ಬೆಂಗಳೂರು: ಫೆಬ್ರುವರಿ 18ರಂದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ 2025-26ನೇ ಶೈಕ್ಷಣಿಕ ವರ್ಷದಿಂದ ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಕಡ್ಡಾಯವಾಗಿ ಮೆರಿಟ್ ಪದ್ಧತಿಯನ್ನು ಕೈಬಿಟ್ಟು ಸೇವಾ ಹಿರಿತನಕ್ಕೆ ಆದ್ಯತೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಅತಿಥಿ ಶಿಕ್ಷಕರ ಸಂಘ ತಿಳಿಸಿದೆ. ಬೆಂಗಳೂರು
‘ಪ್ರತಿ ತಿಂಗಳು ಕನಿಷ್ಠ ₹30 ಸಾವಿರ ಗೌರವ ಧನ ನೀಡಬೇಕು. ವರ್ಷಕ್ಕೆ 12 ತುರ್ತು ಸಾಂದರ್ಭಿಕ ರಜೆಗಳನ್ನು ಅಧಿಕೃತವಾಗಿ ಜಾರಿಗೊಳಿಸಬೇಕು. ಪ್ರತಿವರ್ಷ ನಾವು ಕರ್ತವ್ಯ ನಿರ್ವಹಿಸುವ ಶಾಲೆಯ ಮುಖ್ಯ ಶಿಕ್ಷಕರು, ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ಸೇವಾ ಪ್ರಮಾಣ ಪತ್ರವನ್ನು ನೀಡಬೇಕು. ಅತಿಥಿ ಶಿಕ್ಷಕ ಎಂಬ ಪದನಾಮ ತೆಗೆದು, ಅರೆಕಾಲಿಕ, ಹೊರಗುತ್ತಿಗೆ ಶಿಕ್ಷಕರು ಎಂದು ನೇಮಕಾತಿ ಮಾಡಿಕೊಳ್ಳಬೇಕು’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಚಿತ್ರಲೇಖಾ ಕೆ ಆಗ್ರಹಿಸಿದರು.
ಇದನ್ನೂ ಓದಿ: ಕೊಳವೆ ಬಾವಿ ಕೊರೆಯಲು ಪ್ರತೀ ಅಡಿಗೆ 105 ರೂ. ನಿಗದಿ
‘ಮಹಿಳಾ ಶಿಕ್ಷಕರಿಗೆ ಗೌರವಧನದ ಜೊತೆಗೆ ಹೆರಿಗೆ ರಜೆ ನೀಡುವುದು ಹಾಗೂ ಎಲ್ಲ ಅತಿಥಿ ಶಿಕ್ಷಕರಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕು. ಶಿಕ್ಷಕರ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ವಯಸ್ಸಿನ ಹಿರಿತನಕ್ಕೆ ಆದ್ಯತೆ ನೀಡಿ, ನಮ್ಮನ್ನು ಆಯ್ಕೆ ಮಾಡಿಕೊಳ್ಳಬೇಕು. ಸರ್ಕಾರಿ ಶಿಕ್ಷಕರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ನಮಗೂ ಸಿಗುವಂತಾಗಬೇಕು. ದೆಹಲಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಸೇವಾ ಹಿರಿತನ ಆಧಾರದ ಮೇಲೆ ಶಿಕ್ಷಕರನ್ನು ಕಾಯಂಗೊಳಿಸಲಾಗಿದೆ. ಅದರಂತೆ ನಮ್ಮ ರಾಜ್ಯದಲ್ಲಿಯೂ ಸೇವಾ ಹಿರಿತನದ ಆಧಾರದ ಮೇಲೆ ಅತಿಥಿ ಶಿಕ್ಷಕರನ್ನು ಕಾಯಂಗೊಳಿಸಬೇಕು’ ಎಂದು ಒತ್ತಾಯಿಸಿದರು.
ಇದನ್ನೂ ನೋಡಿ: ‘ಉಪ್ಪಿಟ್ಟು ಬೇಡ.. ಬಿರಿಯಾನಿ, ಚಿಕನ್ ಫ್ರೈ ಬೇಕು’ ಅಂಗನವಾಡಿ ಬಾಲಕನ ಬೇಡಿಕೆಗೆ ಸ್ಪಂದಿಸಿದ ಎಡರಂಗ ಸರ್ಕಾರ