ವ್ಯವಸ್ಥೆಯ ಅತಿರೇಕಗಳೂ ನ್ಯಾಯಾಂಗದ ಧ್ವನಿಯೂ

ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ನ್ಯಾಯಾಂಗದ ಪ್ರತಿ ಹೆಜ್ಜೆಯೂ ನಿರ್ಣಾಯಕವಾಗಬೇಕಿದೆ

ಸ್ವತಂತ್ರ ಭಾರತದ ಇತಿಹಾಸದುದ್ದಕ್ಕೂ ಕಾಣಬಹುದಾದ ಒಂದು ಸಮಾನ ಎಳೆಯ ವಿದ್ಯಮಾನ ಎಂದರೆ, ಅಧಿಕಾರ ರಾಜಕಾರಣದ ಅತಿರೇಕಗಳು, ವ್ಯವಸ್ಥೆಯೊಳಗಿನ ಪೀಡೆಗಳು ಉಲ್ಬಣಿಸಿದಾಗೆಲ್ಲಾ, ನ್ಯಾಯಾಂಗ ತಕ್ಷಣವೇ ಸ್ಪಂದಿಸಿದೆ. ಅಷ್ಟೇ ಅಲ್ಲ, ಭಾರತದ ಪ್ರಜಾಪ್ರಭುತ್ವವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಆಳುವ ವರ್ಗಗಳಿಗೆ ಶಿಸ್ತಿನ ಪಾಠವನ್ನೂ ಮಾಡಿದೆ. ಕೆಲವೇ ಅಪವಾದಗಳನ್ನು ಗುರುತಿಸಬಹುದಾದರೂ, ಇದು ಇಂದಿಗೂ ನಾವು ಕಾಣುತ್ತಿರುವ ಒಂದು ಬೆಳವಣಿಗೆ. ಜನಸಂಖ್ಯಾ ಶ್ರೇಣಿಯಲ್ಲಿ ತಳಮಟ್ಟಕ್ಕೆ ಚಲಿಸುತ್ತಿದ್ದಂತೆಲ್ಲಾ ಅಲ್ಲಿ ಪ್ರಜಾಪ್ರಭುತ್ವೀಯ ಮೌಲ್ಯಗಳ ಉಲ್ಲಂಘನೆ ಮತ್ತು ಸಾಮಾಜಿಕ ಅನ್ಯಾಯಗಳು ಹೆಚ್ಚಾಗುತ್ತಿರುವ ಒಂದು ಸಂದರ್ಭದಲ್ಲಿ ನ್ಯಾಯಾಂಗದ ಈ ಎಚ್ಚರಿಕೆಯ ಧ್ವನಿ ಕೊಂಚಮಟ್ಟಿಗಾದರೂ ವಿಶ್ವಾಸಾರ್ಹತೆಯನ್ನು ಮೂಡಿಸುತ್ತದೆ. ತಮಗಾಗುತ್ತಿರುವ ಅನ್ಯಾಯಗಳಿಗೆ ನ್ಯಾಯಾಂಗವೇ ಅಂತಿಮ ರಕ್ಷೆ ಎನ್ನುವ ಜನತೆಯ ವಿಶ್ವಾಸವನ್ನು ಭಾರತದ ನ್ಯಾಯಾಂಗ ಬಹುಮಟ್ಟಿಗೆ ಉಳಿಸಿಕೊಂಡು ಬಂದಿದೆ. ವ್ಯವಸ್ಥೆ

-ನಾ ದಿವಾಕರ

ಆದರೆ ಇದು ಪೂರ್ಣಸತ್ಯವಲ್ಲ ಎಂಬ ಕಟು ವಾಸ್ತವವನ್ನೂ ಮನಗಾಣದೆ ಹೋದರೆ, ಸಮಾಜವು ಆತ್ಮಪ್ರಶಂಸೆಯಲ್ಲಿ ಮುಳುಗಿ ತನ್ನ ಸ್ವಂತಿಕೆಯನ್ನು ಕಳೆದುಕೊಳ್ಳುವ ಅಪಾಯವೂ ಇದೆ. ಇತ್ತೀಚೆಗೆ ಚೆನ್ನೈನಲ್ಲಿ ವಿಐಟಿ ಸ್ಕೂಲ್‌ ಆಫ್ ಲಾ ಏರ್ಪಡಿಸಿದ್ದ, Justice unplugged; Shaping the Future of law , ಎಂಬ ಗಹನವಾದ ವಿಚಾರಧಾರೆಯ ಕಾನೂನು ಸಮಾವೇಶದಲ್ಲಿ ಮಾತನಾಡುತ್ತಾ ನಿವೃತ್ತ ಮುಖ್ಯನ್ಯಾಯಮೂರ್ತಿ ಎನ್.‌ ವಿ. ರಮಣ ಅವರು ನ್ಯಾಯಾಂಗದಲ್ಲಿ ಜನತೆಯ ವಿಶ್ವಾಸ ಕಡಿಮೆಯಾಗುತ್ತಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿರುವುದು ಸಾಂದರ್ಭಿಕವಾಗಿ ಸೂಕ್ತ ಎನಿಸುತ್ತದೆ.  ದೇಶದ ವೈವಿಧ್ಯತೆಯನ್ನು ಸಮರ್ಪಕವಾಗಿ ಪ್ರತಿಬಿಂಬಿಸುವಲ್ಲಿ ನ್ಯಾಯಾಂಗವು ವಿಫಲವಾಗುತ್ತಿರುವ ಬಗ್ಗೆ ನ್ಯಾ. ರಮಣ ಅವರು ಎಚ್ಚರಿಸಿರುವುದು, ನಾಗರಿಕರನ್ನೂ ಜಾಗೃತಗೊಳಿಸಬೇಕಿದೆ. (The Hindu – 23 March 2025) ವ್ಯವಸ್ಥೆ

ವ್ಯತಿರಿಕ್ತ ತೀರ್ಪುಗಳ ನಡುವೆ

ಈ ನಡುವೆಯೇ ಸಂಭವಿಸಿರುವ ಘಟನೆಗಳು ಮತ್ತು ನ್ಯಾಯಮೂರ್ತಿಗಳಿಂದ ವ್ಯಕ್ತವಾಗಿರುವ ಅಂತಿಮ ತೀರ್ಪು ಪ್ರಜ್ಞಾವಂತ-ಸಂವೇದನಾಶೀಲ ಸಮಾಜದ ಆಂತರ್ಯವನ್ನೇ ಪ್ರಕ್ಷುಬ್ಧಗೊಳಿಸಿದೆ. ನಿರ್ದಿಷ್ಟವಾಗಿ ಅಲಹಾಬಾದ್‌ ಹೈಕೋರ್ಟ್‌ ನೀಡಿರುವ ಒಂದು ತೀರ್ಪು ದೇಶದ ಮಹಿಳಾ ಸಂಕುಲವನ್ನಷ್ಟೇ ಅಲ್ಲ, ಇಡೀ ಸಮಾಜದಲ್ಲಿ ಕೊಂಚಮಟ್ಟಿಗಾದರೂ ಇರುವ ಮಹಿಳಾ ಸಂವೇದನೆ ಮತ್ತು ಲಿಂಗ ಸೂಕ್ಷ್ಮತೆಯನ್ನೇ ತಲ್ಲಣಗೊಳಿಸಿದೆ. ಮೂರು ದಶಕಗಳ ಹಿಂದಿನ ರಾಜಸ್ಥಾನದ ಭವಾರಿ ದೇವಿ ಪ್ರಕರಣದತ್ತ ಹಿಂತಿರುಗಿ ನೋಡಿದಾಗ, ಆರೋಪಿಗಳನ್ನು ಖುಲಾಸೆ ಮಾಡಿದ ವಿಚಾರಣಾ ನ್ಯಾಯಾಲಯವು ವ್ಯಕ್ತಪಡಿಸಿದ್ದ ಅಭಿಪ್ರಾಯಗಳನ್ನು ನೆನಪಿಸುವಂತಾಗಿದೆ. 60-70 ವರ್ಷದ ಪುರುಷರು, ಗ್ರಾಮದ ಮುಖ್ಯಸ್ಥ ಅತ್ಯಾಚಾರ ಮಾಡಲಾಗುವುದಿಲ್ಲ, ಮೆಲ್ಜಾತಿಯ ವ್ಯಕ್ತಿ ಕೆಳಜಾತಿಯ ಮಹಿಳೆಯ ಮೇಲೆ ಅತ್ಯಾಚಾರ ಎಸಗಲಾಗುವುದಿಲ್ಲ ಈ ರೀತಿಯ ಅಭಿಪ್ರಾಯಗಳು ಆಗ ಕೇಳಿಬಂದಿದ್ದವು. ವ್ಯವಸ್ಥೆ

ಇದನ್ನೂ ಓದಿ: ಕ್ಷೇತ್ರ ಮರುವಿಂಗಡಣೆ ನ್ಯಾಯಯುತ ಪ್ರಕ್ರಿಯೆಯಾಗಲಿ 

ಮೂರು ದಶಕಗಳೇ ಕಳೆದಿವೆ, ಭಾರತ ಬದಲಾಗಿದೆ ಆದರೆ ಸಮಾಜದ ಮನಸ್ಥಿತಿ ಬದಲಾಗಿಲ್ಲ. ಇದನ್ನು ಸಾಕ್ಷೀಕರಿಸಲೋ ಎಂಬಂತೆ ಅಲಹಾಬಾದ್‌ ಹೈಕೋರ್ಟ್‌ನ ನ್ಯಾ. ರಾಮಮನೋಹರ್‌ ನಾರಾಯಣ ಮಿಶ್ರಾ ಅವರು ನೀಡಿರುವ ಒಂದು ತೀರ್ಪು ಭಾರತದಲ್ಲಿ‌ ಮಹಿಳಾ ಸುರಕ್ಷತೆ, ಘನತೆ ಮತ್ತು ನ್ಯಾಯ ನಿಷ್ಕರ್ಷೆಯ ಮೂಲಭೂತ ಮೌಲ್ಯಗಳನ್ನೇ ಅಲುಗಾಡಿಸಿದಂತಾಗಿದೆ. ಅತ್ಯಾಚಾರದ ಯತ್ನ ನಡೆದಿದೆ ಎಂದು ಆರೋಪಿಸಲಾದ ಪ್ರಕರಣವೊಂದರಲ್ಲಿ ನ್ಯಾಯಾಲಯವು “ಪ್ರಸ್ತುತ ಪ್ರಕರಣದಲ್ಲಿ, ಆರೋಪಿ ಪವನ್ ಮತ್ತು ಆಕಾಶ್ ವಿರುದ್ಧದ ಆರೋಪವೆಂದರೆ, ಅವರು ಸಂತ್ರಸ್ತ ಬಾಲಕಿಯ ಸ್ತನಗಳನ್ನು ಹಿಡಿದಿದ್ದಾರೆ ಮತ್ತು ಆಕಾಶ್ ಬಾಲಕಿಯ ಕೆಳ ಉಡುಪನ್ನು ಕಳಚಲು ಯತ್ನಿಸುತ್ತ, ಅವಳ ಕೆಳಗಿನ ಉಡುಪಿನ (ಪೈಜಾಮ) ಲಾಡಿಯನ್ನು ತುಂಡು ಮಾಡಿದ್ದಾರೆ. ಬಳಿಕ ಆಕೆಯನ್ನು ದಾರಿ ಬದಿಯ ಹತ್ತಿರದ ಮೋರಿಯೊಳಗೆ (culvert) ಎಳೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಆರೋಪಿಗಳು ಬಾಲಕಿಯ ಮೇಲೆ ಅತ್ಯಾಚಾರ ಮಾಡಲು ನಿರ್ಧರಿಸಿದ್ದಾರೆ ಎಂಬ ತೀರ್ಮಾನಕ್ಕೆ ಬರಲು ಈ ಮೇಲಿನ ಅಂಶಗಳು ಸಾಕಾಗುವುದಿಲ್ಲ.”  ಎಂದು ಹೇಳಿರುವುದು ಈಗ ವ್ಯಾಪಕ ಚರ್ಚೆಗೊಳಗಾಗಿದೆ. ವ್ಯವಸ್ಥೆ

ಹಾಗಾದರೆ ಒಬ್ಬ ಮಹಿಳೆಯ ಮೇಲೆ ನಡೆಯುವ ಅತ್ಯಾಚಾರದ ಪ್ರಯತ್ನವನ್ನು ಹೇಗೆ ನಿರ್ವಚಿಸಬೇಕು ಎನ್ನುವ ಗಹನವಾದ ಪ್ರಶ್ನೆ ಇಲ್ಲಿ ಎದುರಾಗುತ್ತದೆ. ನ್ಯಾಯಶಾಸ್ತ್ರದ ಪರಿಧಿಯಲ್ಲಿ ಇದು ಸಾಕ್ಷಿ ಪುರಾವೆ ಮತ್ತು ಕೃತ್ಯ ನಡೆದ ಚೌಕಟ್ಟಿನೊಳಗೇ ನಿರ್ಧಾರವಾಗುವುದಾದರೆ, ಉದ್ದೇಶಪೂರ್ವಕ ಬಲಪ್ರಯೋಗ ನಡೆಯದೆ ಇದ್ದ ಪ್ರಸಂಗಗಳಲ್ಲಿ, ದೈಹಿಕವಾಗಿ ದೌರ್ಜನ್ಯಕ್ಕೊಳಗಾಗುವ ಮಹಿಳೆಯನ್ನು ಬಾಧಿತಳೆಂದೋ, ಸಂತ್ರಸ್ತಳೆಂದೋ ಪರಿಭಾವಿಸುವುದು ಹೇಗೆ ? ಈ ಪ್ರಶ್ನೆಗಳಿಗೆ ದೇಶದ ನ್ಯಾಯಪಂಡಿತರು ಹಾಗೂ ನ್ಯಾಯಶಾಸ್ತ್ರದ ವಿದ್ವಾಂಸರು ಉತ್ತರಿಸಬೇಕಿದೆ. ಗೌರವಾನ್ವಿತ ನ್ಯಾಯಮೂರ್ತಿಗಳ ಈ ತೀರ್ಪು ಮಹಿಳಾ ದೌರ್ಜನ್ಯಗಳ ಸುತ್ತಲಿನ ಸಂಕಥನದಲ್ಲಿ Pandoras Box ತೆರೆದಿರುವುದಂತೂ ಸ್ಪಷ್ಟ. ಸಮಾಜದಲ್ಲಿ ಈಗಾಗಲೇ ಪಾತಾಳಕ್ಕಿಳಿದಿರುವ ಲಿಂಗ ಸೂಕ್ಷ್ಮತೆ ಮತ್ತು ಸ್ತ್ರೀ ಸಂವೇದನೆಯನ್ನು ಇಂತಹ ತೀರ್ಪುಗಳು ಮತ್ತಷ್ಟು ಹುದುಗಿಹಾಕುತ್ತವೆ. ವ್ಯವಸ್ಥೆ

ಈ ಘಟನೆ ಮಸುಕಾಗುವ ಮುನ್ನವೇ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಯಶವಂತ್‌ ವರ್ಮಾ ಅವರ ಸ್ವ ಗೃಹದಲ್ಲಿ ನಡೆದ ಅಗ್ನಿ ಅನಾಹುತದ ವೇಳೆ, ಅಪಾರ ಮೊತ್ತದ ನಗದು ಸಹ ಸುಟ್ಟುಹೋಗಿರುವುದು ವರದಿಯಾಗಿದೆ. ಅವರ ಮನೆಯ ಉಗ್ರಾಣದಿಂದ ಮೂಟೆಗಟ್ಟಲೆ ಸುಟ್ಟು ಕರಕಲಾದ ನೋಟಿನ ಕಂತೆಗಳು ದೊರೆತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸುಪ್ರೀಂಕೋರ್ಟ್‌ ಕೂಡಲೇ ಮಧ್ಯಪ್ರವೇಶಿಸಿ ನ್ಯಾ. ವರ್ಮಾ ಅವರನ್ನು ವರ್ಗಾವಣೆ ಮಾಡಿರುವುದೇ ಅಲ್ಲದೆ, ಉನ್ನತ ಮಟ್ಟದ ತನಿಖೆಯನ್ನೂ ಆದೇಶಿಸಿದೆ.  ತಮ್ಮ ಮೇಲಿನ ಆರೋಪಗಳನ್ನು ನ್ಯಾ. ವರ್ಮಾ ನಿರಾಕರಿಸಿದ್ದರೂ, ಈ ಪ್ರಕರಣವು ಗಂಭೀರ ಸ್ವರೂಪ ಪಡೆದುಕೊಂಡಿದ್ದು ಪೂರ್ಣ ತನಿಖೆಯ ನಂತರವೇ ಅಂತಿಮ ಸತ್ಯ ಹೊರಬೀಳಲಿದೆ. ಆದರೆ ಹಾಲಿ ನ್ಯಾಯಮೂರ್ತಿಗಳ ಮನೆಯಲ್ಲಿ ಈ ರೀತಿಯ ನಗದು ಕಂಡುಬಂದಿರುವುದು ನ್ಯಾಯಾಂಗದ ಮೇಲಿನ ವಿಶ್ವಾಸಾರ್ಹತೆಯನ್ನು ಕುಂದಿಸುವುದಂತೂ ಸತ್ಯ. ನ್ಯಾ. ಎನ್.‌ ವಿ. ರಮಣ ಅವರ ಮಾತುಗಳು ಇಲ್ಲಿ ಕಾಕತಾಳೀಯವಾಗಿ ಅನ್ವಯಿಸುತ್ತದೆ. ವ್ಯವಸ್ಥೆ

ಗುಣಾತ್ಮಕ ಬೆಳವಣಿಗೆಗಳ ಬೆಳಕು

ಆದರೆ ಈ ಎರಡು ಪ್ರಸಂಗಗಳು ದೇಶದ ನ್ಯಾಯ ವ್ಯವಸ್ಥೆಯ ಕಪ್ಪು ಚುಕ್ಕೆಗಳು ಎಂದು ಭಾವಿಸಬಹುದು. ಏಕೆಂದರೆ ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯಗಳು, ವಿಶೇಷವಾಗಿ ಉನ್ನತ ನ್ಯಾಯಾಲಯಗಳು ಜನತೆಯ ವಿಶ್ವಾಸವನ್ನು ಹೆಚ್ಚಿಸುವ ರೀತಿಯಲ್ಲಿ ತೀರ್ಪುಗಳನ್ನು, ಅಭಿಪ್ರಾಯಗಳನ್ನು ನೀಡುತ್ತಿವೆ. ಇತ್ತೀಚೆಗೆ ಬಿಜೆಪಿ ಆಳ್ವಿಕೆಯ ಸರ್ಕಾರಗಳು ಸುಪ್ರೀಂಕೋರ್ಟ್‌ನ ತಡೆಯಾಜ್ಞೆಯ ಹೊರತಾಗಿಯೂ ಬುಲ್ಡೋಜರ್‌ ನ್ಯಾಯವನ್ನು ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ನಾಗಪುರದ ಹೈಕೋರ್ಟ್‌ ಪೀಠ ಆಕ್ರೋಶ ವ್ಯಕ್ತಪಡಿಸಿದ್ದು, ಕ್ರಿಕೆಟ್‌ ಪಂದ್ಯಾವಳಿಯ ಸಂದರ್ಭದಲ್ಲಿ ಭಾರತ ವಿರೋಧಿ ಘೋಷಣೆ ಕೂಗಲಾಗಿದೆ ಎಂಬ ಆರೋಪ ಹೊರಿಸಿ ಆರೋಪಿಯ ಮನೆ ಮತ್ತು ಅಂಗಡಿಯನ್ನು ಕೆಡವುವ ಅಧಿಕಾರಿಗಳ ಕ್ರಮವನ್ನು ಖಂಡಿಸಿದೆ. ಅಷ್ಟೇ ಅಲ್ಲದೆ ಮುಂದಿನ ವಿಚಾರಣೆಯವರೆಗೂ ಧ್ವಂಸ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಆದೇಶಿಸಿದೆ. ಸುಪ್ರೀಂಕೋರ್ಟ್‌ ಸಹ ಮಹಾರಾಷ್ಟ್ರ ಸರ್ಕಾರದಿಂದ ಈ ಬಗ್ಗೆ ಪ್ರತಿಕ್ರಿಯೆ ಕೋರಿದೆ.

2021ರ ಮತ್ತೊಂದು ಪ್ರಕರಣದಲ್ಲಿ ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ಸರ್ಕಾರಿ ಅಧಿಕಾರಿಗಳು ಧ್ವಂಸ ಮಾಡಿದ್ದ ಆರೋಪಿಯೊಬ್ಬರ ಕಟ್ಟಡವನ್ನು ಪುನಃ ನಿರ್ಮಾಣ ಮಾಡುವಂತೆ ಆದೇಶಿಸಿದೆ. ಈ ಬುಲ್ಡೋಜರ್‌ ನ್ಯಾಯದ ಬಗ್ಗೆ ಆತಂಕ, ಆಘಾತ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾದ ಅಭಯ್‌ ಎಸ್‌ ಒಕಾ ಮತ್ತು ಉಜ್ಜಲ್‌ ಭುಯಾನ್‌ , ನೋಟಿಸ್‌ ನೀಡಿದ 24 ಗಂಟೆಗಳ ಒಳಗಾಗಿ ಧ್ವಂಸ ಮಾಡುವ ಮೂಲಕ ಆರೋಪಿಗಳ ಅಭಿಪ್ರಾಯಕ್ಕೆ ಅವಕಾಶವನ್ನೇ ನಿರಾಕರಿಸುವುದನ್ನು ಖಂಡಿಸಿದ್ದು, ಇಂತಹ ಪ್ರಕ್ರಿಯೆಗಳನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ತಮ್ಮ ಮನೆಯನ್ನು ಸ್ವಂತ ಖರ್ಚಿನಲ್ಲಿ ಮರುನಿರ್ಮಾಣ ಮಾಡಬಹುದು ಎಂದೂ ಸುಪ್ರೀಂಕೋರ್ಟ್‌ ನ್ಯಾಯಪೀಠ ಹೇಳಿದೆ. ಸಂವಿಧಾನದ ಅನುಚ್ಛೇದ 21 ( ಬದುಕುವ ಹಕ್ಕು ) ಉಲ್ಲೇಖಿಸಿರುವ ನ್ಯಾಯಪೀಠವು, ಸರ್ಕಾರವೇ ಮನೆಯನ್ನು ಪುನಃ ಕಟ್ಟಿಸಿಕೊಡುವ ಆದೇಶ ನೀಡುವ ಸಾಧ್ಯತೆಗಳನ್ನೂ ಅಲ್ಲಗಳೆದಿಲ್ಲ.

ವ್ಯವಸ್ಥೆಯ ದುರವಸ್ಥೆಯ ನಡುವೆ

ದೇಶದ ಆಡಳಿತದಲ್ಲಿ ಇಡೀ ವ್ಯವಸ್ಥೆಯೇ ದುರ್ಬಲವಾಗಿದ್ದು, ಕಾನೂನು ರಕ್ಷಿಸಬೇಕಾದ ಸಾಂಸ್ಥಿಕ ನೆಲೆಗಳೆಲ್ಲವೂ ರಾಜಕೀಯ ಪ್ರಭಾವಕ್ಕೊಳಗಾಗಿ ತಮ್ಮ ಸ್ವಾಯತ್ತತೆ ಕಳೆದುಕೊಳ್ಳುತ್ತಿರುವುದನ್ನು ಗಮನಿಸುತ್ತಿದ್ದೇವೆ. ಚುನಾಯಿತ ಸರ್ಕಾರಗಳು ಉಳ್ಳವರನ್ನು, ಪ್ರಭಾವಿ ಶಕ್ತಿಗಳನ್ನು, ರಾಜಕೀಯವಾಗಿ ಅನುಕೂಲಕರವಾಗಿರುವವರನ್ನು ಹಾಗೂ ಪಟ್ಟಭದ್ರ ಹಿತಾಸಕ್ತಿಗಳನ್ನು ರಕ್ಷಿಸಲು ಎಲ್ಲ ರೀತಿಯ ವಾಮ ಮಾರ್ಗಗಳನ್ನೂ ಅನುಸರಿಸುವ ಒಂದು ವಿಧಾನವು ಇತ್ತೀಚಿನ ದಿನಗಳಲ್ಲಿ ಪಕ್ಷಾತೀತವಾಗಿ ಸಾಮಾನ್ಯ ಸಂಗತಿಯಾಗಿದೆ. ಕರ್ನಾಟಕದ ಸೌಜನ್ಯ ಪ್ರಕರಣ ಒಂದು ನೇರ ನಿದರ್ಶನವಾಗಿ ನೋಡಬಹುದು. ಹೀಗಿದ್ದರೂ ದೇಶದ ಸಾಮಾನ್ಯ ಜನತೆಯಲ್ಲಿ ನ್ಯಾಯಾಂಗದ ಬಗ್ಗೆ ವಿಶ್ವಾಸ ದೃಢವಾಗಿ ಉಳಿದುಕೊಂಡಿದೆ. ಸಂವಿಧಾನ ಮತ್ತು ಸಾಂವಿಧಾನಿಕ ಮೌಲ್ಯಗಳ ರಕ್ಷಣೆಗೆ ನ್ಯಾಯಾಂಗವೇ ಅಂತಿಮ ಆಶ್ರಯ ತಾಣ ಎಂಬ ಜನಸಾಮಾನ್ಯರ ನಂಬಿಕೆ ದಿನದಿಂದ ದಿನಕ್ಕೆ ದೃಢವಾಗುತ್ತಲೇ ಇದೆ.

ಆದರೆ ಈ ನಡುವೆಯೇ ನ್ಯಾಯಾಂಗದ ಕೆಲವು ತೀರ್ಪುಗಳು ಜನಸಾಮಾನ್ಯರ ಈ ಆಶಾಭಾವನೆಯನ್ನು ಹುಸಿಗೊಳಿಸುತ್ತಿರುವುದು ದುರದೃಷ್ಟಕರ ಬೆಳವಣಿಗೆಯಾಗಿದೆ. ಭಾರತೀಯ ಸಮಾಜ ಪ್ರಜ್ಞಾಪೂರ್ವಕವಾಗಿಯೇ ತನ್ನ ಗತಕಾಲದ ಪ್ರತಿಗಾಮಿ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಹಾದಿಯಲ್ಲಿ ಸಾಗುತ್ತಿರುವ ಈ ವಿಷಮ ಸಂದರ್ಭದಲ್ಲಿ, ಇದನ್ನು ಆಗುಮಾಡುವ ಪ್ರತಿಗಾಮಿ ರಾಜಕೀಯ-ಸಾಂಸ್ಕೃತಿಕ ಶಕ್ತಿಗಳು ಮತ್ತಷ್ಟು ಬಲಗೊಳ್ಳುತ್ತಿರುವುದೂ ಸಹ ಆತಂಕಕಾರಿ ವಿಷಯವಾಗಿದೆ. ಪ್ರಾಚೀನ ಸಮಾಜದ ಪಿತೃಪ್ರಧಾನ ಮೌಲ್ಯಗಳು, ಪುರುಷಾಧಿಪತ್ಯದ ಯಜಮಾನಿಕೆಯ ಧೋರಣೆ ಮತ್ತು ಅಹಮಿಕೆಗಳನ್ನು ಸಮಾಜದಲ್ಲಿ ವ್ಯವಸ್ಥಿತವಾಗಿ ಮರುಬಿತ್ತನೆ ಮಾಡುವ ಸಾಂಪ್ರದಾಯಿಕ ಸಾಂಸ್ಕೃತಿಕ ಶಕ್ತಿಗಳ ಪ್ರಯತ್ನಗಳು ಈ ಆತಂಕದ ಹೆಚ್ಚಳಕ್ಕೆ ಕಾರಣವೂ ಆಗಿದೆ. ಹಾಗಾಗಿಯೇ ದೇಶದ ಮಹಿಳಾ ಸಂಕುಲ ಅಲಹಾಬಾದ್‌ ನ್ಯಾಯಾಲಯದ ತೀರ್ಪಿನ ಬಗ್ಗೆ ಗಂಭೀರವಾದ ಆಲೋಚನೆಗೆ ಮುಂದಾಗಿದೆ.

ಸಾರ್ವಭೌಮ ಜನತೆಯ ಪರವಾಗಿ ಸಂಸತ್ತು ಮತ್ತು ವಿಧಾನಸಭೆಗಳನ್ನು ಪ್ರತಿನಿಧಿಸುವ “ಚುನಾಯಿತ ಜನಪ್ರತಿನಿಧಿಗಳು” ಕ್ರಮೇಣ ತಮ್ಮ ಜವಾಬ್ದಾರಿಯಿಂದ ಕಳಚಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಆಲೋಚನೆಗಳು ಮತ್ತಷ್ಟು ತೀಕ್ಷ್ಣವಾಗುತ್ತಿವೆ. ಸಮಾಜದಲ್ಲಿ ಕ್ಷೀಣಿಸುತ್ತಿರುವ ಲಿಂಗ ಸೂಕ್ಷ್ಮತೆ ಮತ್ತು ಮಹಿಳಾ  ಸಂವೇದನೆಯನ್ನು ಸರಿಪಡಿಸಬೇಕಾದ ಸಂವಿಧಾನದ ಕಾಲಾಳುಗಳು ತಮ್ಮ ನೈತಿಕ ಕರ್ತವ್ಯ ಮತ್ತು ಹೊಣೆಗಾರಿಕೆಯನ್ನೂ ಮರೆತು, ಹನಿಟ್ರ್ಯಾಪ್‌ನಂತಹ ಹೀನ ಚಟುವಟಿಕೆಗಳಿಗೆ ಬಲಿಯಾಗುತ್ತಿರುವ ಒಂದು ದುರಂತ ಕರ್ನಾಟಕದ ವಿಧಾನಸಭೆಯಲ್ಲೇ ಸಂಭವಿಸಿದೆ. ಈ ಪ್ರಕರಣವೂ ಈಗ ಸುಪ್ರೀಂಕೋರ್ಟ್‌ ಅಂಗಳಕ್ಕೆ ಹೋಗಿದೆ. ಹನಿ ಟ್ರ್ಯಾಪ್‌ನಂತಹ ಚಟುವಟಿಕೆಗಳ ಹಿಂದೆ ಯಾರಿದ್ದಾರೆ ಎನ್ನುವುದಕ್ಕಿಂತಲೂ ಅದರ ಬಲೆಗೆ ಸಿಲುಕಿರುವ ಜನಪ್ರತಿನಿಧಿಗಳ ನೈತಿಕ ವಿಶ್ವಾಸಾರ್ಹತೆ ಇಲ್ಲಿ ಪ್ರಶ್ನೆಗೊಳಗಾಗುತ್ತದೆ.

ಈಗಾಗಲೇ ಕರ್ನಾಟಕದ ರಾಜಕಾರಣ ಹಾಸನದ ಸಾಮೂಹಿಕ ಅತ್ಯಾಚಾರ ಪ್ರಕರಣಗಳಿಂದ (ಪೆನ್‌ ಡ್ರೈವ್‌ ಹಗರಣ), ಸದನದಲ್ಲಿ ನೀಲಿ ಚಿತ್ರಗಳ ವೀಕ್ಷಣೆ, ಅಕ್ರಮ ಭೂ ಕಬಳಿಕೆ ಇವೇ ಮುಂತಾದ ಅಪರಾಧಗಳಿಂದ ತುಂಬಿದ್ದು ಕಳಂಕಿತವಾಗಿದೆ. ಈ ವಿದ್ಯಮಾನವನ್ನು ಕೇವಲ ಒಂದು ರಾಜ್ಯ ಅಥವಾ ಪಕ್ಷಕ್ಕೆ ಸೀಮಿತಗೊಳಿಸಿ ನೋಡುವುದಕ್ಕಿಂತಲೂ ನಮ್ಮ ದೇಶದ ರಾಜಕೀಯ ವ್ಯವಸ್ಥೆ ನಡೆಯುತ್ತಿರುವ ಮಾದರಿಯ ದುಸ್ಥಿತಿಯಾಗಿ ನೋಡಬೇಕಿದೆ. ಬಂಡವಾಳ, ಸಿರಿವಂತಿಕೆ, ಔದ್ಯಮಿಕ ಹಿತಾಸಕ್ತಿ ಮತ್ತು ಇನ್ನೂ ಶ್ರೀಮಂತರಾಗುವ ಹೆಬ್ಬಯಕೆಗಳು ಭಾರತದ ರಾಜಕಾರಣವನ್ನು ದುರವಸ್ಥೆಗೆ ದೂಡುತ್ತಿದೆ. ಇಂತಹ ವಿಷಮ ಸನ್ನಿವೇಶದಲ್ಲಿ ದೇಶದ ನ್ಯಾಯಾಂಗ ತನ್ನೆಲ್ಲಾ ಕೊರತೆಗಳ ನಡುವೆಯೂ ನಾಗರಿಕರಲ್ಲಿ ವಿಶ್ವಾಸ ಮೂಡಿಸುವಂತೆ ಕಾಣುತ್ತಿದೆ.

ಭವಿಷ್ಯದ ಭರವಸೆಯೊಂದಿಗೆ

ನಿವೃತ್ತ ನ್ಯಾಯಮೂರ್ತಿ ಎನ್.‌ ವಿ. ರಮಣ ಅವರ ಆತಂಕಗಳು ಮತ್ತು ವಸ್ತುನಿಷ್ಠ ಅನಿಸಿಕೆಗಳನ್ನು ಕಾಕತಾಳೀಯ ಅಥವಾ ಸಾಂದರ್ಭಿಕ ಎಂದು ಭಾವಿಸದೆ, ದೇಶದ ನ್ಯಾಯಾಂಗ ವ್ಯವಸ್ಥೆ ಜನತೆಯ ವಿಶ್ವಾಸವನ್ನು ಇಮ್ಮಡಿಗೊಳಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗುವುದು ಇಂದಿನ ತುರ್ತು. ರಾಜಕೀಯ ನೆಲೆಯಲ್ಲಿ ತತ್ವ ಸಿದ್ಧಾಂತಗಳೆಲ್ಲವೂ ಅಧಿಕಾರಲೋಭದ ಆಡುಂಬೊಲದಲ್ಲಿ ಸಿಲುಕಿ ಅರ್ಥಹೀನವಾಗುತ್ತಿರುವ ಸಂದರ್ಭದಲ್ಲಿ ಸಂವಿಧಾನವೊಂದೇ ಭವಿಷ್ಯ ಭಾರತವನ್ನು ಕಟ್ಟುವ ಬುನಾದಿಯಾಗಿ ಪರಿಣಮಿಸಲಿದೆ. ಈ ಕಟ್ಟುವ ಪ್ರಕ್ರಿಯೆಗೆ ನ್ಯಾಯಾಂಗದ ವಿಶ್ವಾಸಾರ್ಹತೆ ಒಂದು ಪ್ರಧಾನ ಭೂಮಿಕೆಯಾಗುತ್ತದೆ. ಕೆಲವು ಅಪಭ್ರಂಶಗಳ ನಡುವೆಯೂ ಈ ಭೂಮಿಕೆ ಸದೃಢವಾಗಿ ಭಾರತವನ್ನು ಮುನ್ನಡೆಸಲಿದೆ ಎಂಬ ವಿಶ್ವಾಸದೊಂದಿಗೆ ನಾಗರಿಕರು ಪ್ರಜಾಪ್ರಭುತ್ವದ ಉಳಿವಿಗಾಗಿ ಶ್ರಮಿಸಬೇಕಿದೆ.

ಹಾಗಾದರೆ ಮಾತ್ರ ಈಗ ಸಮಾಜವನ್ನು ಮೇಲಿನಿಂದ ಕೆಳಗಿನವರೆಗೆ ವ್ಯಾಪಿಸಿರುವ ಪ್ರಾಚೀನ ನಡವಳಿಕೆಗಳಾದ ಪಿತೃಪ್ರಧಾನತೆ, ಪುರುಷಾಧಿಪತ್ಯ, ಅಸ್ಪೃಶ್ಯತೆ, ಜಾತಿ ಶ್ರೇಷ್ಠತೆ, ಲಿಂಗ ತಾರತಮ್ಯ, ಸಾಮಾಜಿಕ ಬಹಿಷ್ಕಾರ ಮೊದಲಾದ ಋಣಾತ್ಮಕ ಚಿಂತನಾವಾಹಿನಿಗಳಿಂದ ಮುಕ್ತಗೊಳಿಸಬಹುದು. ಈ ನಿಟ್ಟಿನಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವಿಗಾಗಿ ಹೋರಾಡುವ ಸಂಘಟನೆಗಳು ಒಕ್ಕೊರಲಿನ ಶಪಥ ಮಾಡುವುದೇ ಅಲ್ಲದೆ, ಕೈಜೋಡಿಸಿ, ಹೆಗಲಿಗೆ ಹೆಗಲಾಗಿ ಮುನ್ನಡೆಯಬೇಕಿದೆ.

ಇದನ್ನೂ ನೋಡಿ: ವಚನಾನುಭವ – 23 ಅನ್ನವ ನೀಡುವವರಿಂಗೆ ಧಾನ್ಯವೇ ಶಿವಲೋಕ | ಅಕ್ಕಮಹಾದೇವಿ ವಚನ Janashakthi Media

Donate Janashakthi Media

Leave a Reply

Your email address will not be published. Required fields are marked *