ಭಾರತೀಯ ಸಂಸ್ಕೃತಿ ಉತ್ಸವ ಎಂಬ ಧತ್ತೂರಿ ಮರ

-ಡಾ ಮೀನಾಕ್ಷಿ ಬಾಳಿ

ಬಸವ ಕಲ್ಯಾಣದ ಹೆಬ್ಬಾಗಿಲು ಎನಿಸಿಕೊಂಡಿರುವ ಕಲಬುರಗಿ ಶರಣ, ಸಂತ, ಸೂಫಿಗಳ ಆಡಂಬೊಲವಾಗಿದೆ. ಶತ ಸಹಸ್ರಮಾನಗಳಿಂದಲೂ ಇಲ್ಲಿಯ ಜನರು ಪರಸ್ಪರ ಸಹಬಾಳ್ವೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ರಾಜಕೀಯವಾಗಿ ಹಲವಾರು ಏಳು ಬೀಳುಗಳನ್ನು ಕಂಡರೂ ಜನತೆ ಮಾತ್ರ ಜಾತಿ, ಮತ, ಪಂಥಗಳಾಚೆ ಪರಸ್ಪರ ಕರುಳು ಬಳ್ಳಿಯಲ್ಲಿ ಬೆಸೆದುಕೊಂಡು ಬದುಕಿದ್ದಾರೆ. ಪರಧರ್ಮ ಮತ್ತು ಪರವಿಚಾರಗಳನ್ನು ಸೈರಿಸಿಕೊಂಡು ಮನುಷ್ಯ ಬಂಧದಲ್ಲಿ ಬಾಳುವುದೇ ನಿಜವಾದ ಬಂಗಾರ ಎಂದು ವಿಶ್ವಕ್ಕೆ ಅಪರೂಪದ ಭದ್ರ ಸಂದೇಶವನ್ನು ಸಾರಿದ ಕವಿರಾಜಮಾರ್ಗ ಹುಟ್ಟಿದ ನೆಲದಲ್ಲಿಯೇ ಕೋಮುದ್ವೇಷದ ಧತ್ತೂರಿ ಬೀಜ ಬಿತ್ತಿ ಫಸಲು ತೆಗೆಯುತ್ತಿರುವುದು ವರ್ತಮಾನದ ಬಹು ದೊಡ್ಡ ದುರಂತವಾಗಿದೆ. ಸಂಸ್ಕೃತಿ

ಮಾನ್ಯಖೇಟದಂಥ ಸೌಹಾರ್ದ ನೆಲದಲ್ಲಿ ಬಸವರಾಜ ಪಾಟೀಲ ಎಂಬ ಸಂಘ ಪರಿವಾರಿ ಕಾಣಿಸಿಕೊಂಡದ್ದು ಈ ನೆಲಕ್ಕೆ ಏಡ್ಸ್ ಆಗಿ ಪರಿಣಮಿಸಿದೆ. ಜಗತ್ತಿಗೆ ಸಮಾನತೆಯ ತತ್ವ ಬೋಧಿಸಿದ ಬಸವಾದಿ ಶರಣರು ನಡೆದಾಡಿದ ನೆಲದಲ್ಲಿ ಅವರ ಹೆಸರೇ ಇಟ್ಟುಕೊಂಡಿರುವ ಲಿಂಗವಂತ ಸಮುದಾಯದವರನೇಕರು ಬಸವದ್ರೋಹಿಗಳಾಗಿ ಹೊರಹೊಮ್ಮಿದ್ದು ಕೂಡ ದೊಡ್ಡ ಕಳಂಕವಾಗಿದೆ. ಬಸವಣ್ಣನವರ ಬಗೆಗೆ ಅಸಂಬದ್ಧವಾಗಿ ಮಾತನಾಡುವ ಯತ್ನಾಳ, ಅಧಿಕಾರ ದಾಹಕ್ಕಾಗಿ ತಂದೆಯ ಸಮಾಜವಾದಿ ಸಿದ್ಧಾಂತವನ್ನೆ ಮಣ್ಣು ಮುಕ್ಕಿಸುತ್ತಿರುವ ಬೊಮ್ಮಾಯಿ, ಶಿಕ್ಷಣ ಸಂಸ್ಥೆಗಳ ಮೂಲಕ ಸೇವೆ ಮಾಡುತ್ತೇನೆ ಎಂದು ಫೋಜು ಕೊಡುತ್ತಿರುವ ಪಾಟೀಲ ಇವರೆಲ್ಲರ ಹೆಸರ ಬಸವರಾಜ ಎಂದಿರುವುದು ಅದೆಷ್ಟು ದುರಂತ ಅಲ್ಲವೆ?

ಸೇಡಂ ನಿವಾಸಿ ಬಸವರಾಜ ಪಾಟೀಲ ಎಂಬ ಸಂಘದ ಕಟ್ಟಾಳು ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸುವ ಮೂಲಕ ಇಲ್ಲಿ ಧರ್ಮದ್ವೇಷದ ದತ್ತೂರಿ ಬೀಜವನ್ನು ಊರಿದ್ದಾರೆ. ಅದು ಈಗ ಕೋಮು ದಳ್ಳುರಿಯ ಹೆಮ್ಮರವಾಗಿ ಬೆಳೆದು ನಮ್ಮ ನಾಡನ್ನು ಕಬಳಿಸುತ್ತಿದೆ. ಪಾಟೀಲಜೀ ಎಂದು ಕರೆಸಿಕೊಳ್ಳುತ್ತಿರುವ ಇವರು ನಡೆ-ನುಡಿಗಳಲ್ಲಿ ಪ್ರಾಮಾಣಿಕರೆಂಬಂತೆ ಬಿಂಬಿಸಿಕೊಂಡು ಸ್ಥಳೀಯರ ಮೇಲೆ ಮಂಕು ಬೂದಿ ಎರಚಿದ್ದಾರೆ. ಅದೂ ಶರಣ ಪರಂಪರೆಯ ಮಠವೊಂದರ ಹೆಸರಿನಲ್ಲಿಯೇ ಸಂಸ್ಥೆಯನ್ನು ಹುಟ್ಟು ಹಾಕಿ ಹತ್ತಾರು ಶಾಲಾ-ಕಾಲೇಜುಗಳನ್ನು ತೆರೆದು, ಅಲ್ಲಿ ಅಕ್ಷರ ಕಲಿಸುವ ನೆಪದಲ್ಲಿ ಮಕ್ಕಳ ಮನಸಲ್ಲಿ ಕೋಮು ವಿಷವನ್ನು ಬಿತ್ತುತ್ತಿದ್ದಾರೆ. ಬಿಜೆಪಿ ಪಕ್ಷದಿಂದ ಸಂಸದರಾಗಿದ್ದ ಇವರು ಕಳೆದ ಸಲ ಬಿಜೆಪಿ ಅಧಿಕಾರದಲ್ಲಿದ್ದಾಗ ಆಯಕಟ್ಟಿನ ಜಾಗ ಪಡೆದುಕೊಂಡು, ಸಂಸ್ಕೃತಿ ಹೆಸರಿನಲ್ಲಿ ಸಾವಿರಾರು ಕೋಟಿ ಹಣವನ್ನು ಅನುದಾನವಾಗಿ ಪಡೆದುಕೊಂಡು, ತನ್ಮೂಲಕ ಸಂಘಪರಿವಾರದ ಕುಟಿಲ ಕುತಂತ್ರವನ್ನು ಮುನ್ನೆಲೆಗೆ ತಂದಿದ್ದಾರೆ.

ಇದನ್ನೂ ಓದಿ: ಸಾಂಸ್ಕೃತಿಕ ಸಿಕ್ಕುಗಳ ನಡುವೆ ರಂಗಭೂಮಿಯ ಪ್ರಸ್ತುತತೆ ಜನಸಂಸ್ಕೃತಿಯನ್ನು ಬಹುಸಂಖ್ಯಾವಾದದಲ್ಲಿ ಮುಳುಗಿಸುತ್ತಿರುವ ಸನ್ನಿವೇಶದಲ್ಲಿ ನಾವಿದ್ದೇವೆ

ಈಗಾಗಲೇ ಅವರು ಕಲಬುರಗಿ ಕಂಪು ಎಂಬೊಂದು ರಾಷ್ಟ್ರಮಟ್ಟದ ಆರ್ ಎಸ್ ಎಸ್ ಕಾರ್ಯಕ್ರಮ ನಡೆಸಿ, ಇಡೀ ಕಲ್ಯಾಣ ಕರ್ನಾಟಕ ನಾಡನ್ನು ಗಬ್ಬೆಬ್ಬಿಸಿದ್ದಲ್ಲದೆ, ಈಗ ಮತ್ತೆ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ಸ್ವರ್ಣ ಜಯಂತಿ ನಿಮಿತ್ಯ ಭಾರತೀಯ ಸಂಸ್ಕೃತಿ ಉತ್ಸವ ಎಂಬ ಬೃಹತ್ ಸಮಾರಂಭವನ್ನು ಒಂಬತ್ತು ದಿನಗಳ ಕಾಲ ಹಮ್ಮಿಕೊಂಡಿದ್ದಾರೆ. ಸದರಿ ಕಾರ್ಯಕ್ರಮಕ್ಕೆ ದೇಶದ ಮೂಲೆ ಮೂಲೆಯಲ್ಲಿರುವ ಸಂಘದ ಕಟ್ಟಾಳುಗಳನ್ನು ಆಮಂತ್ರಿಸಿ ಅವರ ಮೂಲಕ ನಮ್ಮ ನಾಡಿನ ಸಾಮರಸ್ಯವನ್ನು ಹಾಳುಗೆಡುವ ಸಂಚು ಹೂಡಿದ್ದಾರೆ.

ಇದಕ್ಕಾಗಿ ಸಾವಿರಾರು ಕೋಟಿ ಹಣ ವಿನಿಯೋಗಿಸಲಾಗುತ್ತಿದೆ. ಅದರಲ್ಲಿ ಅರ್ದದಷ್ಟು ಹಣ ಕಳೆದ ಸರಕಾರದಲ್ಲಿ “ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘ” ಎಂಬ ಸಂಸ್ಥೆಯೊಂದನ್ನು ನಿರ್ಮಿಸಿಕೊಂಡು, ಅದಕ್ಕೆ ಸಂಪುಟ ದರ್ಜೆ ಸಚಿವರಷ್ಟು ಅಧಿಕಾರ, ಸೌಲತ್ತು ಗಿಟ್ಟಿಸಿಕೊಂಡು, ಅನುದಾನದ ಹೆಸರಲ್ಲಿ ಲೂಟಿ ಮಾಡಿದ್ದೇ ಆಗಿದೆ. ಇನ್ನು ಉಳಿದದ್ದನ್ನು ಸ್ಥಳೀಯ ಉದ್ದಿಮೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಜನಸಾಮಾನ್ಯರಿಂದ ಸೆಳೆದುಕೊಂಡು ವರ್ಣಾಶ್ರಮ ಧರ್ಮವನ್ನು ಅಭಿವೃದ್ದಿ ಪಡಿಸಲು ಮುಂದಾಗಿದ್ದಾರೆ. 50 ಪುಟಗಳ 18 ಕ್ವಿಂಟಲ್ ಆಮಂತ್ರಣ ಪತ್ರಗಳನ್ನು ಕನ್ನಡ, ಹಿಂದಿ, ಇಂಗ್ಲೀಷ ಭಾಷೆಯಲ್ಲಿ ಪ್ರಕಟಿಸಿದ್ದಾರೆ.

ಭಾರತ ವಿಕಾಸ ಸಂಗಮ ಎಂಬ ಸಂಸ್ಥೆಯಡಿಯಲ್ಲಿ ಮಾತೃ, ಶೈಕ್ಷಣಿಕ, ಯುವ, ಗ್ರಾಮ ಕೃಷಿ, ಆಹಾರ-ಆರೋಗ್ಯ, ಸ್ವಯಂ ಉದ್ಯೋಗ, ಪ್ರಕೃತಿ ಮತ್ತು ನಾವು, ಸೇವಾ ಶಕ್ತಿ, ದೇಶ-ಧರ್ಮ-ಸಂಸ್ಕೃತಿ ಮುಂತಾಗಿ ದಿನಕ್ಕೊಂದು ಆಕರ್ಷಕ ಘೋಷಣೆಯಡಿಯಲ್ಲಿ ಸಮಾವೇಶಗಳನ್ನು ಹಮ್ಮಿಕೊಂಡಿದ್ದಾರೆ. 240 ಎಕರೆ ಬೆಳೆಯುವ ಭೂಮಿಯಿಂದ ರೈತರನ್ನು ತಾತ್ಪೂರ್ತಿಕವಾಗಿ ಒಕ್ಕಲೆಬ್ಬಿಸಿ, ವಾತಾವರಣವನ್ನು ಕಲುಷಿತಗೊಳಿಸಿ, ಇನ್ನೊಂದೆಡೆ ತಮ್ಮ ಕೋಮುವಾದಿ ವಿಷವುಣಿಸಿ ಮುಗ್ಧರ ಮನೋಸ್ವಾಸ್ಥ್ಯವನ್ನು ಹಾಳುಗೆಡಹುತ್ತಿದ್ದಾರೆ. ಈಗಾಗಲೆ ನೂರಾರು ಶೂದ್ರರು ಬರಲಿರುವ ಸನಾತನಿಗಳ ಸೇವೆ ಮಾಡಲು ತಮ್ಮ ಶ್ರಮ, ಧನ, ಮನಗಳನ್ನು ಮೀಸಲಿಟ್ಟು ದುಡಿಯುತ್ತಿದ್ದಾರೆ. ದುಡಿಯುವವರೆಲ್ಲ ಶೂದ್ರರು. ಅಲ್ಲಿ ಗೌರವಗೊಳ್ಳಲಿರುವವರೆಲ್ಲ ಗೋವಿಂದಾಚಾರ್ಯರಾದಿಯಾಗಿ ಬಹುತೇಕ ವೈದಿಕರು.

ಈ ಕಾರ್ಯಕ್ರಮಗಳಿಗೆ ಸರಕಾರದ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿಯನ್ನು ರಾಜಾರೋಷವಾಗಿ ತೊಡಗಿಸಿಕೊಂಡಿದ್ದಾರೆ. ಹಿಂದಿನ ವರ್ಷದಿಂದಲೆ ತಮ್ಮ ಈ ಕೋಮು ಧೃವೀಕರಣದ ಮಿಷನ್ ಅಡಿಯಲ್ಲಿ ವಿವಿಧ ಸ್ಪರ್ಧೆಗಳು ಹಮ್ಮಿಕೊಂಡು ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ವ್ಯಾಪಕವಾಗಿ ಬೇರು ಬಿಟ್ಟಿರುವ ಸಂಘಿ ಅಧಿಕಾರಿಗಳು ಸರಕಾರಿ ಯಂತ್ರವನ್ನು ಯಾವ ಎಗ್ಗಿಲ್ಲದೆ ಪಾಟೀಲಜೀ ಪದತಲಕ್ಕೆ ಸಮರ್ಪಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿನ ಬಡತನವನ್ನು ಬಂಡವಾಳ ಮಾಡಿಕೊಂಡು ಕೌಶಲ್ಯಾಭಿವೃದ್ಧಿ ನೆಪದಲ್ಲಿ ಅಷ್ಟಿಷ್ಟು ಹೊಲಿಗೆ ಯಂತ್ರ, ಶಾವಿಗೆ ತಯಾರಿಸುವ ಯಂತ್ರ, ತೊಗರಿ ಬ್ಯಾಳಿ ತಯಾರಿಸುವ ಯಂತ್ರ, ರೊಟ್ಟಿ ಯಂತ್ರ ಅಲ್ಲದೆ ಒಕ್ಕಲುತನ ಸಲಕರಣೆ, ಪಶು ಖರೀದಿಗೆ ಹಣ ಹೀಗೆ ಕಿರಕುಳ ಸಹಾಯ ಮಾಡುವ ಮೂಲಕ ಸುತ್ತಲಿನ ಗ್ರಾಮಸ್ಥರ ಅನುಕಂಪ ಗಿಟ್ಟಿಸಿ ಅವರನ್ನೆಲ್ಲ ತಮ್ಮ ಕಾಲಾಳುಗಳಾನ್ನಾಗಿಸಿ ಕೊಂಡಿದ್ದಾರೆ.

ಜನರಲ್ಲಿ ಬಡತನ ನೆಲೆಯೂರುವಂತೆ ಮಾಡುವುದು ಮತ್ತು ಆ ಬಡತನವನ್ನೆ ಬಂಡವಾಳ ಮಾಡಿಕೊಳ್ಳುವುದನ್ನು ಯಾರಾದರೂ ಸಂಘ ಪರಿವಾರಿಗಳಿಂದ ಕಲಿಯಬೇಕು. ಸರಕಾರ ನೀಡಿದ ಅನುದಾನದಿಂದ ಸಹಾಯ ಮಾಡಿ ಹೆಸರು ಮಾತ್ರ ಸಂಘ ಪರಿವಾರದ್ದು. ಕಳೆದ ಬಿಜೆಪಿ ಸರಕಾರ ಲಿಂಗಾಯತ, ದಲಿತ, ಹಿಂದುಳಿದ ನಾಯಕರನ್ನು ಬಳಸಿಕೊಂಡು ಜನರ ತೆರಿಗೆ ಹಣ ಲೂಟಿ ಮಾಡಿ ಸಂಘದ ಹೆಸರನ್ನು ಮುನ್ನೆಲೆಗೆ ತಂದಿದೆ. 2014ರ ಸಾಲಿನಿಂದ ಆರ್ ಎಸ್ ಎಸ್ ದೇಶಾದ್ಯಂತ ಮಾಡಿದ ಆಸ್ತಿ-ಪಾಸ್ತಿಗಳಿಗೆ ಲೆಕ್ಕವೆ ಇಲ್ಲ. ಸಂಘದ ನಾಜೂಕಿನ ಮುಖವಾಡವಾಗಿರುವ ಬಸವರಾಜ ಪಾಟೀಲ ಸೇಡಂನಂಥ ಆಷಾಢಭೂತಿಗಳು ಕಲ್ಯಾಣ ಕರ್ನಾಟಕ ಭಾಗದ ಜನರ ಬಡತನ ಮತ್ತು ಮುಗ್ಧತೆ ಎರಡನ್ನು ದುರ್ಬಳಕೆ ಮಾಡಿಕೊಂಡು ಇಲ್ಲಿನ ಯುವಕರು ಕೋಮು ದಳ್ಳುರಿಯ ಬೆಂಕಿಯಲ್ಲಿ ಸರ್ವನಾಶವಾಗುವಂತೆ ಮಾಡುತ್ತಿದ್ದಾರೆ.

ಒಂದೆಡೆ ಬಸವಣ್ಣ, ಅನುಭವ ಮಂಟಪ ಅಭಿವೃದ್ಧಿ ಎಂದು ಜಪಿಸುತ್ತಲೆ, ವಚನ ತತ್ವದ ಜೀವಧ್ವನಿಯಾಗಿರುವ ವೈದಿಕ ವಿರೋಧಿ ಸಿದ್ಧಾಂತವನ್ನು ಮಣ್ಣು ಮುಕ್ಕಿಸುವ ಷಡ್ಯಂತ್ರದ ಭಾಗವಾಗಿ ಭಾರತೀಯ ಸಂಸ್ಕೃತಿ ಉತ್ಸವ ನಡೆಸಲಾಗುತ್ತಿದೆ. ಆಮಂತ್ರಣ ಪತ್ರದಲ್ಲಿ ವಚನದ ಒಂದು ಸಾಲು ಇಲ್ಲ. ಅಷ್ಟಕ್ಕೂ ಈ ಮನುಷ್ಯ ಬಸವನುದಿಸಿದ ಹಾಗೂ ಶರಣಬಸವನುದಿಸಿದ ಈ ನಾಡನ್ನು ಹನುಮನುದಿಸಿದ ನಾಡೆಂದೆ ಬಿಂಬಿಸುತ್ತ ಬರುತ್ತಿದ್ದಾರೆ. ತನ್ನ ಕೊಳಕು ಸಂಸ್ಖೃತಿಯನ್ನು ಮೆರೆಯಲು ಕಲಬುರಗಿ ನೆಲದ ಎಲ್ಲ ಶರಣ ಪರಂಪರೆಯ ಅನುಯಾಯಿಗಳನ್ನು ಬಳಸಿಕೊಳ್ಳುತ್ತಿದ್ದಾನೆ. ಅಷ್ಟೇ ಏಕೆ ಕರ್ನಾಟಕದ ಮುಖ್ಯ ಮಂತ್ರಿ ಮಾನ್ಯ ಸಿದ್ಧರಾಮಯ್ಯನವರು, ಉಸ್ತುವಾರಿ ಸಚಿವರಾಗಿರುವ ಮಾನ್ಯ ಪ್ರಿಯಾಂಕ ಖರ್ಗೆಯವರು, ವೈದ್ಯಕೀಯ ಸಚಿವರಾಗಿರುವ ಮಾನ್ಯ ಶರಣಪ್ರಕಾಶ ಪಾಟೀಲ, ಸಣ್ಣ ಕೈಗಾರಿಕೆ ಸಚಿವ ಮಾನ್ಯ ಶರಣಬಸಪ್ಪ ದರ್ಶನಾಪೂರ, ಸಂಸದ ರಾಧಾಕೃಷ್ಣ ದೊಡ್ಡಮನಿ ಮುಂತಾದವರ ಹೆಸರನ್ನು ಬಳಸಿಕೊಂಡಿದ್ದಾರೆ.

ಇದರಲ್ಲಿ ಹಲವರಿಗೆ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ಹಿನ್ನೆಲೆ ಮುನ್ನೆಲೆಯೇ ತಿಳಿದಿಲ್ಲ. ಕೆಲವೊಮ್ಮೆ ತಮ್ಮ ಐಡೆಂಟಿಟಿಯನ್ನು ಮರೆಮಾಚಿ ಉದಾತ್ತ ವಿಚಾರಗಳ ಮುಖವಾಡದಿಂದ ಸ್ಥಳೀಯರನ್ನು ಯಾಮಾರಿಸಿ ತಮ್ಮ ಉದ್ದೇಶಕ್ಕೆ ಪೂರಕವಾಗಿ ಬಳಸಿಕೊಳ್ಳಲಾಗಿದೆ. ಈಗಾಗಲೇ ಮುಖ್ಯ ಮಂತ್ರಿಗಳಾದಿಯಾಗಿ ಹಲವು ನಾಯಕರು ಸಂಘಿಗಳ ಮರೆ ಮೋಸವನ್ನು ಬಯಲು ಮಾಡಿದ್ದಾರೆ. ಇಲ್ಲಿನ ಜನಸಾಮಾನ್ಯರು ಈಗ ಎಚ್ಚೆತ್ತುಕೊಳ್ಳಬೇಕಿದೆ. ಬಸವರಾಜ ಪಾಟೀಲ ಸೇಡಂ ಜನೆವರಿ ಕೊನೆಯ ವಾರದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮ ಭಾರತೀಯ ಸಂಸ್ಕೃತಿ ಉತ್ಸವವಲ್ಲ ಅದು ಸನಾತನ ಸಂಸ್ಕೃತಿ ಮೆರೆಸುವ ಉತ್ಸವವಾಗಿದೆ. ಭಾರತ ವಿಕಾಸ ಅಲ್ಲ ಭಾರತ ವಿನಾಶ ಸಂಗಮ ಆಗಿದೆ. ಅದೇನಿದ್ದರೂ ಸನಾತನಿಗಳ ವಿಕಾಸ, ಬ್ರಾಹ್ಮಣಶಾಹಿಗಳ ಅಭಿವೃದ್ಧಿ ಆಗಿದೆ. ಇನ್ನೊಂದು ಅರ್ಥದಲ್ಲಿ ಅದು ನಮ್ಮ ನಾಡಿನ ಬಸವ ಸಂಸ್ಕೃತಿ, ಸೌಹಾರ್ದ ಪರಂಪರೆ, ಸಹಬಾಳ್ವೆಯನ್ನು ನಾಶ ಮಾಡುವ ಕಾರ್ಯಕ್ರಮವಾಗಿದೆ. ನಾವೀಗ ಸುಮ್ಮನೆ ಕೂಡಲಾಗದು. ಪಾಟೀಲಜೀ ಎಂಬ ಸಂಘಿಯ ದುಷ್ಟ ಕಾರ್ಯತಂತ್ರವನ್ನು ನಿಷ್ಫಲಗೊಳಿಸಬೇಕಿದೆ. ಕೋಮುದ್ವೇಷದ ಧತ್ತೂರಿ ಮರವನ್ನು ಸಮೂಲವಾಗಿ ಕಡಿದು ಹಾಕಬೇಕಿದೆ. ಇಲ್ಲವಾದರೆ ನಮ್ಮಗಳ ಮಾರಣಹೋಮ ನಿಲ್ಲದು.

ಇದನ್ನೂ ನೋಡಿ: ಸೇಡಂ ಸನಾತನಿ ಉತ್ಸವ : ಸಂವಿಧಾನ ವಿರೋಧ ಉತ್ಸವ – ಚಿಂತಕರ ಅಭಿಮತ

 

Donate Janashakthi Media

Leave a Reply

Your email address will not be published. Required fields are marked *