ಬೆಂಗಳೂರು: ಉಚಿತ ಅಕ್ಕಿಯ ಬದಲು ನಗದು ಹಣವನ್ನು ವರ್ಗಾವಣೆ ಮಾಡುವ ಸಚಿವ ಸಂಪುಟದ ತೀರ್ಮಾನ ಪರ್ಯಾಯ ವ್ಯವಸ್ಥೆಯವರೆಗಿನ ತಾತ್ಕಾಲಿಕ ವ್ಯವಸ್ಥೆ ಮಾತ್ರವಾಗಲಿ ಎಂದು ಜನವಾದಿ ಮಹಿಳಾ ಸಂಘಟನೆ ಒತ್ತಾಯಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಘಟನೆಯು, ಕೇಂದ್ರದ ಬಿ.ಜೆ.ಪಿ.ಸರಕಾರದ ಹಠಮಾರಿ ತಾರತಮ್ಯ ಧೋರಣೆಯಿಂದಾಗಿ ಅರ್ಹ ಬಡವರಿಗೆ ಹೆಚ್ಚುವರಿ 5 ಕೆ.ಜಿ.ಉಚಿತ ಅಕ್ಕಿ ಕೊಡುವ ಗ್ಯಾರಂಟಿ ಯೋಜನೆಗೆ ಅಡ್ಡಿ ಉಂಟಾಗಿದೆ. ಇದರ ವಿರುದ್ಧ ಹಲವಾರು ಪ್ರತಿಭಟನೆಗಳು ನಡೆಯುತ್ತಿವೆ. ಕೇಂದ್ರದ ಬಿ.ಜೆ.ಪಿ.ಸರಕಾರಕ್ಕೆ ಇದ್ಯಾವುದರ ಪರಿವೆಯೇ ಇಲ್ಲದಂತೆ ವರ್ತಿಸುತ್ತಿದೆ. ಇದು ಖಂಡನೀಯ. ಇದು ಬಿ.ಜೆ.ಪಿ ತಾನು ಬಡವರ ವಿರೋಧಿ ಎಂಬುದನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿದೆ. ಇದೇ ಸಂದರ್ಭದಲ್ಲಿ ತನ್ನ ಮಾತು ಉಳಿಸಿಕೊಳ್ಳಲು ರಾಜ್ಯ ಸರಕಾರ ನೇರ ನಗದು ವರ್ಗಾವಣೆಯ ತೀರ್ಮಾನ ತೆಗೆದುಕೊಂಡಿದೆ. ಇದೊಂದು ತಾತ್ಕಾಲಿಕ ಪರಿಹಾರವಾಗಬೇಕೇ ಹೊರತೂ ಪರ್ಮನೆಂಟ್ ಮಾಡಬಾರದು. ಯಾಕೆಂದರೆ ಅಕ್ಕಿ ಮುಕ್ತ ಮಾರುಕಟ್ಟೆಯಲ್ಲಿ ಸರಕಾರ ನಿಗದಿ ಪಡಿಸಿದ ದರದಲ್ಲಿ ಸಿಗುವುದಿಲ್ಲ ಎಂದು ತಿಳಿಸಿದೆ.
ಇದನ್ನೂ ಓದಿ:‘ಅನ್ನಭಾಗ್ಯ’ : ಅಕ್ಕಿ ಬದಲು ಹಣ – ಸಂಪುಟದ ಮಹತ್ವದ ತೀರ್ಮಾನ
ನೇರ ನಗದು ಯೋಜನೆ ಜಾರಿಗೆ ಬಂದ ತಕ್ಷಣ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆಯನ್ನು ಜಾಸ್ತಿ ಮಾಡುವ ಸಾಧ್ಯತೆಗಳೇ ಹೆಚ್ಚು. ಇದು ಕೇವಲ ಉಚಿತ ಅಕ್ಕಿಯ ಫಲಾನುಭವಿಗಳಿಗೆ ಮಾತ್ರವಲ್ಲದೆ ಇತರ ಜನರಿಗೂ ಬಾಧಿಸಲಿದೆ. ಮುಕ್ತ ಮಾರುಕಟ್ಟೆಯ ಮೇಲೆ ಯಾವುದೇ ಹಿಡಿತ ಉಳಿಯದಂತೆ ಇದೇ ಬಿ.ಜೆ.ಪಿ ಸರಕಾರ ಕೊವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಸುಗ್ರೀವಾಜ್ಞೆಯ ಮೂಲಕ ಅವಶ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತಂದಿದೆ. ಇದು ಕಾಳಸಂತೆಕೋರರಿಗೆ ಜನರನ್ನು ಲೂಟಿ ಮಾಡಲು ಮಾಡಿಕೊಟ್ಟ ಸುವರ್ಣಾವಕಾಶ. ನಗದು ವರ್ಗಾವಣೆಯನ್ನು ಮಾಡುವ ಬಗ್ಗೆ ಈ ಹಿಂದೆಯೂ ಹಲವು ಬಾರಿ ಪ್ರಸ್ತಾಪ ಮಾಡಲಾಗಿತ್ತು. ಆದರೆ ಅದು ಈ ಮೇಲಿನ ಕಾರಣಗಳಿಗಾಗಿ ಮತ್ತು ಕೈಗೆ ಸಿಗುವ ನಗದು ಕುಟುಂಬದ ಆಹಾರದ ಅಗತ್ಯದ ವೆಚ್ಚಕ್ಕೆ ಸಿಗದಿರುವ ಸಾದ್ಯತೆಗಳೇ ಹೆಚ್ಚು ಎಂಬ ಕಾರಣಕ್ಕಾಗಿಯೇ ಅದನ್ನು ವಿರೋಧಿಸಲಾಗಿತ್ತು ಎಂದಿದೆ.
ನಮ್ಮ ಅನುಭವದಂತೆ ಹೀಗೆ ಸಿಗುವ ನಗದು ಬಹಳ ಸಂದರ್ಭಗಳಲ್ಲಿ ಕುಟುಂಬದ ವೆಚ್ಚಕ್ಕೆ ಸಿಗದೇ ಬೇರೆಯ ಖರ್ಚುಗಳಿಗೆ ಹೋಗುತ್ತದೆ ಮತ್ತು ಕುಟುಂಬದ ಆಹಾರ ನಿರ್ವಹಣೆಯ ಜವಾಬ್ದಾರಿಯನ್ನು ಮಹಿಳೆಯರೇ ನಿಭಾಯಿಸುವುದರಿಂದ ಅವರು ನೇರವಾಗಿ ತೊಂದರೆಗೆ ಒಳಗಾಗುತ್ತಾರೆ. ಈ ಕಾರಣಕ್ಕಾಗಿಯೂ ಜನವಾದಿ ಮಹಿಳಾ ಸಂಘಟನೆ ನಗದು ವರ್ಗಾವಣೆಯನ್ನು ವಿರೋಧಿಸುತ್ತದೆ. ಆದ್ದರಿಂದ ಧಾನ್ಯವನ್ನೇ ಪೂರೈಕೆ ಮಾಡಲು ಪರ್ಯಾಯ ಮಾರ್ಗ ರೂಪಿಸುವವರೆಗೆ ಮನೆಯ ಯಜಮಾನಿಯ ಅಕೌಂಟ್‌ಗೆ ಹಣ ಸಂದಾಯ ಮಾಡಬೇಕು. ಈ ಮೇಲಿನ ಎಲ್ಲ ಕಾರಣಗಳಿಗಾಗಿ ನಗದು ವರ್ಗಾವಣೆಯನ್ನು ತಾತ್ಕಾಲಿಕ ಪರಿಹಾರವಾಗಿ ಮಾತ್ರವೇ ಕರ್ನಾಟಕ ರಾಜ್ಯ ಸರಕಾರ ಬಳಸಬೇಕೇ ಹೊರತೂ ಇದೇ ಅಂತಿಮ ಮಾರ್ಗ ಎಂದು ತೀರ್ಮಾನ ಮಾಡಬಾರದು. ಸ್ಥಳೀಯ ರೈತರಿಂದ, ಸ್ಥಳೀಯ ಅಗತ್ಯದ ಧಾನ್ಯಗಳನ್ನು ಸಂಗ್ರಹಿಸುವ ಮತ್ತು ಪೂರೈಸುವ ಗ್ಯಾರಂಟಿ ನೀಡಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಯ ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸುತ್ತದೆ ಎಂದು ರಾಜ್ಯಾಧ್ಯಕ್ಷೆ ಮೀನಾಕ್ಷಿ ಬಾಳಿ, ಪ್ರಧಾನಕಾರ್ಯದರ್ಶಿ ದೇವಿ ತಿಳಿಸಿದ್ದಾರೆ.