಾಕರಿಸಿತ್ತು.
ಭಿನ್ನಮತ ಮತ್ತು ವಿರೋಧಿ ದನಿಗಳನ್ನು ಅಡಗಿಸಲು ಯುಎಪಿಎ ಬಳಕೆ ಭೀಮ ಕೊರೆಗಾಂವ್ ಕೇಸಿನ ಹದಿನಾರು ಆರೋಪಿಗಳ ಸಂದರ್ಭದಲ್ಲಿ ಕಣ್ಣಿಗೆ ರಾಚುವಂತಿದೆ. ಆನಂದ್ ತೇಲ್ತುಂಬ್ಡೆಯವರಂತಹ ಮತ್ತು ಸುಧಾ ಭಾರದ್ವಾಜ್‌ರಂತಹ ಪ್ರಖ್ಯಾತ ಚಿಂತಕರು, ಸಾಮಾಜಿಕ ಕಾರ್ಯಕರ್ತರನ್ನು ಜೈಲಿಗೆ ಹಾಕುವುದು ಈ ಭಯೋತ್ಪಾದನಾ-ವಿರೋಧಿ ಕಾಯ್ದೆಯ ಅತ್ಯಂತ ನಗ್ನ ದುರುಪಯೋಗ. ಯುಎಪಿಎ ಅಡಿಯಲ್ಲಿ ಜಾಮೀನು ಕುರಿತಂತೆ ಅತ್ಯಂತ ಕಠಿಣ ಉಪಬಂಧ ಇರುವುದರಿಂದ ಜಾಮೀನು ಸಿಗುವುದು ಅಸಾಧ್ಯವೇ ಸರಿ. ಏಕೆಂದರೆ ಆರೋಪಿಯ ಮೇಲೆ ಪ್ರಕರಣ ಇಲ್ಲ ಎಂದು ಮೇಲ್ನೋಟದಲ್ಲೇ ನ್ಯಾಯಾಧೀಶರಿಗೆ ಮನವರಿಕೆಯಾಗಬೇಕು.
ಕಳೆದ ತಿಂಗಳು ದಿಲ್ಲಿ ಹೈಕೋರ್ಟ್, ಈಶಾನ್ಯ ದಿಲ್ಲಿಯ ಗಲಭೆಗಳ ಕೇಸಿನಲ್ಲಿ ಯುಎಪಿಎ ಅಡಿಯಲ್ಲಿ ಜೈಲಿನಲ್ಲಿದ್ದ ಮೂವರು ವಿದ್ಯಾರ್ಥಿ ಕಾರ್ಯಕರ್ತರಿಗೆ ಜಾಮೀನು ಕೊಡುವ ಒಂದು ಭಿನ್ನ ದಾರಿ ತುಳಿದ ತೀರ್ಪನ್ನು ಕೊಟ್ಟಿದೆ. ಇದು ನ್ಯಾಯಾಂಗ ಅನುಸರಿಸಬೇಕಾದ ದಾರಿಗೆ ಒಂದು ಉದಾಹರಣೆಯಾಗಬೇಕಿತ್ತು. ಆದರೆ ಅದರ ‘ಕಾರ್ಯಾಂಗೀಯ’ ಸ್ವರೂಪದ್ದೇ ಕೈಮೇಲಾಗಿದೆ, ಏಕೆಂದರೆ, ಸುಪ್ರಿಂ ಕೋರ್ಟ್ ಇದು ಮೇಲ್ಪಂಕ್ತಿಯಾಗಬಾರದು ಎಂದು ಈ ತೀರ್ಪಿನ ಬಗ್ಗೆ ಕಣ್ಣು ಕೆಂಪಗೆ ಮಾಡಿದೆ. ಈ ಕರಾಳ ಕಾಯ್ದೆಯ ದುರುಪಯೋಗವನ್ನು ಬಯಲಿಗೆಳೆದಿರುವ ಈ ತೀರ್ಪಿನ ಮರುಪರೀಕ್ಷಣೆ ನಡೆಸುವುದಾಗಿ ಹೇಳಿದೆ.
ಆದರೆ, ಈ ಇಡೀ ಪ್ರಕರಣದ ಅತ್ಯಂತ ಕೆಟ್ಟ ಅಂಶವೆಂದರೆ, ಸ್ಟಾನ್ ಸ್ವಾಮಿ ಮತ್ತು ಭೀಮ ಕೊರೆಗಾಂವ್ ಕೇಸಿನ ಇತರ ಆರೋಪಿಗಳು ಮಾವೋವಾದಿ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ತೋರಿಸಲು ಹೇಗೆ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಲಾಗಿದೆ ಎಂಬುದರ ಬಗ್ಗೆ ಬಯಲಿಗೆ ಬಂದಿರುವ ಆಘಾತಕಾರೀ ಸಂಗತಿಗಳು.
ಸ್ಟಾನ್ ಸ್ವಾಮಿಯವರ ಸಾವಿನ ಮರುದಿನ, ಅಮೆರಿಕಾದ ಡಿಜಿಟಲ್ ಅಪರಾಧ ಪತ್ತೆ (ಫೊರೆನ್ಸಿಕ್) ಕಂಪನಿ, ‘ಆರ್ಸೆನಲ್ ಕನ್ಸಲ್ಟಿಂಗ್’ನ ಮೂರನೇ ವರದಿ ಪ್ರಕಟಗೊಂಡಿದೆ. ಈ ಕೇಸಿನ ಇಬ್ಬರು ಆರೋಪಿಗಳಾದ ರೋನಾ ವಿಲ್ಸನ್ ಮತ್ತು ಸುರೇಂದ್ರ ಗಾಡ್ಲಿಂಗ್‌ರವರ ವಕೀಲರುಗಳು ಅಮೆರಿಕನ್ ಬಾರ್ ಅಸೋಸಿಯೇಷನ್ ನೆರವಿನಿಂದ, ತಮ್ಮ ಕಕ್ಷಿದಾರರ ಕಂಪ್ಯೂಟರುಗಳ ಹಾರ್ಡ್ ಡ್ರೈವ್‌ಗಳನ್ನು ಪರೀಕ್ಷೆಗೆ ಕೊಟ್ಟರು. ಈ ಕುರಿತ ಮೊದಲ ಎರಡು ವರದಿಗಳಲ್ಲಿ ರೋನಾ ವಿಲ್ಸನ್‌ರವರ ಕಂಪ್ಯೂಟರಿನಲ್ಲಿ ಕಳ್ಳ ತಂತ್ರಾಂಶವನ್ನು ನೆಲೆಗೊಳಿಸಲಾಗಿತ್ತು ಎಂಬುದನ್ನು ಪತ್ತೆ ಹಚ್ಚಿದ್ದವು. ಈ ತಂತ್ರಾಂಶವನ್ನು ಕಳ್ಳರೀತಿಯಲ್ಲಿ ತುರುಕಿಸುವ ಕೆಲಸ ಅವರ ಬಂಧನದ ಎರಡು ವರ್ಷಗಳ ಮೊದಲು, ಅಂದರೆ 2016 ರಿಂದಲೇ ಆರಂಭವಾಗಿತ್ತು. ಅವರಿಗೆ ಅರಿವಿಲ್ಲದೇ ಅವರ ಕಂಪ್ಯೂಟರಿನಲ್ಲಿ ಮಾವೋವಾದಿ ಕಾರ್ಯಕರ್ತರ ನಡುವಿನ ಮಾಹಿತಿ ಸಂವಹನ ಎಂಬುದನ್ನು ತುರುಕಿಸಲಾಗುತ್ತಿತ್ತು.
ಇಂತಹುದೇ ಕಳ್ಳ ಪ್ರಕ್ರಿಯೆ ಇನ್ನೊಬ್ಬ ಆರೋಪಿಯಾದ ಸುರೇಂದ್ರ ಗಾದ್ಲಿಂಗ್ ರವರ ಕಂಪ್ಯೂಟರಿನೊಡನೆಯೂ ನಡೆದಿದೆ ಎಂದು ಈಗ ಪ್ರಕಟವಾಗಿರುವ ಮೂರನೇ ವರದಿ ತೋರಿಸುತ್ತದೆ. ಗಮನಾರ್ಹ ಸಂಗತಿಯೆಂದರೆ, ಈ ವರದಿ, ಹೇಗೆ ಈ ತಥಾಕಥಿತ “ಮಾವೋವಾದಿ” ಸಂವಹನದ ಪ್ರತಿಗಳನ್ನು ಸ್ಟಾನ್ ಸ್ವಾಮಿ ಮತ್ತು ಸುಧಾ ಭಾರಧ್ವಾಜ್‌ರವರ ಕಂಪ್ಯೂಟರ್‌ಗಳಿಗೂ ಸೇರಿಸಲಾಗಿತ್ತು ಎಂಬುದನ್ನು ಬೆಳಕಿಗೆ ತಂದಿದೆ.
ಇದರಲ್ಲಿ ಸ್ಟಾನ್ ಸ್ವಾಮಿಯವರು ತಮ್ಮ ಬಂಧನದ ಮೊದಲು ನೀಡಿದ ವೀಡಿಯೋ ಸಂದರ್ಶನದಲ್ಲಿ ಹೇಳೀರುವುದಕ್ಕೆ ವಿವರಣೆ ಸಿಗುತ್ತದೆ. ಎನ್‌ಐಎ ತನಿಖಾಗಾರರು ಸ್ಟಾನ್ ಸ್ವಾಮಿಯವರ ಕಂಪ್ಯೂಟರಿನಲ್ಲಿ ಮಾವೋವಾದಿಗಳ ನಡುವಿನ ಇ-ಮೇಲ್‌ಗಳಲ್ಲಿ ಅವರ ಹೆಸರು ಪ್ರಸ್ತಾಪವಾಗಿರುವ ಬಗ್ಗೆ ಕೇಳಿದಾಗ ಸ್ಟಾನ್ ಸ್ವಾಮಿ ತನ್ನ ಕಂಪ್ಯೂಟರಿನಲ್ಲಿ ಇಂತಹ ಯಾವುದೇ ಪತ್ರವ್ಯವಹಾರ ತನ್ನ ಅರಿವಿಗೆ ಬಂದಿಲ್ಲ ಎಂದು ಹೇಳಿದರು.
ಸ್ವಾಮಿಯವರನ್ನು ಯುಎಪಿಎ ಅಡಿಯಲ್ಲಿ ಬಂಧಿಸಿರುವುದು ಮಾತ್ರವಲ್ಲ, ಅದಕ್ಕೆ ಕೊಟ್ಟ ಸಾಕ್ಷ್ಯ ಕೂಡ ಫೊರೆನ್ಸಿಕ್ ವಿಶ್ಲೇಷಣೆಯ ಪ್ರಕಾರ ಸುಳ್ಳು ಸೃಷ್ಟಿಗಳು. ಎರಡು ವರ್ಷಗಳಿಗೂ ಹೆಚ್ಚು ಕಾಲ ಇಂತಹ ಒಂದು ತಾಂತ್ರಿಕ ಪರಿಣತಿಯ ಮತ್ತು ದೀರ್ಘವಾದ ಕೆಲಸ ಪ್ರಭುತ್ವದ ಮಾಧ್ಯಮದಿಂದಲ್ಲದೆ ಬೇರೆ ಯಾರಿಂದ ಸಾಧ್ಯ? ಇದು ಪ್ರಭುತ್ವ ಅಧಿಕಾರದ ಒಂದು ಅತ್ಯಂತ ಹೀನ ದುರುಪಯೋಗ. ಪುಣೆಯ ಪ್ರಾದೇಶಿಕ ಫೊರೆನ್ಸಿಕ್ ವಿಜ್ಞಾನ ಪ್ರಯೋಗಾಲಯಕ್ಕೆ ಕಂಪ್ಯೂಟರನ್ನು ಕಳ್ಳತನದಿಂದ ಬೇಧಿಸಿರುವ ಸಾಕ್ಷ್ಯವೇನೂ ಕಂಡು ಬರಲಿಲ್ಲ ಎಂಬುದು ಎನ್‌ಐಎ ದಾವೆ.
ಆದರೆ ಆರ್ಸೆನಲ್ ಕನ್ಸಲ್ಟಿಂಗ್ ಪ್ರಸ್ತುತ ಪಡಿಸಿರುವ ಅಪರಾಧವನ್ನು ಪತ್ತೆ ಮಾಡಿದ ವೈಜ್ಞಾನಿಕ ವಿಶ್ಲೇಷಣೆಯ ಹಿನ್ನೆಲೆಯಲ್ಲಿ, ಮುಂಬೈ ಹೈಕೋರ್ಟ್ ತಕ್ಷಣವೇ ಹಾಡ್ ಡ್ರೈವ್‌ಗಳು ಮತ್ತು ಇತರ ಸಾಧನಗಳನ್ನು ಸ್ವತಂತ್ರ ಪರಿಣತರಿಂದ ಪರೀಕ್ಷಣೆಗೆ ಒಳಪಡಿಸುವುದು ಅಗತ್ಯವಾಗಿದೆ. ನ್ಯಾಯ ವಿಕೃತಗೊಳ್ಳದಂತೆ ತಡೆಯಲು ಉನ್ನತ ನ್ಯಾಯಾಂಗವು ಕನಿಷ್ಟ ಇದನ್ನಾದರೂ ಮಾಡಬೇಕು.