ಮೋದಿ ಸರ್ಕಾರವೂ, “ಉಚಿತಕೊಡುಗೆ” ಎಂಬ ಕಾಡು ಪುರಾಣವೂ

ಪ್ರೊ. ಪ್ರಭಾತ್‍ ಪಟ್ನಾಯಕ್
ಅನು:ಕೆ.ಎಂ.ನಾಗರಾಜ್

ಮೋದಿಯವರು ರೇವ್ಡಿ ಸಂಸ್ಕೃತಿ ಎಂದಿದ್ದೇಕೆ, ಬಿಜೆಪಿ ಪದಾಧಿಕಾರಿ ವಿರೋಧ  ಅರ್ಜಿ ಸಲ್ಲಿಸಿದ್ದೇಕೆ, ಮತ್ತು ಸರ್ವೋಚ್ಚ ನ್ಯಾಯಾಲಯ  ಈ ವಾದ-ವಿವಾದಕ್ಕೆ ಧುಮುಕಿದ್ದೇಕೆ? ವಾಸ್ತವವಾಗಿ  “ಉಚಿತ ಕೊಡುಗೆಗಳು” ಎಂಬುದರ  ಬಗ್ಗೆ ಹೊಂದಿರುವ ಪೂರ್ವ-ಕಲ್ಪಿತ ಅಭಿಪ್ರಾಯಗಳು ನವ-ಉದಾರವಾದಕ್ಕೆ ಮೋದಿ ಸರ್ಕಾರದ ಇತ್ತೀಚಿನ ‘ಜೀ ಹುಜೂರ್’ ಅಥವ ಸಾಷ್ಟಾಂಗ ನಮಸ್ಕಾರ. ಮೋದಿಯವರ ಅನುಚರರು ಅವರನ್ನು ಒಬ್ಬ ದಿಟ್ಟ ನಾಯಕ ಎಂದು ಬಿಂಬಿಸುತ್ತಾರೆ.ಅವರ ಈ ಧೀರ ಮುಖವಾಡದ ಹಿಂದೆ ಇರುವುದು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಆಜ್ಞೆಗಳಿಗೆ ದೈನ್ಯತೆಯಿಂದ ತಲೆಬಾಗುವ ಪ್ರವೃತ್ತಿ. ಅದು ಬಯಸಿದಂತೆ ಜನಸಾಮಾನ್ಯರಿಗೆ ಕೊಡುವ ನೆರವುಗಳನ್ನು ಮೊಟಕುಗೊಳಿಸುವ ಧೈರ್ಯವೂ ಇರದ ಸರಕಾರ ಈ ಕಾಡುಪುರಾಣವನ್ನು ಸುಪ್ರೀಂ ಕೋರ್ಟಿನ ಮುಂದೆ ತಂದಿದೆ, ಈ ಕಡಿತಗಳುಸುಪ್ರೀಂ ಕೋರ್ಟಿನ ಆದೇಶ ಎಂದು ಬೊಟ್ಟುಮಾಡಿ ಪಾರಾಗುವ ಯೋಚನೆ ಅದರದು. ಆದರೆ ಇಂತಹ ಪ್ರತಿ ಹೆಜ್ಜೆಗೂ ಜನರಿಂದ ಪ್ರತಿರೋಧ ಬರುತ್ತದೆ. ಇದಕ್ಕೆ ಕಿಸಾನ್ ಚಳುವಳಿಯೇ ಒಂದು ಗಟ್ಟಿ ಉದಾಹರಣೆ...

“ಉಚಿತ ಕೊಡುಗೆಗಳ ಆಮಿಷಕ್ಕೆ ಒಳಗಾಗ ಬೇಡ” – ವ್ಯಂಗ್ಯಚಿತ್ರ: ಸತೀಶ ಆಚಾರ್ಯ

ನಮ್ಮ ಕಣ್ಣಮುಂದೆ ಒಂದು ವಿಕಟ ನಾಟಕ ನಡೆಯುತ್ತಿದೆ. ಲಕ್ಷಾಂತರ ಕೋಟಿ ರೂಪಾಯಿಗಳನ್ನು ಏಕಸ್ವಾಮ್ಯವಾದಿ ಉದ್ದಿಮೆಗಳಿಗೆ ತೆರಿಗೆ ರಿಯಾಯಿತಿ ನೀಡುತ್ತಾ ಬಂದಿರುವ ಮೋದಿ ಸರ್ಕಾರವು ಇತರ ಜನ ವಿಭಾಗಗಳಿಗೆ ಲಭಿಸುತ್ತಿರುವ ಸಣ್ಣ ಪುಟ್ಟ ಸಬ್ಸಿಡಿಗಳನ್ನು “ಉಚಿತ ಕೊಡುಗೆಗಳು” ಎಂದು ಹೇಳುವ ಮತ್ತು ಈ ಕೊಡುಗೆಗಳಿಗೆ ವಿರೋಧ ವ್ಯಕ್ತಪಡಿಸುವ ವಿದ್ಯಮಾನವು ಒಂದು ವಿಪರ್ಯಾಸವೇ ಸರಿ.  ಯುವಕರು “ರೇವ್ಡಿ ಸಂಸ್ಕೃತಿ”ಯಿಂದ( ರೇವ್ಡಿ=ಪುಕ್ಕಟೆಹಂಚುವಸಿಹಿ ತಿನಿಸು) ಪ್ರಭಾವಿತರಾಗದಂತೆ ನರೇಂದ್ರ ಮೋದಿ ಅವರನ್ನು ಮೊದಲು ಎಚ್ಚರಿಸಿದರು. ನಂತರ, ಸರ್ಕಾರಗಳು ನೀಡುತ್ತಿರುವ “ಉಚಿತ ಕೊಡುಗೆಗಳನ್ನು” ನಿಲ್ಲಿಸುವಂತೆ ಒಂದು ಕೋರಿಕೆಯ ಅರ್ಜಿಯನ್ನು ಬಿಜೆಪಿಯ ಪದಾಧಿಕಾರಿಯಾಗಿರುವ ವಕೀಲರೊಬ್ಬರು ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿದರು.

ಈ “ಉಚಿತ ಕೊಡುಗೆ”ಗಳ ವಿಷಯವನ್ನು ಸುಪ್ರೀಂ ಕೋರ್ಟಿಗೆ ಏಕೆ ಎಳೆದೊಯ್ಯಲಾಯಿತು ಎಂಬ ಸಂಗತಿ ರಹಸ್ಯವಾಗಿಯೇ ಉಳಿದಿದೆ. ರಾಜಕೀಯ ಪಕ್ಷಗಳು “ಅಭಿವೃದ್ಧಿ”ಗೆ ಅಡ್ಡಿಯಾಗುವಂತಹ “ಉಚಿತ ಕೊಡುಗೆ”ಗಳನ್ನು ಕೊಡುತ್ತಿದ್ದರೆ ಅದನ್ನು ಮತದಾರರ ವಿವೇಚನೆಗೆ ಬಿಡಬೇಕಾಗುತ್ತದೆ. ರಾಜಕೀಯ ಪಕ್ಷಗಳು ಘೋಷಿಸುವ “ಉಚಿತ ಕೊಡುಗೆ”ಗಳನ್ನು ಜಾರಿಗೊಳಿಸಿದ್ದರಿಂದಾಗಿ “ಅಭಿವೃದ್ಧಿ”ಕುಂಟುತ್ತಿದೆ ಎಂಬುದು ಮತದಾರರಿಗೆ ಮನವರಿಕೆಯಾದಾಗ, ಅದಕ್ಕೆ ಕಾರಣರಾದ ತಪ್ಪಿತಸ್ತ ರಾಜಕೀಯ ಪಕ್ಷಗಳನ್ನು ಮತದಾರರು ಚುನಾವಣೆಯಲ್ಲಿ ಸೋಲಿಸುತ್ತಾರೆ. ರಾಜಕೀಯ ಪಕ್ಷಗಳ ಈ ರೀತಿಯ ಉಲ್ಲಂಘನೆಯನ್ನು ಒಂದು ವೇಳೆ ಮತದಾರರು ನಿರ್ಲಕ್ಷಿಸಿದರೆ, ಆಗ ಬಿಜೆಪಿಯು ಅದನ್ನು ಚುನಾವಣೆಗಳಲ್ಲಿ ಒಂದು ವಿಷಯವನ್ನಾಗಿ ತೆಗೆದುಕೊಳ್ಳಬಹುದು.ಆದ್ದರಿಂದ, ಈ ಬಗ್ಗೆ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸುವ ಪ್ರಮೇಯವೇ ಇಲ್ಲ. ಹಾಗೆ ನೋಡಿದರೆ, ಈ ವಿಷಯದಲ್ಲಿ ಸುಪ್ರೀಂ ಕೋರ್ಟಿನ ಹಸ್ತಕ್ಷೇಪವು ಶಾಸಕಾಂಗದ ಅಧಿಕಾರ ವ್ಯಾಪ್ತಿಯ ಮೇಲಿನ ಅತಿಕ್ರಮಣವಾಗುವುದು ಮಾತ್ರವಲ್ಲಮತ್ತುದೇಶದ ಒಕ್ಕೂಟ ವ್ಯವಸ್ಥೆಯ ಸಂರಚನೆಯಲ್ಲಿ ರಾಜ್ಯಗಳು ಹೊಂದಿರುವ ಅಧಿಕಾರಗಳ ಉಲ್ಲಂಘನೆ ಮಾತ್ರವಲ್ಲ, ಅವೆರಡಕ್ಕಿಂತಲೂ ಮಿಗಿಲಾಗಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರು ಹೊಂದಿರುವ ಅಪರಿಮಿತ ಹಕ್ಕುಗಳನ್ನು ಮೊಟಕುಗೊಳಿಸುವ ಕ್ರಮವಾಗುತ್ತದೆ. ಆದ್ದರಿಂದ, ಈ ವಿಷಯದಲ್ಲಿ ಸುಪ್ರೀಂ ಕೋರ್ಟಿನ ಯಾವುದೇ ರೀತಿಯ ಹಸ್ತಕ್ಷೇಪವು ಯಾವ ರೀತಿಯಲ್ಲಿ ನೋಡಿದರೂ, ಮೂಲಭೂತವಾಗಿ, ಒಂದು ಪ್ರಜಾಪ್ರಭುತ್ವ-ವಿರೋಧಿ ಕ್ರಮವೇ.

ಕಲ್ಯಾಣ ವೆಚ್ಚಗಳು vs ‘ಉಚಿತ ಕೊಡುಗೆ’ಗಳು
ಸುಪ್ರಿಂ ಕೋರ್ಟ್ ಮಧ್ಯೆ ಧುಮುಕಿದ್ದೇಕೆ?

ವಾಸ್ತವವಾಗಿ, ಈ ರೀತಿಯ ಮಧ್ಯಪ್ರವೇಶವನ್ನು ಕೋರಿ ಅದರ ಮನ ಒಲಿಸುವಂಥಹ ವಾದಗಳನ್ನು ಮಂಡಿಸಿದ್ದ ಸಂದರ್ಭಗಳಲ್ಲೂ ಸ್ವತಃ ಸುಪ್ರೀಂ ಕೋರ್ಟ್‌ ಹಿಂದೆ ಮುಂದೆ ನೋಡಿದೆ. ಸಾರ್ವಜನಿಕ ವಲಯದ ಸಂಸ್ಥೆಗಳ ಖಾಸಗೀಕರಣವು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಪ್ರಭುತ್ವದ ನೀತಿ ನಿರ್ದೇಶಕ ತತ್ವಗಳ ಸ್ಪಷ್ಟ ಉಲ್ಲಂಘನೆಯಾಗಿದ್ದರೂ ಸಹ, ಶಾಸಕಾಂಗದ ಅಧಿಕಾರ ವ್ಯಾಪ್ತಿಯನ್ನು ಅತಿಕ್ರಮಿಸಲಾಗದು ಎಂಬ ನೆಲೆಯಲ್ಲಿ, ಸಾರ್ವಜನಿಕ ವಲಯದ ಸಂಸ್ಥೆಗಳ ಖಾಸಗೀಕರಣವನ್ನು ತಡೆಯಲು ಸುಪ್ರೀಂ ಕೋರ್ಟ್‌ ನಿರಾಕರಿಸಿತ್ತು. ಅಷ್ಟೇ ಅಲ್ಲದೆ, ಭಾರತ್‌ ಅಲ್ಯೂಮಿನಿಯಂ ಕಂಪೆನಿಯ (ಬಾಲ್ಕೊ) ಖಾಸಗೀಕರಣದ ತೀರ್ಪಿನ ದಿನಗಳಿಂದ ಹಿಡಿದು ಬಹಳ ವರ್ಷಗಳ ಕಾಲ ಈ ನಿಲುವನ್ನೇ ಸುಪ್ರೀಂ ಕೋರ್ಟ್‌ ತಳೆದಿದೆ. ಹಾಗಾಗಿ, ಈ ಕಾದಾಟದ ನಡುವೆ  ಸುಪ್ರೀಂ ಕೋರ್ಟ್ ಧುಮುಕಿರುವುದು ಆಶ್ಚರ್ಯಕರವಾಗಿದೆ. ದುಡಿಯುವ ಜನರಿಗೆ ಲಭಿಸುತ್ತಿರುವ ಸಣ್ಣ ಪುಟ್ಟ ಸಬ್ಸಿಡಿಗಳನ್ನು ನಿಲ್ಲಿಸುವ ಧೈರ್ಯವಿಲ್ಲದ ಮೋದಿ ಸರ್ಕಾರವು ಈ ಹೀನ ಕೃತ್ಯದ ಹೊಣೆಗಾರಿಕೆಯನ್ನು ಸುಪ್ರೀಂ ಕೋರ್ಟಿಗೆ ವರ್ಗಾಯಿಸಬಯಸಿದೆ.ಅದಕ್ಕೆ ಸುಪ್ರೀಂ ಕೋರ್ಟ್‌ನ ಮೌನಸಮ್ಮತಿ ವಿವರಣೆಗೆ ನಿಲುಕದ ಸಂಗತಿ.

ಒಂದು ಕಡೆಯಲ್ಲಿ ಕಲ್ಯಾಣ  ವೆಚ್ಚಗಳು ಮತ್ತು ಉತ್ಪಾದಕ ಸಬ್ಸಿಡಿಗಳು ಇನ್ನೊಂದು ಕಡೆಯಲ್ಲಿ “ಉಚಿತ ಕೊಡುಗೆ”ಗಳು, ಇವುಗಳ ನಡುವೆತಾತ್ವಿಕ ವ್ಯತ್ಯಾಸಗಳನ್ನು ಗುರುತಿಸುವ(ತಮಗೆ ತೋಚಿದಂತೆ ವರ್ಗೀಕರಿಸುವುದಕ್ಕೆ ವಿರುದ್ಧವಾಗಿ) ಯಾವುದೇ ತರ್ಕದಲ್ಲಿಯೇ ವಿರೋಧಾಭಾಸಅಡಕವಾಗಿದೆ ಎಂಬುದು ಮುಖ್ಯ ನ್ಯಾಯಾಧೀಶರ ಟಿಪ್ಪಣಿಗಳಲ್ಲೂ ಮೂಡಿ ಬಂದಿದೆ. ಅವರು “ಉಚಿತ ಕೊಡುಗೆ”ಗಳು ಮತ್ತು ಕಲ್ಯಾಣ ವೆಚ್ಚಗಳು ಈ ಎರಡೂ ಬೇರೆ ಬೇರೆಯೇ ಎಂದು ಹೇಳಿದರಾದರೂ, ಈ ಎರಡರ ನಡುವಿನ ವ್ಯತ್ಯಾಸವನ್ನು ಹೇಗೆ ಗುರುತಿಸಬೇಕು ಎಂಬುದರ ಬಗ್ಗೆ  ಯಾವುದೇ ಸುಳಿವು ನೀಡಲಿಲ್ಲ. ವಿಷಯದ ಪರ-ವಿರೋಧದ ವಾಗ್ವಾದಗಳ ಸಮಯದಲ್ಲಿ ಅವರು “ಅತಾರ್ಕಿಕ ಉಚಿತ ಕೊಡುಗೆ”ಗಳನ್ನುತೆಗೆದುಹಾಕುವ ಅಗತ್ಯವಿದೆ ಎಂದು ಮಾತನಾಡಿದರು. ಆದರೆ, ಒಂದು ಸ್ವತಂತ್ರ ಮಾನದಂಡದ ಆಧಾರದ ಮೇಲೆ ಮಾತ್ರ “ಉಚಿತ ಕೊಡುಗೆ”ಗಳನ್ನು “ತರ್ಕಬದ್ಧ” ಅಥವಾ “ಅತಾರ್ಕಿಕ” ಎಂಬುದಾಗಿ ಪ್ರತ್ಯೇಕಿಸಬಹುದೇ ವಿನಃ, ಅಂತಹಮಾನದಂಡವೇ ಇಲ್ಲದಿರುವಾಗ, ತೆಗೆದುಹಾಕಲು ನಿರ್ಧರಿಸಿದ “ಉಚಿತ ಕೊಡುಗೆ”ಗಳೇ “ಅತಾರ್ಕಿಕ” ಎಂದೇ ವ್ಯಾಖ್ಯಾನಿಸಲಾಗುತ್ತದೆ ಮತ್ತು ಈ ಎಲ್ಲ ಮಾತುಗಳು ಕಿಸಬಾಯಿ ದಾಸನ ಹಾಡಿನಂತಾಗುತ್ತವೆ. ಅಂತಿಮವಾಗಿ, ಅವರು “ಉಚಿತ ಕೊಡುಗೆ”ಗಳ ಬಗ್ಗೆ ಏನು ಮಾಡಬೇಕು ಎಂಬುದರ ಬಗ್ಗೆ ಸಲಹೆ ನೀಡಲು ಒಂದು ಸಮಿತಿಯನ್ನು ರಚಿಸುವುದಾಗಿ ಹೇಳಿದರು.

“ಕೃಷಿ ಸಾಲ ಮನ್ನಾ ಒಂದು ಉಚಿತ ಕೊಡುಗೆಯಾದರೆ, ಕಾರ್ಪೊರೇಟ್ ಸಾಲ ಮನ್ನಾ ಒಂದು ಧೋರಣೆಯ ನಡೆ ಎಂಬುದು ನನ್ನ ಖಚಿತ ಅಭಿಪ್ರಾಯ (ವ್ಯಂಗ್ಯಚಿತ್ರ: ಆರ್.ಪ್ರಸಾದ್, ಇಕನಾಮಿಕ್ ಟೈಮ್ಸ್)

“ಸ್ಲಾಟ್‍ ಮೆಷಿನ್” ಸಮಿತಿ?

ಇಂತಹ ಒಂದು ಸಮಿತಿಯು ರಚನೆಯಾದಾಗ, ಆ ಸಮಿತಿಯು, ಕನಿಷ್ಠ ಪಕ್ಷ,ಕಾರ್ಪೊರೇಟ್‌ಗಳಿಗೆ ನೀಡಲಾಗುತ್ತಿರುವ ಬೃಹತ್ “ಉಚಿತ ಕೊಡುಗೆ”ಗಳನ್ನೂ ಪರಿಶೀಲಿಸಬೇಕು.ಸಂಪತ್ತಿನ ತೆರಿಗೆ ಇಲ್ಲದಿರುವ ದೇಶದಲ್ಲಿ ಮತ್ತು ಶ್ರೀಮಂತರ ಮೇಲೆ ವಿಧಿಸುವ ಕಾರ್ಪೊರೇಟ್ ತೆರಿಗೆಗಳೇ ತೆರಿಗೆಯ ಮೂಲ ಸಾಧನವಾಗಿರುವ ದೇಶದಲ್ಲಿ ಕಾರ್ಪೊರೇಟ್‌ಗಳಿಗೆ ತೆರಿಗೆ ರಿಯಾಯಿತಿ ನೀಡುವ ಕ್ರಮವು ಶಿಷ್ಟಾಚಾರದ ನಿಯಮಗಳಿಗೆ ವಿರುದ್ಧವಾಗಿದೆ. ಏಕೆಂದರೆ, ಈ ಶ್ರೀಮಂತರು ತಮ್ಮ ಖಾಸಗಿ ಬಳಕೆಯ ಖರ್ಚುಗಳನ್ನು ತಮ್ಮ ಉದ್ದಿಮೆಗಳ ಮೇಲೆ ವ್ಯಯಿಸಿದ ವೆಚ್ಚಗಳೆಂದು ತೋರಿಸುವ ಮೂಲಕ ತಮ್ಮ ವೈಯಕ್ತಿಕ ಆದಾಯವನ್ನು ಕುಗ್ಗಿಸಿ ತೋರಿಸಬಹುದು ಮತ್ತು ಆ ಮೂಲಕ ವೈಯಕ್ತಿಕ ಆದಾಯ ತೆರಿಗೆಯಿಂದಲೂ ತಪ್ಪಿಸಿಕೊಳ್ಳಬಹುದು, ಹಾಗಾಗಿ, ಈ ತೆರಿಗೆ ರಿಯಾಯಿತಿಗಳು ಹೂಡಿಕೆಯನ್ನು ಉತ್ತೇಜಿಸುತ್ತವೆ ಎಂಬ ವಾದವು ಕೇವಲ ವಾದಕ್ಕೆ ಬಳಸುವ ಸಾಧನವಾಗಿದೆ, ಅದಕ್ಕೆ ಎಳ್ಳಷ್ಟೂ ಸೈದ್ಧಾಂತಿಕ ಬೆಂಬಲವೂ ಇಲ್ಲ ಅಥವಾ ಅನುಭವದ ಆಧಾರವೂ ಇಲ್ಲ. ಆದ್ದರಿಂದ, ಇಂತಹ ತೆರಿಗೆ ರಿಯಾಯಿತಿಗಳ ಬಗ್ಗೆ ಮಾತನಾಡದೆ “ಉಚಿತ ಕೊಡುಗೆ”ಗಳ ಬಗ್ಗೆಯೇ ಮಾತನಾಡುವುದು ತಾರ್ಕಿಕತೆಯ ತೇಜೋವಧೆಯಾಗುತ್ತದೆ.

ಆದರೆ, ಸುಪ್ರೀಂ ಕೋರ್ಟ್‌ ಸಮಿತಿಗೆ ಪರಿಶೀಲಿಸುವಂತೆ ಹೇಳಲಿರುವ ವಿಷಯವು ಬಂಡವಾಳಶಾಹಿಗಳಿಗೆ ನೀಡುವ ತೆರಿಗೆ ರಿಯಾಯ್ತಿಗಳಲ್ಲ. ಅಂತಹ ಸಮಿತಿಯಲ್ಲಿ ಸೇವೆ ಸಲ್ಲಿಸಲು ಮತ್ತು ಒಂದು “ನಾಣ್ಯ ಯಂತ್ರ” (ಸ್ಲಾಟ್‍ ಮೆಷಿನ್-ಅಂದರೆ ನೀವು ನಾಣ್ಯ ಹಾಕಿದಾಗ ನಿಮಗೆ ಬೇಕಾದ್ದನ್ನೇಕೊಡುವ ಯಂತ್ರ) ಮಾಡುವ ಕೆಲಸವನ್ನು ನಿರ್ವಹಿಸಲು ವಯೋ ಸಹಜ ಕಾರಣದ ಮೇಲೆ ನಿವೃತ್ತಿ ಹೊಂದಿದ ಸಾಕಷ್ಟು ಮಂದಿ ಅರ್ಥಶಾಸ್ತ್ರಜ್ಞರು ಮತ್ತು ಅಧಿಕಾರಿಗಳು ನಮ್ಮ ದೇಶದಲ್ಲಿದ್ದಾರೆ. ಮೂರು ಕುಖ್ಯಾತ ಕೃಷಿ ಕಾನೂನುಗಳ ವಿರುದ್ಧ ನಡೆದ ಕಿಸಾನ್ ಆಂದೋಲನದ ಸಮಯದಲ್ಲಿ ಅದೇ ರೀತಿಯ ಒಂದು ಸಮಿತಿಯನ್ನು ರಚಿಸಲಾಗಿತ್ತಲ್ಲವೇ? ಆ ಸಮಿತಿಯನ್ನು ಯಾವ ರೀತಿಯಲ್ಲಿ ರಚಿಸಲಾಗಿತ್ತೆಂದರೆ, ಅದು ಮೋದಿ ಸರ್ಕಾರದ ನಿಲುವನ್ನು ಸುಮ್ಮನೇ ಅನುಮೋದಿಸಬೇಕಾಗಿತ್ತು. ಆ ಸಮಿತಿಗೆ ಇದ್ದ ಒಂದೇ ಒಂದು ಅಡೆತಡೆಯೆಂದರೆ, ರೈತರು ಅದನ್ನು ಸುತರಾಂ ಒಪ್ಪಲಿಲ್ಲ.

ಕಿರು ಉತ್ಪಾದಕರಿಗೆ, ರೈತರಿಗೆ ಸಬ್ಸಿಡಿಗಳ ವಿರುದ್ಧವೇ

ವಾಸ್ತವವಾಗಿ, ನಾವೀಗ ಅದೇ ಚಿತ್ರದ ಮರುಪ್ರಸಾರವನ್ನು ನೋಡುತ್ತಿದ್ದೇವೆ.ಶಿಕ್ಷಣ ಅಥವಾ ಆರೋಗ್ಯ ರಕ್ಷಣೆಯ ಮೇಲಿನ ಸಬ್ಸಿಡಿಗಳ ಕಡಿತವನ್ನು ಸೂಚಿಸುವಷ್ಟು ಹುಚ್ಚು ಸಾಹಸವನ್ನು ಮೋದಿ ಸರ್ಕಾರ ಮಾಡುವುದಿಲ್ಲ. ಆದ್ದರಿಂದ, “ಉಚಿತ ಕೊಡುಗೆ”ಗಳ ಬಗ್ಗೆ ಅದರ ಅಬ್ಬರವೇನಿದ್ದರೂ ಮುಖ್ಯವಾಗಿ ಉತ್ಪಾದಕ ಸಬ್ಸಿಡಿಗಳ ವಿರುದ್ಧವೇ, ಅದರಲ್ಲೂ ವಿಶೇಷವಾಗಿ ಕಿರು ಉತ್ಪಾದಕರಿಗೆ ಮತ್ತು ರೈತರಿಗೆ ನೀಡಲಾದ ಸಬ್ಸಿಡಿಗಳ ವಿರುದ್ಧವೇ. ಮುಖ್ಯ ನ್ಯಾಯಾಧೀಶರ ಹೇಳಿಕೆಯು ಸೂಚಿಸುವಂತೆ,”ಉಚಿತ ಕೊಡುಗೆ”ಗಳನ್ನು ಮುಖ್ಯವಾಗಿ ರೈತರ ಲಾಗುವಾಡುಗಳ ಮೇಲಿನ ಸಬ್ಸಿಡಿಗಳಿಗೆ ಸೀಮಿತಗೊಳಿಸಿ,ಕಲ್ಯಾಣ ವೆಚ್ಚಗಳು ಮತ್ತು “ಉಚಿತ ಕೊಡುಗೆ”ಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲಾಗುವುದು. ಕಲ್ಯಾಣ ವೆಚ್ಚಗಳು ಮತ್ತು “ಉಚಿತ ಕೊಡುಗೆ”ಗಳ ನಡುವೆ ವ್ಯತ್ಯಾಸ ಗುರುತಿಸುವ ಕ್ರಮವನ್ನು ಖಂಡಿತವಾಗಿಯೂ ಒಪ್ಪಲಾಗದು.

ಏಕೆಂದರೆ, ರೈತನ ಅರ್ಥವ್ಯವಸ್ಥೆಯಲ್ಲಿ ಉತ್ಪಾದನೆಯ ವೆಚ್ಚಗಳು ಮತ್ತು ಕುಟುಂಬ ನಿರ್ವಹಣೆಯ ವೆಚ್ಚಗಳು ನಿಕಟ ಸಂಬಂಧ ಹೊಂದಿವೆ:ಉದಾಹರಣೆಗೆ, ಒಬ್ಬ ರೈತನು ಪಡೆಯುವ ವಿದ್ಯುತ್ತಿಗೆ ಹೆಚ್ಚು ಹಣವನ್ನು ತೆರಬೇಕು ಎಂದಾದರೆ, ಆತನು ತನ್ನ ಮಗನನ್ನು ಶಾಲೆಯಿಂದ ಬಿಡಿಸುವ  ಮೂಲಕ ಆ ಹಣವನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಆದರೆ,ಈ ವ್ಯತ್ಯಾಸವನ್ನು ಬಲವಂತಪಡಿಸಲಾಗುತ್ತದೆ ಮತ್ತು “ಉಚಿತ ಕೊಡುಗೆ”ಗಳನ್ನು ತೆಗೆದುಹಾಕುವ ನೆವದಲ್ಲಿ ರೈತರಿಗೆ ಲಭಿಸುತ್ತಿರುವ ಲಾಗುವಾಡುಗಳ ಮೇಲಿನ ಅಲ್ಪ ಪ್ರಮಾಣದ ಸಬ್ಸಿಡಿಗಳನ್ನು ತೀವ್ರವಾಗಿ ಕಡಿತಗೊಳಿಸಲಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ:ವಾಸ್ತವವಾಗಿ, ಈಗಾಗಲೇ ವಿದ್ಯುತ್ ಸಬ್ಸಿಡಿಯನ್ನು “ಉಚಿತ ಕೊಡುಗೆ” ಎಂದು ಹೇಳಿ ಆಗಿದೆ. “ಉಚಿತ ಕೊಡುಗೆ”ಗಳ ಹೆಸರಿನಲ್ಲಿ ನಡೆಯುತ್ತಿರುವ ಈ ಎಲ್ಲ ರಂಪ ರಗಳೆಗಳ ಒಟ್ಟು ಪರಿಣಾಮವಾಗಿ ಮತ್ತಷ್ಟು ಒತ್ತಡಕ್ಕೆ ಒಳಗಾಗುವ ಕೃಷಿಯು ಒಂದು ಕಾರ್ಯಸಾಧ್ಯ ಚಟುವಟಿಕೆಯಾಗಿ ಉಳಿಯುವುದಿಲ್ಲ ಮತ್ತು ಈ ಕಾರಣದಿಂದಾಗಿ ಅದು ಕಾರ್ಪೊರೇಟ್ ಅತಿಕ್ರಮಣಕ್ಕೆ ಹೆಚ್ಚು ಪಕ್ಕಾಗುತ್ತದೆ.

ಬಂಡವಾಳದ ಆದಿಮ ಶೇಖರಣೆಗಾಗಿ ಕಿರು ಉತ್ಪಾದನೆಯನ್ನು, ಅದರಲ್ಲೂ ವಿಶೇಷವಾಗಿ ರೈತ ಕೃಷಿಯನ್ನು ಕಾರ್ಪೊರೇಟ್‌ಗಳು ಸ್ವಾಧೀನಪಡಿಸಿಕೊಳ್ಳಲು ಅನುಕೂಲ ಮಾಡಿಕೊಡುವುದು,ಮತ್ತು ಮುಂದುವರೆದ ಬಂಡವಾಳಶಾಹೀ ದೇಶಗಳ ಅಗತ್ಯಗಳಿಗೆ ಭಾರತದ ಕೃಷಿಯನ್ನು ಸಂಪೂರ್ಣವಾಗಿ ಅಧೀನಗೊಳಿಸುವುದು ನವ-ಉದಾರವಾದದ ಅನುಗಾಲದ ಕಾರ್ಯಸೂಚಿಯಾಗಿದೆ. ಅಂದರೆ ದೇಶದ ಆಹಾರ ಭದ್ರತೆಯನ್ನು ದುರ್ಬಲಗೊಳಿಸುವುದೇ ಅದರ ಉದ್ದೇಶ. ಇಂತಹ ಒಂದು ಕಾರ್ಯಸೂಚಿಯನ್ನು ಅನುಸರಿಸಿದ ಪರಿಣಾಮಗಳು ಆಫ್ರಿಕಾದ ವಿಷಯದಲ್ಲಿ ಇತ್ತೀಚೆಗೆ ಮುನ್ನೆಲೆಗೆ ಬಂದಿದ್ದವು. ಆಹಾರ ಭದ್ರತೆಯ ವಿಷಯದಲ್ಲಿ ದುರ್ಬಲಗೊಂಡಿದ್ದ ಆಫ್ರಿಕಾದ ಕೆಲವು ದೇಶಗಳಲ್ಲಿ ರಷ್ಯಾ ಮತ್ತು ಉಕ್ರೇನ್ ದೇಶಗಳಿಂದ ಧಾನ್ಯಗಳ ಆಮದುಗಳು ನಿಂತ ಪರಿಣಾಮವಾಗಿ ಒಂದು ವಿನಾಶಕಾರಿ ಕ್ಷಾಮದ ಪರಿಸ್ಥಿತಿ ಸೃಷ್ಟಿಯಾಗುವ ಭೀತಿ ಉಂಟಾಗಿತ್ತು. ಆದರೆಇದರ ಪರಿವೆ ಸರ್ಕಾರದಲ್ಲಿ ಯಾರಿಗಾದರೂ ಇದೆಯೇ?

ನವ-ಉದಾರವಾದಿ ಅಜೆಂಡಾಕ್ಕೆ ಸಾಷ್ಟಾಂಗ ವಂದನೆ

ಉಚಿತ ಕೊಡುಗೆಗಳ ಬಗ್ಗೆ ಹೊಂದಿರುವ ಈ ಪೂರ್ವ-ಕಲ್ಪಿತ ಅಭಿಪ್ರಾಯಗಳು ನವ-ಉದಾರವಾದಕ್ಕೆ ಮೋದಿ ಸರ್ಕಾರದ ಇತ್ತೀಚಿನ ‘ಜೀ ಹುಜೂರ್’ ಅಥವ ಸಾಷ್ಟಾಂಗ ನಮಸ್ಕಾರ.ದೊಡ್ಡ ದೊಡ್ಡ ಬಂಡವಾಳಗಾರರಿಗೆ ಅಪಾರ ತೆರಿಗೆ ರಿಯಾಯಿತಿಗಳನ್ನು ನೀಡುತ್ತಿರುವ ಸಮಯದಲ್ಲೇ, ನಿಗದಿಪಡಿಸಿದ ವಿತ್ತೀಯ ಕೊರತೆಯ ಗುರಿ ಮೀರದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನೂ ನಿರ್ವಹಿಸಬೇಕಾಗಿರುವುದರಿಂದ ಮತ್ತು ಈ ಹಣದುಬ್ಬರದ ವಾತಾವರಣದಲ್ಲಿ ಪರೋಕ್ಷ ತೆರಿಗೆಗಳನ್ನು ಮತ್ತಷ್ಟು ಹೆಚ್ಚಿಸುವುದು ಶಕ್ಯವಲ್ಲದುದರಿಂದಾಗಿ, ಈ ಸರ್ಕಾರಕ್ಕೆ ಉಳಿದಿರುವ ಏಕೈಕ ಮಾರ್ಗವೆಂದರೆ ತನ್ನ ವೆಚ್ಚಗಳ ಕಡಿತವೇ. ವೆಚ್ಚಗಳನ್ನು ಕಡಿತಗೊಳಿಸಬಹುದಾದ ಲೆಕ್ಕಾಚಾರದಲ್ಲಿ ಕೃಷಿ ಸಬ್ಸಿಡಿಗಳುಮೊದಲು ಕಣ್ಣಿಗೆ ಬೀಳುತ್ತವೆ. ಕೃಷಿ ಸಬ್ಸಿಡಿಗಳನ್ನು ಕಡಿತಗೊಳಿಸುವುದು ಇಬ್ಬಗೆಯ ಉದ್ದೇಶವನ್ನು ಈಡೇರಿಸುತ್ತದೆ:ಏಕೆಂದರೆಇದುನಿಗದಿಪಡಿಸಿದ ವಿತ್ತೀಯ ಕೊರತೆಯ ಗುರಿ ಸಾಧನೆಯ ಮೂಲಕ ಅಂತರರಾಷ್ಟ್ರೀಯ ಹಣಕಾಸು ಬಂಡವಾಳವನ್ನು ಸಂತುಷ್ಟಗೊಳಿಸುವುದರೊಂದಿಗೇ, ಕೃಷಿಯನ್ನು ದೊಡ್ಡ ದೊಡ್ಡ ಬಂಡವಾಳಗಾರರ ಮತ್ತು ಕೃಷಿ ಉದ್ದಿಮೆಗಳ ಅತಿಕ್ರಮಣಕ್ಕೆ ಸಲೀಸಾಗಿ ಪಕ್ಕಾಗಿಸುತ್ತದೆ.

ಫ್ರೀರೇವ್ಡಿಯನ್ನು ತಡೆಯುವುದು ಹೇಗೆ, ಕೇಂದ್ರ ಸರಕಾರ
ಮತ್ತು ಚುನಾವಣಾ ಆಯೋಗ ತಿಳಿಸಲಿ – ಸುಪ್ರಿಂಕೋರ್ಟ್

“ಚುನಾವಣೆಗಳಮೇಲೆತಡೆಹಾಕಿದರೆಹೇಗೆ?”
ವ್ಯಂಗ್ಯಚಿತ್ರ: ಇರ್ಫಾನ್‍, ನ್ಯೂಸ್‍ ಕ್ಲಿಕ್

ವಾಸ್ತವವಾಗಿ, ಈ ಇಡೀ ಪ್ರಸಂಗವು ನವ-ಉದಾರವಾದದ ಎರಡು ಪ್ರಮುಖ ಲಕ್ಷಣಗಳನ್ನು ಬಹಳ ಸ್ಪಷ್ಟವಾಗಿ ಬಹಿರಂಗಪಡಿಸುತ್ತದೆ.ಮೊದಲನೆಯದು, ಅದರ ಪ್ರಜಾಪ್ರಭುತ್ವ-ವಿರೋಧಿ ಒತ್ತು.ನವ-ಉದಾರವಾದವು ಜನತೆಯ ಸಾರ್ವಭೌಮತೆಯ ಜಾಗದಲ್ಲಿ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಸಾರ್ವಭೌಮತೆಯನ್ನು ಕೂರಿಸುತ್ತದೆ. ಅಂತಾರಾಷ್ಟ್ರೀಯ ಹಣಕಾಸು ಬಂಡವಾಳವು ಒತ್ತಾಯಿಸುವ ನೀತಿಗಳನ್ನುದೇಶವು, ಅವು ಜನತೆಯ ಹಿತಾಸಕ್ತಿಗಳಿಗೆ ಧಕ್ಕೆಯೊಡ್ಡಿದರೂ ಸಹ, ಅಳವಡಿಸಿಕೊಳ್ಳುವಂತೆ ಮಾಡುತ್ತದೆ.ಅವನ್ನು ಜನಗಳ ಬೆನ್ನ ಹಿಂದೆ ಗುಟ್ಟಾಗಿ ಮಾಡುತ್ತದೆ. ‘ಉಚಿತ ಕೊಡುಗೆ’ಗಳೆಂಬ ಈ ಕಾಡುಪುರಾಣವನ್ನು ಸುಪ್ರೀಂ ಕೋರ್ಟಿನ ಮುಂದೆ ತರುವ ಉದ್ದೇಶವೆಂದರೆ, ಈ ರೀತಿ ಜನರ ಅರಿವಿಗೆ ಬಾರದಂತೆ ಅವರ ಹಿತಗಳಿಗೆ ವಿರುದ್ಧವಾದುದನ್ನು ಮಾಡುವುದಲ್ಲದೆ ಬೇರೇನೂ ಅಲ್ಲ. ಉಚಿತ ಕೊಡುಗೆಗಳ ಬಗ್ಗೆ ಜನರ ಒಪ್ಪಿಗೆಯನ್ನು ಕೇಳುವುದರ ಬದಲಾಗಿ, ಇದುಸುಪ್ರೀಂ ಕೋರ್ಟಿನ ಆದೇಶ, ಈ  ಬಗ್ಗೆ ಇನ್ನು ಚರ್ಚೆ ಮಾಡಿ ಉಪಯೋಗವಿಲ್ಲ ಎನ್ನುವ ರೀತಿಯಲ್ಲಿ ಇದನ್ನು ಜನರು ಒಪ್ಪಿಕೊಳ್ಳುವಂತೆ ಮಾಡುವುದು. ಉಚಿತ ಕೊಡುಗೆಗಳನ್ನು ಮೊಟಕುಗೊಳಿಸುವ ಹೆಸರಿನಲ್ಲಿ, ಜನರಿಗೆ ಲಭಿಸುವ ಚೂರು ಪಾರು ಅನುಕೂಲಗಳನ್ನು ತೆಗೆದು ಹಾಕಲು ಅವರ ಒಪ್ಪಿಗೆಯನ್ನು ತಾನು ಪಡೆಯಲಾಗುವುದಿಲ್ಲ ಎಂಬುದು ಸರ್ಕಾರಕ್ಕೆ ತಿಳಿದಿದೆ.

ನವ-ಉದಾರವಾದದ ಎರಡನೆಯ ಪ್ರಮುಖ ಲಕ್ಷಣವೆಂದರೆ ಅದರ ವರ್ಗ ಭಂಡತನ. ನವ-ಉದಾರವಾದದ ಪ್ರಕಾರ, ಆಯ್ಕೆ ಇರುವುದು “ಉಚಿತ ಕೊಡುಗೆ”ಗಳನ್ನು ನೀಡುವುದು ಮತ್ತು “ಅಭಿವೃದ್ಧಿ”ಯ ನಡುವೆ, ಅಂದರೆ, ದುಡಿಯುವ ಜನರಿಗೆ ಮಾಡುವ ವರ್ಗಾವಣೆ ಮತ್ತು  ದೊಡ್ಡ ಬಂಡವಳಿಗರಿಗೆ ವರ್ಗಾವಣೆಯ ನಡುವೆ.ನವ-ಉದಾರವಾದದ ದೃಷ್ಟಿಯಲ್ಲಿ ದುಡಿಯುವ ಜನರಿಗೆ ಮಾಡುವ ವರ್ಗಾವಣೆಗಳು “ಉಚಿತ ಕೊಡುಗೆಗಳು” ಮತ್ತು  ‘ದೊಡ್ಡ ದೊಡ್ಡ ಬಂಡವಾಳಗಾರರಿಗೆ “ಉಚಿತ ಕೊಡುಗೆ”ಗಳನ್ನು” ನೀಡುವುದೇ “ಅಭಿವೃದ್ಧಿ”. ನವ-ಉದಾರವಾದವು ಎರಡನೆಯದನ್ನು ಆಯ್ಕೆ ಮಾಡಿಕೊಳ್ಳುತ್ತದೆ ಮತ್ತು ಈ ಉದ್ದೇಶಕ್ಕಾಗಿ ಅದು ಪ್ರಭುತ್ವದ ಪ್ರತಿಯೊಂದು ಸಂಸ್ಥೆಯನ್ನು ಸಜ್ಜುಗೊಳಿಸುತ್ತದೆ.

ನರೇಂದ್ರ ಮೋದಿಯವರ ಅನುಚರರು ಅವರನ್ನು ಒಬ್ಬ ದಿಟ್ಟ ನಾಯಕ ಎಂದು ಬಿಂಬಿಸುತ್ತಾರೆ.ಆದರೆ, ಅವರ ಈ ಧೀರ ಮುಖವಾಡದ ಹಿಂದೆ ಇರುವುದು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಆಜ್ಞೆಗಳಿಗೆ ದೈನ್ಯತೆಯಿಂದ ತಲೆಬಾಗುವ ಪ್ರವೃತ್ತಿ. ಆದರೆ”ಉಚಿತ ಕೊಡುಗೆ”ಗಳು ಅಂದರೆ, ದುಡಿಯುವ ಜನರಿಗೆ ಮಾಡುವ ವರ್ಗಾವಣೆಗಳನ್ನು ನಿರ್ಮೂಲ ಮಾಡುವ ಪ್ರತಿಯೊಂದು ಹೆಜ್ಜೆಗೂ ಜನರಿಂದ ಪ್ರತಿರೋಧ ಬರುತ್ತದೆ. ಇದಕ್ಕೆ ಕಿಸಾನ್ ಚಳುವಳಿಯೇ ಒಂದು ಗಟ್ಟಿ ಉದಾಹರಣೆ.

Donate Janashakthi Media

Leave a Reply

Your email address will not be published. Required fields are marked *