ಸಾಮಾಜಿಕ ಜಾಲತಾಣದ ತುಂಬ ” ಕಾಶ್ಮೀರ್‌ ಫೈಲ್ಸ್‌” ದೇ ಚರ್ಚೆ

ದ ಕಾಶ್ಮೀರ್ ಫೈಲ್ಸ್ ಚಿತ್ರದ ಬಗ್ಗೆ ಪರ ವಿರೋಧದ ಚರ್ಚೆ ನಡೆಯುತ್ತಿದೆ. ಸಿನೆಮಾ ನಿರ್ದೇಶಕ, ನಿರ್ಮಾಪಕ ಹಾಗೂ ತಂಡದವರಿಗೆ ಇತರರ ಕೊಲೆ, ಹತ್ಯಾಕಾಂಡದ ಬಗ್ಗೆ ಗೊತ್ತಿಲ್ಲವೇ? ಅಥವಾ ಗೊತ್ತಿದ್ದು ಜಾಣ ಮೌನರಾಗಿದ್ದಾರೆಯೇ? ಅವರಿಗೆ ಗೊತ್ತಿಲ್ಲ ಎಂದರೆ ನಾವೇ ಹೇಳುತ್ತೇವೆ ಎಂದು ಪೋಸ್ಟ್ ಹಾಗೂ ವಿವರಣೆಗಳನ್ನು ಹಾಕಲಾಗುತ್ತಿದೆ.

ಕಾಶ್ಮೀರ್ ಫೈಲ್ಸ್ ಬಗ್ಗೆ ಭಾರತೀಯ ಸೇನೆಯ ನಿವೃತ್ತ ಪೈಲಟ್ ರಾಜೀವ್ ತ್ಯಾಗಿಯವರು ಬರೆದಿರುವುದು.

ದ ಕಾಶ್ಮೀರ್ ಫೈಲ್ಸ್ ಸಂಪೂರ್ಣವಾಗಿ ವಸ್ತುಸ್ತಿತಿಯ ತಿರುಚುವಿಕೆ ಮತ್ತು ಮುಸ್ಲಿಮರ ವಿರುದ್ಧ ದ್ವೇಶ ಹರಡಲು ಸಂಗಪರಿವಾರ ಪ್ರಾಯೋಜಿಸಿರುವ ಹಸಿ ಸುಳ್ಳುಗಳ ಕಟ್ಟುಕತೆ.

ಕಾಶ್ಮೀರಿ ಪಂಡಿತರ ವಲಸೆಗೆ ಕುಮ್ಮಕ್ಕು ನೀಡಿದ್ದಿ ಬಿಜೆಪಿ ಮತ್ತು ಅಂದಿನ ಜಮ್ಮು ಕಾಶ್ಮೀರಕ್ಕೆ ವಾಜಪೇಯಿ ಮತ್ತು ಅಡ್ವಾಣಿ ಸೇರಿ ನೇಮಿಸಿದ್ದ  ರಾಜ್ಯಪಾಲ ಜಗನ್ಮೋಹನ್. ಆಗ ಅದಿಕಾರದಲ್ಲಿದ್ದುದು ಬಿಜೆಪಿ ಬೆಂಬಲಿತ ವಿಪಿ ಸಿಂಗ್ ಸರಕಾರ. ಆರೆಸ್ಸೆಸ್ ಚೇಲಾ ಜಗನ್ಮೋಹನ್ ಹಿಂದೂಗಳಲ್ಲಿ ಬೀತಿ ಹುಟ್ಟಿಸಿ ಅದರಿಂದ ದೊಡ್ಡ ಮಟ್ಟದ ಪಂಡಿತರ ವಲಸೆಗೆ ಕಾರಣನಾದ.

ಈ ಕಾಶ್ಮೀರಿ ಪಂಡಿತರ ವಲಸೆಗೆ ಮೊದಲು ಉಗ್ರರು ಸುಮಾರು 15,000 ಕಾಶ್ಮೀರಿ ಮುಸ್ಲಿಮರನ್ನು ಕೊಂದಿದ್ದರು, ಹಾಗೇ 300 + ಹಿಂದುಗಳನ್ನು ಜಮ್ಮು ಕಾಶ್ಮೀರದಲ್ಲಿ ಕೊಂದಿದ್ದರು‌. ಬಿಜೆಪಿ/ಆರೆಸ್ಸೆಸ್ ಗಳು ಹೇಳುತ್ತಿರುವ ಸುಳ್ಳು ಯಾವ ಮಟ್ಟದ್ದು ಎಂದು ತಿಳಿಯಲು ಇಶ್ಟೇ ಸಾಕು.

 

31 ವರ್ಷಗಳಲ್ಲಿ ಕಾಶ್ಮೀರದಲ್ಲಿ ಸತ್ತ ಕಾಶ್ಮೀರಿ ಪಂಡಿತರ ಸಂಖ್ಯೆ: 89. ಇದೇ 31 ವರ್ಷಗಳಲ್ಲಿ ಹತ್ಯೆಯಾದ ದಲಿತರ ಸಂಖ್ಯೆ 1368.  ಇನ್ನು ಹಲ್ಲೆಗೊಳಗಾದ, ಅತ್ಯಾಚಾರ ಮಾಡಲ್ಪಟ್ಟವರ ವಾರ್ಷಿಕ ಸರಾಸರಿ 5646 ಅಂದರೆ, 31 ವರ್ಷಗಳಿಂದ 175026 ಜನ ಇಲ್ಲಿನ ಜಾತೀವಾದಿಗಳಿಂದ ಹಿಂಸೆ ಅನುಭವಿಸಿದ್ದಾರೆ…

ಸತ್ಯವು ಕಾಲ್ಪನಿಕತೆಯನ್ನು ಸ್ಟಂಪ್ ಮಾಡುತ್ತದೆ. ಕಾಶ್ಮೀರಿ ಪಂಡಿತರ ಹತ್ಯೆಯ ಬಗ್ಗೆ ಕಾಶ್ಮೀರ ಪೊಲೀಸರು RTI ನಲ್ಲಿ ಕೊಟ್ಟ ಮಾಹಿತಿ. ಒಟ್ಟು ಕೊಲ್ಲಲ್ಪಟ್ಟ ಪಂಡಿತರು – 89 ಜನ, ಒಟ್ಟು ಕೊಲ್ಲಲ್ಪಟ್ಟ ಇತರರು 1635 ಜನ.

ಯುವ ಚಿಂತಕ ಶ್ಯಾಮಸುಂದರ್ ರವರು ತಮ್ಮ ಫೇಸ್ಬುಕ್‌ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ.

ದಿ ಕಾಶ್ಮೀರಿ ಪೈಲ್ಸ್  ಸಿನಿಮಾದ ಬಗ್ಗೆ ನನಗೇನು ಅಸಮಾಧಾನ ಇಲ್ಲ,  ಅಥವ ಪಂಡಿತರ ವಿರೋದಿಯು ಅಲ್ಲ, ಬೇಸರದ ವಿಷಯ 1990/91 ರಲ್ಲಿ ಕಾಶ್ಮೀರಿ ಪಂಡಿತರ  ಮೇಲೆ ನಡೆದ ಶೋಷಣೆಯ ಹತ್ಯಾಕಾಂಡದ ಬಗ್ಗೆ ಚಿತ್ರ ಮಾಡಿ ಇತಿಹಾಸದಲ್ಲಿ ದಾಖಲಾಗದೆ ಇರುವುದನ್ನು  ಪರದೆಮೇಲೆ ತೋರಿಸಿರುವ ನೀವು, ಇತಿಹಾಸದಲ್ಲಿ ದಾಖಲಾಗಿರುವ ದಲಿತರ ಮೇಲೆ ನಡೆದಿರುವ  ಶೋಷಣೆ ದೌರ್ಜನ್ಯಗಳ ಬಗ್ಗೆ  ಗಮನವೇಕಿಲ್ಲ.

ಇತಿಹಾಸದುದ್ದಕ್ಕೂ ದರ್ಪ, ದೌರ್ಜನ್ಯವನ್ನು ಎದುರಿಸುತ್ತಿರುವ ದಲಿತ ಸಮುದಾಯಕ್ಕೆ ನ್ಯಾಯವೆಂಬುದು ಮರೀಚಿಕೆಯಾಗಿದೆ. ಅಂದರೆ ಇತಿಹಾಸದ ದಾಖಲೆಗಳನ್ನು ಗಮನಿಸುವುದಾದರೆ ಕಿಲ್ವೆನ್ಮಣಿ ಹತ್ಯಾಕಾಂಡ(1968) -ತಮಿಳುನಾಡಿನಲ್ಲಿ 44 ದಲಿತರನ್ನು ಬಲಿತೆಗೆದುಕೊಂಡ ಕೃತ್ಯ, ಕರಮಚೆಡು ಪ್ರಕರಣ(1985)-ಅಂಧ್ರದಲ್ಲಿ 6 ಜನ ದಲಿತರ ಹತ್ಯೆ, ರಣವೀರ ಸೇನಾ ಪ್ರಕರಣ(1990)-ಬಿಹಾರದಲ್ಲಿ ಜಮೀನ್ದಾರ ದೌರ್ಜನ್ಯದಿಂದ 10 ಜನರು ಪ್ರಾಣ ಕಳೆದುಕೊಳ್ಳಬೇಕಾಯಿತು, ತುಂದೂರ್ ಪ್ರಕರಣ(1991) -ಆಂಧ್ರಪ್ರದೇಶದಲ್ಲಿ 8 ಜನರನ್ನು ಹತ್ಯೆ ಮಾಡಲಾಗಿತ್ತು, ಬಥನಿ ಟೋಲಾ ಪ್ರಕರಣ(1996)-ಬಿಹಾರದಲ್ಲಿ ರಣವೀರ ಸೇನಾ ಕಾರ್ಯಕರ್ತರಿಂದ 21 ಮಂದಿ ದಲಿತ ಮಹಿಳೆಯರು ಮತ್ತು ಮಕ್ಕಳನ್ನು ಹತ್ಯೆ ಮಾಡಿದರು, ಮೆಲವಲವು ಪ್ರಕರಣ(1996)-ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ 6 ಮಂದಿ ದಲಿತರನ್ನು ಸವರ್ಣೀಯರು ಹತ್ಯೆಮಾಡಿದ್ದರು, ಲಕ್ಷ್ಮಣಪುರ ಬಥೆ ಪ್ರಕರಣ(1997) ಬಿಹಾರದ ಗಯಾದಲ್ಲಿ ರಣವೀರ್ ಸೇನೆ ಕಾರ್ಯಕರ್ತರಿಂದ 58 ಮಂದಿ ದಲಿತರ ಮಾರಣಹೋಮವಾಯಿತು, ಬಂತ್ ಸಿಂಗ್ ಪ್ರಕರಣ(1999)- ಪಂಜಾಬ್‌ನ ಭುಂಗರ್ ಖೇರ್ ಎಂಬ ಹಳ್ಳಿಯಲ್ಲಿ ನಾಲ್ಕು ಮಂದಿ ಸವರ್ಣೀಯರು ರಾಮ್‌ವತಿ ಎಂಬ ದಲಿತ ಅಂಗವಿಕಲ ಮಹಿಳೆಯನ್ನು ವಿವಸ್ತ್ರಗೊಳಿಸಿ ಅಪಮಾನಮಾಡಿದ್ದರು, ಕಂಬಾಲಪಲ್ಲಿ ಪ್ರಕರಣ(2000) ಕರ್ನಾಟಕದ ಕೋಲಾರ ಜಿಲ್ಲೆಯ ಹಳ್ಳಿಯಲ್ಲಿ 7 ಮಂದಿ ದಲಿತರನ್ನು ಸವರ್ಣೀಯರು ಸಜೀವ ದಹನ ಮಾಡಿದರು.

ಮುಥಂಗ ಪ್ರಕರಣ(2003)- ಕೇರಳ ರಾಜ್ಯದವಯನಾಡಿನ ಹಳ್ಳಿಯಲ್ಲಿ ಚಳವಳಿದಾರರ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ 5 ಮಂದಿ ಆದಿವಾಸಿಗಳು ಮರಣ ಹೊಂದಿದರು, ಖೈರ್ಲಾಂಜಿ ಪ್ರಕರಣ(2006)-ಮಹಾರಾಷ್ಟ್ರದ ಭಾಂದ್ರಾ ಜಿಲ್ಲೆಯ ಹಳ್ಳಿಯಲ್ಲಿ 4 ಮಂದಿ ದಲಿತ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ ಅತ್ಯಾಚಾರವೆಸಗಿ ಕೊಲೆಮಾಡಲಾಯಿತು, ಗುರ್ಜಾರ್ ಪ್ರಕರಣ(2008) ರಾಜಸ್ಥಾನ್‌ನಲ್ಲಿ ಗುರ್ಜಾರ್ ಚಳವಳಿಯಲ್ಲಿ 15ಕ್ಕೂ ಅಧಿಕ ಮಂದಿ ಮರಣಹೊಂದಿದರು, ಮಿರ್ಚ್ ಪುರ್ ಪ್ರಕರಣ(2011)- ಹರ್ಯಾಣದ ಹಿಸ್ಸಾರ್ ಜಿಲ್ಲೆಯ ಹಳ್ಳಿಯಲ್ಲಿ ಸವರ್ಣೀಯರು ನಡೆಸಿದ ಕೃತ್ಯದಲ್ಲಿ 18 ದಲಿತ ಮನೆಗಳಿಗೆ ಬೆಂಕಿ ಹಚ್ಚಲಾಯಿತು ಇದರಲ್ಲಿ ಅಂಗವಿಕಲ ಯುವತಿ ಮತ್ತು ಆಕೆಯ ತಂದೆ ಮರಣ ಹೊಂದಿದರು, ಧರ್ಮಪುರಿ ಪ್ರಕರಣ(2012)-ತಮಿಳುನಾಡಿನಲ್ಲಿ ಸವರ್ಣೀಯರು ನಡೆಸಿದ ಕೃತ್ಯದಲ್ಲಿ ದಲಿತರ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚಿ ದೌರ್ಜನ್ಯವೆಸಗಲಾಗಿತ್ತು, ದಲಿತ-ಜಾಟ್ ಪ್ರಕರಣ(2015)-ರಾಜಸ್ಥಾನದ ನಾಗೋರ್ ಜಿಲ್ಲೆಯ ದಾಗವಾಸ್ ಎಂಬ ಹಳ್ಳಿಯಲ್ಲಿ ದಲಿತರು ಮತ್ತು ಸವರ್ಣೀಯರ ನಡುವಿನ ಕಲಹದಲ್ಲಿ 4 ಮಂದಿ ದಲಿತರು ಮರಣ ಹೊಂದಿದರು, ರೋಹಿತ್ ವೇಮುಲಾ ಪ್ರಕರಣ(2016)-ಸೆಂಟ್ರಲ್ ಯುನಿವರ್ಸಿಟಿ ಹೈದರಾಬಾದ್‌ನಲ್ಲಿ ಬಿಜೆಪಿಯ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿಯ ಸವರ್ಣೀಯ ಯುವಕರು ನಡೆಸಿದ ಜಾತಿನಿಂದನೆ ಮತ್ತು ಹಲ್ಲೆಯಿಂದ ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡರು. ದಾನಮ್ಮ ಮತ್ತು ಕೋರೆಗಾಂವ್ ಪ್ರಕರಣ(2017) ಬಿಜಾಪುರ ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಕ ದಲಿತ ಹೆಣ್ಣುಮಗಳಾದ ದಾನಮ್ಮಳ ಮೇಲೆ ಬಿ.ಜೆ.ಪಿಯ ಕಾರ್ಯಕರ್ತರಿಂದ ಅತ್ಯಾಚಾರ ಮತ್ತು ಹತ್ಯೆಯಾಯಿತು ಹಾಗೆಯೇ ಮಹಾರಾಷ್ಟ್ರದ ಕೋರೆಗಾಂವ್ ಎಂಬ ಹಳ್ಳಿಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ದಲಿತರ ಮೇಲೆ ಮಾರಣಾಂತಿಕ ಹಲ್ಲೆಯಾಯಿತು.

ಇಷ್ಟೆಲ್ಲಾ ದೌರ್ಜನ್ಯಗಳು ದಲಿತರ ಮೇಲೆ ಕಾಲದಿಂದ ಕಾಲಕ್ಕೆ ನಡೆಯುತ್ತಾ ಬಂದಿವೆ ಹಾಗೂ ಎಷ್ಟೋ ಪ್ರಕರಣಗಳು ಬೆಳಕಿಗೆ ಬಾರದೆ ನಾಶವಾಗಿವೆ ಆದರೆ ನಮ್ಮನ್ನು ಪ್ರತಿನಿಧಿಸುವ ರಾಜಕೀಯ ನಾಯಕರು, ಉನ್ನತ ಅಧಿಕಾರಿಗಳು ಇವುಗಳ ಬಗ್ಗೆ ಚಕಾರವೆತ್ತದೆ ತಮ್ಮ ತಮ್ಮ ಸ್ವಾರ್ಥ ಸಾಧಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಇನ್ನೂ ಪ್ರಕರಣಗಳಲ್ಲಿ ಕೆಲವೇ ಪ್ರಕರಣಗಳಿಗೆ ತಕ್ಕ ಮಟ್ಟಿಗೆ ನ್ಯಾಯ ದೊರಕಿದೆಯಾದರೂ ಬಹುಪಾಲು ಪ್ರಕರಣಗಳು ಸಮರ್ಪಕ ಸಾಕ್ಷಾಧಾರಗಳಿಲ್ಲದೆ ಖುಲಾಸೆಯಾಗುತ್ತವೆ ಇಲ್ಲವೇ ದಲಿತರನ್ನೇ ಅಪರಾಧಿಯಾಗಿಸುವ ಹುನ್ನಾರಗಳು ನಡೆಯುತ್ತವೆ, ಇವೆಲ್ಲವೂ ಈ ದೇಶದ ದಲಿತರ ಅಜಾಗರೂಕತೆ ಮತ್ತು ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ.

‘ನ್ಯಾಷನಲ್ ಕ್ರೈಮ್ ಬ್ಯೂರೋ 2016ರ ವರದಿ ಪ್ರಕಾರ ಭಾರತದಾದ್ಯಂತ ಪರಿಶಿಷ್ಟ ಜಾತಿಗಳ ಮೇಲೆ 40,801 ಹಾಗೂ ಕರ್ನಾಟಕ ಒಂದರಲ್ಲೇ 1,869 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಹಾಗೆಯೇ ಪರಿಶಿಷ್ಟ ಪಂಗಡದ ಮೇಲೆ 6,568 ಹಾಗೂ ಕರ್ನಾಟಕದಲ್ಲಿ 374 ಪ್ರಕರಣಗಳು ದಾಖಲಾಗಿವೆ. ಹೀಗೆ ದಾಖಲಾಗುವ ಪ್ರಕರಣಗಳ ಸಂಖ್ಯೆಯಲ್ಲಿ ಶೇ.85 ಪ್ರಕರಣಗಳು ಸಮರ್ಪಕ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಯಾಗುತ್ತವೆ ಇದಕ್ಕೆ ಸ್ಪಷ್ಟ ಉದಾಹರಣೆ ಡಿಸೆಂಬರ್ 19, 2017 ಬಿಜಾಪುರದಲ್ಲಿ ನಡೆದ ದಾನಮ್ಮಳ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವಾಗಿದೆ. ಸಮುದಾಯದ ರಾಜಕೀಯ ನಾಯಕರು, ಚಳವಳಿಗಾರರು ಇನ್ನಿತರ ವ್ಯಕ್ತಿಗಳು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಹಾಗೂ ಮೇಲ್ವರ್ಗದ ಜನರನ್ನು ಓಲೈಸಲು ಸವರ್ಣೀಯರ ದಾಸ್ಯಕ್ಕೆ ಒಳಗಾಗಿ ಸಾಕ್ಷ್ಯಾಧಾರಗಳ ನಾಶಕ್ಕೆ ಅನುವುಮಾಡಿಕೊಡುವ ಮೂಲಕ ಸಮುದಾಯವನ್ನು ಅಧೋಗತಿಗೆ ನೂಕಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *