ಬೆಂಗಳೂರು: ಬೆಂಗಳೂರಿನ ಮಲ್ಲೇಶ್ವರದ ಪ್ರತಿಷ್ಠಿತ ಮಂತ್ರಿಮಾಲ್ ಮಾಲೀಕರು ಬಾಕಿ ಉಳಿಸಿಕೊಂಡಿದ್ದಾರೆ ಎನ್ನಲಾದ 41 ಕೋಟಿ ರೂ. ಆಸ್ತಿ ತೆರಿಗೆ ಪೈಕಿ 20 ಕೋಟಿ ರೂ.ಗಳನ್ನು 2024ರ ಜುಲೈ 31ರೊಳಗೆ ಪಾವತಿಸುವುದಾಗಿ ಮುಚ್ಚಳಿಕೆ ನೀಡಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಬಿಬಿಎಂಪಿಗೆ ಈ ಸೂಚನೆ ನೀಡಿದೆ. ಮಂತ್ರಿಮಾಲ್‌ಗೆ ಹಾಕಲಾಗಿರುವ ಬೀಗವನ್ನು ತೆಗೆಯುವಂತೆ ಬಿಬಿಎಂಪಿಗೆ ಹೈಕೋರ್ಟ್ ಸೂಚಿಸಿದೆ.
ಮಂತ್ರಿಮಾಲ್‌ಗೆ ಬೀಗ ಹಾಕಿರುವ ಬಿಬಿಎಂಪಿಯ ಕ್ರಮ ಪ್ರಶ್ನಿಸಿ ಮಾಲೀಕರು ಸಲ್ಲಿಸಿದ್ದ ತಕರಾರು ಅರ್ಜಿ, ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ರಜಾ ಕಾಲದ ನ್ಯಾಯಪೀಠದ ವಿಚಾರಣೆಗೆ ಬಂದಿದ್ದು, ಈ ವೇಳೆ ಅರ್ಜಿದಾರ ಕಂಪನಿಯ ಹಣಕಾಸು ಅಕಾರಿ ಪ್ರಮಾಣಪತ್ರ ಸಲ್ಲಿಸಿ, 2024ರ ಜು.31ರೊಳಗೆ 20 ಕೋಟಿ ರೂ.ಗಳನ್ನು ಬಿಬಿಎಂಪಿಗೆ ಪಾವತಿಸುವುದಾಗಿ ನ್ಯಾಯಪೀಠಕ್ಕೆ ಮುಚ್ಚಳಿಕೆ ನೀಡಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ‘‘ಅರ್ಜಿದಾರ ಕಂಪನಿಯು 2024ರ ಜೂ.1ರೊಳಗೆ 3.5 ಕೋಟಿ ರೂ. ಆಸ್ತಿ ತೆರಿಗೆಯನ್ನು ಬಿಬಿಎಂಪಿಗೆ ಪಾವತಿಸಬೇಕು. ಮಾಲ್‌ಗೆ ಹಾಕಿರುವ ಬೀಗವನ್ನು ಬಿಬಿಎಂಪಿ ತೆಗೆಯಬೇಕು,’’ ಎಂದು ಸೂಚಿಸಿ ಷರತ್ತುಬದ್ಧ ಮಧ್ಯಂತರ ಆದೇಶ ನೀಡಿತು.
ಇದನ್ನೂ ಓದಿ: ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚಿಸಿದ ಸಿಐಡಿ ಘಟಕದ ಅಧಿಕಾರಿಗಳು
ಇದಕ್ಕೂ ಮುನ್ನ ಅರ್ಜಿದಾರ ಕಂಪನಿ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಹಾಜರಾಗಿ, ‘‘ಮಾಲ್‌ನಲ್ಲಿ 250ಕ್ಕೂ ಅಕ ಮಳಿಗೆ ಹಾಗೂ ವ್ಯಾಪಾರ ಕೇಂದ್ರಗಳಿವೆ. ಸುಮಾರು 2,500 ಉದ್ಯೋಗಿಗಳಿದ್ದಾರೆ. 2024ರ ಮೇ 10ರಿಂದ ಕಾನೂನುಬಾಹಿರವಾಗಿ ಬಿಬಿಎಂಪಿ ಮಾಲ್‌ಗೆ ಬೀಗಹಾಕಿದೆ. ಇದರಿಂದ ಉದ್ಯೋಗಿಗಳ ದುಷ್ಪರಿಣಾಮ ಬೀರುತ್ತಿದ್ದು, ನಿತ್ಯ ಅಂದಾಜು 7 ರಿಂದ 8 ಕೋಟಿ ರೂ. ವ್ಯಾಪಾರ ನಷ್ಟವಾಗುತ್ತಿದೆ’’ ಎಂದು ತಿಳಿಸಿದರು.
ಈ ಹಿಂದೆಯೂ ತೆರಿಗೆ ಸರಿಯಾಗಿ ಕಟ್ಟದೇ ಇರುವುದಕ್ಕೆ ಮಂತ್ರಿ ಮಾಲ್ ಗೆ ಕೆಲವು ಬಾರಿ ಬೀಗ ಬಿದ್ದಿತ್ತು. ಆದರೂ, ಅಲ್ಲಿನ ಆಡಳಿತ ಮಂಡಳಿ ಈ ಬಗ್ಗೆ ಗಂಭೀರವಾಗಿ ಆಲೋಚಿಸಿಲ್ಲ. ಪದೇ ಪದೇ ತೆರಿಗೆ ಕಟ್ಟದೆ ಇರುಸು ಮುರುಸಿಗೆ ಮಾಲ್ ಒಳಗಾಗುತ್ತಿದೆ. ಇದೇ ವರ್ಷ ಮಾರ್ಚ್ ನಲ್ಲಿಯೂ ಮಾಲ್ ಗೆ ಬೀಗ ಬಿದ್ದಿತ್ತು.
ಇದನ್ನೂ ನೋಡಿ: ಮೋದಿ ಸರ್ಕಾರಕ್ಕೆ ಮುಖಭಂಗ | ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಬಿಡುಗಡೆಗೆ ಸುಪ್ರೀಂ ಆದೇಶ