ಮೆಕಾರ್ಥಿವಾದಿ ಬೇಟೆಯ ಜಾಗತೀಕರಣ – ಚೀನಾ ಗುಮ್ಮದ ಆವಾಹನೆ

ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
ನ್ಯೂಯಾರ್ಕ್ ಟೈಮ್ಸ್ ಲೇಖನವು ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು, ಬಹುಶಃ ತನ್ನ ವಕೀಲರ ಅಭಿಪ್ರಾಯದ ಮೇರೆಗೆ, ಆಪಾದನೆಗಳ ಬದಲು, ಕೇವಲ ದ್ವಂದ್ವಾರ್ಥಸೂಚ್ಯಾರ್ಥಗಳ ಪದ ಬಳಕೆಗೆ ಸೀಮಿತಗೊಂಡಿತ್ತು. ಆದರೆ, ಯುಎಪಿಎ ಕಾಯ್ದೆಯನ್ನು ಅಸ್ತ್ರವಾಗಿಸಿಕೊಂಡಿರುವ ದಿಲ್ಲಿ ಪೊಲೀಸರಿಗೆ ಅಂತಹ ಅಡೆತಡೆಯೇನೂ ಇಲ್ಲವಲ್ಲ. ವಿರೋಧಿಗಳನ್ನು ಹಣಿಯುವ ಮೆಕಾರ್ಥಿಸಂ ರೀತಿಯ ಕಾರ್ಯಾಚರಣೆಯತ್ತ ದೃಷ್ಟಿ ಹೊರಳಿಸಿದ ಅಮೆರಿಕದ ಉದಾರವಾದಿಗಳ ಇಂಗಿತವನ್ನು ಭಾರತದ ಫ್ಯಾಸಿಸ್ಟ್ತೆರನ ಸರ್ಕಾರವು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದೆ. ಮೆಕಾರ್ಥಿಸಂ ಜಾಗತೀಕರಣದ ಯುಗದಲ್ಲಿ ಚೀನಾ ಗುಮ್ಮವನ್ನು ಆವಾಹಿಸುವ ರೂಪ ತಳೆದಿದೆ.

ನ್ಯೂಸ್‌ಕ್ಲಿಕ್ ಎಂಬ ಆನ್‌ಲೈನ್ ಪತ್ರಿಕೆಯ ಮೇಲೆ ಕೇಂದ್ರ ಸರ್ಕಾರವು ತನ್ನ ಬೇಟೆ ನಾಯಿಗಳನ್ನು ಛೂ ಬಿಟ್ಟಿದೆ. ಈ ಪ್ರಕರಣವು ಹುಲಿ ಮತ್ತು ಮೇಕೆ ಒಂದೇ ಹೊಳೆಯಿಂದ ನೀರು ಕುಡಿಯುವ ಮಕ್ಕಳ ಕಥೆಗಳನ್ನು ನೆನಪಿಸುತ್ತದೆ: ಮೇಕೆ ಮರಿಯೊಂದು ಹೊಳೆಯಲ್ಲಿ ನೀರು ಕುಡಿಯುತ್ತಿತ್ತು. ಹುಲಿಗೆ ಅದನ್ನು ಸಹಿಸಲಾಗಲಿಲ್ಲ. ಮೇಕೆಯ ಮೇಲೆ ದಾಳಿ ಮಾಡಲು ಒಂದ ನೆಪ ಬಯಸಿದ ಹುಲಿ, “ನಾನು ಕುಡಿಯುವ ನೀರನ್ನು ನೀನು ಗಲೀಜು ಮಾಡುತ್ತಿರುವೆ, ನಿನ್ನನ್ನು ಬಿಡುವುದಿಲ್ಲ” ಎಂದು ಬೆದರಿಸಿತು. ಆಗ ಮೇಕೆ ಮರಿ, “ನಾನು ಹೊಳೆಯ ಕೆಳ ಭಾಗದಲ್ಲಿ ಹರಿಯುವ ನೀರನ್ನು ಕುಡಿಯುತ್ತಿರುವೆ. ನೀನು ಈ ಹೊಳೆಯ ಎತ್ತರದ ಭಾಗದಲ್ಲಿರುವೆ. ಅಲ್ಲಿಗೆ ನಾನು ಯಾವತ್ತೂ ಬಂದಿಲ್ಲ. ಆದ್ದರಿಂದ ನಾನು ಅದನ್ನು ಗಲೀಜು ಮಾಡಿರುವುದು ಸಾಧ್ಯವಿಲ್ಲ” ಎಂದಿತು. ಆಗ ಹುಲಿ ಹೇಳುತ್ತದೆ: “ನೀನು ಮಾಡಿಲ್ಲದೆ ಇರಬಹುದು. ನಿಮ್ಮಪ್ಪ ಗಲೀಜು ಮಾಡಿದ್ದ. ನಿಮ್ಮಜ್ಜ ಗಲೀಜು ಮಾಡಿದ್ದ”. ಮೆಕಾರ್ಥಿವಾದಿ

ಮೋದಿ ಸರ್ಕಾರವು ಸುಮಾರು ಎರಡು ವರ್ಷಗಳಿಂದಲೂ ಬೇತಾಳನಂತೆ ನ್ಯೂಸ್‌ಕ್ಲಿಕ್ ಪತ್ರಿಕೆಯನ್ನು ಬೆನ್ನಟ್ಟಿದೆ. ದೆಹಲಿ ಪೊಲೀಸರು ನ್ಯೂಸ್‌ಕ್ಲಿಕ್ ಸ್ಥಾಪಕ ಪ್ರಬೀರ್ ಪುರಕಾಯಸ್ಥ ಅವರ ಕಚೇರಿಯನ್ನು ಮತ್ತು ಅವರ ಮನೆಯನ್ನು ಹಣಕಾಸು ದುರುಪಯೋಗದ ಪುರಾವೆಗಳಿಗಾಗಿ ವಾರಗಟ್ಟಲೆ ಶೋಧಿಸಿದ್ದರು. ಈ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ನ್ಯೂಸ್‌ಕ್ಲಿಕ್ ವಿರುದ್ಧ ಯಾವುದೇ ಆರೋಪವನ್ನು ಹೊರಿಸಲು ಬೇಕಾಗುವ ಯಾವ ಪುರಾವೆಯೂ ಪೋಲೀಸರಿಗೆ ದೊರಕಲಿಲ್ಲ. ಏಕೆಂದರೆ, ಅಂತಹ ಯಾವ ದುಷ್ಕೃತ್ಯವೂ ಸಂಭವಿಸಿಲ್ಲ. ಆದರೆ, ಮೋದಿ ಸರ್ಕಾರವು ಈಗ ಒಂದು ಹೊಸ ಆರೋಪವನ್ನು – ಭಯೋತ್ಪಾದನೆಯ ಆರೋಪವನ್ನು – ಅವರ ಮೇಲೆ ಹೊರಿಸಿದೆ. ಈ ಸಂಬಂಧವಾಗಿ, ನ್ಯೂಸ್‌ಕ್ಲಿಕ್ ಪತ್ರಿಕೆಯ ಸೇವಾ ಪೂರೈಕೆದಾರರೂ ಸೇರಿದಂತೆ ಪತ್ರಿಕೆಯ ಉದ್ಯೋಗಿಗಳಿಗೆ ಕಿರುಕುಳ ನೀಡಿದೆ ಮತ್ತು ‘ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ’ (ಯುಎಪಿಎ) ಅಡಿಯಲ್ಲಿ ಪ್ರಬೀರ್ ಪುರಕಾಯಸ್ಥ ಮತ್ತು ಅಮಿತ್ ಚಕ್ರವರ್ತಿ ಅವರನ್ನು ಬಂಧಿಸಿದೆ. ಈ ಕಾಯ್ದೆಯು ಅದೆಷ್ಟು ಕರಾಳವಾಗಿದೆಯೆಂದರೆ, ಪ್ರಸ್ತುತ ಪ್ರಕರಣದಲ್ಲಿ ಪುರಕಾಯಸ್ಥ ಅವರ ಮೇಲೆ ಹೊರಿಸಿರುವ ಆರೋಪಗಳು ಹಾಸ್ಯಾಸ್ಪದವಾಗಿದ್ದರೂ ಸಹ, ಬಂಧಿತರಿಗೆ ಯಾವುದೇ ಪರಿಹಾರ ದೊರಕುವ ಸಾಧ್ಯತೆ ಅತ್ಯಂತ ಕಷ್ಟಕರವಾಗಿದೆ.

ದೆಹಲಿ ಪೊಲೀಸರು ತಮ್ಮ ಈ ತನಿಖೆಯ ಜಾಡನ್ನು ಈ ರೀತಿಯಲ್ಲಿ ಬದಲಾಯಿಸಿರುವುದು ಸರ್ಕಾರದ ಸ್ವಂತ ಕಲ್ಪನೆಯಲ್ಲ. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಪೂರ್ಣ ಹಗೆತನದಿಂದ ಕೂಡಿದ ಲೇಖನದ ಆಧಾರದ ಮೇಲೆ ಈ ತನಿಖೆಯ ಜಾಡನ್ನು ಸರ್ಕಾರ ಬದಲಿಸಿದೆ. ಈ ಲೇಖನವು, ಅಮೆರಿಕದ ಪ್ರಜೆಯಾಗಿರುವ ನೆವಿಲ್ಲ್ ರಾಯ್ ಸಿಂಘಮ್ ಎಂಬ ಒಬ್ಬ ಶ್ರೀಮಂತ ಉದ್ಯಮಿಯು ಚೀನಾ ಸರ್ಕಾರಕ್ಕೆ ಹತ್ತಿರವಾಗಿದ್ದಾರೆ; ಅವರು ಚೀನಾದ ಪರವಾಗಿ ಪ್ರಚಾರಮಾಡುತ್ತಾರೆ; ಅದಕ್ಕಾಗಿ ಅವರು ಭಾರೀ ಹಣ ಬಳಸುತ್ತಿದ್ದಾರೆ; ಅನೇಕ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ಅವುಗಳಲ್ಲಿ ನ್ಯೂಸ್‌ಕ್ಲಿಕ್ ಪತ್ರಿಕೆಯೂ ಸೇರಿದೆ ಎಂಬುದಾಗಿ ಆರೋಪಿಸಿದೆ.

ಇದನ್ನೂ ಓದಿಯುಎಪಿಎ ಪ್ರಕರಣ: ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ನ್ಯೂಸ್‌ ಕ್ಲಿಕ್‌ ಸಂಸ್ಥಾಪಕ

ಭ‍್ರಮೆ ಸೃಷ್ಟಿಸುವ ಕಿಡಿಗೇಡಿತನಅಪ್ರಾಮಾಣಿಕತೆ

ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿರುವ ಈ ಲೇಖನವು ದುರುದ್ದೇಶದಿಂದ ಕೂಡಿದೆ. ಏಕೆಂದರೆ, ಅದರಲ್ಲಿ ಅಮೆರಿಕಾದ ಯಾವುದೇ ಕಾಯ್ದೆಯ ಉಲ್ಲಂಘನೆಯ ಪ್ರಸ್ತಾಪವೂ ಇಲ್ಲ ಮತ್ತು ಅದರ ಅಭಿಪ್ರಾಯದ ಸಮರ್ಥನೆಯಾಗಿ ಯಾವ ಪುರಾವೆಯನ್ನೂ ಒದಗಿಸಿಲ್ಲ. ದ್ವಂದ್ವಾರ್ಥಗಳು ಮತ್ತು ಸೂಚ್ಯಾರ್ಥಗಳಿಂದ ಕೂಡಿದ ಈ ಲೇಖನದ ಉದ್ದೇಶವೆಂದರೆ, ತನ್ನ ಹೆಚ್ಚುತ್ತಿರುವ ಪ್ರಭಾವವನ್ನು ವಿಶ್ವಾದ್ಯಂತ ವ್ಯಾಪಕವಾಗಿ ಪ್ರಚುರಪಡಿಸಲು ಸಿಂಘಂನಂತಹ ವ್ಯಕ್ತಿಗಳನ್ನು ಚೀನಾ ಬಳಸಿಕೊಳ್ಳುತ್ತಿದೆ ಎಂಬ ರೀತಿಯ ಸನ್ನಿವೇಶವನ್ನು ಸೃಷ್ಟಿಸುವುದು. ಈ ಸಂಬಂಧವಾಗಿ ಪತ್ರಿಕೆಗೆ ಕಳಿಸಿರುವ ಈ-ಮೇಲ್‌ನಲ್ಲಿ ಸಿಂಘಂ ಹೀಗೆ ಘೋಷಿಸಿದ್ದಾರೆ: “ನಾನು ಯಾವುದೇ ರಾಜಕೀಯ ಪಕ್ಷದ ಸದಸ್ಯ, ಅದಕ್ಕಾಗಿ ಕೆಲಸ ಮಾಡುತ್ತಿದ್ದೇನೆ, ಅದರ ಅಥವಾ ಯಾವುದೇ ಸರ್ಕಾರದ ಪ್ರತಿನಿಧಿಯ ಆದೇಶಗಳಿಗೆ ಅಧೀನನಾಗಿದ್ದೇನೆ ಅಥವಾ ಅದನ್ನು ಅನುಸರಿಸುತ್ತೇನೆ ಎಂಬ ಯಾವುದೇ ಅಭಿಪ್ರಾಯ/ಸಲಹೆ/ಸೂಚನೆಯನ್ನು ನಾನು ನೇರವಾಗಿ ನಿರಾಕರಿಸುತ್ತೇನೆ ಮತ್ತು ತಿರಸ್ಕರಿಸುತ್ತೇನೆ. ನನ್ನ ನಂಬಿಕೆಗಳ ಪ್ರಕಾರ ಮಾತ್ರವೇ ನಾನು ನಡೆಯುತ್ತೇನೆ ಮತ್ತು ಅವು ನನ್ನ ದೀರ್ಘಕಾಲದ ವೈಯಕ್ತಿಕ ಅಭಿಪ್ರಾಯಗಳೂ ಹೌದು”. ನ್ಯೂಯಾರ್ಕ್ ಟೈಮ್ಸ್ ಲೇಖನವು ಈ ಹೇಳಿಕೆಯಲ್ಲಿರುವ ನಿಲುವನ್ನು ಅಲ್ಲಗಳೆದಿಲ್ಲ. ಸಿಂಘಂ ಆಗಲಿ ಅಥವಾ ಅವರಿಂದ ಹಣ ಪಡೆದ ಯಾವುದೇ ಸಂಸ್ಥೆಯಾಗಲಿ ಅಮೆರಿಕದ ಯಾವುದೇ ಕಾಯ್ದೆಯನ್ನು ಉಲ್ಲಂಘಿಸಿವೆ ಎಂಬ ಯಾವುದೇ ನೇರ ಆರೋಪವನ್ನೂ ಮಾಡುವುದಿಲ್ಲ. ಆದರೆ, ಲೇಖನವು ಪ್ರಾಸಂಗಿಕವಾಗಿ ಔಚಿತ್ಯವಿಲ್ಲದ ಕೆಲವು ವಿವರಗಳನ್ನು ಕೊಡುತ್ತದೆ. ಈ ಯಾವ ವಿವರಗಳೂ ಸಿಂಘಂ ಅವರ ವಿರುದ್ಧವಾಗಲಿ ಅಥವಾ ಅವರೊಂದಿಗೆ ಸಂಬಂಧ ಹೊಂದಿದ್ದಾರೆಂದು ಹೇಳಲಾದ ಯಾವುದೇ ಸಂಸ್ಥೆಗಳ ವಿರುದ್ಧವಾಗಲಿ ನೇರವಾಗಿ ಯಾವುದೇ ದುಷ್ಕೃತ್ಯದ ಆರೋಪ ಮಾಡಿಲ್ಲ. ಆದರೆ, ಈ ಎಲ್ಲ ವಿವರಗಳನ್ನು ಒಟ್ಟಾರೆಯಾಗಿ ನೋಡಿದಾಗ, ಚೀನಾದ ಅಧಿಕಾರಿಗಳು ಜಾಗತಿಕ ಮಟ್ಟದಲ್ಲಿ ದುಷ್ಕೃತ್ಯವನ್ನು ಸಂಯೋಜಿಸಿದ್ದಾರೆ ಎಂಬ ಒಂದು ಭ್ರಮೆಯನ್ನು ಅವು ಸೃಷ್ಟಿಸುತ್ತವೆ. ಮೆಕಾರ್ಥಿವಾದಿ

ನನ್ನ ನಂಬಿಕೆಗಳ ಪ್ರಕಾರ  ಮಾತ್ರವೇ ನಾನು ನಡೆಯುತ್ತೇನೆ  ಮತ್ತು ಅವು ನನ್ನ ದೀರ್ಘಕಾಲದ ವೈಯಕ್ತಿಕ ಅಭಿಪ್ರಾಯಗಳೂ ಹೌದು” – ನೆವಿಲ್ಲೆ ರಾಯ್ ಸಿಂಘಮ್

ಸಿಂಘಂ ಅವರು ಕಾನೂನುಬಾಹಿರವಾಗಿ ನಡೆದುಕೊಂಡಿಲ್ಲ. ಅವರು ಕಾನೂನುಬಾಹಿರವಾಗಿ ಏನಾದರೂ ಮಾಡಿದ್ದಾರೆ ಎಂಬುದನ್ನು ನ್ಯೂಯಾರ್ಕ್ ಟೈಮ್ಸ್ ಲೇಖನವೂ ಸಹ ನೇರವಾಗಿ ಹೇಳಿಲ್ಲ. ಸಿಂಘಂ ಅವರಿಂದ ಸಹಾಯ ಪಡೆದ ಅಮೆರಿಕಾದ ಯಾವ ಸಂಸ್ಥೆಯೂ ಸಹ ಕಾನೂನುಬಾಹಿರವಾಗಿ ನಡೆದುಕೊಂಡಿಲ್ಲ. ಸಾಮಾನ್ಯವಾಗಿ ಸಾಮ್ರಾಜ್ಯಶಾಹಿ-ವಿರೋಧಿಯಾಗಿರುವ ಒಂದು ಮಾರ್ಕ್ಸ್ ವಾದಿನಿಲುವು ಹೊಂದಿರುವುದನ್ನು ಹೊರತುಪಡಿಸಿದರೆ, ಸಿಂಘಂ ಅವರು ಚೀನಾವನ್ನು ಬೆಂಬಲಿಸುವ ಯಾವ “ಪ್ರಚಾರ”ದಲ್ಲೂ ತೊಡಗಿಲ್ಲ. ನ್ಯೂಯಾರ್ಕ್ ಟೈಮ್ಸ್ ಲೇಖನದ ಕಿಡಿಗೇಡಿತನ ಮತ್ತು ಅಪ್ರಾಮಾಣಿಕ ಸಂಗತಿಯೆಂದರೆ ಅದು ಸೂಚ್ಯಾರ್ಥ ಮತ್ತು ದ್ವಂದ್ವಾರ್ಥಗಳ ಮೂಲಕ ಸಾಮ್ರಾಜ್ಯಶಾಹಿ ವಿರೋಧಿ ನಿಲುಮೆಯನ್ನು ಚೀನಾ ಪ್ರಚಾರದೊಂದಿಗೆ ಸಮೀಕರಿಸುತ್ತದೆ. ವಿರೋಧಿಗಳನ್ನು ಬಗ್ಗುಬಡಿಯುವ ಮೆಕಾರ್ಥಿ ಶೈಲಿಯ ಬೇಟೆಗೆ ಅವಕಾಶವನ್ನು ಅದು ತೆರೆಯುವುದು ಇಲ್ಲಿಯೇ. ಇದೇ ಸಂದರ್ಭದಲ್ಲಿ,  ಮಾರ್ಕೊ ರುಬಿಯೊ ಎಂಬ ಒಬ್ಬ ಅಮೆರಿಕದ ಸೆನೆಟರ್, ಆ ದೇಶದ ಅಟಾರ್ನಿ ಜನರಲ್ ಮೆರಿಕ್ ಗಾರ್ಲ್ಯಾಂಡ್ ಗೆ ಬರೆದ ಪತ್ರದಲ್ಲಿ, ಅಮೆರಿಕದ ಎಡಪಂಥೀಯ ಯುದ್ಧ-ವಿರೋಧಿ ಗುಂಪುಗಳು ಚೀನಾ ಕಮ್ಯುನಿಸ್ಟ್ ಪಕ್ಷದೊಂದಿಗೆ ಸಂಬಂಧ ಹೊಂದಿವೆ ಮತ್ತು ಅವು ಅಮೆರಿಕದಲ್ಲಿ ನಿರ್ಭೀತಿಯಿಂದ ಕಾರ್ಯನಿರ್ವಹಿಸುತ್ತಿವೆ, ಆದ್ದರಿಂದ, ಅವರ ಮೇಲೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿರುವುರಲ್ಲಿ ಆಶ್ಚರ್ಯವೇನಿಲ್ಲ.

ತನ್ನ ಲೇಖನದಲ್ಲಿ ಸುಳ್ಳು ಆರೋಪಗಳಿದ್ದರೆ, ಪತ್ರಿಕೆಯು ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತಿತ್ತು. ಹಾಗಾಗಿ, ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು, ಬಹುಶಃ ತನ್ನ ವಕೀಲರ ಅಭಿಪ್ರಾಯದ ಮೇರೆಗೆ, ನ್ಯೂಯಾರ್ಕ್ ಟೈಮ್ಸ್ ಲೇಖನವು ಆಪಾದನೆಗಳ ಬದಲು, ಕೇವಲ ದ್ವಂದ್ವಾರ್ಥ-ಸೂಚ್ಯಾರ್ಥಗಳ ಪದ ಬಳಕೆಗೆ ಸೀಮಿತಗೊಂಡಿತ್ತು. ಆದರೆ ದೆಹಲಿ ಪೊಲೀಸರಿಗೆ ಅಂತಹ ಅಡೆ-ತಡೆಯೇನೂ ಇಲ್ಲವಲ್ಲ. ಏಕೆಂದರೆ, ಅವರು ಒಂದು ಕಾಯ್ದೆಯನ್ನು (ಯುಎಪಿಎ) ಅಸ್ತ್ರವಾಗಿ ಹೊಂದಿದ್ದಾರೆ. ಈ ಕಾಯ್ದೆಯ ಅಡಿಯಲ್ಲಿ ವ್ಯಕ್ತಿಗಳ ವಿರುದ್ಧ ಅಥವಾ ಸಂಸ್ಥೆಗಳ ವಿರುದ್ಧ ಮಾಡುವ ಆರೋಪಗಳನ್ನು ತಿಂಗಳುಗಟ್ಟಲೇ ಅಥವಾ ವರ್ಷಗಟ್ಟಲೇ ಸಮರ್ಥಿಸಿಕೊಳ್ಳದೇ ಇದ್ದರೂ ಸಹ, ಪೋಲೀಸರನ್ನು ಕೇಳುವಂತಿಲ್ಲ. ಆದ್ದರಿಂದ, ಇದೇ ನ್ಯೂಯಾರ್ಕ್ ಟೈಮ್ಸ್ ಲೇಖನವನ್ನು ಆಧರಿಸಿ, ಚೀನಾ ಪ್ರಚಾರಕ್ಕಾಗಿ ನ್ಯೂಸ್‌ಕ್ಲಿಕ್ ಪತ್ರಿಕೆಯನ್ನು ಬಳಸಲಾಗುತ್ತಿದೆ ಎಂಬ ಕ್ರೂರ ಮತ್ತು ಆಧಾರರಹಿತ ಹೇಳಿಕೆ ಕೊಡುವ ಧೈರ್ಯಮಾಡಿದ್ದಾರೆ. ಅವರ ಹೇಳಿಕೆಯನ್ನು “ಆಧಾರರಹಿತ” ಎಂದು ನಾನು ಹೇಳುತ್ತೇನೆ. ಏಕೆಂದರೆ, ನ್ಯೂಸ್‌ಕ್ಲಿಕ್ ಪತ್ರಿಕೆಯನ್ನು ತಪ್ಪದೇ ಓದುವವನಾಗಿ ಹೇಳುವುದಾದರೆ, ಅಂತಾರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಅದು ತಳೆಯುವ ಎಡ ಅಥವಾ ಮಾರ್ಕ್ಸ್ ವಾದೀ ಕಣ್ಣೋಟವನ್ನು ಹೊರತುಪಡಿಸಿದರೆ, ಚೀನಾದ ಸರ್ಕಾರದ ನಿಲುಮೆಯನ್ನು ಬೆಂಬಲಿಸಿದ ಅಥವಾ ಪರೋಕ್ಷವಾಗಿಯಾದರೂ ಸಮರ್ಥಿಸಿದ ಒಂದು ಲೇಖನವನ್ನೂ ಸಹ ನಾನು ನೋಡಿಲ್ಲ. ಚೀನಾದ ಕ್ರಾಂತಿಯ ಬಗ್ಗೆ ಅದು ಗೌರವ ಭಾವನೆ ಹೊಂದಿದೆ. ಅಂತಹ ಗೌರವ ಭಾವನೆಯನ್ನು ಮೂರನೇ ಜಗತ್ತಿನ ಪ್ರತಿಯೊಬ್ಬ ನಿಷ್ಠಾವಂತ ಸಾಮ್ರಾಜ್ಯಶಾಹಿ-ವಿರೋಧಿಯೂ ಹೊಂದಿರುತ್ತಾನೆ/ಳೆ.

ಎರಡು ರೀತಿಯ ದ್ವಂದ್ವಗಳು

ಈ ಇಡೀ ಪ್ರಸಂಗವು ಎರಡು ರೀತಿಯ ದ್ವಂದ್ವಗಳು ಈ ಪ್ರಕರಣದಲ್ಲಿ ಕಾರ್ಯ ಪ್ರವೃತ್ತವಾಗಿವೆ ಎಂಬುದನ್ನು ತೋರಿಸುತ್ತದೆ. ಮೊದಲನೆಯದು, “ಉದಾರವಾದಿ” ಮೆಕಾರ್ಥಿಸಂ ಮತ್ತು “ಫ್ಯಾಸಿಸ್ಟ್-ತೆರನ” ಮೆಕಾರ್ಥಿಸಂ ಇವುಗಳ ನಡುವಿನ ದ್ವಂದ್ವ. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯನ್ನು “ಉದಾರವಾದಿ” ಎಂದು ಪರಿಗಣಿಸಲಾಗುತ್ತದೆ, ವಿಶ್ವಾದ್ಯಂತ ಅಮೆರಿಕಾ ನಡೆಸುವ ಸಾಮ್ರಾಜ್ಯಶಾಹಿ ಯುದ್ಧಗಳನ್ನು ಅದು ಸಾಮಾನ್ಯವಾಗಿ ಬೆಂಬಲಿಸುತ್ತದೆಯಾದರೂ ಸಹ, ಉದಾರವಾದದ ಪ್ರತಿಪಾದಕರ ಪ್ರಕಾರ ಅದರ ಒಂದು ಮೂಲಭೂತ ತತ್ವವೆಂದರೆ, ಸಮಾಜದಲ್ಲಿರುವ ಬೇರೆ ಬೇರೆ ಕಣ್ಣೋಟಗಳು ಮತ್ತು ಅಭಿಪ್ರಾಯಗಳ ವೈವಿಧ್ಯತೆಯನ್ನು ಒಪ್ಪಿಕೊಳ್ಳುವುದು ಮತ್ತು ಅಂತಹ ಕಣ್ಣೋಟಗಳನ್ನು ದೇಶದ ಅಂಗೀಕೃತ ಕಾನೂನುಗಳ ಪರಿಧಿಯೊಳಗೆ ಪ್ರಚಾರ ಮಾಡುವ ಸ್ವಾತಂತ್ರ‍್ಯವನ್ನು ಹೊಂದಿರುವುದು. ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿರುವ ಈ ಲೇಖನವು- ಪತ್ರಿಕೆಯು ಚೀನಾದ ಬಗ್ಗೆ ಮತ್ತು ಎಡ ಪಂಥದ ಬಗ್ಗೆ ಹೊಂದಿರುವ ಹಗೆತನವನ್ನು ಎಷ್ಟೇ ದ್ವಂದ್ವಾರ್ಥಗಳಿಂದ ಕೂಡಿದ ಭಾಷೆಯ ಮೂಲಕ ಲೇಖನದಲ್ಲಿ ಮರೆಮಾಚಲು ಪ್ರಯತ್ನಿಸಿದರೂ ಸಹ- ಸಾಮ್ರಾಜ್ಯಶಾಹಿ ವಿರೋಧಿಗಳು, ಯುದ್ಧ-ವಿರೋಧಿಗಳು ಹಾಗೂ ಎಡಪಂಥೀಯ ಗುಂಪುಗಳ ಮೇಲೆ ಮೆಕಾರ್ಥಿ ರೀತಿಯ ಬೇಟೆಯನ್ನು ನಿಸ್ಸಂದೇಹವಾಗಿ ಪ್ರೋತ್ಸಾಹಿಸಿದೆ ಮತ್ತು ಆ ಮೂಲಕ ಸಮಾಜದಲ್ಲಿ ಫ್ಯಾಸಿಸ್ಟ್ ಶಕ್ತಿಗಳನ್ನು ಬಲಪಡಿಸುತ್ತದೆ ಎಂಬ ಅಂಶವು ಮೊದಲನೆಯ ರೀತಿಯ ದ್ವಂದ್ವವನ್ನು ಸ್ಪಷ್ಟಪಡಿಸುತ್ತದೆ. ಮೆಕಾರ್ಥಿವಾದಿ

ಫ್ಯಾಸಿಸ್ಟ್-ತೆರನ ಶಕ್ತಿಗಳು ಆಳ್ವಿಕೆ ನಡೆಸುವ ಸಮಯದಲ್ಲಿ ಎಡಪಂಥೀಯ ಮತ್ತು ಪ್ರಜಾಸತ್ತಾತ್ಮಕ ಚಳುವಳಿಗಳನ್ನು ದಮನಿಸಲು ಬಳಸುವ ಸಾಧನಗಳು, ಸಾಮಾನ್ಯವಾಗಿ, ಇವರಿಗಿಂತ ಮೊದಲು ಆಳ್ವಿಕೆ ನಡೆಸುತ್ತಿದ್ದ ಉದಾರವಾದಿ ಬಂಡವಾಳಶಾಹಿ ಶಕ್ತಿಗಳಿಂದ ರೂಪುಗೊಂಡಿರುತ್ತವೆ. ಈ ಸಂದರ್ಭದಲ್ಲಿ, ಭಾರತದಲ್ಲಿ ಮೋದಿ ಸರ್ಕಾರವು ದುರುಪಯೋಗಪಡಿಸುತ್ತಿರುವ ಮತ್ತು ಭಯಾನಕವಾದ, ಯುಎಪಿಎ ಕಾಯ್ದೆಯನ್ನು ರೂಪಿಸಿದ್ದು, ಹಿಂದೆ ಆಳ್ವಿಕೆ ನಡೆಸುತ್ತಿದ್ದ ಮನಮೋಹನ್ ಸಿಂಗ್ ಅವರ ಉದಾರವಾದಿ ಬಂಡವಾಳಶಾಹಿ ಸರ್ಕಾರ ಎಂಬುದನ್ನು ಗಮನಿಸಬಹುದು. ವ್ಯತ್ಯಾಸವೆಂದರೆ, ಮೋದಿ ಸರ್ಕಾರವು ಈ ಕಾಯ್ದೆಗೆ ತಿದ್ದುಪಡಿ ಮಾಡಿ ಅದನ್ನು ಕೇವಲ ಸಂಘಟನೆಗಳ ವಿರುದ್ಧ ಮಾತ್ರವಲ್ಲ, ವ್ಯಕ್ತಿಗಳ ವಿರುದ್ಧವೂ ಬಳಸುತ್ತಿದೆ. ಕಮ್ಯುನಿಸಂ-ವಿರೋಧಿ ಉದಾರವಾದ ಮತ್ತು ಫ್ಯಾಸಿಸ್ಟ್ ದಬ್ಬಾಳಿಕೆ ಇವುಗಳ ನಡುವಿನ ಈ ದ್ವಂದ್ವವನ್ನು ಮರೆಯಲಾಗದು.

ವಿರೋಧಿಗಳನ್ನು ಹಣಿಯುವ ಮೆಕಾರ್ಥಿಸಂ ರೀತಿಯ ಕಾರ್ಯಾಚರಣೆಯತ್ತ ದೃಷ್ಟಿ ಹೊರಳಿಸಿದ ಅಮೆರಿಕದ ಉದಾರವಾದಿಗಳ ಇಂಗಿತವನ್ನು ಭಾರತದ ಫ್ಯಾಸಿಸ್ಟ್-ತೆರನ ಸರ್ಕಾರವು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದ ಅಂಶವು ಎರಡನೇ ರೀತಿಯ ದ್ವಂದ್ವವನ್ನು ಸ್ಪಷ್ಟಪಡಿಸುತ್ತದೆ. ಮೆಕಾರ್ಥಿಸಂ ಎಂಬುದು ರಾಜಕೀಯ ವಿರೋಧಿಗಳನ್ನು ಬಗ್ಗುಬಡಿಯುವ ಒಂದು ರೀತಿಯ ಕಾರ್ಯಾಚರಣೆ. ಅದರ ಬಗ್ಗೆ ಸಂಕ್ಷಿಪ್ತವಾಗಿ ಹೇಳುವುದಾದರೆ, ಎಡ ಪಂಥೀಯ ವ್ಯಕ್ತಿಗಳ ಮೇಲೆ ದೇಶದ್ರೋಹ, ಗೂಢಚರ್ಯೆ, ವಿಧ್ವಂಸಕ ಕೃತ್ಯ ಮುಂತಾದ ಸುಳ್ಳು ಆರೋಪ ಹೊರಿಸಿ, ಅವುಗಳನ್ನು ವ್ಯಾಪಕವಾಗಿ ಪ್ರಚುರಪಡಿಸುವುದು, ತನಿಖಾ ಸಂಸ್ಥೆಗಳನ್ನು ಅವರ ಮೇಲೆ ಛೂ ಬಿಟ್ಟು ಅವರಿಗೆ ಕಿರುಕುಳ ಕೊಡುವುದು ಮುಂತಾದ ದಮನಕಾರಿ ಕ್ರಮಗಳನ್ನು ಕೈಗೊಳ್ಳುವುದು. ಈ ರೀತಿಯ ಕಾರ್ಯಾಚರಣೆಗೆ ನಾಂದಿ ಹಾಡಿದ ವ್ಯಕ್ತಿಯೇ ಜೋಸೆಫ್ ಮೆಕಾರ್ಥಿ. ಆತ ಅಮೆರಿಕಾದಲ್ಲಿ ಒಬ್ಬ ಸೆನೆಟರ್ ಆಗಿದ್ದ. ಈ ವ್ಯಕಿಯು ಅಮೆರಿಕದಲ್ಲಿ ‘ಕೆಂಪು ಭೀತಿ’(ಕಮ್ಯುನಿಸಂ ಹರಡುತ್ತಿದೆಯೆಂಬ ಭೀತಿ)ಯನ್ನು 1950ರ ದಶಕದಲ್ಲಿ ಸೃಷ್ಟಿಸಿದ್ದ. ಮೆಕಾರ್ಥಿಸಂ ಜಾಗತೀಕರಣಗೊಳ್ಳುವ ಈ ವಿದ್ಯಮಾನವು ಪ್ರಸಕ್ತ ಜಾಗತೀಕರಣದ ಯುಗದ ಒಂದು ನಿರ್ದಿಷ್ಟ ಸಂಗತಿ.

ವಿದೇಶಿ ಮಾಧ್ಯಮಗಳಲ್ಲಿ ತನಿಖಾ ವರದಿಗಳು!  …………..

ಆ ಎಡಪಂಥೀಯರನ್ನು ಬಂಧಿಸಿ! ಉದಾರವಾದಿಗಳ ಮೇಲೆ ದಾಳಿ ಮಾಡಿ!

 

ಹಣ ತೊಳೆಯುವ ಕೆಲಸ! ಚೀನಾ ಸಂಪರ್ಕ! ವ್ಯಂಗ್ಯಚಿತ್ರ: ಸತೀಶ ಆಚಾರ್ಯ, ಮೊಲಿಟಿಕ್ಸ್.ಇನ್

ಪಾಶ್ಚ್ಯಾತ್ಯ  ಉದಾರವಾದದ ಪರಿಸ್ಥಿತಿ

ಬ್ರಿಟನ್‌ನಲ್ಲಿ ‘ಕೆಂಪು-ಭೀತಿ’ಯನ್ನು ಸೃಷ್ಟಿಸಲು 1924ರಲ್ಲಿ ಕಮ್ಯೂನಿಸ್ಟ್ ಇಂಟರ್‌ನ್ಯಾಷನಲ್‌ನ ಅಧ್ಯಕ್ಷ ಜಿನೋವಿವ್ ಅವರ ಹೆಸರಿನಲ್ಲಿ ಸೃಷ್ಟಿಸಿದ ಒಂದು ನಕಲಿ ಪತ್ರವನ್ನು ಬಳಕೆಮಾಡಿಕೊಳ್ಳಲಾಗಿತ್ತು. ಅದು ರಾಮ್ಸೆ ಮ್ಯಾಕ್ಡೊನಾಲ್ಡ್ ನೇತೃತ್ವದ ಬ್ರಿಟನ್ನಿನ ಮೊದಲ ಲೇಬರ್ ಸರ್ಕಾರದ ಸೋಲಿಗೆ ಕಾರಣವಾಗಿತ್ತು. ಮೂಲಭೂತವಾಗಿ ಅದು ಬ್ರಿಟಿಷ್ ವಿದ್ಯಮಾನವಾಗಿತ್ತು. ಅಂತೆಯೇ, 1950ರ ದಶಕದಲ್ಲಿ ಸೆನೆಟರ್ ಮೆಕಾರ್ಥಿ ಸೃಷ್ಟಿಸಿದ್ದ ಕಮ್ಯೂನಿಸಂ ಭೀತಿ ಮತ್ತು ಆ ಸಂದರ್ಭದಲ್ಲಿ ಕೈಗೊಂಡ ದಮನಕಾರಿ ಕ್ರಮಗಳು ಅಮೇರಿಕದ ಸಮಾಜದ ಮೇಲೆ ಅಳಿಸಲಾಗದ ಛಾಪು ಮೂಡಿಸಿದರೂ ಸಹ, ಮೂಲಭೂತವಾಗಿ ಅದು ಅಮೇರಿಕನ್ ವಿದ್ಯಮಾನವಾಗಿತ್ತು ಮತ್ತು ಜಾಗತಿಕ ಮಟ್ಟದಲ್ಲಿ ಅದು ಹೆಚ್ಚು ಪರಿಣಾಮ ಬೀರಲಿಲ್ಲ.

ಆದರೆ ಇಂದಿನ ಜಾಗತೀಕರಣದ ದಿನಮಾನಗಳಲ್ಲಿ, ಈ ರೀತಿಯಲ್ಲಿ “ಸೃಷ್ಟಿಸಿದ” ಭೀತಿಯು ಅದನ್ನು ಸೃಷ್ಟಿಸಿದ ದೇಶಕ್ಕಷ್ಟೇ ಸೀಮಿತವಾಗಿ ಉಳಿಯುವುದಿಲ್ಲ. ವಿಶ್ವದ ಇತರ ಭಾಗಗಳಲ್ಲಿ ಅದನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ. ತನ್ನ ಲೇಖನವು ಸಿಂಘಂ ವಿರುದ್ಧವಾಗಲಿ ಅಥವಾ ಅವರು ಕೊಡುಗೆ ನೀಡಿದ ಸಂಸ್ಥೆಗಳ ವಿರುದ್ಧವಾಗಲಿ ಶಿಕ್ಷಾರ್ಹವಾದ ಯಾವ ಆರೋಪವನ್ನೂ ಮಾಡಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಬಹುದು. ಆದರೆ, ಈ ಲೇಖನವು ವಿಶ್ವ ಕಣ್ಣೋಟ ಹೊಂದಿರುವ ಪ್ರಗತಿಪರರ, ‘ಅಧಿಕಾರಸ್ಥರ ಮುಖಕ್ಕೆ ಸತ್ಯ’ ಹೇಳುವ ಧೈರ್ಯವನ್ನು ಹೊಂದಿರುವ ಮತ್ತು ಪ್ರಜಾಪ್ರಭುತ್ವದ ಮನೋಭಾವವನ್ನು ಜೀವಂತವಾಗಿಡಲು ಶ್ರಮಿಸುವ ವ್ಯಕ್ತಿಗಳ ವಿರುದ್ಧ ಭಯಾನಕ ಪರಿಣಾಮ ಬೀರುತ್ತದೆ. ಯುಎಪಿಎಯಂತಹ ಕಠಿಣ ಕಾಯ್ದೆಯನ್ನು ಉಡಾಫೆಯಾಗಿ ಜಾರಿ ಮಾಡುವ ಭಾರತದಂತಹ ಮೂರನೇ ಜಗತ್ತಿನ ಯಾವುದೇ ದೇಶದಲ್ಲಿ ಇಂತಹ ಲೇಖನ ಬಳಕೆಯಾಗಬಹುದು. ವಾಸ್ತವವಾಗಿ, ಮೋದಿ ಸರ್ಕಾರ ಈ ಲೇಖನವನ್ನು ಬಳಸಿಕೊಂಡಿದೆ. ನ್ಯೂಸ್‌ಕ್ಲಿಕ್ ಸ್ಥಾಪಕ ಪುರಕಾಯಸ್ಥ ಮತ್ತು ಅಮಿತ್ ಚಕ್ರವರ್ತಿ ಅವರನ್ನು ಯುಎಪಿಎ ಅಡಿಯಲ್ಲಿ ಬಂಧಿಸಿದೆ. ಅವರ ಮೇಲೆ ತನಿಖಾ ಏಜನ್ಸಿಗಳನ್ನು ಛೂ ಬಿಟ್ಟಿದೆ, ಭಯೋತ್ಪಾದನೆಯ ಆರೋಪವನ್ನು ಹೊರಿಸಿದೆ. ಮತ್ತು ಪತ್ರಿಕೆಯ ಉದ್ಯೋಗಿಗಳಿಗೂ ಕಿರುಕುಳ ನೀಡಿದೆ. ಸಮಕಾಲೀನ ಯುಗದಲ್ಲಿ ಈ ಲೇಖನದ ಪರಿಣಾಮಗಳ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ಕುರುಡಾಗುವುದು ಸಾಧ್ಯವಿಲ್ಲ. ಆದಾಗ್ಯೂ, ಅಂತಹ ಒಂದು ಲೇಖನವನ್ನು ಪ್ರಕಟಿಸಲು ಅದು ಮುಂದಾಯಿತು ಎಂಬುದು ಸಮಕಾಲೀನ ಪಾಶ್ಚ್ಯಾತ್ಯ ಉದಾರವಾದದ ಬಗ್ಗೆ ಒಂದು ವಿಷಾದದ ವ್ಯಾಖ್ಯಾನವಾಗುತ್ತದೆ.

ಪ್ರಸಕ್ತ ಯುಗದಲ್ಲಿ ಮೆಕಾರ್ಥಿಸಂ, ಚೀನಾ ಗುಮ್ಮವನ್ನು ಆವಾಹಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತ ಭೂಪ್ರದೇಶದ ಒಂದು ಇಂಚು ಭೂಮಿಯನ್ನೂ ಸಹ ಚೀನಾ ಆಕ್ರಮಿಸಿಕೊಂಡಿಲ್ಲ ಎಂದು ಪಟ್ಟು ಹಿಡಿದು ಸಾಧಿಸುವ ಮೋದಿ ಸರ್ಕಾರವು, ಈ ಆಕ್ರಮಣದ ಬಗ್ಗೆ ಬಂದ ವರದಿಗಳಿಂದಾಗಿ ಸೃಷ್ಟಿಯಾಗಿರುವ ಚೀನಾ ವಿರೋಧಿ ಭಾವನೆಯನ್ನು ತಣಿಸಲು, ಮೆಕಾರ್ಥಿಸಂ ರೀತಿಯಲ್ಲಿ, ದೇಶದಲ್ಲಿ ಅಳಿದುಳಿದ ಸ್ವತಂತ್ರ ಮಾಧ್ಯಮಗಳನ್ನು ಗುರಿಯಾಗಿಸಲು ಪ್ರಯತ್ನಿಸುತ್ತದೆ.

ಉದಾರವಾದವು ನಿಜಕ್ಕೂ ಫ್ಯಾಸಿಸ್ಟ್-ವಿರೋಧಿಯಾಗಬೇಕಾದರೆ, ಆಗ, ಕೆಂಪು ಭೀತಿ ಸೃಷ್ಟಿಸುವ ಪ್ರವೃತ್ತಿಯನ್ನು, ಅದರಲ್ಲೂ ಮುಖ್ಯವಾಗಿ ಮೆಕಾರ್ಥಿಸಂ ಒಲವನ್ನು ಅದು ತ್ಯಜಿಸಬೇಕಾಗುತ್ತದೆ. ವಿಶೇಷವಾಗಿ, ಪ್ರಸ್ತುತ ಯುಗದಲ್ಲಿ ಮೆಕಾರ್ಥಿಸಂ ವೇಗವಾಗಿ ಜಾಗತೀಕರಣಗೊಳ್ಳುವ ಪ್ರವೃತ್ತಿಯನ್ನು ಹೊಂದಿರುವ ಮತ್ತು ವಿಶ್ವ ಬಂಡವಾಳಶಾಹಿ ಬಿಕ್ಕಟ್ಟು ವಿಶ್ವದ ಎಲ್ಲೆಡೆ ಫ್ಯಾಸಿಸಂನ ಬೆಳವಣಿಗೆಗೆ ಫಲವತ್ತಾದ ನೆಲವನ್ನು ಹದಗೊಳಿಸಿರುವ ಸಂದರ್ಭದಲ್ಲಿ, ಇಂಥಹ ಮೆಕಾರ್ಥಿ ಶೈಲಿಯ ಬೇಟೆಯ ವಿಧಾನಗಳಿಂದ ಅದು ಪೋಷಣೆ ಪಡೆಯಬಹುದಾಗಿರುವ ಸಂದರ್ಭದಲ್ಲಿ ಅದು ಅಗತ್ಯವಾಗಿದೆ.

ಈ ವಿಡಿಯೋ ನೋಡಿಚುನಾಯಿತ ಸರ್ವಾಧಿಕಾರ ಪ್ರಭುತ್ವದಿಂದ ” ನ್ಯೂಸ್ ಕ್ಲಿಕ್ ಮೇಲೆ ದಾಳಿ”, ಅಪಾಯದಲ್ಲಿರುವ ಭಾರತದ ಪ್ರಜಾಪ್ರಭುತ್ವ

Donate Janashakthi Media

Leave a Reply

Your email address will not be published. Required fields are marked *