ಕೇರಳ: ಹೈಕೋರ್ಟ್ ಮಾರ್ಥೋಮಾ ಚರ್ಚ್ ಹಾಗೂ ಅದರ ಬಿಷಪ್ ರನ್ನು ಗುರಿಯಾಗಿಸಿಕೊಂಡಿದ್ದ ಮಾನಹಾನಿಕರ ವಿಡಿಯೋ ತೆಗೆದುಹಾಕಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಈಚೆಗೆ ವಜಾಗೊಳಿಸಿದೆ [ಅನೀಶ್ ಕೆ ತಂಕಚನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ] ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಶ್ರೇಯಾ ಸಿಂಘಾಲ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಮಹತ್ವದ ತೀರ್ಪನ್ನು ಉಲ್ಲೇಖಿಸಿರುವ ನ್ಯಾಯಮೂರ್ತಿ ಟಿ ಆರ್ ರವಿ ಮಾಹಿತಿ ತಂತ್ರಜ್ಞಾನ ಕಾಯಿದೆ- 2000ರ ಸೆಕ್ಷನ್ 79ರ ಪ್ರಕಾರ ನ್ಯಾಯಾಲಯದ ಆದೇಶ ಅಥವಾ ಸರ್ಕಾರದ ನಿರ್ದೇಶನವಿಲ್ಲದೆ ವಸ್ತುವಿಷಯವನ್ನು ತೆಗೆದುಹಾಕಲು ಯೂಟ್ಯೂಬ್ ರೀತಿಯ ಮಧ್ಯಸ್ಥ ವೇದಿಕೆಗಳನ್ನು ಒತ್ತಾಯಿಸುವಂತಿಲ್ಲ ಎಂದಿದ್ದಾರೆ.
ಭಾರತದ ಸಾರ್ವಭೌಮತ್ವ, ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಯ ಉಲ್ಲಂಘನೆಯನ್ನು ಒಳಗೊಂಡಿರುವ ಪ್ರಕರಣಗಳಲ್ಲಿ ಮಾತ್ರ ವಸ್ತುವಿಷಯವನ್ನು ನಿರ್ಬಂಧಿಸಲು ಅನುಮತಿ ಇದೆ ಎಂದು ಹೇಳುವ ಐಟಿ ಕಾಯಿದೆಯ ಸೆಕ್ಷನ್ 69 ಎ ಅನ್ನು ಪೀಠ ಪ್ರಸ್ತಾಪಿಸಿದೆ.
“ವಸ್ತುವಿಷಯ ಮಾನಹಾನಿಕರವಾಗಿದೆ ಎಂಬ ಆರೋಪ ಬಿಟ್ಟರೆ ಪ್ರಕರಣದಲ್ಲಿ ಪ್ರಸ್ತಾಪಿಸಿರುವ ವಿಚಾರಗಳು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯಂತಹ ಯಾವುದೇ ಸಂಜ್ಞೇಯ ಅಪರಾಧಕ್ಕೆ ಕುಮ್ಮಕ್ಕು ನೀಡಿರುವ ನಿರ್ದಿಷ್ಟ ಆರೋಪವಿಲ್ಲ” ಎಂದು ನ್ಯಾಯಾಲಯ ಹೇಳಿದೆ.
‘ಐ2ಐ ನ್ಯೂಸ್ ‘ ಹೆಸರಿನ ಚಾನೆಲ್ ಯೂಟ್ಯೂಬ್ ವಾಹಿನಿಯಲ್ಲಿ ಪ್ರಸಾರ ಮಾಡಿರುವ ವಿಡಿಯೋ ಹಗರಣದಲ್ಲಿ ಮಾರ್ಥೋಮಾ ಚರ್ಚ್ ಮತ್ತು ಅದರ ಬಿಷಪ್ ಅನ್ನು ಮಾನಹಾನಿಕರವಾಗಿ ಚಿತ್ರಿಸುವ ಮೂಲಕ ಅವಮಾನಿಸಿದೆ. ಈ ವಿಡಿಯೋ ಅನುಯಾಯಿಗಳ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸುವುದಲ್ಲದೆ ಸಾರ್ವಜನಿಕ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರಬಹುದು ಎಂದು ಅರ್ಜಿದಾರ ಅನೀಶ್ ಕೆ ತಂಕಚನ್ ವಾದಿಸಿದ್ದರು.
ಐಟಿ ಕಾಯಿದೆ ಪ್ರಕಾರ ತಾನು ಮಧ್ಯಸ್ಥ ವೇದಿಕೆಯಷ್ಟೇ ಆಗಿದ್ದು ನ್ಯಾಯಾಲಯ ಅಥವಾ ಸರ್ಕಾರ ನಿರ್ದೇಶನ ನೀಡದ ಹೊರತು ವಸ್ತುವಿಷಯದ ಕಾನೂಬದ್ಧತೆಯನ್ನು ನಿರ್ಧರಿಸುವ ಹೊಣೆ ತನ್ನದಲ್ಲ. ಅಂತಹ ಕಟ್ಟುಪಾಡುಗಳನ್ನು ಹೇರುವುದು ಅಪ್ರಾಯೋಗಿಕ ಮತ್ತು ಐಟಿ ಕಾಯಿದೆಯ ಸೆಕ್ಷನ್ 79ರ ಅಡಿಯಲ್ಲಿ ಒದಗಿಸಲಾದ ರಕ್ಷಣೆಗೆ ವಿರುದ್ಧ ಎಂದು ಯೂಟ್ಯೂಬ್ ಪ್ರತಿಪಾದಿಸಿತ್ತು.
ಸೆಕ್ಷನ್ 79ರ ಅಡಿಯಲ್ಲಿ ಯೂಟ್ಯೂಬ್ ರೀತಿಯ ಮಧ್ಯಸ್ಥ ವೇದಿಕೆಗಳು ಹೊಣೆಗಾರಿಕೆಯಿಂದ ವಿನಾಯಿತಿ ಪಡೆದಿದ್ದು, ವಿಡಿಯೋ ಮಾನಹಾನಿಕರವೆಂದು ಘೋಷಿಸುವ ನ್ಯಾಯಾಲಯದ ಆದೇಶ ಅಥವಾ ಸರ್ಕಾರದ ನಿರ್ದೇಶನ ಇಲ್ಲದೆ ಯೂಟ್ಯೂಬ್ ವಸ್ತುವಿಷಯವನ್ನು ತೆಗೆದುಹಾಕುವ ಮನವಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಲು ಹೊಣೆಗಾರನಾಗುವುದಿಲ್ಲ. ಹಾಗೆ ಹೊಣೆಗಾರರನ್ನಾಗಿಸಿದರೆ ಅದು ಅಸಮಂಜಸತೆ ಮತ್ತು ಸಂಭಾವ್ಯ ದುರುಪಯೋಗಕ್ಕೆ ಕಾರಣವಾಗಬಹುದು ಎಂದು ನ್ಯಾಯಾಲಯ ತೀರ್ಮಾನಿಸಿತು.
ಮೇಲಾಗಿ, ಸಂವಿಧಾನದ ಪರಿಚ್ಛೇದ 19(2) ರ ಅಡಿಯಲ್ಲಿ ವಾಕ್ ಸ್ವಾತಂತ್ರ್ಯದ ಮೇಲಿನ ಸಮಂಜಸವಾದ ನಿರ್ಬಂಧಗಳನ್ನು ವಿಡಿಯೋ ಉಲ್ಲಂಘಿಸಿದೆ ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳನ್ನು ಒದಗಿಸಿಲ್ಲ ಮತ್ತು ವಸ್ತುವಿಷಯವನ್ನು ತೆಗೆದುಹಾಕಲು ಯಾವುದೇ ನ್ಯಾಯಾಂಗ ಅಥವಾ ಸರ್ಕಾರಿ ನಿರ್ದೇಶನವಿಲ್ಲ ಎಂದ ನ್ಯಾಯಾಲಯ ಅರ್ಜಿ ವಜಾಗೊಳಿಸಿತು.
ಇದನ್ನೂ ನೋಡಿ: ಒಂದು ದೇಶ ಒಂದು ಚುನಾವಣೆ : ಸಮಸ್ಯೆ ಸವಾಲುಗಳು – ಬಿ.ಎಲ್ ಶಂಕರ್ Janashakthi Media