(ಶಾಂತರಸರ ಜನ್ಮಶತಮಾನೋತ್ಸವದಲ್ಲಿ ಮಾಡಿದ ಭಾಷಣ)
ರಹಮತ್ ತರೀಕೆರೆ
ಶಾಂತರಸರ ಸಾಹಿತ್ಯ ಮತ್ತು ವ್ಯಕ್ತಿತ್ವವನ್ನು ಕೊಂಡಿ, ಪರಂಪರೆ ಮತ್ತು ಕೇಂದ್ರ, ಎಂಬ ಪರಿಕಲ್ಪನೆಗಳಲ್ಲಿ ವಿಶ್ಲೇಷಿಸಬಹುದು. ಮೊದಲನೆಯದಾಗಿ ಅವರ ಕೊಂಡಿತನ. ಇದರಲ್ಲಿ ಶರಣ, ತತ್ವಪದಕಾರ ಹಾಗೂ ಉರ್ದು ಆಯಾಮಗಳಿವೆ. ಶಾಂತರಸ
ಅ. ಶಾಂತರಸರು ತುಂಗಭದ್ರಾ ಮತ್ತು ಕೃಷ್ಣಾನದಿಯ ನಡುವಿನ ನಾಡಿನವರು. ಚರಿತ್ರೆಯಲ್ಲಿ ಈ ನಾಡನ್ನು `ದೋಅಬ್’ (ಎರಡು ಹೊಳೆಗಳ ನಾಡು) ಎಂದು ಕರೆಯಲಾಗಿದೆ. ಶಾಂತರಸರು ಇದನ್ನು ಎಡತೊರೆಯ ನಾಡು ಎಂದರು. ಅವರು ೨೦ನೇ ಶತಮಾನದಲ್ಲಿ ಎಡದೊರೆಯ ನಾಡಿನ ವಿಶಿಷ್ಟ ಪರಂಪರೆಯ ಕೊಂಡಿಯಾಗಿದ್ದರು. ಅವರ ಹೆಸರು ವಚನ ಪರಂಪರೆಗೆ ಸೇರಿದ ಹೆಸರು ಶಾಂತಯ್ಯ ಎಂದು. ಅದನ್ನು ಅವರು `ಶಾಂತರಸ’ ಎಂದು ಬದಲಿಸಿಕೊಂಡರು. ಹೆಸರು ಶಾಂತರಸ. ಆದರೆ ವಾಸ್ತವದಲ್ಲಿ ಅವರು ತಟ್ಟನೆ ಕೋಪ ಬರಿಸಿಕೊಳ್ಳುತ್ತಿದ್ದ ಉಗ್ರರಸ. ತಾತ್ವಿಕವಾಗಿ ಶಾಶ್ವತ ಭಿನ್ನಮತೀಯ. ಅವರ ವೈಚಾರಿಕತೆಯು ಕಲ್ಯಾಣದ ಶರಣರ ಮತ್ತು ಹೈದರಾಬಾದ್ ಕರ್ನಾಟಕದ ತತ್ವಪದಕಾರರ ವೈಚಾರಿಕ ಪರಂಪರೆಯಿಂದ ಪುಷ್ಟಿ ಪಡೆದಿತ್ತು. ಕರ್ನಾಟಕದಲ್ಲಿ ಕಾರಂತರು, ಕುವೆಂಪುರವರು ಗೌರೀಶ ಕಾಯ್ಕಿಣಿಯವರು ರೂಪಿಸಿದ ವೈಚಾರಿಕ ಪರಂಪರೆ ಈಗ ಖಿಲವಾಗಿದೆ. ಇವತ್ತು ವಿಚಾರವಂತರನ್ನು ಬಡಿಯಬಹುದು, ಕೊಲ್ಲಬಹುದು ಎನ್ನುವಲ್ಲಿಗೆ ಸಮಾಜ ಬಂದು ನಿಂತಿದೆ. ಕಲಬುರ್ಗಿ ಗೌರಿಯರ ಕೊಲೆ ಹೀಗೇ ಆಗಿದ್ದು. ಕುವೆಂಪು ಅವರು ವೈಚಾರಿಕ ಪರಂಪರೆಯ ಕೊಂಡಿಯಾಗುವ ಕಾಲಕ್ಕೆ ಅವರಿಗೆ ಉಪನಿಷತ್ತು, ರಾಮಕೃಷ್ಣಾಶ್ರಮ ಮತ್ತು ಪಾಶ್ಚಿಮಾತ್ಯ ವೈಚಾರಿಕತೆಗಳ ಪ್ರಭಾವವಿತ್ತು. ಕಾರಂತರಿಗೂ ಕೂಡ ಪಾಶ್ಚಿಮಾತ್ಯ ವೈಚಾರಿಕತೆಯ ಪ್ರಭಾವವಿತ್ತು. ಆದರೆ ಶಾಂತರಸರ ವೈಚಾರಿಕತೆಯು ದೋಅಬ್ ಅತ್ಯಂತ ಸ್ಥಳೀಯ ಪರಂಪರೆಯಿಂದ ರೂಪುಗೊಂಡಿತ್ತು. ಅವರು ಜೀವನದುದ್ದಕ್ಕೂ ಶರಣತತ್ವದ ಪ್ರತಿಪಾದಕರಾಗಿದ್ದರು. ಅವರ ಎರಡು ಅತ್ಯುತ್ತಮ ಲೇಖನಗಳೆಂದರೆ ‘ಎಡದೊರೆ ನಾಡಿನ ಅನುಭಾವಿಗಳು’ ಮತ್ತು ‘ಬಸವ ಪೂರ್ವಯುಗದ ಶರಣರು’. ಅವರಿಗೆ ಬಸವಣ್ಣನವರ ಬಗ್ಗೆ ಇರುವಷ್ಟೇ ಗೌರವ ಉಳಿದ ಶರಣರ ಮೇಲೂ ಇತ್ತು. ತಮ್ಮ ಲೇಖನಗಳಲ್ಲಿ ಚರ್ಚೆಗೊಳಗಾಗದೆ ಹೊರಗಡೆ ಉಳಿದಿರುವ ಶರಣರ ಬಗ್ಗೆಯೆ ಅವರು ಬರೆದರು. ಕನ್ನಡ ವಿಶ್ವವಿದ್ಯಾನಿಲಯ ಪ್ರಕಟಿಸಿರುವ ಅವರ ‘ಉಲಿವಮರ’ ಪುಸ್ತಕದಲ್ಲಿ ಶರಣರಾದ ಮಾರಯ್ಯ, ಚೆನ್ನಯ್ಯ, ತೆಲುಗುಜೊಮ್ಮಯ್ಯ, ದುಗ್ಗಳೆ, ನಿಂಗಮ್ಮ-ಹೀಗೆ ಅಷ್ಟೊಂದು ಖ್ಯಾತರಲ್ಲದ ಶರಣರ ಮೇಲೆ ಲೇಖನಗಳಿವೆ. ಬಹಳ ಮುಖ್ಯವಾಗಿ ಮಹಿಳೆಯರ ಪಾತ್ರದ ಬಗ್ಗೆ ಅವರು ಬರೆದರು. ಶಾಂತರಸರ ಲೋಕದೃಷ್ಟಿಯ ಸಂಕೇತಗಳು ಇವು. ಅವರು ಒಂದು ಕಡೆ `ಎಲ್ಲವೂ ಬಸವಣ್ಣನವರ ಕಾಲದಲ್ಲಿಯೇ ಆಯಿತು ಎಂಬ ಕುರುಡು ನಂಬಿಕೆ ಇದೆ. ಅದಕ್ಕಿಂತ ಮೊದಲೇ ಹಿರಿಯ ಶರಣರು ಶರಣತತ್ವಕ್ಕೆ ಬುನಾದಿ ಹಾಕಿದ್ದರು’ ಎಂದು ಬರೆಯುತ್ತಾರೆ. ಬಹಳ ಧೈರ್ಯದ ಮಾತಿದು. ವಚನ ಚಳುವಳಿ ಸಾಮೂಹಿಕವಾದುದು ಎಂದು ನಾವು ತತ್ವ ಹೇಳುತ್ತೇವೆ. ಆದರೆ ವಚನಗಳ ವ್ಯಾಖ್ಯಾನ ಮಾಡುವಾಗ ಬಸವಕೇಂದ್ರಿತವಾಗಿ ಅಲ್ಲಮಕೇಂದ್ರಿತವಾಗಿ ಆಲೋಚನೆ ಮಾಡುತ್ತೇವೆ. ಆದರೆ ಶಾಂತರಸರು ಹೇಳುತ್ತಾರೆ- “ಬಸವ ಪೂರ್ವಯುಗದ ಶರಣರನ್ನು ಬಿಟ್ಟುಕೊಟ್ಟು ನಾವು ಎಲ್ಲಾ ಚಾರಿತ್ರಿಕ ಘಟನೆಗಳನ್ನು ಬಸವಣ್ಣನ ತಲೆಗೆ ಕಟ್ಟಬಾರದು. ಶರಣ ಚಳುವಳಿಯ ಬುನಾದಿ ಈ ಅಜ್ಞಾತ ಶರಣರು’ ಎಂದು.
ಇದನ್ನೂ ಓದಿ : ಪರ್ಯಾಯ ಬೆಳವಣಿಗೆಯ ಮಾದರಿ ಬೇಕಾಗಿದೆ ಶಾಂತರಸ
ಶಾಂತರಸರ ಕೊಂಡಿತನದ ಎರಡನೆಯ ಆಯಾಮ, ಕರ್ನಾಟಕದ ಆರೂಢರು ಅವಧೂತರ ವೈಚಾರಿಕತೆಯ ವಾರಸುದಾರಿಕೆ. ಎಂ.ಎಂ. ಕಲಬುರ್ಗಿಯವರಿಗೆ ಅವಧೂತ-ಆರೂಢರ ಬಗ್ಗೆ ಆಕ್ಷೇಪ ಇತ್ತು-ಇವರು ಬಸವಾದಿ ಶರಣರ ಚಿಂತನೆಯನ್ನು ಕರಪ್ಟ್ ಮಾಡಿದರು ಎಂದು. ಆದರೆ ಶಾಂತರಸರು ಶರಣ ವೈಚಾರಿಕತೆ, ಅನುಭಾವ-ಅಧ್ಯಾತ್ಮದ ಪರಂಪರೆಯು ಹೈದರಾಬಾದ್ ಕರ್ನಾಟಕದ ತತ್ವಪದಕಾರರಲ್ಲಿ ಮುಂದುವರೆದಿದೆ ಎಂದು ಭಾವಿಸಿದ್ದವರು. `ಅರೋಲಿ ಬಿಜಲಿ’ ಎಂಬ ಅಜ್ಞಾತತತ್ವ ಪದಕಾರನ ಕುರಿತ ಅವರ ಲೇಖನ ಗಮನಿಸಬೇಕು. `ಬಿಜಲಿ’ ಎಂಬುದು ಒಬ್ಬ ತತ್ವಪದಕಾರನ ಕಾವ್ಯನಾಮ. ಅರೋಲಿ ಅವನ ಊರು. ಮುಸ್ಲಿಂ ಈತ. ಇಂತಹ ಅನಾಮಧೇಯರಾದ ಅನೇಕ ತತ್ವಪದಕಾರರನ್ನು ಹುಡುಕಿ ಹುಡುಕಿ ಅವರು ಬರೆದರು.
ಪರಂಪರೆಯನ್ನು ಅನುಸಂಧಾನ ಮಾಡುವ ಅವರ ಅಪ್ರೋಚ್ ವಿಶಿಷ್ಟವಾಗಿತ್ತು. ಈಗ ನಾವು `ಸಬಾಲ್ಟರ್ನ್ ಅಂತ ಕರೆಯುವ, ಅಂಚಿಗೆ ತಳ್ಳಲ್ಪಟ್ಟ ಸಂಗತಿಗಳ ಮೇಲೆ ಸಂಶೋಧನೆ ಮಾಡುವ ಪದ್ಧತಿಯಿದೆ. ಇದೊಂದು ಪರಿಕಲ್ಪನೆಯಾಗಿ ಶೈಕ್ಷಣಿಕ ಲೋಕಕ್ಕೆ ಪರಿಚಯಗೊಳ್ಳುವುದಕ್ಕೆ ಮೊದಲೇ ಶಾಂತರಸರು, ಈ ಮಾರ್ಗದಲ್ಲಿ ಕೆಲಸ ಮಾಡಿದ್ದರು. ಕೂಡಲೂರು ಬಸವಲಿಂಗ ಶರಣರು ಯಾಕೆ ಕನ್ನಡದ ದೊಡ್ಡಕವಿ ಅಂತ ಅವರೊಂದು ಕಡೆ ವಾದ ಮಾಡುವುದುಂಟು. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಪಂಪ ರನ್ನರನ್ನು ದೊಡ್ಡ ಕವಿಗಳು ಎಂದು ವರ್ಗೀಕರಿಸುವ ಪದ್ಧತಿಯಿದೆ. ಇದೇ ಹೊತ್ತಲ್ಲಿ, ಹಾಗಲ್ಲ ಸಾಹಿತ್ಯ ಪರಂಪರೆಯನ್ನು ನೋಡುವುದು ಎಂದು ಶಾಂತರಸರು ತೋರಿಸಿಕೊಟ್ಟರು. ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಅಧ್ಯಕ್ಷರಾಗಿದ್ದಾಗ ಜಗತ್ತಿನ ದೊಡ್ಡ ದಾರ್ಶನಿಕರ ಮೇಲೆ `ಮುತ್ತಿನಹಾರ’ ಎಂಬ ಸರಣಿ ಪುಸ್ತಕಗಳನ್ನು ಬರೆಸಿ ಪ್ರಕಟಿಸಿದರು. ಈ ಪುಸ್ತಕಗಳನ್ನು ನೋಡುವಾಗ ಕುವೆಂಪುರವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕುಲಪತಿಗಳಾಗಿದ್ದ `ಗೃಹಸರಸ್ವತಿ ಮಾಲೆ’ ಹೆಸರಲ್ಲಿ ಪ್ರಕಟಿಸಿದ ಪುಸ್ತಕಗಳು ನೆನಪಾಗುತ್ತವೆ. ಯಾರು ಸರಸ್ವತಿ ಮಂದಿರವಾದ ವಿಶ್ವವಿದ್ಯಾಲಯಗಳಿಗೆ ಹೋಗಲು ಸಾಧ್ಯವಾಗುವುದಿಲ್ಲವೊ, ಅಂತಹವರ ಬಳಿ ಸರಸ್ವತಿಯೇ ಹೋಗಬೇಕು ಎಂಬುದು ಅಲ್ಲಿನ ಕಲ್ಪನೆ. ಆ ಪುಸ್ತಕಗಳು ಕರ್ನಾಟಕದ ಜನಸಾಮಾನ್ಯರಿಗೆ ಜಗತ್ತಿನ ಸಾಹಿತ್ಯವನ್ನು ಪರಿಚಯಿಸುವ ಕೆಲಸವನ್ನು ಮಾಡಿದವು. ಪ್ರಭುಶಂಕರರು ಖಲೀಲ್ ಗಿಬ್ರಾನ್ ಬಗ್ಗೆ ಬರೆದ ಶ್ರೇಷ್ಠ ಪುಸ್ತಕವು ಈ ಮಾಲೆಯಲ್ಲಿ ಪ್ರಕಟವಾಯಿತು.
ಕೊಂಡಿಯ ಮೂರನೆಯ ಆಯಾಮ ಉರ್ದು ಸಾಹಿತ್ಯದ್ದು. ಉರ್ದು ಬಗ್ಗೆ ಸಾರ್ವಜನಿಕ ವಲಯದಲ್ಲಿ ಅದರಲ್ಲೂ ಅಕ್ಷರಸ್ಥರಲ್ಲಿ ತಪ್ಪುಕಲ್ಪನೆಗಳಿವೆ. ಆದರೆ ಅದೊಂದು ಭಾರತೀಯ ಭಾಷೆ, ಸಂಸ್ಕೃತ ಮತ್ತು ಪಾರ್ಸಿ ಸೋದರ ಭಾಷೆಗಳು. ಇವುಗಳ ವ್ಯಾಕರಣ ಒಂದೇ ಎಂಬ ಮೂಲಭೂತ ಸಂಗತಿಗಳೇ ಕೆಲವರಿಗೆ ಗೊತ್ತಿಲ್ಲ. ಜ್ಞಾನಪೀಠ ಪಡೆದ ಉರ್ದು ಲೇಖಕರಾದ ಪ್ರೇಮಚಂದ್, ಗೋಪಿಚಂದ್ ನಾರಂಗ, ಗುಲ್ಜಾರ್, ರಘಪತಿ ಗೋರಖಪುರಿ ಮುಸ್ಲಿಮರಲ್ಲ. ಒಂದು ಭಾಷೆಯನ್ನು ಒಂದು ಸಮುದಾಯಕ್ಕೆ ಸಮೀಕರಿಸುವ ಪ್ರವೃತ್ತಿ ೧೯೪೭ ನಂತರ ಹೆಚ್ಚಾಯಿತು. ಅದು ಈಗಲೂ ಇದೆ. ಈ ಪೂರ್ವಗ್ರಹಿಕೆಯನ್ನು ಮುರಿದು `ಉರ್ದು ಭಾರತೀಯ ಭಾಷೆ. ಉರ್ದು ಸಾಹಿತ್ಯ ಭಾರತೀಯ ಸಾಹಿತ್ಯ ಪರಂಪರೆ’ ಎಂದು ಪರಿಭಾವಿಸಿ ಅದರ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದ ಮಾಡಿದವರಲ್ಲಿ ಶಾಂತರಸರು ಒಬ್ಬರು. ಕರ್ನಾಟಕದ ಸಂಸ್ಕೃತಿ ಪರಂಪರೆಯನ್ನು ದಕ್ಷಿಣದಲ್ಲಿ ಗೋವಿಂದ ಪೈಗಳು, ಕುವೆಂಪು, ಡಿ.ಎಲ್.ಎನ್; ಉತ್ತರದಲ್ಲಿ ಶಂಬಾ ಜೋಶಿಯವರು ವ್ಯಾಖ್ಯಾನಿಸುವ ಕಾಲಕ್ಕೆ, ಹೈದರಾಬಾದ್ ಕರ್ನಾಟಕದಲ್ಲಿ ಕರ್ನಾಟಕದ ಸಂಸ್ಕೃತಿಯ ನಿರ್ವಚನವನ್ನು ಮಾಡಿದವರು ಕಪಟರಾಳು ಕೃಷ್ಣರಾಯರು ಮತ್ತು ಶಾಂತರಸರು. ಇವರ ನಿರ್ವಚನದಲ್ಲಿ ಉರ್ದು ಭಾಷೆ ಮತ್ತು ಸಾಹಿತ್ಯಗಳು ಸೇರಿಕೊಂಡಿದ್ದವು. ಉರ್ದುವಿನಲ್ಲಿ ಪಾಂಡಿತ್ಯವಿದ್ದ ಪಂಡಿತ ತಾರಾನಾಥರು ‘ಪ್ರೇಮಾಯತನ’ ಎಂಬ ಆಶ್ರಮವನ್ನು ತುಂಗಭದ್ರಾ ನದಿಯ ದಡದಲ್ಲಿ ಕಟ್ಟಿದ್ದರು. ಅದು ಕರ್ನಾಟಕ ಕಂಡ ಅದ್ಭುತವಾದ ಪ್ರಯೋಗಗಳಲ್ಲಿ ಒಂದು. ತಾರಾನಾಥರ ಶಿಕ್ಷಣ ಸಂಸ್ಥೆಯಲ್ಲೆ ಶಾಂತರಸರು ಶಿಕ್ಷಕರಾಗಿದ್ದರು. ಮುದ್ದಣ ಮಂಜರ್ ಎಂಬ ಶಾಂತರಸರ ಗೆಳೆಯರು, ಇಕ್ಬಾಲರ ಕಾವ್ಯವನ್ನು ಕನ್ನಡಕ್ಕೆ ತಂದರು. ಗಂಗಾವತಿಯಲ್ಲಿದ್ದ ರಾಘವೇಂದ್ರರಾವ್ `ಜಜ್ಬ್’ ಎಂಬ ಕವಿ, ತಮ್ಮ ಗಜಲ್ ಓದಲು ಉತ್ತರ ಭಾರತದ ಮುಶಾಯಿರಾಗಳಿಗೆ ಹೋಗುತ್ತಿದ್ದರು. ಅವರ `ಉರ್ದು ಮತ್ತು ಫಾರಸಿ ಸಾಹಿತ್ಯ’ ಪುಸ್ತಕವನ್ನು ಮೈಸೂರು ವಿಶ್ವವಿದ್ಯಾಲಯ ಪ್ರಕಟ ಮಾಡಿದೆ. ಅದು ಮರುಮುದ್ರಣ ಆಗಬೇಕಾದ ಪುಸ್ತಕ. ಹೈದರಾಬಾದ್ ನಿಜಾಮರ ಆಳ್ವಿಕೆಯಲ್ಲಿ ರೆವಿನ್ಯೂ ಇಲಾಖೆಯಲ್ಲಿ ಕುಲಕರ್ಣಿಕೆ ಕೆಲಸ ಮಾಡುತ್ತಿದ್ದ ಬಹುತೇಕ ಮಾಧ್ವ ಬ್ರಾಹ್ಮಣರು, ಆ ಕಾಲದ ಉರ್ದು ಪಂಡಿತರಾಗಿದ್ದರು. ರಾಘವೇಂದ್ರರಾವ್ ಜಜ್ಬ್ ಈ ಪರಂಪರೆಗೆ ಸೇರಿದವರು. ಇವರು ಸೋಮೇಶ್ವರ ಶತಕವನ್ನು ಉರ್ದುವಿಗೆ ಅನುವಾದ ಮಾಡಿದರು. ಸುರಪುರ ತಾಲೂಕಿನಲ್ಲಿ ತಿಮ್ಮಾಪುರ, ರಂಗಂಪೇಟೆ ಎರಡು ಹಳ್ಳಿಗಳಿವೆ. ಈ ಎರಡೂ ಊರುಗಳ ತುಂಬಾ ಕನ್ನಡ ಮತ್ತು ಉರ್ದು ಕವಿಗಳಿದ್ದಾರೆ. ಹೀಗೆ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಉರ್ದು ಭಾಷೆ ಮತ್ತು ಸಾಹಿತ್ಯಗಳು, ಒಂದು ಧಾರ್ಮಿಕ ಸಮುದಾಯದ ಆಚೆ ಹೋಗಿ ಸರ್ವಧರ್ಮದ ಪಂಡಿತ ಕವಿ ಪರಂಪರೆಯನ್ನು ನಿರ್ಮಾಣ ಮಾಡಿದವು. ಶಾಂತರಸರು ಶರಣರು, ತತ್ವಪದಕಾರರು ಮತ್ತು ಉರ್ದು ಸಾಹಿತ್ಯಗಳನ್ನು ಕೂಡಿಸಿದ ಧಾರೆಯನ್ನು ಮುಂದುವರೆಸಿದರು. ಪ್ರಭುತ್ವದ ದಬ್ಬಾಳಿಕೆಗೆ ಪ್ರತಿರೋಧ. ಆದರೆ ಆ ಪ್ರದೇಶದಲ್ಲಿದ್ದ ಸಂಸ್ಕೃತಿಯ ಜತೆ, ಭಾಷೆಯ ಜತೆ ಸಖ್ಯ-ಈ ದ್ವಂದ್ವಾತ್ಮಕ ನಿಲುವನ್ನು ಶಾಂತರಸರು ನಿಭಾಯಿಸಿದರು. ಕನ್ನಡದಲ್ಲಿ ಅವರು ಗಜಲ್ ಪ್ರಯೋಗ ಮಾಡಿದರು. ಕನ್ನಡದಲ್ಲಿ ಸೃಷ್ಟಿಯಾಗುತ್ತಿರುವ ಗಜಲ್‌ಗಳ ಬಗ್ಗೆ ಅವರಿಗೆ ತಕರಾರುಗಳಿದ್ದವು. ಗಜಲಿನ ಮೂಲಭೂತ ನಿಯಮಗಳ ಬಗ್ಗೆ ಗೊತ್ತಿಲ್ಲದವರು ಗಜಲ್ ಬರೆಯುತ್ತಿದ್ದಾರೆ ಎನ್ನುತ್ತಿದ್ದರು.
ಯಾವುದೇ ಸಾಹಿತ್ಯ ಸಂಸ್ಕೃತಿಯಲ್ಲಿ ಚರಿತ್ರೆ ಮತ್ತು ಪರಂಪರೆಯನ್ನು ಅದರ ಲೇಖಕರು ಹೇಗೆ ಅನುಸಂಧಾನ ಮಾಡುತ್ತಾರೆ ಎಂಬುದು ಮಹತ್ವದ ಸಂಗತಿ. ಈ ದಿಸೆಯಲ್ಲಿ ಶಾಂತರಸರು ಹಿಡಿದ ಹಾದಿಯನ್ನು ಗಮನಿಸಬಹುದು. ಕನ್ನಡದಲ್ಲಿ ಚರಿತ್ರೆಯನ್ನು ಅನುಸಂಧಾನಿಸುವ ಮೂರು ಮಾದರಿಗಳಿವೆ. ಅ. ಆಳುವವರ್ಗದ ಸಮಸ್ತ ದೋಷವನ್ನು ಮರೆತು ಅದರ ಸಾಧನೆಗಳನ್ನು ಮಾತ್ರ ವೈಭವೀಕರಿಸುವ ವಂದಿಮಾಗಧ ಮಾದರಿ. ಆ. ಆಳುವವರ್ಗದ ಜೊತೆಗೆ ನಾಡಿನ ಧರ್ಮ ವಾಸ್ತುಶಿಲ್ಪ ಸಂಸ್ಕೃತಿಗಳನ್ನು ಸಮೀಕರಿಸಿ, ಅದನ್ನು ನಿರಾಕರಿಸುವ ಮತ್ತು ಒಪ್ಪುವ ಮಾದರಿ. ಈ ಸಮಸ್ಯಾತ್ಮಕ ಮಾದರಿಯು, ಜನರ ಕೊಡುಗೆಗಳನ್ನು ಮರೆಯುತ್ತದೆ. ಚರಿತ್ರೆಯ ಕೃತ್ಯಗಳಿಗೆ ವರ್ತಮಾನದಲ್ಲಿ ನಿರ್ದಿಷ್ಟ ಸಮುದಾಯ ಬೆಲೆ ತೆರಬೇಕು ಎಂದೂ ಸೂಚಿಸುತ್ತದೆ. ಇ. ಆಳುವ ವರ್ಗದ ಜೊತೆಗಿನ ವಿಮರ್ಶಾತ್ಮಕ ಪ್ರತಿರೋಧ ತೋರುತ್ತಲೇ, ಆಯಾ ದೇಶ/ರಾಜ್ಯದೊಳಗಿದ್ದ ಸಾಮಾನ್ಯ ಜನ ಸಮುದಾಯದ ಜೊತೆಗಿನ ಸಖ್ಯದ ಮಾದರಿ. ಇವುಗಳಲ್ಲಿ ಶಾಂತರಸರದು ಮೂರನೇ ಮಾದರಿ. ಇದನ್ನು ಅವರು ರಜಾಕಾರರನ್ನು ಕುರಿತು ಬರೆದ ಕತೆಗಳಲ್ಲಿ ಗಮನಿಸಬಹುದು. ಹೈದರಾಬಾದ್ ಸಂಸ್ಥಾನವು ಭಾರತದೊಳಕ್ಕೆ ವಿಲೀನವಾಗುವ ಮುಂಚೆ ನಡೆದ ದಾರುಣವಾದ ಹಿಂಸಾತ್ಮಕವಾದ ಘಟನೆಯೇ ರಜಾಕಾರ್ ದಂಗೆ. ಈ ದಂಗೆಯ ಸಂದರ್ಭವನ್ನು ವಸ್ತುವಾಗಿಟ್ಟುಕೊಂಡು ಅಮರಚಿಂತಕರು `ಬೂಟುಗಾಲಿನ ಸದ್ದು’ ಮತ್ತು ಮಲ್ಲಿಕಾರ್ಜುನ ಹಿರೇಮಠರು `ಹಾವಳಿ’ ಕಾದಂಬರಿಗಳನ್ನು ರಚಿಸಿದರು. ಲಂಕೇಶ್ ‘ದಾಳಿ’, ಮಾಸ್ತಿಯವರು `ಸುಶೀಲಾ ರಜಾಕಾರ್’ ಎಂಬ ಸಣ್ಣಕತೆ ಬರೆದರು.
ಕನ್ನಡದಲ್ಲಿ ಚರಿತ್ರೆಯ ಭಾರವನ್ನು ನಿವಾರಿಸಿಕೊಂಡು ಬರೆದವರೆಂದರೆ ಲಂಕೇಶ್, ಬೇಂದ್ರೆ, ಕಾರಂತರು. ಆಳುವ ವರ್ಗಗಳು ಯಾವುದೇ ಜಾತಿ-ಧರ್ಮಕ್ಕೆ ಸೇರಿದ್ದರೂ ಅವರ ಗುಣ ಒಂದೇ ಸಂಪತ್ತಿನ ಕ್ರೂಢೀಕರಣ, ರಾಜ್ಯ ವಿಸ್ತರಣೆ, ದಬ್ಬಾಳಿಕೆ, ಸೈನಿಕ ಆಚರಣೆ. ಇವೆಲ್ಲವೂ ರಾಜಕೀಯ ವ್ಯವಸ್ಥೆಯಲ್ಲಿ ಇದ್ದದ್ದೇ. ಯಾವುದೇ ದೇಶದ ಸರ್ವಾಧಿಕಾರಿ ಇಡೀ ದೇಶದ ಜನರನ್ನು ಪ್ರತಿನಿಧಿಸುವುದಿಲ್ಲ. ಆಳುವ ವರ್ಗದ ಪ್ರತಿನಿಧಿ ಅವನು. ಅವನಿಗಾಗಿ ಇಡೀ ದೇಶವನ್ನು ಜನರನ್ನು ದ್ವೇಷಿಸಬೇಕಿಲ್ಲ. ಯಾಕೆಂದರೆ ಅಲ್ಲಿ ಬೇರೆದೇಶದ ಜನರ ನೋವು-ನಲಿವಿಗೆ ಮಿಡಿವ ಮಾನವತಾವಾದಿ ಲೇಖಕರು ಜನರು ಇರುತ್ತಾರೆ.ಅಮೆರಿಕದಲ್ಲಿ ದುಷ್ಟರಾದವರು ಅಧ್ಯಕ್ಷರಾಗಿ ಆಳುತ್ತಿದ್ದ ಕಾಲದಲ್ಲೇ ಥೋರೊ- ಎಲಿಯಟ್ ಇದ್ದರು. ಅಮೆರಿಕದ ಸಾಮ್ರಾಜ್ಯಶಾಹಿಯ ಕಟುಟೀಕಾಕಾರ ಚಾಂಸ್ಕಿ ಇದ್ದಾರೆ. ಅನೇಕ ಸಲ ರಾಜಕೀಯ ಕಾರಣಕ್ಕಾಗಿ ಒಂದು ದೇಶದ ಜೊತೆಗಿರುವ ನಮ್ಮ ಮುನಿಸು, ಅಲ್ಲಿರುವ ವಿದ್ವತ್ ಕಲೆ ಸಂಸ್ಕೃತಿ-ಪರಂಪರೆಗಳ ಜೊತೆ ಅನುಸಂಧಾನಿಸುವ ಕಣ್ಣನ್ನೇ ಕಳೆದುಬಿಡುತ್ತದೆ. ಶಾಂತರಸರು ಬಹಳ ಎಚ್ಚರಿಕೆಯಿಂದ ಹೈದರಾಬಾದ್ ಕರ್ನಾಟಕದಲ್ಲಿ ಈ ಕಣ್ಣು ಮುಚ್ಚದಂತೆ ತೆರೆಸಿದರು. ಚರಿತ್ರೆಯನ್ನು ವರ್ತಮಾನದ ನಾವು ನೋಡಬೇಕಾದ ವಿಧಾನ ಯಾವುದು ಎಂದು ತೋರಿಸಿದರು. ಇಂಗ್ಲೆಗ್ಲೆಂನ ವಸಾಹತುಶಾಹಿ ಆಳಿಕೆಯ ಜತೆಗೆ ಸಂಘರ್ಷ ಮಾಡುತ್ತಿದ್ದಾಗಲೇ ನಮ್ಮ ಹಿರೀಕರು ವರ್ಡ್ಸವರ್ತ್ ಶೇಕ್ಸಪಿಯರ್ ಶೆಲ್ಲಿ ಜತೆಗೆ ಸ್ನೇಹದ ಅನುಸಂಧಾನ ಮಾಡಿದರು. ಇದು ಶಾಂತರಸರ ತಾಳಿದ ಅತ್ಯಂತ ವಿವೇಕದ ಹಾದಿ. ಅವರು ಎಲ್ಲಾ ಆಳುವ ವರ್ಗಗಳನ್ನು ಒಟ್ಟಾಗಿ ಗ್ರಹಿಸುತ್ತಿದ್ದರು. ಅಲ್ಲಿ ಜನರ ಪಾಡು, ದುಃಖ-ದುಮ್ಮಾನ, ಸಂಭ್ರಮಗಳನ್ನು ಅನುಸಂಧಾನ ಮಾಡುತ್ತಿದ್ದರು.
ಇದನ್ನೂ ಓದಿ : ಭಾರತದ ಭವ್ಯ ಪರಂಪರೆ ಎತ್ತಿಹಿಡಿದ ಆ ನಾಲ್ವರು ಮಹಿಳೆಯರು
ಇವರಲ್ಲೆಲ್ಲ ಲಂಕೇಶರ `ದಾಳಿ’ ಕತೆಯ ದೃಷ್ಟಿಕೋನ ವಿಶಿಷ್ಟವಾದುದು. ರಜಾಕಾರರ ಸೈನಿಕ ಜೀವ ಉಳಿಸಿಕೊಳ್ಳಲು ಒಂದು ಮನೆಯನ್ನು ಹೊಕ್ಕಿದ್ದಾನೆ. ಅವನನ್ನು ಅಡಗಿಸಿ ಇಟ್ಟುಕೊಂಡಿರುವ ಆ ಮನೆಯ ಹೆಣ್ಣಿಗೆ ಅವನ ಜತೆ ಪ್ರೇಮ ಮೂಡಿದೆ. ಆದರೆ ಮನೆಯ ಹೊರಗಡೆ ಜನಜಂಗುಳಿ ಅವನನ್ನು ಕೊಲ್ಲಲು ಬೆಂಕಿ ಹಿಡಿದು ನಿಂತಿದೆ. ಇಂತಹ ಪರಿಸ್ಥಿತಿಯಲ್ಲಿ ಆತ-ಆಕೆ ಏನು ಮಾಡಬೇಕು? ಚರಿತ್ರೆಯ ಇಕ್ಕಟ್ಟಿನಲ್ಲಿ ಜನ ಹೇಗೆ ವರ್ತಿಸುತ್ತಾರೆ, ನಿರ್ಣಯ ತೆಗೆದುಕೊಳ್ಳುತ್ತಾರೆ. ಅವರ ತಲ್ಲಣಗಳು ಬದಲಾಗುತ್ತವೆ ಎಂಬುದನ್ನು ಗ್ರಹಿಸುವುದು ಕತೆಗೆ ಮುಖ್ಯವಾಗುತ್ತದೆ. ಇದು ಸಾಹಿತ್ಯ ಚರಿತ್ರೆಯನ್ನು ಮಾನವೀಕರಿಸುವ ವಿಧಾನ. ಶಾಂತರಸರ `ಬಡೇಸಾಬ್ ಪುರಾಣ’ ಕತೆಯಲ್ಲೂ ಈ ದೃಷ್ಟಿಕೋನ ಕೆಲಮಟ್ಟಿಗೆ ಇದೆ. ರಜಾಕಾರ ಸೈನ್ಯದಲ್ಲಿ ಎಲ್ಲಾ ಸಮುದಾಯದ ಸೈನಿಕರೂ ಇದ್ದರು. ಅದೊಂದು ಸಂಕೀರ್ಣವಾದ ರಚನೆ. ಊರಗೌಡರ ಫ್ಯೂಡಲ್ ವ್ಯವಸ್ಥೆಯ ಜಮೀನ್ದಾರರ ವಿರುದ್ಧ ದಲಿತರೂ ಕೂಡ ಆ ಸೈನ್ಯದಲ್ಲಿ ಸೇರಿದ್ದರು ಎಂಬ ಸತ್ಯವನ್ನು ಕತೆ ಕಾಣಿಸುತ್ತದೆ. ಆದರೆ ಕಡೆಗೂ ನಮ್ಮ ಮನಸ್ಸಿನಲ್ಲಿ ಉಳಿಯುವುದು ಲಂಕೇಶರ ಕತೆಯೇ.
ರಾಯಚೂರನ್ನು ಕಲ್ಯಾಣ ಕರ್ನಾಟಕದ ಸೀಮೆಯನ್ನು ಒಂದು ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸುವಲ್ಲಿ ಶಾಂತರಸರು ಬಹಳ ದುಡಿದವರು. ಕರ್ನಾಟಕದ ಚರಿತ್ರೆಯನ್ನು ಬರೆಯುವಾಗ ನಾವು ಪ್ರಸಿದ್ಧ ಲೇಖಕರ ಚರಿತ್ರೆಯನ್ನು ಬರೆಯುತ್ತೇವೆ. ಅಂತಹ ಲೇಖಕರು ರೂಪುಗೊಳ್ಳುವ ಮತ್ತು ಪ್ರಸರಣವಾಗುವ ಹಿನ್ನೆಲೆಯಲ್ಲಿ ಆ ಊರುಗಳಲ್ಲಿ ಅನಾಮಿಕರಾದ ಕೆಲವರು ಶಿಕ್ಷಕರು, ಜನಕ್ಕೆ ತಮ್ಮ ಶಿಷ್ಯರಿಗೆ ಒಳ್ಳೆಯ ಪುಸ್ತಕ ಕೊಟ್ಟು ಓದುಸಂಸ್ಕೃತಿಯನ್ನು ರೂಪಿಸಿರುತ್ತಾರೆ. ಕಲಾವಿದರನ್ನ ಕರೆಸಿ ಸಂಗೀತ ಕಾರ್ಯಕ್ರಮ ಏರ್ಪಡಿಸಿ ಅಭಿರುಚಿ ನಿರ್ಮಾಣಮಾಡಿರುತ್ತಾರೆ. ತಮ್ಮ ಊರನ್ನು ಸೃಜನಶೀಲ ಮಾಡಿರುತ್ತಾರೆ. ಅಂತಹ ಮಹನೀಯರ ಮೂಲಕ ಕರ್ನಾಟಕದ ಚರಿತ್ರೆಯನ್ನು ಕಟ್ಟಬೇಕಿದೆ. ಬಿಜಾಪುರದ ಪ್ರೊ.ಹಿಪ್ಪರಗಿ, ಗಜೇಂದ್ರಗಡದ ಪ್ರೊ. ಕೆಂಚರೆಡ್ಡಿ, ಚೊಕ್ಕಾಡಿಯ ಸುಬ್ರಾಯರು ಇಂತಹವರು. ಶಾಂತರಸರು ಕೂಡ ಶಿಕ್ಷಕರಾಗಿದ್ದರು ಎನ್ನುವುದು ಇಲ್ಲಿ ಸ್ಮರಿಸಬೇಕು. ಇವರು ಬೇಂದ್ರೆಯವರ ಗೆಳೆಯರ ಬಳಗದ ಪ್ರೇರಣೆಯಿಂದ ರಾಯಚೂರು ಸೀಮೆಯಲ್ಲಿ ಸಂಗಾತಿಗಳ ಬಳಗವನ್ನು ಕಟ್ಟಿದರು. ಜಯತೀರ್ಥ ರಾಜಪುರೋಹಿತರು, ಶಂಕರಗೌಡ ಬೆಟ್ಟದೂರು, ಮುದ್ದಣ್ಣ ಮಂಜರ್, ಪಂಚಾಕ್ಷರಿ ಹಿರೇಮಠ, ಬೆಟದೂರಿನ ಚನ್ನಬಸವಪ್ಪನವರು, ದೇವೇಂದ್ರಕುಮಾರ ಹಕಾರಿಯವರು ಇದರಲ್ಲಿ ಇದ್ದರು. ಈ ಗುಂಪು ಇಡೀ ರಾಯಚೂರನ್ನು ಮೂರು ದಶಕಗಳ ಕಾಲ ಸಾಂಸ್ಕೃತಿಕ ಕೇಂದ್ರವನ್ನಾಗಿ ಕ್ರಿಯಾಶೀಲಗೊಳಿಸಿಟ್ಟಿತ್ತು. ಒಂದು ಸಂದರ್ಶನದಲ್ಲಿ ಶಾಂತರಸರು ಹೇಳುತ್ತಾರೆ. ‘ನಾವೆಲ್ಲ ಜೊತೆಗೆ ಕಲೆತಾಗ ಉರ್ದುವಿನಲ್ಲಿ ಮಾತನಾಡುತ್ತಿದ್ದೆವು’ ಎಂದು. ಈ ಗುಂಪಿಗೆ ಮಲ್ಲಿಕಾರ್ಜುನ ಮನ್ಸೂರ್, ಗಜಲ್ ಗುಂಡಮ್ಮ ಮತ್ತು ಸಿದ್ಧರಾಮ ಜಂಬಲದಿನ್ನಿಯಂತಹ ಶ್ರೇಷ್ಠ ಗಾಯಕರು ಸಂಪರ್ಕದಲ್ಲಿದ್ದರು. ಶಾಂತಿನಿಕೇತನದಿಂದ ಚಿತ್ರಕಲೆ ಕಲಿತುಕೊಂಡು ಬಂದಿದ್ದ ಶಂಕರಪ್ಪಗೌಡರದು ಈ ಗುಂಪಿನಲ್ಲಿದ್ದರು ಸಾಹಿತ್ಯ, ಸಂಗೀತ, ಚಿತ್ರಕಲೆ ಈ ಮೂರು ಕಲಾಮಾಧ್ಯಮಗಳಿಗೆ ಸೇರಿದ ಪ್ರತಿಭಾವಂತರು ಒಗ್ಗೂಡಿದ್ದರು. ಇದರ ಕೇಂದ್ರದಲ್ಲಿ ಶಾಂತರಸ ಇದ್ದರು. ದಕ್ಷಿಣ ಕರ್ನಾಟಕದಲ್ಲಿ ಕನ್ನಡ ಸಾಹಿತ್ಯ ಮತ್ತು ಕರ್ನಾಟಕ ಸಂಗೀತಗಳ ಜತೆ ತೆಲುಗು ಸಂಸ್ಕೃತಿಯನ್ನು ರಾಳ್ಳಪಳ್ಳಿ, ಟಿ.ಎಸ್.ವೆಂಕಣ್ಣಯ್ಯ ಮೊದಲಾದವರು ಬೆಸೆದರು. ಡಿ.ವಿ.ಜಿ, ಬಿಜಿಎಲ್ ಪು.ತಿ.ನ., ಮಾಸ್ತಿ ಅವರು ತಮಿಳು ಸಂಸ್ಕೃತಿಯನ್ನು ಕರ್ನಾಟಕ ಸಂಸ್ಕೃತಿಯ ಜತೆ ಬೆಸೆದರು. ಧಾರವಾಡ ಬೆಳಗಾವಿ ಸೀಮೆಯಲ್ಲಿ ಶಂಬಾ, ಬೇಂದ್ರೆಯವರು ಮರಾಠಿ ಸಂಸ್ಕೃತಿಯ ಜತೆಗೆ ಕರ್ನಾಟಕ ಸಂಸ್ಕೃತಿಯನ್ನು ಬೆಸೆದರು. ಕಲ್ಯಾಣ ಕರ್ನಾಟಕದ ಭಾಗದಲ್ಲಿ ಶಾಂತರಸರು ಮತ್ತು ಅವರ ಗೆಳೆಯರು ಕರ್ನಾಟಕ ಸಂಸ್ಕೃತಿಯನ್ನು ಉರ್ದು ಭಾಷೆ ಮತ್ತು ಸಾಹಿತ್ಯದ ಜೊತೆಗೆ ಅನುಸಂಧಾನ ಮಾಡಿಸಿದರು. ಇದು ಕರ್ನಾಟಕ ಸಂಸ್ಕೃತಿಯ ಬಹುತ್ವವನ್ನು ರೂಪಿಸಿದ ಸಂಗತಿ.
ಶಾಂತರಸರು ಹಿರಿಯ ಲೇಖಕರಾಗಿ ರಾಯಚೂರು ಸೀಮೆಯಲ್ಲಿ ಅನೇಕ ಲೇಖಕರನ್ನು ರೂಪಿಸಿದರು. ಚೆನ್ನಣ್ಣ ವಾಲೀಕಾರ, ಜಂಬಣ್ಣ ಅಮರಚಿಂತ, ಅಮರೇಶ ನುಗಡೋಣಿ ಮೊದಲಾದವರು ಅವರ ಗರಡಿಯಲ್ಲಿ ಪಳಗಿದವರು. ಆದರೆ ಶಾಂತರಸರ ಕೊನೆಗಾಲದಲ್ಲಿ ಈ ಲೇಖಕರು ಶಾಂತರಸರ ಬದಲಾದ ಸ್ವಭಾವದ ಬಗ್ಗೆ ಭಿನ್ನಮತದ ನೋವಿನ ಮಾತುಗಳನ್ನು ಆಡುವುದನ್ನು ನಾನು ಗಮನಿಸಿದೆ. ತಾಯ್ತನದಿಂದ ತಮಗಿಂತ ಕಿರಿಯ ಲೇಖಕರನನು ರೂಪಿಸಿದ ಶಾಂತರಸರಲ್ಲಿ ಯಾವ ಬದಲಾವಣೆಯಾಯಿತೊ ನಮಗೆ ಸರಿಯಾಗಿ ತಿಳಿಯದು. ಆದರೆ ಅವರ ಜತೆ ಭಿನ್ನಮತೀಯರಾಗಿ ಸಿಡಿದುಹೋದ ಲೇಖಕರು ಕನ್ನಡದ ಶ್ರೇಷ್ಠ ಲೇಖಕರಾಗಿ ಬೆಳೆದರು. ಕರ್ನಾಟಕದಲ್ಲಿ ಈಗಲೂ ಅತಿ ಹೆಚ್ಚು ಕಥೆಗಾರರನ್ನು ರೂಪಿಸಿದ ಕೀರ್ತಿ ರಾಯಚೂರು ಸೀಮೆಯದು. ಇದರ ಹಿಂದೆ ಶಾಂತರಸರ ಪರೋಕ್ಷ ಪ್ರಭಾವವಿದೆ. ತಮಗಿಂತ ಭಿನ್ನವಾಗಿ ಬರೆಯತೊಡಗಿದ ಈ ಕಥೆಗಾರರಿಂದ ಶಾಂತರಸರು ಏನನ್ನು ಕಲಿತರು ಎಂಬ ಪ್ರಶ್ನೆ ಬಾಕಿ ಉಳಿದಿದೆ.
ಶಾಂತರಸರು ರಾಯಚೂರು ಸೀಮೆಯಲ್ಲಿ ಕಟ್ಟಿದ ಸಾಂಸ್ಕೃತಿಕ ಕೇಂದ್ರಕ್ಕೆ ಪ್ರಾದೇಶಿಕ ನ್ಯಾಯದ ಆಯಾಮವಿತ್ತು. ಬ್ರಿಟಿಶರಿಂದ ರಾಜಕೀಯ ಸ್ವಾತಂತ್ರ್ಯ ಬಂದ ಬಳಿಕ `ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ?’ ಎಂದು ದಲಿತ ಕವಿಗಳು ಪ್ರಶ್ನೆ ಹಾಕಿದ್ದು ನಮಗೆ ತಿಳಿದಿದೆ. ಇದರಂತೆ ಕರ್ನಾಟಕದ ಏಕೀಕರಣವಾದ ಬಳಿಕ, `ಯಾರಿಗೆ ಬಂತು ಎಲ್ಲಿಗೆ ಬಂತು ಐವತ್ತಾರರ ಏಕೀಕರಣ?’ ಎಂಬ ಪ್ರಶ್ನೆಯನ್ನು ಕರ್ನಾಟಕದ ಬೇರೆಬೇರೆ ಭಾಗದ ಜನ ಎತ್ತಿದರು. ಧಾರವಾಡದಲ್ಲಿ ಪಾಟೀಲ ಪುಟ್ಟಪ್ಪನವರು ಈ ಪ್ರಶ್ನೆಯನ್ನು ಎತ್ತಿದರೆ, ರಾಯಚೂರು ಸೀಮೆಯಲ್ಲಿ ಶಾಂತರಸ ಮತ್ತು ಅವರ ಗೆಳೆಯರು ಎತ್ತಿದರು. ಬೆಂಗಳೂರು-ಮೈಸೂರು ಅಧಿಕಾರ ಕೇಂದ್ರಗಳಲ್ಲಿ, ಸಾಂಸ್ಕೃತಿಕ ಚಟುವಟಿಕೆಗಳು ಕೇಂದ್ರೀಕರಣಗೊಂಡಿದ್ದನ್ನು ಇವರು ಪ್ರತಿಭಟಿಸಿದರು. ಲಂಕೇಶ್ ಅವರು ಹೈದರಾಬಾದ್ ಕರ್ನಾಟಕದ ಕವಿಗಳನ್ನು ಬಿಟ್ಟು `ಅಕ್ಷರ ಹೊಸಕಾವ್ಯ’ ಪ್ರಕಟಿಸಿದಾಗ ಶಾಂತರಸರು ಇದನ್ನು ಪ್ರತಿಭಟಿಸಿ ‘ಬೆನ್ನಹಿಂದಿನ ಬೆಳಕು’ ಸಂಕಲನ ತಂದರು. ದಕ್ಷಿಣ ಕರ್ನಾಟಕದವರಿಗೆ `ನಿಮ್ಮ ಮುಂದೆ ಅಷ್ಟೇ ಅಲ್ಲ ನಿಮ್ಮ ಬೆನ್ನ ಹಿಂದೆಯೂ ಬೆಳಕಿದೆ ಗಮನಿಸಿ ಎಂದು ಎಚ್ಚರಿಸಿದರು. `ಬೆನ್ನಹಿಂದಿನ ಬೆಳಕು’ ಕನ್ನಡದ ಶ್ರೇಷ್ಠ ಕವಿತಾ ಸಂಕಲನ ಅಲ್ಲ. ಆದರೆ ಅದರ ಹಿಂದಿನ ಪ್ರತಿಭಟನೆಗೆ ಚಾರಿತ್ರಿಕವಾದ ಮಹತ್ವವಿದೆ. ಶಾಂತರಸರು ಏಕೀಕರಣೋತ್ತರ ಕರ್ನಾಟಕದಲ್ಲಿ ಹೈದರಾಬಾದ್ ಕರ್ನಾಟಕದ ಸೇನಾನಿಯ ಹಾಗೆ ಇದ್ದರು. ಸಾಹಿತ್ಯ, ಸಂಗೀತ, ಚಿತ್ರಕಲೆ ಜೊತೆ ಅವರ ಆಕ್ಟಿವಿಸಂ ಕೂಡ ಅವರ ವ್ಯಕ್ತಿತ್ವದ ಭಾಗವಾಗಿತ್ತು. ಅವರು ರಾಜ್ಯಪ್ರಶಸ್ತಿಯನ್ನು ಸರ್ಕಾರಕ್ಕೆ ವಾಪಸ್ಸು ಕೊಟ್ಟರು. ಇವತ್ತು ಸಂವಿಧಾನದ ತಿದ್ದುಪಡಿಯಾಗಿ ೩೭೧ಜೆ ಕಾನೂನು ಬಂದಿದೆ. ಹೈದರಾಬಾದ್ ಕರ್ನಾಟಕದ ಜನರಿಗೆ ಇದರಿಂದ ಅನುಕೂಲವಾಗಿದೆ. ಇದಕ್ಕಾಗಿ ನಡೆದ ಹೋರಾಟಕ್ಕೆ ಸಾಂಸ್ಕತಿಕ ಆಯಾಮ ಕೊಟ್ಟವರಲ್ಲಿ ಶಾಂತರಸರು ಒಬ್ಬರು. ಒಂದು ವಿಶ್ವವಿದ್ಯಾಲಯ ಮಾಡುವ ಕೆಲಸವನ್ನು ಒಬ್ಬ ಶಿಕ್ಷಕ-ಲೇಖಕ ಒಂದು ತಂಡ ಕಟ್ಟಿಕೊಂಡು ಮಾಡಿದರು ಎಂಬುದನ್ನು ನಾವು ಆದರದಿಂದ ಸ್ಮರಿಸಬೇಕಿದೆ.
ಲೇಖಕರ ಜನ್ಮ ಶತಮಾನೋತ್ಸವ, ಸಾವು ಅಥವಾ ಪ್ರಶಸ್ತಿಗಳು, ಸಾಹಿತ್ಯ ಲೋಕದಲ್ಲಿ ಹೊಸ ಸಂಚಲನವನ್ನು ಮೂಡಿಸುತ್ತವೆ. ಪೂರ್ವಸೂರಿಗಳ ಕೊಡುಗೆಗಳನ್ನು ಸ್ಮರಿಸುವುದು ಮತ್ತು ಅವರ ಸಾಹಿತ್ಯವನ್ನು ಮರುಓದುವುದು, ಅದನ್ನು ಹೊಸ ತಲೆಮಾರಿಗೆ ದಾಟಿಸುವುದು ಇವುಗಳಲ್ಲಿ ಒಂದು. ಆದರೆ ಈ ಬಗೆಯ ಸನ್ನಿವೇಶಗಳು ಭಾವನಾತ್ಮಕ ಮನೋಭಾವ ಮೀರಿಕೊಂಡು, ಗತಿಸಿದ ಲೇಖಕರನ್ನು ವೈಭವೀಕರಿಸದೆ ಅವರ ಸಾಹಿತ್ಯವನ್ನು ವಿಮರ್ಶಾತ್ಮಕವಾಗಿ ಅನುಸಂದಾನ ಮಾಡುವ ಪ್ರವೃತ್ತಿಯನ್ನು ಕೂಡ ಹುಟ್ಟಿಸಬೇಕಿದೆ. ಹಿರಿಯರ ತಾತ್ವಿಕ ಸೃಜನಶೀಲ ಮಿತಿಗಳನ್ನು ಗುರುತಿಸುವುದು ದೋಷಾರೋಪಣೆಯಲ್ಲ. ಬದಲಿಗೆ ಆ ಮಿತಿಗಳನ್ನು ದಾಟಲು ವರ್ತಮಾನದವರಿಗೆ ಒಡ್ಡುವ ಸವಾಲು. ಈ ಅರ್ಥದಲ್ಲಿ ಎಂ. ಎಸ್. ಆಶಾದೇವಿ, ವಿನಯಾ ಅವರು ಶರಣ ಪರಂಪರೆಯ ಬಗ್ಗೆ ಅಪಾರ ಗೌರವ ಇಟ್ಟುಕೊಂಡು ಎತ್ತಿದ ಪ್ರಶ್ನೆಗಳನ್ನು ನಾವು ಗಮನಿಸಬೇಕಿದೆ. ಇಂತಹ ಪ್ರಶ್ನೆಗಳನ್ನು ಸ್ವತಃ ಶಾಂತರಸರೂ ಎತ್ತಿದ್ದಾರೆ. ಹೀಗಾಗಿ ಶತಮಾನೋತ್ಸವ ಕಾರ್ಯಕ್ರಮಗಳು ಭಾವನಾತ್ಮಕ ವಾತಾವರಣದ ಆಚೆ ಹೋಗಿ ಮೌಲ್ಯಮಾಪನ ಪ್ರಜ್ಞೆಯಿಂದ ಲೇಖಕರನ್ನು ನೋಡುವುದಕ್ಕೆ ಪ್ರೇರಣೆ ಕೊಡಬೇಕಾಗಿದೆ. ನಾವು ನಮ್ಮ ಪೂರ್ವಜರ ಬಗ್ಗೆ ಮಾಡುವ ವಿಮರ್ಶೆಗಳು ನಮಗೆ ನಾವೇ ಮಾಡಿಕೊಳ್ಳುವ ಸ್ವವಿಮರ್ಶೆಗಳು.
ಇದನ್ನೂ ನೋಡಿ : ಪಹಲ್ಗಾಮ ಹತ್ಯೆ ಮತ್ತು ಸೇನಾ ಸಂಘರ್ಷ, ಯುದ್ಧೋನ್ಮಾದ ಮತ್ತು ಉನ್ಮಾದ ರಾಷ್ಟ್ರೀಯತೆ…Janashakthi Media ಶಾಂತರಸ