ಕಾರ್ಮಿಕರ ಬದುಕಿನ ಜೊತೆ ಚಲ್ಲಾಟವಾಡಿದ ಡಬಲ್ ಎಂಜಿನ್ ಸರ್ಕಾರವನ್ನು ಕಿತ್ತೆಸೆಯಬೇಕು : ಬೃಂದಾ ಕಾರಟ್

ಕೆ.ಆರ್.‌ ಪುರಂ: ಕಾರ್ಮಿಕರ ಬದುಕಿನ ಜೊತೆ ಚಲ್ಲಾಟವಾಡಿದ ಡಬಲ್ ಎಂಜಿನ್ ಸರ್ಕಾರವನ್ನು ಈ ಚುನಾವಣೆಯಲ್ಲಿ ಕಿತ್ತೆಸೆಯಬೇಕು ಎಂದು ಸಿಪಿಐಎಂ ಪೊಲಿಟ್ ಬ್ಯೂರೋ ಸದಸ್ಯರಾದ ಬೃಂದಾ ಕಾರಟ್ ಹೇಳಿದರು.

ಅವರು  ಕೆ.ಆರ್.ಪುರಂನ ವಿಜ್ನಾಪುರದಲ್ಲಿ  ನಡೆದ ಮೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕರ್ನಾಟಕದಲ್ಲಿ ಆಡಳಿತ ನಡೆಸಿದ ಬಿಜೆಪಿಯು ಜನ ವಿರೋಧಿ ನೀತಿಗಳ ಮೂಲಕ ಜನರನ್ನು ಸಂಕಷ್ಟಕ್ಕೆ ತಳ್ಳಿದೆ. ಕರ್ನಾಟಕವನ್ನು ಅಭಿವೃದ್ದಿಯಿಂದ ಹಿಂದಕ್ಕೆ ತಳ್ಳಿದೆ ಎಂದು ಆರೋಪಿಸಿದರು.

ಕೆ.ಆರ್. ಪುರಂ ಕ್ಷೇತ್ರದ ಶಾಸಕರು, ಸಚಿವರು ಆದ ಬೈರತಿ ಬಸವರಾಜ ಈ ಕ್ಷೇತ್ರಕ್ಕೆ ಏನೂ ಕೊಡುಗೆ ನೀಡಿಲ್ಲ. ಆಪರೇಷನ್ ಕಮಲಕ್ಕೆ ಒಳಗಾದ ಅವರು, ಹಣಬಲದ ಮೂಲಕ ಚುನಾವಣೆ ಗೆಲ್ಲುತ್ತಿದ್ದಾರೆಯೇ ಹೊರತು ಜನಪರ ಕಾರ್ಯಕ್ರಮಗಳಿಂದಲ್ಲ ಎಂದರು.

ಮೋದಿ ನಿನ್ನೆ ರೋಡ್ ಶೋ ನಡೆಸಿ ಭಾಷಣ ಮಾಡಿದ್ದಾರೆ. ಎಲ್ಲಿಯೂ ಅವರು ಜನರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ, ಜನರನ್ನು ರಕ್ಷಿಸುವ ಜಾವಬ್ದಾರಿ ಅವರದ್ದು ಎನ್ನುವುದನ್ನು ಮರೆತು ಜನ ತಮ್ಮನ್ನು ರಕ್ಷಿಸಬೇಕು ಎಂದು ಜನರ ಬಳಿ ಯಾಚಿಸುವ ಮೂಲಕ ಇದು ಅಮೃತಕಾಲ ಎಂದು ಹೇಳುತ್ತಿದ್ದಾರೆ. ಯಾರಿಗೆ ಅಮೃತಕಾಲ ಎಂದು ಕೇಳಿದರೆ ಅವರ ಬಳಿ ಉತ್ತರ ಇಲ್ಲ ಎಂದು ಖಾರವಾಗಿ ಪ್ರತಿಕ್ರಿಸಿದರು.

 

ಗುಜರಾತ್ ನಂತರ ಕರ್ನಾಟಕ ಕೋಮುವಾದಿಗಳ ಪ್ರಯೋಗಶಾಲೆಯಾಗಿದೆ. ಹಿಂದುತ್ವದ ಹೆಸರಲ್ಲಿ ಜನರನ್ನು ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಅಧಿಕಾರಕ್ಕೇರಲು ಇದನ್ನು ಆಯುಧವಾಗಿ ಬಳಸುತ್ತಿದ್ದಾರೆ. ಸಂವಿಧಾನದ ಮೇಲೆ ದಾಳಿ ನಡೆಸಿ ಜನರ ಹಕ್ಕುಗಳನ್ನು ಇಲ್ಲವಾಗಿಸಿ ಸಂವಿಧಾನವನ್ನು ನಾಶ ಮಾಡುತ್ತಿದ್ದಾರೆ ಹಾಗಾಗಿ ಭಾರತದ ಸಂವಿಧಾನವನ್ನು ರಕ್ಷಿಸಬೇಕಿದೆ.

ಕರ್ನಾಟಕದಲ್ಲಿ ಬೊಮ್ಮಾಯಿ ಸರ್ಕಾರ ಅಲ್ಪಸಂಖ್ಯಾತರ ಮೇಲೆ ತೀವ್ರ ದಾಳಿ ನಡೆಸುತ್ತಿದೆ. ಕೆಲಸದ ಅವಧಿಯನ್ನು ಹೆಚ್ಚಿಸಿ ಕಾರ್ಮಿಕರ ರಕ್ತವನ್ನು ಹೀರುತ್ತಿರುವ ಸರ್ಕಾರವನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸಬೇಕು, ದುಡಿಯುವ ವರ್ಗದ ಅಭ್ಯರ್ಥಿಯ ಪರ ಮತಹಾಕಬೇಕು ಎಂದು ಕರೆ ನೀಡಿದರು.

 

ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಮೀನಾಕ್ಷಿಸುಂದರಂ ಮಾತನಾಡಿ, ನಿಮ ಮನಸ್ಸಿನ ಮಾತು ತೆಗೆದುಕೊಂಡು ಏನು ಮಾಡಬೇಕು? ನಮ್ಮ ಮನಸ್ಸಿನ ಮಾತನ್ನು ಕೇಳಿಸಿಕೊಳ್ಳಿ ಎಂದು ಜನ ಪ್ರಧಾನಿಯನ್ನು ಹಿಗ್ಗಾ ಮುಗ್ಗಾ ಜಾಡಿಸುತ್ತಿದ್ದಾರೆ. ಮೊದಲ ಮನ್ ಕಿ  ಬಾತ್ ಆರಂಭಿಸಿದಾಗ ಗ್ಯಾಸ್ ಬೆಲೆ 400 ಇತ್ತು, 100 ನೇ ಮನ್ ಕಿ ಬಾತ್ ಹೊತ್ತಿಗೆ 1150 ರೂ ಆಗಿದೆ. ಆದರೂ ಬಿಜೆಪಿಯರು 56 ಇಂಚಿನ ಎದೆ ಉಬ್ಬಿಸಿ ಅಭಿವೃದ್ಧಿ ಮಾಡಿದ್ದೇವೆ ಎನ್ನುತ್ತಿದ್ದಾರೆ, ನಾಚಿಕೆ ಆಗಬೇಕು ಇವರಿಗೆ ಎಂದು ವಾಗ್ದಾಳಿ ನಡೆಸಿದರು.

ಕಾರ್ಮಿಕರನ್ನು, ರೈತರನ್ನು, ಕೂಲಿಕಾರರನ್ನು, ವಿದ್ಯಾರ್ಥಿ, ಯುವಜನ, ಮಹಿಳೆಯರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ. ಜನ ಬೆಲೆ ಏರಿಕೆಯ ಬಿಸಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಹಾಗಾಗಿ ಈ ಬಾರಿ ಚುನಾವಣೆಯಲ್ಲಿ ದುಡಿಯುವ ವರ್ಗ ಬಿಜೆಪಿಯನ್ನು ಸೋಲಿಸಲಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಐಟಿಯು ಹಿರಿಯ ನಾಯಕ ಗೋಪಾಲಗೌಡ ವಹಿಸಿದ್ದರು. ಈ ವೇಳೆ ಸಿಪಿಐಎಂ ಅಭ್ಯರ್ಥಿ ನಂಜೇಗೌಡ ಮುಖಂಡರಾದ ಮುನಿರಾಜು, ಬಿ.ಎನ್.ಮಂಜುನಾಥ್, ಎನ್. ಪ್ರತಾಪ್ ಸಿಂಹ, ಲೀಲಾವತಿ, ಗೌರಮ್ಮ, ಕೆ.ಎಸ್. ವಿಮಾಲಾ, ಚಂದ್ರ ತೇಜಸ್ವಿ, ಲಿಂಗರಾಜ್ ಸೇರಿದಂತೆ ಸಾವಿರಾರು ಕಾರ್ಮಿಕರು ಇದ್ದರು.

Donate Janashakthi Media

Leave a Reply

Your email address will not be published. Required fields are marked *