ಹೊಲ-ಮಾದಿಗರ ಬೌದ್ಧಿಕ ಹಾಗೂ ಭೌತಿಕ ವೈರಿಗಳು ಯಾರಾಗಬೇಕಾಗಿತ್ತು? ಆಗುತ್ತಿರುವುದಾದರೂ ಏನು?

ಹೊಲ-ಮಾದಿಗರಿಗೆ ಶಿಕ್ಷಣ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ಶಾಶ್ವತ ಅಜ್ಞಾನದಿಂದ ಧಾರ್ಮಿಕ ಅಂಧಕಾರವನ್ನು ಹೇಳಿ- ನಂಬಿಸಿ ಅವುಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಿದವರು ಇವರಿಗೆ ಪೂಜ್ಯರಾದರೆ ಹೊರತು ವೈರಿಗಳಾಗಲೇ ಇಲ್ಲ.

-ಎನ್. ಚಿನ್ನಸ್ವಾಮಿ ಸೋಸಲೆ

ಇವರಿಗೆ, ಶಾಶ್ವತವಾಗಿ ಸಾಮಾಜಿಕ ಹಿನ್ನೆಲೆಯಿಂದ ಅನೇಕ ಶಾಶ್ವತ ಕಟ್ಟುಪಾಡುಗಳನ್ನು ವಿಧಿಸಿ, ನಾಗರಿಕ ಪ್ರಜೆಗಳಾದರೂ ಸಹ ಅನಾಗರಿಕರಂತೆ ಬದುಕಲು ದೂಡಲು ಕಟ್ಟಾಜ್ಞೆ ಮಾಡಿದವರು, ಮಾನಸಿಕವಾಗಿ ಅಲ್ಲದಿದ್ದರೂ ದೈಹಿಕವಾಗಿ ಇವರನ್ನು ಅಸ್ಪೃಶ್ಯರನ್ನಾಗಿಸಿದವರು ವೈರಿಗಳಾಗಲೇ ಇಲ್ಲ .

ಇವರ ಮೇಲೆ ಕ್ರಿಸ್ತಪೂರ್ವದಿಂದ ಮೊದಲ್ಗೊಂದು ಕ್ರಿಸ್ತಶಕದ ಅಂದರೆ, ಇಂದಿನವರೆಗೂ ಧರ್ಮ ಹಾಗೂ ಜಾತಿಯ ಹಿನ್ನೆಲೆಯಿಂದ ನಿರಂತರ ದೈಹಿಕ ಹಾಗು ಬೌದ್ಧಿಕ ದೌರ್ಜನ್ಯ ಮಾಡಿದವರು ಇವರ ಬೌದ್ಧಿಕತೆಗೆ ವೈರಿಗಳಾಗಲೇ ಇಲ್ಲ.

ಶತಶತಮಾನಗಳಿಂದ ಹೂಲ ಮಾದಿಗರಿಗೆ ಮನುಷ್ಯರಾಗಿ ಬದುಕಲು ಬೇಕಾದ ಮೂಲಭೂತ ಹಕ್ಕುಗಳನ್ನು ಕಿತ್ತಿಕೊಂಡು , ಶಾಶ್ವತವಾಗಿ ಹರಣ ಮಾಡಿದವರು ಪರಮ ವೈರಿಗಳಾಗಲೇ ಇಲ್ಲ.

ಇದನ್ನೂ ಓದಿ: ಬೆಂಗಳೂರು | ಇಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಕ್ಯಾರಿವೋವರ್ ನೀಡಿ ಸಚಿವ ಡಾ. ಎಂ.ಸಿ ಸುಧಾಕರಗೆ ಎಸ್‌ ಫ್‌ ಐ ಮನವಿ

ಒಂದಿಂಚು ಭೂಮಿಯನ್ನು ಕೊಡದೆ, ಪ್ರಭುತ್ವವನ್ನು ತಮ್ಮ ತೋಳ್ತೆಕ್ಕೆಗೆ ತೆಗೆದುಕೊಂಡು ವಿಶಾಲಭೂಮಿಯನ್ನು ಪ್ರಭುತ್ವವನ್ನು ಒಲೈಸಿ ತಮ್ಮ ಅನುಕೂಲಕ್ಕೆ ಬಿಡಿಸಿಕೊಂಡು, ಬೃಹತ್ ಕೆರೆಗಳನ್ನು ಇವರಿಂದಲೇ ನಿರ್ಮಾಣ ಮಾಡಿಸಿಕೊಂಡು, ತಮ್ಮಿಂದಲೇ ದುಡಿಸಿಕೊಂಡು ಹೊಟ್ಟೆ ತುಂಬ ಉಂಡವರು ಯಾಕೋ ನಿಮಗೆ ವೈರಿ ಆಗಲೇ ಇಲ್ಲ.

ನೀವು ಈ ನೆಲದಲ್ಲಿ ಜೀವಿಸಲು ಬೇಕೇ ಬೇಕಾದ ಹೊಟ್ಟೆಯ ಅರೆಗಜ್ಜಿಗೂ ಜಾತಿ ಹಿನ್ನೆಲೆಯಿಂದ ಕಂಟಕ ತಂದವರು ವೈರಿಗಳಾಗಲೇ ಇಲ್ಲ.

“ಒಂದ್ಗೆಉಂಡರೂ ಅವರೆಕಾಳು ತಿನ್ನಬೇಡ” ಎಂಬ ಪಿತ್ರಾರ್ಜಿತ ಮಾನಸಿಕ ಶಾಶ್ವತ ಅಸ್ಪೃಶ್ಯತೆಯನ್ನು ತಲೆಯಲ್ಲಿ ಶಾಶ್ವತವಾಗಿ ತುಂಬಿಕೊಂಡು – ಧರ್ಮದ ಕಟ್ಟುಪಾಡುಗಳ ಹಿನ್ನೆಲೆಯಿಂದಲೇ ಜಾತೀಯತೆಯನ್ನು ಶಾಶ್ವತವಾಗಿ ಪಾಲಿಸಿದವರು ಇವರಿಗೆ ವೈರಿಗಳಾಗಲೇ ಇಲ್ಲ.

ಇವರನ್ನೇ ದೈಹಿಕ ಬಂಡವಾಳವನ್ನಾಗಿ ಮಾಡಿಕೊಂಡು “ಉರಿದ್ಮೇಲೆ ಹೊಲಿಗೇರಿ ಇರಬೇಕು” ಎಂದು ತಮ್ಮ ಅನುಕೂಲಕ್ಕಾಗಿ ಹೊಲ ಮಾದಿಗರ “ಕೇರಿ” ಯನ್ನು ಸೃಷ್ಟಿ ಮಾಡಿಕೊಂಡು ಇವರ ಸೇವೆಯಿಂದಲೇ ತಮ್ಮ ಬದುಕನ್ನು ಶ್ರೇಷ್ಠತೆಯಿಂದ ಬದುಕಿದವರು ಇವರಿಗೆ ವೈರಿ ಆಗಲೇ ಇಲ್ಲ.

ಯಾವುದೇ ಸಾಂಸ್ಕೃತಿಕ ಸಂದರ್ಭದಲ್ಲಿಯೂ ಊರುಕೇರಿಯನ್ನು ಒಂದು ಮಾಡದೆ, ಶಾಶ್ವತವಾಗಿ ಸ್ಪೃಶ್ಯತೆ ಹಾಗೂ ಅಸ್ಪೃಶ್ಯತೆಗೆ ಒಳಪಡಿಸಿದವರು ವೈರಿಗಳಾಗಲೇ ಇಲ್ಲ. ಏಕೆಂದರೆ ನಿಮಗೆ ಅವರು ಸ್ಪೃಶ್ಯರು ಅವರಿಗೆ ನೀವು ಅಸ್ಪೃಶ್ಯರು.

ಈ ನೆಲ ಮೂಲ ಸಂಸ್ಕೃತಿಯ ಕೇರಿಯವರ ಬೆವರನೆ ಬಹುದೊಡ್ಡ ಬಂಡವಾಳವನ್ನು ಹಾಕಿಸಿಕೊಂಡು ತಮ್ಮ ಸ್ವಾರ್ಥದ 16 ಕಂಬದ ಹಟ್ಟಿ , ಮಾಗಡಿ ಮೇಲೆ ಮಾಗಡಿಮನೆಗಳನ್ನು ಕಟ್ಟಿಕೊಂಡು ಹೊಲ ಮಾದಿಗರನ್ನು ಮಾತ್ರ ಶಾಶ್ವತವಾಗಿ ಗುಡಿಸಿಲುಗಳಲ್ಲಿ ಜೀವಿಸಲು ದೂಡಿದವರು ಇವರಿಗೆ ವೈರಿಗಳಾಗಲೇ ಇಲ್ಲ.

ಬಾಬಾಸಾಹೇಬ್ ಡಾ. ಬಿ ಆರ್. ಅಂಬೇಡ್ಕರ್ ಅವರು ಬರೆದುಕೊಟ್ಟ ನಮ್ಮ ಸಂವಿಧಾನವನ್ನು ಯಾರು ತಮ್ಮ ಪಾರಂಪರಿಕ ಅಜ್ಞಾನದಿಂದ ವಿರೋಧ ಮಾಡುತ್ತಿರುವವರೂ , ಅಂಬೇಡ್ಕರ್ ಹಾಗೂ ಅವರ ನೆಲಮೂಲ ಸಂಸ್ಕೃತಿಯ ಸಿದ್ಧಾಂತಗಳನ್ನು ಸಮಯಕ್ಕೆ ತಕ್ಕಂತೆ ಬಳಸಿಕೊಳ್ಳಲು ಮುಂದಾಗುತ್ತಿರುವವರೂ ಅವರ್ಯಾರೂ ಇವರಿಗೆ ಶಾಶ್ವತ ವೈರಿಗಳಾಗಲಿಲ್ಲ.

ಏಕೆಂದರೆ, ಅವರ ಪಾರಂಪರಿಕ “ಶ್ರೇಷ್ಠತೆಯ” ಅಜ್ಞಾನವೇ – ಇವರ ಪಾರಂಪರಿಕ “ಕನಿಷ್ಠತೆಯ” ಅಜ್ಞಾನಕ್ಕೆ ” ಜ್ಞಾನ ” ವಾಗಿ ಕಂಡಿರುವುದು ಇದಕ್ಕೆ ಕಾರಣ. ಆದರೆ
“ನೀರಿನಲ್ಲಿ ಹುಟ್ಟುವ ಪಾಚಿಗೆ ನೀರೆ ಶಾಶ್ವತ ವೈರಿ” ಎಂಬಂತೆ ಹಾಗೂ ಪಾರಂಪರಿಕ ಕಾಲದಿಂದಲೂ “ಒಂದು ಮರಿಯನ್ನು ಕುಯ್ದು – ಅದರ ಎಲ್ಲಾ ಭಾಗದ ಮಾಂಸವನ್ನು ಸಮನಾಗಿ ಗುಡ್ಡೆಮಾಂಸದ ” ರೂಪದಲ್ಲಿ ಹಂಚಿಕೊಂಡು ಜೊತೆಗೆ ಕುಂತು ಉಂಡು- ತಿಂದು- ಕುಡಿದು ಶತಶತಮಾನಗಳಿಂದಲೂ ಜೊತೆ ಜೊತೆಗೆ ತಮ್ಮ ತಮ್ಮ ಕೇರಿಯಲ್ಲಿ ಅಸ್ಪೃಶ್ಯತೆ ಎಂಬ ಕಳಂಕವನ್ನು ಮೆತ್ತಿಕೊಂಡು ಒಂದೇ ಮರದ ಬೇರು ಬಳ್ಳಿಗಳಾಗಿ ಜೀವಿಸುತ್ತಿರುವವರು ಮಾತ್ರ ಕಡು ಕಡು ವೈರಿಗಳಾಗಿದ್ದಾರೆ. ಇವರ ವೈರತ್ವ ಹೇಗಿದೆ ಎಂದರೆ ಶತಮಾನಗಳಿಂದ ಇವರಿಗೆ ತೊಂದರೆ ಕೊಟ್ಟವರು ಸಿಕ್ಕರೆ ಆಲಂಗನ ಮಾಡುತ್ತಾರೆ ಇವರದೇ ಕಲ್ಲು ಬಳ್ಳಿಯ ಜನ ಸಿಕ್ಕರೆ ಚಿ ತು ಎಂದು ತಳ್ಳುವ ಮಟ್ಟಕ್ಕೆ ಬಂದು ನಿಂತಿದೆ. ಇದು ಇಂದಿನ ವಾಸ್ತವದ ದುರಂತ ಎನ್ನದೆ ಇನ್ನೇನು ಅನ್ನಬೇಕು…!

ಈ ನೆಲದ ಶಾಶ್ವತ ವಾರಸುದಾರಿಕೆಯನ್ನು ಪ್ರತಿಪಾದನೆ ಮಾಡಬೇಕಾದವರು ಇವರ ನಿಜ ವೈರಿಗಳ ಇಕ್ಕಳೇಯಲ್ಲಿ ಸಿಲುಕಿ ಬುದ್ಧ ಬಸವ ಅಂಬೇಡ್ಕರ್ ಅಂತವರನ್ನು ಮರೆತು ಜೀವಂತ ಇದ್ದರೂ ಸಹ ಸತ್ತಂತೆ ಜೀವಿಸುತ್ತಿದ್ದಾರೆ.

ಹೊಲ ಮಾದಿಗರಿಗೆ ಶಾಶ್ವತ ಅಸ್ಪೃಶ್ಯರು ಎಂಬ ಪಟ್ಟವನ್ನು ಕಟ್ಟಿದವರ ದೇವಾನುದೇವತೆಗಳ ಹಿನ್ನೆಲೆಯ ಐಡೆಂಟಿಟಿ ಇಂದಾಗಿ ಇವರಿಗೆ ಕರೆದ “ನೀವು ಅಸ್ಪೃಶ್ಯರು”
ಎಂಬುದನ್ನು ಅಜ್ಞಾನದಿಂದ ಸಮರ್ಥಿಸಿಕೊಳ್ಳಲೆಂದೆ ಕೇರಿಯ ಜನರು ತಮ್ಮ ತಮ್ಮ ಜಾತಿಯಲ್ಲಿಯೇ ಅವರೊಂದಿಗೆ ಗುರುತಿಸಿಕೊಳ್ಳಲು “ನಾನು ಶ್ರೇಷ್ಠ” – “ನೀನು ಕನಿಷ್ಠ ” , ” ಮಾದಿಗ ಜನಾಂಗಕ್ಕೆ ಬಹುದೊಡ್ಡ ಚರಿತ್ರೆ ಇದೆ – ಹೊಲಯ ಜನಾಂಗಕ್ಕೆ ಕನಿಷ್ಠ ಚರಿತ್ರೆ ಇದೆ, ಹೊಲಯ ಜನಾಂಗಕ್ಕೆ ಬಹುದೊಡ್ಡ ಚರಿತ್ರೆ ಇದೆ ಆದರೆ ಮಾದಿಗ ಜಲಂಗಕ್ಕೆ ಚರಿತ್ರೆಯೇ ಇಲ್ಲ ” ಎಂದು ಯಾವುದೇ ತಳ – ಬುಡ ಇಲ್ಲದ ಅಜ್ಞಾನದ ಸಂಶೋಧನೆಯನ್ನು ಮಾಡಿಕೊಳ್ಳುವ ಮೂಲಕ ಕೇವಲ ಮೇಲೆ ಉಲ್ಲೇಖಿಸಿದವರನ್ನು ಮೆಚ್ಚಿಸಿಕೊಳ್ಳಲು ಕಿತ್ತಾಡುತ್ತಿದ್ದಾರೆ .

ಇವರಿಬ್ಬರ ಇಂತಹ ಶಾಶ್ವತ ಕಿತ್ತಾಟದಿಂದ ಶತಶತಮಾನಗಳಿಂದ ಇವರು ಕಳೆದುಕೊಂಡದ್ದೆ ಹೆಚ್ಚು – ಗಳಿಸಿಕೊಂಡದ್ದು “ಅಸ್ಪೃಶ್ಯರು” ಎಂಬ ಬಹುದೊಡ್ಡ ಕಿರೀಟವನ್ನು ಮಾತ್ರ. ಇವರಿಬ್ಬರ ಕಡು ವೈರತ್ವವೇ ಮೇಲೆ ಉಲ್ಲೇಖಿಸಿದವರ ಶಾಶ್ವತ “ಸ್ಪೃಶ್ಯತೆ ” ಯ ಬಹುದೊಡ್ಡ ಬಂಡವಾಳ. ಇದೆ ಹೊಲ ಮಾದಿಗರ ಶಾಶ್ವತ ಮೀಸಲಾತಿ.

“ಸ್ಪೃಶ್ಯರು” ಈ ನೆಲದಲ್ಲಿ ನಾವು ಯಾರು..? ಈ ಜನರನ್ನು ನಾವು ಹೇಗೆ ನಡೆಸಿಕೊಳ್ಳಬೇಕು, ನಮ್ಮ ಗತ್ತು – ಗಮ್ಮತ್ತು ಹೇಗಿರಬೇಕೆಂದು ಎಂದು ಬಯಸುವುದೇ ಅವರ ಮೀಸಲಾತಿ. ಶಾಶ್ವತವಾಗಿ ಈ ಹೊಲ ಮಾದಿಗರನ್ನು ಅಜ್ಞಾನದಿಂದ ಇರುವಂತೆ ಮಾಡುವ ಕಾರ್ಯವೇ ಅವರ ಶಾಶ್ವತ ಮೀಸಲಾತಿ.

ಅವರಿಂದ ಹೊಲ ಮಾದಿಗರು ‘ ಅಸ್ಪೃಶ್ಯರು’ ಎಂದು ಕರೆಸಿಕೊಂಡಿರುವುದರ ಜೊತೆಗೆ , ಅವರೊಂದಿಗೆ ನಾವು ಹೇಗೆ ವಿನಯ ಪೂರ್ವಕವಾಗಿ ವ್ಯವಹರಿಸಬೇಕು – ಜೀವನದ ಆಶ್ರಯಕ್ಕಾಗಿ ಹೇಗೆ ಬದುಕಬೇಕು ಹಾಗೂ ವ್ಯವಹರಿಸಬೇಕು ಎಂದು ಪಾರಂಪರಿಕ ಹಿನ್ನೆಲೆಯ ಅಜ್ಞಾನದಲ್ಲಿ ತಿಳಿದುಕೊಂಡಿರುವುದೇ ಹೊಲ ಮಾದಿಗರ ಮೀಸಲಾತಿ ಹಾಗೂ ಮೀಸಲಾತಿ ಒಳಗಿನ
“ಒಳಮೀಸಲಾತಿ” .

ಪ್ರಜಾಪ್ರಭುತ್ವ ಭಾರತದಲ್ಲಿ ಬಾಬಾಸಾಹೇಬರು ನಮಗಾಗಿ ಬರೆದುಕೊಟ್ಟ ಜ್ಞಾನವಂತದ ಸಂವಿಧಾನದ ಆಧಾರದ ಮೇಲೆ ಏನೆಲ್ಲ ಮೀಸಲಾತಿ – ಮೀಸಲಾತಿ ಒಳಗೆ ಒಳಮಿಸಲಾತಿಗಳು ಬಂದಿದೆ ನಾಳೆಯ ದಿನ ಇದು ಹೋಗಲು ಬಹುದು. ಏಕೆಂದರೆ ಸಂವಿಧಾನದ ಈ ಮೀಸಲಾತಿಗೆ ಚಲನೆ ಇದೆ. ಆದರೆ.. ಈ ಪಾರಂಪರಿಕ ಮೀಸಲಾತಿ ಮಾತ್ರ ಬದಲಾವಣೆ ಆಗುವುದೇ ಇಲ್ಲ , ಏಕೆಂದರೆ ಇದಕ್ಕೆ ಚಲನೆಯ ಇಲ್ಲ.

79 ವರ್ಷಗಳ ಪ್ರಜಾಪ್ರಭುತ್ವ ಭಾರತದಲ್ಲಿ , 76 ವರ್ಷದ ಲಿಖಿತ ಸಂವಿಧಾನದ ಆಳ್ವಿಕೆಯ ಭಾರತದಲ್ಲಿ ಎರಡುವರೆ ಸಾವಿರ ವರ್ಷಗಳಿಂದ ತಮ್ಮಲ್ಲಿ ಶಾಶ್ವತವಾಗಿ ಉಳಿದಿರುವ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದಲಾವಣೆಯನ್ನು ಮಾಡಿಕೊಳ್ಳಲು ಇಚ್ಛಿಸದವರು ಇನ್ನೂ ಇದ್ದಾರೆ ಎಂಬುದಕ್ಕೆ ಅವರ ಧಾರ್ಮಿಕ ಅಂಧಕಾರ ದಿಂದಾಗಿ ಹೊಲ ಮಾದಿಗರು ಇನ್ನೂ ಅಸ್ಪೃಶ್ಯತೆಯ ಸಂಕೋಲೆಯಲ್ಲಿ ಜೀವಿಸುತ್ತಿರುವುದೇ ಉತ್ತಮ ನಿದರ್ಶನವಾಗಿದೆ.

ಹೊಲ ಮಾದಿಗರ ಪ್ರಗತಿಗೆ ಸಂವಿಧಾನಾತ್ಮಕ ಮೀಸಲಾತಿ – ಒಳ ಮೀಸಲಾತಿ ಜಾರಿಯಾದರೂ ಈ ತಾಂತ್ರಿಕ ಮೀಸಲಾತಿಯಿಂದ ಯಾವ ಬದಲಾವಣೆಯು ಸಹ ಈ ವಿಷಯದಲ್ಲಿ ಮಾತ್ರ ಆಗಿಲ್ಲ , ಆಗುವಹಾಗೆಯೂ ಕಾಣುತ್ತಿಲ್ಲ.

ಏಕೆಂದರೆ “ಮೀಸಲಾತಿ ಬೇಕು” ಅನ್ನುವವರೆಗೂ ಸಹ ಯಾಕೆ ಬೇಕು…? ಎಂಬ “ವಾಸ್ತವ” ದ ಸಂವಿಧಾನಾತ್ಮಕ ಪಠ್ಯದ ಪರಿಜ್ಞಾನವಿಲ್ಲ. ಆದರೆ “ಮೀಸಲಾತಿ ಕೊಡಬಾರದು” ಎನ್ನುವವರಿಗೆ ಈ ಹೊಲ ಮಾದಿಗರಿಗೆ ಏಕೆ ಮೀಸಲಾತಿಯನ್ನು ಕೊಡಬಾರದು ಎಂಬುದರ ಅಜ್ಞಾನದ ಸ್ಪಷ್ಟ ಪಾರಂಪರಿಕ ಹಿನ್ನೆಲೆಯ “ಪುರಾಣ” ಪಠ್ಯದ ಅಜ್ಞಾನದ ಅರಿವಿದೆ ಹಾಗೂ ಇತಿಹಾಸವನ್ನು ಮರೆತುಕೊಂಡ ಬಂಡತನದ ನಿಲುವಿದೆ.

ಮೀಸಲಾತಿ ಎಂದರೇನು..?

ಹೊಲ ಮಾದಿಗರಿಗೆ ಶಿಕ್ಷಣಕ್ಕಾಗಿ- ಉದ್ಯೋಗಕ್ಕಾಗಿ- ಇತರೆ ಸೌಲಭ್ಯಗಳಿಗಾಗಿ ಸಂವಿಧಾನಾತ್ಮಕವಾಗಿ ನೀಡುವ ಮೀಸಲಾತಿ ಮೀಸಲಾತಿಯೇ ಅಲ್ಲ.
ಮೀಸಲಾತಿ ಎಂದರೆ.., ಹೊಲ ಮಾದಿಗರಿಗೆ ಅಂಟಿಕೊಂಡಿರುವ ನೀವು ಅಸ್ಪೃಶ್ಯರು ಎಂಬ ಕಳಂಕದಿಂದ ಶಾಶ್ವತವಾಗಿ ಮುಕ್ತರನ್ನಾಗಿಸುವುದೇ ಮೀಸಲಾತಿ. ಇದನ್ನು ಹೋಗಲಾಡಿಸದೆ ಬೇರೆ ಯಾವ ತಾಂತ್ರಿಕ ಬೀಸಲಾತಿಯನ್ನು ನೀಡಿದರು ಸಹ ಅದು ಮೀಸಲಾತಿಯಲ್ಲ ಬದಲಿಗೆ ಸಮಯ ಸಾಧಕತನವಾಗುತ್ತದೆ.

ಹೊಲ- ಮಾದಿಗರಿಗೆ ಶಾಶ್ವತ ಹಿನ್ನೆಲೆಯಿಂದ ಅಸಂವಿಧಾನಾತ್ಮಕವಾಗಿ ಅಂಟಿರುವ ಅಜ್ಞಾನ- ಸಾಮಾಜಿಕ ಹಾಗೂ ಧಾರ್ಮಿಕ ಅಂಧಕಾರಗಳನ್ನು ಸಂವಿಧಾನಾತ್ಮಕವಾಗಿ ತೊಲಗಿಸುವುದೇ ಅಂಬೇಡ್ಕರ್ ಅವರು ಬಯಸಿದ ನಿಜಾರ್ಥದ ಮೀಸಲಾತಿ. ಈ ಅರ್ಥದ ಮೀಸಲಾತಿ ಇಂದಿಗೂ ಸಹ ಮಾತನಾಡುತ್ತಿಲ್ಲ. ಅದು ಇದ್ದಂಗೆ ಇದೆ. ವಿದ್ಯಾವಂತರಾಗಿ, ಉನ್ನತ-ಉನ್ನತ ಸರ್ಕಾರಿ ಹುದ್ದೆಗಳನ್ನು ಪಡೆದು ಒಂದಷ್ಟು ಆರ್ಥಿಕವಾಗಿ ಅಬಲರಾದದ್ದು ಹಾಗೂ ರಾಜಕೀಯವಾಗಿ ಮುನ್ನಡೆಗೆ ಬಂದು ಮಂತ್ರಿ ಉಪ ಮುಖ್ಯಮಂತ್ರಿಗಳಾದದ್ದು ಮೀಸಲಾತಿಯೂ ಅಥವಾ ಅಸ್ಪೃಶ್ಯತೆಯನ್ನು ಶಾಶ್ವತವಾಗಿ ನಿರ್ಮೂಲನೆ ಮಾಡುವುದು ಮೀಸಲಾತಿಯೂ ಎಂಬ ಪ್ರಶ್ನೆಗಳು ಇಂದಿಗೂ ನಮ್ಮನ್ನು ಕಾಡುತ್ತಿವೆ.

ಆರ್ಥಿಕ ಮೀಸಲಾತಿ ಗಿಂತ ಹೆಚ್ಚಾಗಿ ಸಾಮಾಜಿಕ ಹಾಗೂ ಧಾರ್ಮಿಕ ಹಿನ್ನೆಲೆಯ ಸ್ವಚ್ಛ ಸಮಾಜದ ಮೀಸಲಾತಿ ದಲಿತರಿಗೆ ಬೇಕಾಗಿದೆ. ಈ ಮೀಸಲಾತಿ ಸಂವಿಧಾನಾತ್ಮಕವಾಗಿ ಈ ನೆಲದ ಅಸಂವಿಧಾನಾತ್ಮಕ ಹಿನ್ನೆಲೆಯ ಅಹಂ ಹಿನ್ನೆಲೆಯಿಂದ ಶಾಶ್ವತವಾಗಿ ಮಾನಸಿಕ ಅಸ್ಪೃಶ್ಯ ರಾಗಿರುವವರಿಗೆ ಸ್ಪಷ್ಟವಾಗಿ ಹೊಲ ಮಾದಿಗರು ತಿಳಿಸಬೇಕಾಗಿದೆ. ಎರಡುವರೆ ಸಾವಿರ ವರ್ಷಗಳಿಂದ ಅವರ ಮಾತನ್ನು ಕೇಳಿ ಪಾಲಿಸಿದ ಹೊಲ ಮಾದಿಗರು – ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನದ ಆದರದ ಮೇಲೆ ಇಂದು ಅವರು ನಮ್ಮ ಮಾತನ್ನು ಕೇಳಿ- ಪಾಲಿಸುವ ಹಾಗೆ ಮಾಡುವ ಶಕ್ತಿಯನ್ನು ಗಳಿಸಬೇಕಾಗಿದೆ. ಶಾಶ್ವತವಾಗಿ ಈ ಕೊಳಕು ಅಸ್ಪೃಶ್ಯತೆಯ ಸಂಪ್ರದಾಯದಿಂದ ಬಿಡುಗಡೆಗೊಳ್ಳುವವರೆಗೂ ಸಹ ಸಂವಿಧಾನಾತ್ಮಕ ಮೀಸಲಾತಿ ಹೊಲ ಮಾದಿಗರಿಗೆ ಕಿಂಚಿತ್ತು ದೊರಕುವುದಿಲ್ಲ ಎಂಬುದು ಸ್ಪಷ್ಟ.

ಈ ಅರ್ಥದಲ್ಲಿಯೇ ನಾನು ಹೇಳುವುದು ಸ್ಪೃಶ್ಯರು ಹೊಲ ಮಾದಿಗರನ್ನು ಅಸ್ಪೃಶ್ಯನಾಗಿಸುವುದು ಅವರ ಪಾರಂಪರಿಕ ಪಿತ್ರಾರ್ಜಿತ ಆಸ್ತಿಯ ಮೀಸಲಾತಿ – ಅಸ್ಪೃಶ್ಯ ಸಮಾಜದವರೇ ನಾನು ಶ್ರೇಷ್ಠ – ನೀನು ಕನಿಷ್ಠ ಎಂದು ಹೇಳಿಕೊಳ್ಳುವುದೇ ಇವರ ಅಜ್ಞಾನದ ಮೀಸಲಾತಿ ಒಳಗಿನ ಒಳ ಮೀಸಲಾತಿ..

ಸಂವಿಧಾನ ಭಾರತದಲ್ಲಿ ಇದಾಗಬಾರದು. ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ ಸಮ ಸಮಾಜದ ಐಕ್ಯತೆಯ ಭಾರತವನ್ನು ಬಾಬಾಸಾಹೇಬರ ಚಿಂತನೆಯೊಂದಿಗೆ ಗಟ್ಟಿತನದಿಂದ ಕಟ್ಟಬೇಕಾಗಿದೆ.

ಇದು ಸಾಧ್ಯವಾಗುವವರೆಗೂ ” ಆಧುನಿಕ ಭಾರತ ” ಎಂದು ಭಾರತವನ್ನು ಕರೆಯಲು ಸಾಧ್ಯವಿಲ್ಲ. ಯಾರು ಸಹ ಕರೆಯಲೇಬಾರದು. ಅಸ್ಪೃಶ್ಯತೆಯ ಬಹುದೊಡ್ಡ ಕೊಳಕನ್ನು ಶಾಶ್ವತವಾಗಿ ಉಳಿಸಿಕೊಂಡೇ ಭಾರತವನ್ನು ಆಧುನಿಕ ಭಾರತ ಎಂದು ಕರೆಯುತ್ತೇನೆ ಎಂದರೆ ಅದು ಶಾಶ್ವತವಾಗಿ ತಪ್ಪಾಗುತ್ತದೆ. ಈ ಅರ್ಥದಲ್ಲಿಯೇ ಇಂದಿಗೂ ಸಹ ಭಾರತವನ್ನು “ಪ್ರಾಚೀನ ಭಾರತ” ಎಂದು ನಾವೆಲ್ಲರೂ ಕರೆಯಬೇಕಾಗುತ್ತದೆ.

ಅಸ್ಪೃಶ್ಯತೆ ಆಚರಣೆ – ಧಾರ್ಮಿಕ ಅಂಧಕಾರ ಹಾಗೂ ಜಾತಿ ಜಾತಿಗಳ ನಡುವಿನ ಶ್ರೇಷ್ಠತೆ ಹಾಗೂ ಕನಿಷ್ಠತೆಯ ವಿಷಯದಲ್ಲಿ ಮಾತ್ರ ಭಾರತ ಪ್ರಾಚೀನ ಕಾಲದಲ್ಲಿಯೇ ಇದೆ. ಈ ವಿಷಯದಲ್ಲಿ ಸಂವಿಧಾನಾತ್ಮಕ ಭಾರತದ ಅಥವಾ ಆಧುನಿಕ ಭಾರತಕ್ಕೆ ಇದು ಬರುವಂಗೆ ಕಾಣುತ್ತಿಲ್ಲ.

ಈಗ ನೀವೇ ಹೇಳಿ.. ಹೊಲ ಮಾದಿಗರಿಗೆ ಶಾಶ್ವತವಾದ ವೈರಿಗಳು ಯಾರೆಂದು..? ಇಂತಹ ಅಜ್ಞಾನದ ವೈರಿಗಳನ್ನು ಸಂವಿಧಾನ ನೀಡಿರುವ ಜ್ಞಾನದ ಅರಿವಿನ ಮೂಲಕ ಹೇಗೆ ಬಗ್ಗು ಬಡಿಯಬೇಕು ಎಂಬುದನ್ನು ನೀವೇ ಅರ್ಥಮಾಡಿಕೊಳ್ಳಿ. ಹೊಲ ಮಾದಿಗರಿಬ್ಬರೂ ಒಂದಾಗಿ ಒಗ್ಗಟ್ಟಿನಿಂದ ಮುನ್ನಡೆದರೆ ಮಾತ್ರ ಭಾರತದ ಸಂವಿಧಾನ ಘಟ್ಟಿಗೊಳ್ಳುತ್ತದೆ. ಇಲ್ಲದಿದ್ದರೆ ಮುಂದೊಂದು ದಿನ ಸಂವಿಧಾನಕ್ಕೂ ಆಪತ್ತು ಬಂದೇ ಬರುತ್ತದೆ.

ಈ ಹೊಲ ಮಾದಿಗರು ಎಂದೆಂದಿಗೂ ಒಂದಾಗಬಾರದು . ಹೊಲ ಮಾದಿಗರು ಒಗ್ಗಟ್ಟಾದರೆ ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಅಂಶವನ್ನು ಅರಿತೆ ಇವರನ್ನು ಒಗ್ಗಟ್ಟಾಗಲು ಬಿಡುತ್ತಿಲ್ಲ ಎಂಬ ಅಂಶವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಇನ್ನು ಮುಂದಾದರೂ ಈ ನೆಲದ ಮೂಲ ನಿವಾಸಿಗಳಾದ ಹೊಲ ಮಾದಿಗರ ಶಕ್ತಿಯನ್ನು ಎಂದಿಗೂ ಇನ್ನೊಬ್ಬರ ಸೊತ್ತಾಗಿಸಬಾರದು.

ಭಾರತದ ಮಣ್ಣು ಇವರಿಗೆ ಕೊಟ್ಟಿರುವ ಬುದ್ಧ ಭೀಮರ ಬಲವನ್ನು ಗಟ್ಟಿಗೊಳಿಸಬೇಕು. ಹಾಗಾದಾಗ ಮಾತ್ರ ಉಳಿದ 300 ಕೋಟಿ ದೇವತೆಗಳು ಸಹ ಬಂದು ಇವರ ಕಾಲ ಬುಡದಲ್ಲಿ ಕೂರುತ್ತವೆ. ಇದನ್ನು ಅರಿಯದೆ ನೀವೇ 300 ದೇವತೆಗಳ ಗುಣದಲ್ಲಿ ಕುಂತರೆ ಯಾರಿಗೆ ಲಾಭ ಯಾರಿಗೆ ನಷ್ಟ ಪ್ರಜ್ಞಾವಂತರಾದ ನೀವೇ ಯೋಚಿಸಿ.

ಇದನ್ನೂ ನೋಡಿ: ಗುಜರಾತ್‌ | ವರ್ಚಸ್ಸಿನ ಭೀತಿ ಬಿಜೆಪಿ – ಸಚಿವ ಸಂಪುಟಕ್ಕೆ ಫುಲ್‌ ಸರ್ಜರಿ Janashakthi Media

Donate Janashakthi Media

Leave a Reply

Your email address will not be published. Required fields are marked *