ಕೋವಿಡ್ ಸಾಂಕ್ರಾಮಿಕತೆ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಹಲವು ಸಮಂಜಸವಾದ ಪ್ರಶ್ನೆಗಳನ್ನು ಎತ್ತಿದೆ, ಲಸಿಕೆ ನೀತಿಯ ಮರುಪರಿಶೀಲನೆಯ ಅಗತ್ಯವಿದೆ ಎಂದೂ ಹೇಳಿದೆ. ಈ ವಿವೇಚನಾಪೂರ್ಣ ಸಲಹೆಗೆ ಕೇಂದ್ರ ಸರ್ಕಾರದ ಸ್ಪಂದನೆಯೆಂದರೆ, ತನ್ನ ನಡೆಗಳನ್ನು ಸಮರ್ಥಿಸಿಕೊಳ್ಳುವ ಅಫಿಡವಿಟ್‌ನಲ್ಲಿ ಪ್ರಕಟಿಸಿರುವ ಸುಳ್ಳುಬುರುಕತನ. ನವ-ಉದಾರವಾದಿ ಮತ್ತು ಹಿಂದುತ್ವ ಯುಕ್ತಿಗಳಿಂದ ಕುರುಡಾಗಿರುವ ಈ ಆಡಳಿತದ ಅಮಾನವೀಯ ಹಿಂದುತ್ವ ನಾಟಕದ ಪರ್ಯವಸಾನವೆಂದರೆ ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಗಂಗಾನದಿಯಲ್ಲಿ ಕೋವಿಡ್‌ಗೆ ಬಲಿಯಾದವರ ನೂರಾರು ಶವಗಳು ತೇಲುತ್ತಿರುವ ಕರಾಳ, ಯಾತನೆ ಉಂಟು ಮಾಡುವ ದೃಶ್ಯಗಳು.
ಈ ಸರ್ಕಾರ ಪಾಠ ಕಲಿಯುವುದೂ ಇಲ್ಲ ಅಥವಾ ತನ್ನ ನಡೆಗಳನ್ನು ಸರಿಪಡಿಸಿಕೊಳ್ಳುವುದೂ ಇಲ್ಲ. ಇದುವೇ ಜನತೆಯ ಮತ್ತು ದೇಶದ ದುರಂತ ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ಸದಸ್ಯರಾದ ಪ್ರಕಾಶ್ ಕಾರಟ್ ಅವರು ಬರೆದಿದ್ದಾರೆ.
ವಿನಾಶಕಾರೀ ಎರಡನೆ ಕೋವಿಡ್-19 ಅಲೆ ಅನಾವರಣಗೊಂಡು ಅದಾಗಲೇ ಎರಡು ವಾರಗಳು ಕಳೆದಿವೆ. ಆದರೆ, ನರೇಂದ್ರ ಮೋದಿ ಸರ್ಕಾರ ತನ್ನ ತಿಳಿಗೇಡಿ ನಡೆಗಳನ್ನು ಅರಿಯಲು ಮತ್ತು ನೀತಿಗಳನ್ನು ಸರಿಪಡಿಸಿಕೊಳ್ಳಲು ನಿರಾಕರಿಸುತ್ತಿದೆ.
ಕೋವಿಡ್ ಸಾಂಕ್ರಾಮಿಕತೆ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಹಲವು ಸಮಂಜಸವಾದ ಪ್ರಶ್ನೆಗಳನ್ನು ಎತ್ತಿದೆ. ಅಲ್ಲದೆ ಕೇಂದ್ರ ಸರ್ಕಾರದ ಲಸಿಕೆ ನೀತಿ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದೆ. ಪ್ರಸ್ತುತ ವ್ಯಾಕ್ಸಿನ್ ನೀತಿಯನ್ನು ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿರುವ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ, ರಾಜ್ಯಗಳಿಗೆ ಲಸಿಕೆ ಹಂಚಿಕೆ ಮತ್ತು ಬಟವಾಡೆ ವೇಳಾಪಟ್ಟಿಯನ್ನು ಕೇಂದ್ರ ಸರಕಾರ ನಿರ್ಧರಿಸಬೇಕು, ಲಸಿಕೆ ಪಡೆಯಲು ರಾಜ್ಯ ಸರ್ಕಾರಗಳು ಲಸಿಕೆ ಉತ್ಪಾದಕ ಕಂಪೆನಿಗಳೊಂದಿಗೆ ಮಾತುಕತೆಗೆ ಬಿಟ್ಟುಬಿಡುವುದು ಸರಿಯಲ್ಲ ಎಂದಿದೆ. ಹಾಗೆ ಮಾಡಿದರೆ ‘ಅರಾಜಕತೆ ಮತ್ತು ಅನಿಶ್ಚಿತತೆ ಉಂಟಾಗುತ್ತದೆ’ ಎಂದು ಪೀಠ ಹೇಳಿದೆ.
ಲಸಿಕೆ ಬೆಲೆ ನೀತಿ ಬಗ್ಗೆಯೂ ನ್ಯಾಯಾಲಯ ಅತೃಪ್ತಿ ದಾಖಲಿಸಿರುವುದು ಇನ್ನೂ ಮಹತ್ವದ ಸಂಗತಿಯಾಗಿದೆ. ಬೇರೆ ಬೇರೆ ಬೆಲೆ ನಿರ್ಧರಿಸುವುದರಿಂದ 18 ರಿಂದ 44 ವರ್ಷದೊಳಗಿನವರಿಗೆ ಅದರಲ್ಲೂ ವಿಶೇಷವಾಗಿ ಅನುಕೂಲ-ವಂಚಿತ ವಿಭಾಗಗಳ ವಿರುದ್ಧ ತಾರತಮ್ಯಕ್ಕೆ ಕಾರಣವಾಗುತ್ತದೆ ಎನ್ನುವುದು ಕೋರ್ಟ್ ಕಳವಳವಾಗಿದೆ. ಆರೋಗ್ಯದ ಹಕ್ಕನ್ನೂ ಒಳಗೊಂಡಂತೆ ಜೀವಿಸುವ ಹಕ್ಕನ್ನು ಪ್ರತಿಪಾದಿಸುವ ಸಂವಿಧಾನದ 21ನೇ ವಿಧಿಯ ಅನ್ವಯ ಕೇಂದ್ರ ಸರ್ಕಾರ ಎಲ್ಲ ಲಸಿಕೆಯನ್ನು ಖರೀದಿಸುವುದು ಮತ್ತು ವ್ಯಾಕ್ಸಿನ್ ತಯಾರಕರೊಂದಿಗೆ ಬೆಲೆ ಕುರಿತು ಮಾತುಕತೆ ನಡೆಸುವುದು ತರ್ಕಬದ್ಧ ವಿಧಾನ ಎಂಬುದು ಮೇಲ್ನೋಟಕ್ಕೇ ಕಾಣುತ್ತದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟಿದ್ದಾರೆ. ಒಮ್ಮೆ ಕೇಂದ್ರ ಸರ್ಕಾರ ಕೇಂದ್ರೀಕೃತ ಖರೀದಿ ಮಾಡಿಯಾದ ಮೇಲೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆ ವಿತರಿಸುವುದನ್ನು ವಿಕೇಂದ್ರೀಕರಿಸಬಹುದಾಗಿದೆ.
ಈ ವಿವೇಚನಾಪೂರ್ಣ ಸಲಹೆಗೆ ಕೇಂದ್ರ ಸರ್ಕಾರದ ಸ್ಪಂದನೆಯೆಂದರೆ, ತನ್ನ ಲಸಿಕೆ ನೀತಿಯನ್ನು ಸಮರ್ಥಿಸಿಕೊಂಡಿರುವುದು. ಇದು ಕಾರ್ಯಾಂಗವು ನಿರ್ಧಾರ ಕೈಗೊಳ್ಳಬೇಕಾದ ವಿಚಾರ, ಇದನ್ನು ನ್ಯಾಯಾಲಯದ ಹಸ್ತಕ್ಷೇಪಕ್ಕೆ ಒಳಪಡಿಸಬಾರದು ಎಂದು ಅದು ಒತ್ತಿ ಹೇಳಿದೆ. ತನ್ನ ಲಸಿಕೆ ನೀತಿ “ನ್ಯಾಯಸಮ್ಮತವಾಗಿದೆ, ಸಮತ್ವದಿಂದ ಕೂಡಿದೆ, ತಾರತಮ್ಯತೆ ಇಲ್ಲ ಹಾಗೂ ಎರಡು ವಯೋಗುಂಪುಗಳ ನಡುವಿನ ವಿವೇಕಪೂರ್ಣ ಭಿನ್ನತೆಯ ಅಂಶದ ಮೇಲೆ ಇದು ಆಧರಿತವಾಗಿದೆ’ ಎಂದಿದೆ.
ಅಫಿಡವಿಟ್‌ನಿಂದ ಸುಳ್ಳುಬರುಕತನ ಬಯಲು
ಸರ್ವೋನ್ನತ ನ್ಯಾಯಾಲಯಕ್ಕೆ ಸಲ್ಲಿಸಿರುವ ಕೇಂದ್ರ ಸರ್ಕಾರದ ಅಫಿಡವಿಟ್ ಅದರ ಸುಳ್ಳುಬುರುಕತೆಯನ್ನು ಪ್ರಕಟಪಡಿಸುವಂತಿದೆ. 18-44 ವಯೋಗುಂಪಿನ ಎಲ್ಲರಿಗೂ ಉಚಿತವಾಗಿ ಲಸಿಕೆ ಹಾಕುವುದಾಗಿ ರಾಜ್ಯ ಸರ್ಕಾರಗಳು ಘೋಷಿಸಿರುವುದರಿಂದ ಲಸಿಕೆ ಉಚಿತವಾಗಿರುತ್ತದೆ ಎಂದು ಅಫಿಡವಿಟ್‌ನಲ್ಲಿ ಕೇಂದ್ರ ಹೇಳಿಕೊಂಡಿದೆ. ಲಸಿಕೆ ಖರೀದಿಯ ಹೊರೆಯನ್ನು ರಾಜ್ಯ ಸರ್ಕಾರಗಳ ಮೇಲೆ ಕೇಂದ್ರ ಹೇರಿದೆ. ಎರಡು ವ್ಯಾಕ್ಸಿನ್ ತಯಾರಿಕೆ ಕಂಪೆನಿಗಳಿಂದ ಹೆಚ್ಚಿನ ಬೆಲೆಗಳಲ್ಲಿ ಲಸಿಕೆ ಖರೀದಿಸುವಂತೆ ಬಲವಂತ ಮಾಡಲಾಗಿದ್ದು ಇದು ಲಾಭಕೋರತನವಲ್ಲದೆ ಬೇರೇನೂ ಅಲ್ಲ. ಲಸಿಕೆಗಾಗಿ ಕೇಂದ್ರ ಬಜೆಟ್‌ನಲ್ಲಿ 35,000 ಕೋಟಿ ರೂಪಾಯಿ ಹಂಚಿಕೆ ಆಗಿದ್ದರೂ ಕೇಂದ್ರ ಸರ್ಕಾರ ರಾಜ್ಯಗಳಿಗೆ ಲಸಿಕೆಗಾಗಿ ಯಾವುದೇ ನೆರವು ನೀಡುವುದಿಲ್ಲ. ರಾಜ್ಯಗಳು ತಮ್ಮ ಆರೋಗ್ಯ ಬಜೆಟ್‌ನ ಒಂದು ಭಾಗವನ್ನು ಲಸಿಕೆಗಾಗಿ ವ್ಯಯಿಸಬೇಕಾಗುತ್ತದೆ. ಇದರಿಂದ ಸಾರ್ವಜನಿಕ ಆರೋಗ್ಯ ವೆಚ್ಚಕ್ಕೆ ಅಡ್ಡಿಯುಂಟಾಗುತ್ತದೆ. ಈ ಮೂಲಕ ತಾರತಮ್ಯದ ಬೆಲೆ ನೀತಿಯನ್ನು ರಾಜ್ಯಗಳು ಒಪ್ಪಿ ಆ ನಂತರ ಲಸಿಕೆಯನ್ನು ಉಚಿತವಾಗಿ ವಿತರಿಸುವ ಬಲವಂತಕ್ಕೆ ಒಳಗಾಗುತ್ತವೆ.
ಅಲ್ಲದೆ ಪ್ರೊ.ಆರ್. ರಾಮಕುಮಾರ್ ಸ್ಕ್ರಾಲ್.ಇನ್‌ನಲ್ಲಿ ಪ್ರಕಟವಾದ ಲೇಖನದಲ್ಲಿ ತಿಳಿಸಿರುವಂತೆ, ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ ಹಂಚಿಕೆಯಾಗಿರುವ 50% ಲಸಿಕೆಯನ್ನು 50:50 ಅನುಪಾತದಲ್ಲಿ ಹಂಚಿಕೊಳ್ಳಬೇಕು. ಅಂದರೆ, ರಾಜ್ಯಗಳಿಗೆ ಕೇವಲ 25% ಲಸಿಕೆ ದೊರಕುತ್ತದೆ ಎಂದಾಯಿತು. ಅಷ್ಟೇ ಪ್ರಮಾಣದ, ಅಂದರೆ 25% ಲಸಿಕೆ ಮಾರುಕಟ್ಟೆ ಮತ್ತು ಖಾಸಗಿ ಆಸ್ಪತ್ರೆಗಳ ಪಾಲಾಗಿ ದುಬಾರಿ ದರಗಳನ್ನು ವಿಧಿಸಲಾಗುತ್ತದೆ. ಸಾರ್ವಜನಿಕ ಹಿತಕ್ಕಿಂತ ಖಾಸಗಿ ಲಾಭಕ್ಕೆ ಆದ್ಯತೆ ನೀಡುವ ಸ್ಪಷ್ಟ ದೃಷ್ಟಾಂತ ಇದಾಗಿದೆ.
ವಿವೇಚನಾಶೂನ್ಯ ಸರ್ಕಾರ
ವ್ಯಾಕ್ಸಿನ್ ಹಂಚಿಕೆ ಗೊಂದಲ ಮತ್ತು ಕಳೆದ 15 ದಿನಗಳಲ್ಲಿ ರಾಜ್ಯಗಳಲ್ಲಿ ಲಸಿಕೆ ಹಾಕುವ ಪ್ರಕ್ರಿಯೆ ಶೇಕಡ 60ರಷ್ಟು ಕುಸಿದಿರುವುದನ್ನು ಕಂಡರೆ, ವಿವೇಚನೆ ಇರುವ ಯಾವುದೇ ಸರ್ಕಾರವಾದರೂ ಲಸಿಕೀಕರಣ ಕಾರ್ಯಕ್ರಮವನ್ನು ಪುನರ್‌ರೂಪಿಸಲು ಸುಪ್ರೀಂ ಕೋರ್ಟ್ ನೀಡಿದ ಅವಕಾಶವನ್ನು ಬಳಸಿಕೊಳ್ಳುತ್ತಿತ್ತು. ಆದರೆ ಇದೊಂದು ವಿವೇಚನೆ ಇರುವ ಸರ್ಕಾರ ಅಲ್ಲವೇ ಅಲ್ಲ. ತನ್ನ ನವ-ಉದಾರವಾದಿ ಮತ್ತು ಹಿಂದುತ್ವ ಯುಕ್ತಿಗಳಿಂದ ಕುರುಡಾಗಿರುವ ಆಡಳಿತ ಇದಾಗಿದೆ.
ಸಂವಿಧಾನದ 14 ಮತ್ತು 21ನೇ ವಿಧಿಗಳಲ್ಲಿ ಪ್ರದತ್ತವಾಗಿರುವ ಪ್ರಜೆಗಳ ಜೀವನದ ಹಕ್ಕಿಗೆ (ಹಾಗೂ ಆರೋಗ್ಯದ ಹಕ್ಕಿಗೆ) ಅನುಗುಣವಾಗಿ ಸರ್ಕಾರ ತನ್ನ ಲಸಿಕೆ ನೀತಿಯನ್ನು ಬದಲಾಯಿಸಿಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವ ಇಚ್ಛಾಶಕ್ತಿಯನ್ನು ಸುಪ್ರೀಂ ಕೋರ್ಟ್ ಪಡೆಯುತ್ತೆಂದು ಆಶಿಸಬೇಕಷ್ಟೇ.
ಕೋವಿಡ್ ಅಲೆಯನ್ನು ನಿಭಾಯಿಸುವಲ್ಲಿ ಸರಕಾರದ ವಿನಾಶಕಾರೀ ನಡೆಗೆ ಇನ್ನೊಂದು ಕಾರಣ, ತನ್ನ ಹಿಂದುತ್ವ ಕಣ್ಣೋಟದಿಂದಾಗಿ ವಿಜ್ಞಾನವನ್ನು ಅವಲಂಬಿಸಲಾರದ ಅದರ ಅಸಮರ್ಥತೆ. ಕೇಂದ್ರ ಆರೋಗ್ಯ ಮತ್ತು ವಿಜ್ಞಾನ-ತಂತ್ರಜ್ಞಾನ ಸಚಿವ ಹರ್ಷವರ್ಧನ್‌ರ ನಡೆಯನ್ನು ಬೇರಾವ ರೀತಿಯಲ್ಲಿ ತಾನೇ ವಿವರಿಸಲು ಸಾಧ್ಯ?
ಹಿಂದುತ್ವ ಮುಂದಕ್ಕೆ, ವಿಜ್ಞಾನ ಹಿಂದಕ್ಕೆ
ಏಪ್ರಿಲ್ ಮಧ್ಯ ಭಾಗದಲ್ಲಿ ಕೋವಿಡ್ ಪ್ರಕರಣಗಳು ಅತೀವವಾಗಿ ಹಬ್ಬುತ್ತಿದ್ದಾಗ ಸಚಿವ ಹರ್ಷವರ್ಧನ್ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ದೇಶೀಯ ಹಸುಗಳ ಮೇಲೆ ಸಂಶೋಧನೆ ನಡೆಸುವ ವಿಚಾರವನ್ನು ಚರ್ಚಿಸುತ್ತಿದ್ದರು. ‘ದೇಶೀಯ ಹಸುಗಳ ಪ್ರಮುಖ ಉತ್ಪನ್ನಗಳ ಸಂಶೋಧನೆಯ ಹೆಚ್ಚಳದ ಮೂಲಕ ವೈಜ್ಞಾನಿಕ ಬಳಕೆ ‘(ಎಸ್‌ಯುಪಿಆರ್‌ಎ-ಪಿಐಸಿ) ಎಂಬ ತೀರಾ ಅಸಂಬದ್ಧ ಶೀರ್ಷಿಕೆಯ ಈ ಕಾರ್ಯಕ್ರಮದಡಿ ಪಂಚಗವ್ಯದ (ಸೆಗಣಿ, ಗೋಮೂತ್ರ, ಹಾಲು, ಮೊಸರು ಮತ್ತು ತುಪ್ಪದ ಮಿಶ್ರಣ) ವೈಜ್ಞಾನಿಕ ಪ್ರಮಾಣೀಕರಣ ಮುಂತಾದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ವಿವಿಧ ಪ್ರಾಜೆಕ್ಟುಗಳಿಗೆ 100 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ.
ಈ ಪ್ರಾಜೆಕ್ಟುಗಳನ್ನು ಕೈಗೆತ್ತಿಕೊಳ್ಳುವಲ್ಲಿ ವಿಳಂಬವಾಗುತ್ತಿದೆ ಎಂದು ಸಚಿವರು ಅತೃಪ್ತಿ ವ್ಯಕ್ತಪಡಿಸಿದರು, ಮಿಷನ್‌ನ ನಿಧಾನಗತಿಯ ಅನುಷ್ಠಾನಕ್ಕೆ ಕೊರೊನಾ ಸಾಂಕ್ರಾಮಿಕ ಒಂದು ನೆಪವಾಗಬಾರದು ಎಂದರು. ಅದು ಕೂಡ ಆಮ್ಲಜನಕದ ಕೊರತೆಯಿಂದ ಜನರು ಸಾಯುತ್ತಿದ್ದ ಈ ಸಂದರ್ಭದಲ್ಲಿ.
150 ಜಿಲ್ಲಾ ಆಸ್ಪತ್ರೆಗಳಲ್ಲಿ, ಅದು ಕೂಡ ಕೇವಲ 200 ಕೋಟಿ ರೂಪಾಯಿ ವೆಚ್ಚದಲ್ಲಿ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲು ಈ ಮಂತ್ರಿ ಕಳೆದ ವರ್ಷ ಇದೇ ಸಮಯವನ್ನು ವ್ಯಯಿಸಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು.
ವೈಜ್ಞಾನಿಕ ಮತ್ತು ತಜ್ಞರ ಅಭಿಪ್ರಾಯಗಳನ್ನು ತಾನು ಅವಲಂಬಿತವಾಗಿರುವುದಾಗಿ ಕೇಂದ್ರ ಸರ್ಕಾರ ಅಫಿಡವಿಟ್‌ನಲ್ಲಿ ಹೇಳಿರುವುದನ್ನು ಗಂಭೀರವಾಗಿ ಪ್ರಶ್ನಿಸಬೇಕಾಗಿದೆ. ಹಾಗಲ್ಲವಾದರೆ ಹೈಡ್ರಾಕ್ಸಿಕ್ಲೋರೋಕ್ವಿನ್, ರೆಮ್‌ಡಿಸಿವಿರ್ ಮತ್ತು ಐವರ್‌ಮೆಕ್ಟಿನ್ ಔಷಧಿಗಳನ್ನು ಕೋವಿಡ್ ರೋಗಿಗಳ ಚಿಕಿತ್ಸೆಗೆ ಬಳಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಈಗಲೂ ತನ್ನ ಮಾರ್ಗಸೂಚಿಯಲ್ಲಿ ಶಿಫಾರಸು ಮಾಡುತ್ತಿರುವುದಾದರೂ ಹೇಗೆ? ಈ ಔಷಧಿಗಳನ್ನು ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಬಳಸಬಾರದೆಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತು ಇತರ ವೈದ್ಯಕೀಯ ತಜ್ಞರು ಸಲಹೆ ಮಾಡಿದ್ದಾರೆ. ರೋಗಿಗಳ ಒಂದು ಸಣ್ಣ ಉಪ-ಗುಂಪಿಗಷ್ಟೇ ರೆಮ್‌ಡಿಸಿವಿರ್ ಬಳಸಬೇಕೆಂದು ಹೇಳಿದ್ದಾರೆ. ಆದರೆ ಭಾರತದಲ್ಲಿ ಈ ಔಷಧಿಗಳನ್ನು ವ್ಯಾಪಕವಾಗಿ ಸಲಹೆ ಮಾಡಲಾಗುತ್ತಿದೆ. ಈ ಮೂಲಕ ಔಷಧಿ ಕಂಪೆನಿಗಳಿಗೆ ಅಪಾರ ಲಾಭ ಮಾಡಿಕೊಡಲಾಗುತ್ತಿದೆ, ಅಲ್ಲದೆ ಕಾಳಸಂತೆಗೆ ಅವಕಾಶ ಸೃಷ್ಟಿಸಲಾಗುತ್ತಿದೆ.
ಇನ್ನು, ಕೋವಿಡ್-19 ಕುರಿತ ರಾಷ್ಟ್ರೀಯ ಕಾರ್ಯ ಪಡೆ, ಎರಡನೇ ಕೋವಿಡ್ ಅಲೆ ರೂಪುಗೊಳ್ಳುತ್ತಿದ್ದ ಈ ವರ್ಷದ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಒಮ್ಮೆಯೂ ಸಭೆ ಸೇರಿರಲಿಲ್ಲ ಎಂದ ಮೇಲೆ ಸರ್ಕಾರ ವೈಜ್ಞಾನಿಕ ಮತ್ತು ತಜ್ಞರ ಸಲಹೆ ಮೇಲೆ ಅವಲಂಬಿಸಿದೆ ಎನ್ನುವುದಕ್ಕೆ ಏನನ್ನೋಣ?
ಹಿಂದುತ್ವ ಗೀಳಿನ ಘೋರ ಫಲಿತಾಂಶ
ಹಸುಗಳ ಕುರಿತ ಹಿಂದುತ್ವದ ಗೀಳು ಎಂಥ ಪರಿಣಾಮ ಬೀರಿದೆ ನೋಡಿ. ಗುಜರಾತ್‌ನಲ್ಲಿ ಜನರು ಗೋಶಾಲೆಗಳಿಗೆ ಹೋಗಿ ಅಲ್ಲಿ ಹೋದ ಜನರು ವೈರಸ್‌ನಿಂದ ರಕ್ಷಣೆ ಪಡೆಯಲೆಂದು ಸೆಗಣಿ ಮತ್ತು ಗೋಮೂತ್ರ ಮತ್ತು ಸೆಗಣಿ ಮೆತ್ತಿಸಿಕೊಂಡು ಬರುತ್ತಿರುವ ಹಾಸ್ಯಾಸ್ಪದ ದೃಶ್ಯಗಳು ಕಾಣಬರುತ್ತಿವೆ.
ಉತ್ತರ ಪ್ರದೇಶದ ಆದಿತ್ಯನಾಥ ಸರ್ಕಾರದ ಆದ್ಯತೆಗಳು ಕೂಡ ಸ್ಪಷ್ಟವಾಗಿವೆ. ಗೋವುಗಳ ರಕ್ಷಣೆಗೆ ಪ್ರತಿ ಜಿಲ್ಲೆಯಲ್ಲಿ ʻಹೆಲ್ಪ್ ಡೆಸ್ಕ್’ ಆರಂಭಿಸುವಂತೆ ಸರ್ಕಾರ ಕಳೆದ ವಾರ ನಿರ್ದೇಶನ ನೀಡಿದೆ. ಗೋಶಾಲೆಗಳಲ್ಲಿ ಅಲ್ಲಿನ ಸಿಬ್ಬಂದಿಗಾಗಿ ಆಕ್ಸಿಮೀಟರ್ ಮತ್ತು ಥರ್ಮಲ್ ಸ್ಕ್ಯಾನರ್‌ಗಳನ್ನು ಅಳವಡಿಸಲಾಗುತ್ತದೆ. ರಾಜ್ಯದಾದ್ಯಂತ ಹಳ್ಳಿಗಳಲ್ಲಿ ವೈದ್ಯಕೀಯ ನೆರವು ಅಥವಾ ಆರೈಕೆ ದೊರೆಯದೆ ಸಾವಿರಾರು ಜನರು ಸಾಯುತ್ತಿರುವಾಗ ರಾಜ್ಯ ಸರ್ಕಾರ ಮಾಡುತ್ತಿರುವುದು ಇದನ್ನು!
ಈ ಅಮಾನವೀಯ ಹಿಂದುತ್ವ ನಾಟಕದ ಪರ್ಯವಸಾನವೆಂದರೆ ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಗಂಗಾನದಿಯಲ್ಲಿ ಕೋವಿಡ್‌ಗೆ ಬಲಿಯಾದವರ ನೂರಾರು ಜನರ ಶವಗಳು ತೇಲುತ್ತಿರುವ ಕರಾಳ, ಮನಕಲಕುವ ದೃಶ್ಯಗಳು.
ಈ ಸರ್ಕಾರ ಪಾಠ ಕಲಿಯುವುದೂ ಇಲ್ಲ ಅಥವಾ ತನ್ನ ನಡೆಗಳನ್ನು ಸರಿಪಡಿಸಿಕೊಳ್ಳುವುದೂ ಇಲ್ಲ. ಇದುವೇ ಜನತೆಯ ಮತ್ತು ದೇಶದ ದುರಂತ.
ಅನು: ವಿಶ್ವ