ಡಾ: ಎನ್.ಬಿ.ಶ್ರೀಧರ
ಆನೆಗಳು ಸಂಘಜೀವಿಗಳು. ಅವು ಸಂಕೀರ್ಣವಾದ, ಶ್ರೇಣೀಕೃತ ಸಾಮಾಜಿಕ ರಚನೆಯನ್ನು ಹೊಂದಿವೆ. ಹೆಣ್ಣು ಆನೆಗಳು ತಮ್ಮ ಇಡೀ ಜೀವನವನ್ನು ಬಿಗಿಯಾದ ಮಾತೃಪ್ರಧಾನ ಕುಟುಂಬಗಳಲ್ಲಿ ಜೀವಿಸುತ್ತವೆ.
ಆನೆಗಳ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಸಸ್ಥನಿಗಳಲ್ಲಿ ಅತ್ಯಂತ ದೊಡ್ಡ ಪ್ರಾಣಿ ಆನೆ ಮತ್ತು ಇದರ ತೂಕ 3.5-4 ಟನ್. ಪ್ರಪಂಚದ 37ದೇಶಗಳಲ್ಲಿ ಆನೆಗಳು ವಾಸವಾಗಿವೆ. ಸಧ್ಯ ಪ್ರಪಂಚದಲ್ಲಿ 4,15,೦೦೦ ಆನೆಗಳಿದ್ದು ಇವುಗಳಲ್ಲಿ 5೦,೦೦೦ ಆನೆಗಳು ಏಶ್ಯನ್ ಆನೆಗಳಾಗಿದ್ದು ಉಳ್ದವು ಆಫ್ರಿಕನ್ ಆನೆಗಳಾಗಿವೆ.
ಒಂದು ಆನೆ ಒಂದು ದಿನದಲ್ಲಿ 300 ಕೆಜಿ ಆಹಾರವನ್ನು ತಿನ್ನತ್ತದೆ ಮತ್ತು 1೦೦-2೦೦ ಲೀಟರ್ ನೀರನ್ನು ಕುಡಿಯುತ್ತದೆ. ಜಾಸ್ತಿ ನೀರು ಮೇಲಿಂದ ಮೇಲೆ ಬೇಕಾಗುವುದರಿಂದ ಇವು ಸದಾ ನೀರಿನ ಮೂಲಗಳ ಬಳಿ ಇರುತ್ತವೆ. ಆನೆಗಳು ತಿನ್ನುವ ಹೆಚ್ಚಿನ ಆಹಾರವು ಜೀರ್ಣವಾಗದೆ ಹೋಗುವುದರಿಂದ, ಅವುಗಳ ಸಗಣಿಯು ಜೀರುಂಡೆಗಳು ಮತ್ತು ಮಂಗಗಳಂತಹ ಇತರ ಪ್ರಾಣಿಗಳಿಗೆ ಆಹಾರವನ್ನು ನೀಡುತ್ತದೆ. ಅವು ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಆಹಾರ ಸೇವಿಸಿ ಮಧ್ಯಾಹ್ನದ ಸಮಯದಲ್ಲಿ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತವೆ. ಆನೆಯ ಸೊಂಡಿಲಿನಲ್ಲಿ 2.5 ಗ್ಯಾಲನ್ ನೀರು ಶೇಖರವಾಗುತ್ತದೆ. ಕೆಲವೊಮ್ಮೆ ನಿಂತಿರುವಾಗಲೂ ನಿದ್ರಿಸಬಹುದು. ಅವು ಸುಮಾರು 3-4 ಗಂಟೆ ನಿದ್ರೆಮಾಡುತ್ತವೆ. ಆನೆಯು ತನ್ನ ಸೊಂಡಿಲಿನಿಂದ ನೀರನ್ನು ಎತ್ತಿ ಬಾಯಲ್ಲಿ ಹೊಯ್ದುಕೊಳ್ಳುತ್ತದೆ. ಸೊಂಡಿಲನ್ನು ನೀರನ್ನು ಹೀರಲು ಅದರಿಂದ ಸಾಧ್ಯವಿಲ್ಲ. ಆನೆಗಳು ಎಂದಿಗೂ ಸಹ ಜಿಗಿಯಲಾರವು. ಇದಕ್ಕೆ ಅವುಗಳ ಭಾರದ ದೇಹವೇ ಕಾರಣ.
ನಮ್ಮಲ್ಲಿ ಹುಲಿ ರಾಷ್ಟ್ರೀಯ ಪ್ರಾಣಿಯಾದರೆ ಥೈಲ್ಯಾಂಡಿನಲ್ಲಿ ಆನೆ ರಾಷ್ಟ್ರೀಯ ಪ್ರಾಣಿ. ಆನೆಯ ಒಂದೊಂದು ಹಲ್ಲುಗಳು ಸುಮಾರು 3 ಕಿಲೋ ತೂಗುತ್ತವೆ. ಆನೆಗಳ ಮೆದುಳು 4-6 ಕಿಲೊ ತೂಗುತ್ತದೆ ಮತ್ತು ಇದು ಭೂಮಿಯ ಮೇಲಿರುವ ಎಲ್ಲಾ ಪ್ರಾಣಿಗಳ ಮೆದುಳಿಗಿಂತ ಭಾರವಾಗಿದೆ. ಆನೆಗಳು ಅವುಗಳ ಸುಮಾರು 1೦೦೦ ಸ್ನೇಹಿತರುಗಳನ್ನು ಸುಲಭವಾಗಿ ನೆನಪಿಡುತ್ತವೆ ಮತ್ತು ಆಹಾರ ಎಲ್ಲಿ ದೊರೆಯುತ್ತದೆ ಎಂಬುದನ್ನು ಸಹ ಬಹಳ ದಿನಗಳವರೆಗೆ ನೆನಪಿಡುತ್ತವೆ.
ಏಶ್ಯಾದ ಆನೆಗಳು 48 ವರ್ಷ ಬದುಕಿದರೆ ಆಫ್ರಿಕಾದ ಆನೆಗಳು 6೦-7೦ ವರ್ಷ ಬದುಕುತ್ತವೆ. ಆನೆಯ ದಂತವು ಕೋರೆಹಲ್ಲಿನ ವಿಸ್ತರಿಸಿದ ಭಾಗವಾಗಿದೆ ಮತ್ತು 4೦-5೦ ಕಿಲೋ ತೂಗುತ್ತದೆ. ದಂತವು ಜೀವಮಾನವಿಡಿ ಬೆಳೆಯುತ್ತಾ ಇರುತ್ತದೆ. ಆನೆಯ ದಂತಕ್ಕಾಗಿಯೇ ನಡೆಯುವ ವಧೆಯಿಂದ ಅವುಗಳ ಸಂತತಿ ಬಹಳಷ್ಟು ಕಡಿಮೆಯಾಗಿದೆ.
ಆನೆಯ ಸೊಂಡಿಲು ಒಂದು ಬಹುಪಯೋಗಿ ಅಂಗವಾಗಿದ್ದು ಇದರಲ್ಲಿ ಸರಿಸುಮಾರು 1 ಲಕ್ಷ ವಿವಿಧ ಮಾಂಸಖಂಡಗಳಿವೆ. ಇದರ ತೂಕ ಸರಿ ಸುಮಾರು 1೦೦-15೦ ಕಿಲೋ ತೂಗುತ್ತದೆ. ಸೊಂಡಿಲು ಇಲ್ಲದ ಆನೆಯ ಬದುಕು ದುಸ್ತರ ಮತ್ತು ಅದು ಕ್ರಮೇಣ ಸಾಯುತ್ತದೆ.
ಆನೆಗಳು ಅವುಗಳ ಕಾಲಿನಿಂದ ಉಂಟು ಮಾಡುವ ಕಂಪನದ ಮೂಲಕ ಸಂಪರ್ಕ ಸಾಧಿಸುತ್ತವೆ. ಕೆಲವೊಮ್ಮೆ ಘೀಳಿಡುವ ಮೂಲಕವೂ ಸಹ ಅವು ಸಂವಹನವನ್ನು ಸಾಧಿಸುತ್ತವೆ. ಅದಕ್ಕೆ ಬೇಕಾದಷ್ಟು ಆಹಾರ ಸೇವಿಸಬೇಕೆಂದರೆ ಒಂದು ಆನೆ ದಿನವೊಂದಕ್ಕೆ ಸರಾಸರಿ 2೦ ಕಿಮೀ ಚಲಿಸಬೇಕಾಗುತ್ತದೆ. ಆದರೆ ನಮೀಬಿಯಾದ ಎಟೋಶಾ ಪ್ರದೇಶದಲ್ಲಿ 18೦ ಕಿಮೀ ದೂರವನ್ನು ಕ್ರಮಿಸಿದ ದಾಖಲೆ ಇದೆ. ಇದಕ್ಕೆ ವ್ಯತಿರಿಕ್ತವಾಗಿ ಆನೆಗಳು ಬೇಸಿಗೆ ಅಥವಾ ಕ್ಷಾಮ ಪರಿಸ್ಥಿತಿಯಲ್ಲಿ ಆಹಾರ ಹುಡುಕಿಗೊಂಡು ನಿರ್ದಿಷ್ಟ ಹಾದಿಯಲ್ಲಿ ನೂರಾರು ಕಿಮಿ ವಲಸೆ ಹೋಗುತ್ತವೆ. ಈ ವಲಸೆಯ ಹಾದಿಗಳು ನಿರ್ದಿಷ್ಠವಾಗಿದ್ದು ಸುಲಭಕ್ಕೆ ಬದಲಾಗುವುದಿಲ್ಲ. ಮನುಷ್ಯರು ಕಾಡು ಕಡಿದು ರಸ್ತೆ, ರೈಲು, ಆಣೆಕಟ್ಟು, ಗಣಿಗಾರಿಕೆ ಮಾಡಿದರೆ ಅವುಗಳ ದಾರಿ ತಪ್ಪಿ ಹೋಗಿ ದಿಕ್ಕಾಪಾಲಾಗಿ ಹಸಿವಿನಿಂದ ಸಾಯಲೂ ಬಹುದು.
ಆನೆಗಳು ಸಂಘಜೀವಿಗಳು. ಅವು ಸಂಕೀರ್ಣವಾದ, ಶ್ರೇಣೀಕೃತ ಸಾಮಾಜಿಕ ರಚನೆಯನ್ನು ಹೊಂದಿವೆ. ಹೆಣ್ಣು ಆನೆಗಳು ತಮ್ಮ ಇಡೀ ಜೀವನವನ್ನು ಬಿಗಿಯಾದ ಮಾತೃಪ್ರಧಾನ ಕುಟುಂಬಗಳಲ್ಲಿ ಜೀವಿಸುತ್ತವೆ. ಇಂತಹ ಗುಂಪುಗಳನ್ನು ಅತ್ಯಂತ ಹಿರಿ ಹೆಣ್ಣಾನೆ ಮುನ್ನಡೆಸುತ್ತದೆ. ಆಕೆ ಸಾಯುವವರೆಗೂ ಗುಂಪಿನ ನಾಯಕಿಯಾಗಿ ಉಳಿಯುತ್ತಾಳೆ. ಅವಳ ಅಧಿಕಾರಾವಧಿಯು ಮುಗಿದ ನಂತರ, ಹಿರಿಯ ಮಗಳು ಅವಳ ಸ್ಥಾನವನ್ನು ತೆಗೆದುಕೊಳ್ಳುತ್ತಾಳೆ. ಹೆಣ್ಣಾನೆಯ ಗುಂಪುಗಳಲ್ಲಿ “ಶುಶ್ರೂಷಾ ದಾದಿಗಳು” (ಹೆಚ್ಚಾಗಿ ಚಿಕ್ಕಮ್ಮಂದಿರು) ” ಮತ್ತು “ಬಾಲಾಪರಾಧಿ-ಆರೈಕೆ” ಘಟಕಗಳು ಇರುತ್ತವೆ. ಎರಡಕ್ಕಿಂತ ಹೆಚ್ಚು ಹೆಣ್ಣಾನೆ ಮತ್ತು ಅವುಗಳ ಸಂತತಿಯನ್ನು ಹೊಂದಿರುವ ಗುಂಪನ್ನು “ಅವಿಭಕ್ತ ಕುಟುಂಬ” ಎಂದು ಕರೆಯಬಹುದು. ಆಫ್ರಿಕನ್ ಅರಣ್ಯ ಆನೆಗಳ ಗುಂಪುಗಳು ಸಾಮಾನ್ಯವಾಗಿ ಒಂದರಿಂದ ಮೂರು ತಲೆಮಾರುಗಳ ಹೆಣ್ಣುಗಳು ಒಬ್ಬ ನಾಯಕಿಯ ಅಧೀನದಲ್ಲಿ ಬಾಳುತ್ತವೆ.
ಇದಕ್ಕೆ ವಿರುದ್ಧವಾಗಿ ಗಂಡಾನೆಯೊಂದು ಪ್ರಬುದ್ಧವಾಗುತ್ತಿದ್ದಂತೆ, ತಾಯಿಯ ಗುಂಪನ್ನು ಶಾಶ್ವತವಾಗಿ ಬಿಟ್ಟು ಇಲ್ಲಾ ಒಂಟಿಯಾಗಿಯೋ ಅಥವಾ ಇತರ ಗಂಡು ಗುಂಪಿನೊಂದಿಗೋ ಬಾಳಲಾರಂಭಿಸುತ್ತದೆ. ಕಾರಣ ಇದಕ್ಕೆ “ಒಂಟಿ ಸಲಗ” ಎಂದು ಹೆಸರು ಬಂದಿರುವುದು.
ಇದನ್ನೂ ಓದಿ: ವಿಸ್ಮಯಕಾರಿ ಗೆದ್ದಲು ಪ್ರಪಂಚ !!
ಈ ಪುರುಷ ಗುಂಪುಗಳಲ್ಲಿ ಪ್ರಾಬಲ್ಯದ ಶ್ರೇಣಿಕೃತ ಸಾಮಾಜಿಕ ಬಾಳ್ವೆ ಇರುತ್ತದೆ. ಗುಂಪಿನ ಒಡೆಯನ ಸ್ಥಾನ, ಅದರ ವಯಸ್ಸು, ಗಾತ್ರ ಮತ್ತು ಲೈಂಗಿಕ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಗಂಡು ಆನೆಗಳು ಸಂಗಾತಿಗಾಗಿ ಸ್ಪರ್ಧಿಸದೇ ಇರುವಾಗ ಸಾಕಷ್ಟು ಸ್ನೇಹದಿಂದ ಇರುತ್ತವೆ. ವಯಸ್ಸಾದ ಗಂಡು ಆನೆಗಳು ಕಿರಿಯ ಆನೆಗಳ ಆಕ್ರಮಣಶೀಲತೆ ಮತ್ತು “ವಿಕೃತ” ನಡವಳಿಕೆಯನ್ನು ಮತ್ತು ನಮ್ಮ ಇಂದಿನ ಯುವ ಹುಡುಗರಲ್ಲಿ ಇರಬಹುದಾದ “ಉಡಾಳ” ಬುದ್ಧಿಯನ್ನು ಯುವ ಆನೆಗಳಲ್ಲಿ ಪೋಲೀಸರಂತೆ ನಿಗ್ರಹಿಸುತ್ತವೆ. ಅತಿದೊಡ್ಡ ಪುರುಷ ಗುಂಪುಗಳು ಸುಮಾರು 150 ಸದಸ್ಯರನ್ನೂ ಹೊಂದಿರಬಹುದು.
ಆನೆಗಳು ಬಹುಪತ್ನಿತ್ವವನ್ನು ಅನುಸರಿಸುತ್ತವೆ. ಹೆಚ್ಚಿನ ಸಂಯೋಗಗಳು ಮಳೆಗಾಲದಲ್ಲಿ ಸಂಭವಿಸುತ್ತವೆ. ಎಲ್ಲಾ ಪ್ರಾಣಿಗಳಂತೆ ಬೆದೆಗೆ ಬಂದ ಹೆಣ್ಣಾನೆ ತನ್ನ ಮೂತ್ರ ಮತ್ತು ಯೋನಿ ಸ್ರವಿಸುವಿಕೆಯಲ್ಲಿ ಫೆರೋಮೋನ್‌ಗಳನ್ನು ಬಳಸಿ ಸಂಯೋಗಕ್ಕೆ ತನ್ನ ಸಿದ್ಧತೆಯನ್ನು ಸೂಚಿಸುತ್ತದೆ. ಗಂಡೊಂದು ಸಂಭಾವ್ಯ ಸಂಗಾತಿಯೊಬ್ಬಳನ್ನು ಅನುಸರಿಸುತ್ತದೆ. ಈ ಹಂತದಲ್ಲಿ ಗಂಡಾನೆ “ಸಂಗಾತಿ-ರಕ್ಷಕ” ಎಂದು ಕರೆಯಲ್ಪಡುವ ನಡವಳಿಕೆಯಲ್ಲಿ ತೊಡಗಿಕೊಳ್ಳುತ್ತವೆ. ಈ ನಡವಳಿಕೆಯಲ್ಲಿ ಅದು ಬೆದೆಗೆ ಬಂದ ಹೆಣ್ಣುಗಳನ್ನು ಅನುಸರಿಸುತ್ತದೆ ಮತ್ತು ಅದನ್ನು ಇತರ ಪುರುಷ ಆನೆಗಳಿಂದ ರಕ್ಷಿಸುತ್ತದೆ.
ಯುವ ಹೆಣ್ಣಾನೆಗಳಿಗೆ ಮದ ಬಂದಿರುವ ಗಂಡಾನೆಯ ನಡೆವಳಿಕೆಗಳು ಗಾಬರಿಯನ್ನುಂಟು ಮಾಡಬಾರದೆಂದು ಅವಳ ಇತರ ಹೆಣ್ಣು ಸ್ನೇಹಿತರು ಧೈರ್ಯಕೊಡುವುದಕ್ಕಾಗಿ ಹತ್ತಿರದಲ್ಲೇ ಇರುತ್ತವೆ. ಮಿಲನ ಕ್ರಿಯೆಯು ಸುಮಾರು 45 ಸೆಕೆಂಡುಗಳಿಂದ ಹಿಡಿದು 1.5 ನಿಮಿಷದವರೆಗೆ ನಡೆಯುತ್ತದೆ.
ಆನೆಗಳ ಗರ್ಭಾವಸ್ಥೆಗೆ “ಗಜಗರ್ಭ” ಎಂದೇ ಹೆಸರು. ಇದು ಸರಾಸರಿ 18 ತಿಂಗಳು 18 ದಿನ ಅಥವಾ ಒಂದೂವರೆ ಮತ್ತು ಎರಡು ವರ್ಷಗಳ ನಡುವೆ ಇರುತ್ತದೆ. ಹೆಣ್ಣು ಕನಿಷ್ಠ ನಾಲ್ಕು ವರ್ಷಗಳವರೆಗೆ ಮತ್ತೆ ಬೆದೆಗೆ ಬರುವುದಿಲ್ಲ. ಒಮ್ಮೆ ಒಂದೇ ಮರಿ ಮಾತ್ರ ಜನಿಸುತ್ತದೆ. ಅಪರೂಪಕ್ಕೊಮ್ಮೆ ಅವಳಿಗಳೂ ಜನಿಸುತ್ತವೆ. ಮರಿಗಳು ಸರಿ ಸುಮಾರು 33 ಇಂಚು ಎತ್ತರ, ಸುಮಾರು 120 ತೂಕದೊಂದಿಗೆ ಜನಿಸುತ್ತವೆ. ನವಜಾತ ಆನೆ ಮರಿ ಬಹಳ ಮುದ್ದಾಗಿದ್ದು ಎಲ್ಲಾ ಹಿಂಡಿನ ಸದಸ್ಯರ ಪ್ರೀತಿಯ ಕೇಂದ್ರವಾಗಿರುತ್ತದೆ. ಹಿಂಡಿನ ಹೆಣ್ಣಾನೆಗಳೆಲ್ಲ ನವಜಾತ ಶಿಶುವಿನ ಸುತ್ತಲೂ ನೆರೆದು, ಅದನ್ನು ತಮ್ಮ ಸೊಂಡಿಲಿನಿಂದ ಸ್ಪರ್ಶಿಸುತ್ತವೆ ಮತ್ತು ಮುದ್ದಿಸುತ್ತವೆ.
ಮರಿ ಆನೆಯನ್ನು ಅದರ ತಾಯಿಯಲ್ಲದೆ ಬೇರೆ ಹೆಣ್ಣಾನೆಗಳು ನೋಡಿಕೊಳ್ಳುವ ನಡವಳಿಕೆ ಕಾಣಬರುತ್ತದೆ. ಇವು ಸಾಮಾನ್ಯವಾಗಿ ಮರಿ ಆನೆಯನ್ನು ಸದಾ ಸುತ್ತುವರೆದು ಅದಕ್ಕೆ ರಕ್ಷಣೆಯನ್ನು ನೀಡುತ್ತವೆ ಮತ್ತು ಬದುಕುವ ವಿಧಾನವನ್ನು ಸಹ ಕಲಿಸುತ್ತವೆ. ಇದಕ್ಕೆ “ಅಲೋ ಪೆರೆಂಟಿಂಗ್” ಎಂದು ಕರೆಯುತ್ತಾರೆ. ಆನೆ ಮರಿ ಒಂದು ವರ್ಷ ವಯಸ್ಸಾಗುತ್ತಿದ್ದಂತೆ ಸ್ವತಂತ್ರವಾಗಿ ಬದುಕಲು ಕಲಿಯುತ್ತದೆ. ಹೀಗೆಯೇ ಸಾಗುತ್ತದೆ, ಆನೆಗಳ ಜೀವನ.
(ಆಕರ: ಶ್ರೀಮತಿ ಶಕುಂತಲಾ ಶ್ರೀಧರ ಮತ್ತು ಶಾಂತ ಕುಮಾರಿ ಹಾಗೂ ಇತರ ಲೇಖನಗಳು)
ವಿಡಿಯೋ ನೋಡಿ: ಗೂಗಲ್ ಮತ್ತು ಯುಟ್ಯೂಬ್ ಹ್ಯಾಕ್ ಆಗದಂತೆ ಎಚ್ಚರಿಕೆ ವಹಿಸೋದು ಹೇಗೆ? – ಡಾ. ಎನ್. ಬಿ. ಶ್ರೀಧರ್