ಮುಂಬೈ: ಹಿಂದಿ ನಟ ಗುರುಚರಣ್ ಸಿಂಗ್ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ, ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಸೋಲು ನೋಡುತ್ತಿದ್ದೇನೆ. ಕೈಯಲ್ಲಿ ಯಾವುದೇ ಕೆಲಸವಿಲ್ಲ. ಒಂದೊಂದು ರೂಪಾಯಿಗೂ ಹೆಣಗಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. 1.2 ಕೋಟಿ ರೂ. ಸಾಲ ನನ್ನ ಮೇಲಿದೆ. ಇತ್ತ ತೀರಿಸಲು ಹಣವು ಇಲ್ಲ, ಸರಿಯಾದ ಕೆಲಸವೂ ಇಲ್ಲ. ಯಾವುದೇ ಅವಕಾಶ ಸಿಗದೆ ಮುಂದೇನು ಮಾಡಬೇಕು ಎಂದು ತಿಳಿಯದೆ ಕಂಗಾಲಾಗಿದ್ದೇನೆ ಎಂದು ಮನಬಿಚ್ಚಿ ಮಾತನಾಡಿದ್ದಾರೆ.
“ಈ ಕಷ್ಟವನ್ನು ಕಳೆದ 4 ವರ್ಷಗಳಿಂದ ಅನುಭವಿಸುತ್ತಿದ್ದೇನೆ. ಕೆಲಸಕ್ಕಾಗಿ ಮುಂಬೈನಲ್ಲಿಯೇ ಸದ್ಯಕ್ಕೆ ಉಳಿದುಕೊಂಡಿದ್ದೇನೆ. ಜನ ನನ್ನ ತುಂಬ ಇಷ್ಟಪಡುತ್ತಾರೆ ಅದು ನನಗೆ ಗೊತ್ತಿದೆ. ಆದ್ರೆ, ನಾನೇನು ಮಾಡಲಿ? ಯಾವ ಕೆಲಸವು ಕೈಹಿಡಿಯುತ್ತಿಲ್ಲ. ಮನೆಯಲ್ಲಿ ವಯಸ್ಸಾದ ತಂದೆ-ತಾಯಿ ಇದ್ದಾರೆ, ಅವರ ಯೋಗಕ್ಷೇಮ ವಿಚಾರಿಸಬೇಕು, ಅವರಿಬ್ಬರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಆದರೆ, ನನ್ನ ಕಷ್ಟಗಳಿಂದ ಇದ್ಯಾವುದು ಈಡೇರುತ್ತಿಲ್ಲ” ಎಂದು, ಕಳೆದ ಕೆಲವು ತಿಂಗಳಿಂದ ಯಾವುದೇ ಕಾರ್ಯಕ್ರಮ, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳದ ನಟ ಗುರುಚರಣ್ ಸಿಂಗ್, ಭಾವುಕರಾದರು.
ಇದನ್ನೂ ಓದಿ: ಸ್ವಾತಂತ್ರ್ಯೋತ್ಸವ ದಿನಾಚರಣೆಯ ಕಾರ್ಯಕ್ರಮಕ್ಕೆ ಬಿಗಿ ಬಂದೋಬಸ್ತ್: ಕಮಿಷನರ್ ದಯಾನಂದ
“ನಾನು ಸಂಪಾದನೆ ಮಾಡಬೇಕು, ನನ್ನ ಮನೆಯ ಜವಾಬ್ದಾರಿಯನ್ನು ಹೊರಬೇಕು. ನನಗೆ 1.2 ಕೋಟಿ ರೂ. ಸಾಲವಿದೆ. ಪ್ರತಿ ತಿಂಗಳು ಸಾಲದ ಕಂತುಗಳು ಮತ್ತು ಕ್ರೆಡಿಟ್ ಕಾರ್ಡ್ ಇಎಂಐಗಳನ್ನು ಕಟ್ಟಲೇಬೇಕಿದೆ. ಇಂದಿಗೂ ನನ್ನ ಕೆಲ ಸ್ನೇಹಿತರು ಇದಕ್ಕೆಲ್ಲಾ ಹಣ ನೀಡುತ್ತಿದ್ದಾರೆ. ಇವನ ಬಳಿ ದುಡ್ಡಿಲ್ಲ ಎಂಬ ವಿಷಯ ಸ್ಪಷ್ಟವಾಗಿ ಗೊತ್ತಿದ್ದರೂ ಕೂಡ ಅವರೆಲ್ಲಾ ಹಣ ನೀಡ್ತಿದ್ದಾರೆ. ತುಂಬ ಒಳ್ಳೆಯ ಮನಸಿನ ಸ್ನೇಹಿತರಿದ್ದಾರೆ. ಇವರೇ ಸದ್ಯ ನನ್ನೆಲ್ಲಾ ಸಾಲಗಳನ್ನು ಕಟ್ಟಲು ಸಹಕರಿಸುತ್ತಿರುವ ಜೀವಗಳು. ನಾನೀಗ ಒಂದೊಳ್ಳೆ ಕೆಲಸ ಪಡೆಯಲೇಬೇಕು. ಈ ಮೂಲಕ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಬೇಕು” ಎಂದು ಕಣ್ಣೀರಿಟ್ಟಿದ್ದಾರೆ.
“ಕಳೆದ ಒಂದೂವರೆ ತಿಂಗಳಿಂದ ಸರಿಯಾಗಿ ಊಟ ಮಾಡಿಲ್ಲ. ಕೇವಲ ಜ್ಯೂಸ್, ಹಾಲು ಮತ್ತು ಟೀ ಇಲ್ಲವಾದರೆ ಎಳನೀರನ್ನು ಸೇವಿಸುತ್ತಲೇ ದಿನ ಕಳೆಯುತ್ತಿರುವೆ. 4 ವರ್ಷದಿಂದ ಒಂದೇ ಒಂದು ಕೆಲಸವು ಕೈಹಿಡಿಯುತ್ತಿಲ್ಲ. ಯಾವುದೇ ಹೊಸ ಉದ್ಯಮ ಶುರುಮಾಡಿದರೂ ಸಹ ಅದು ವಿಫಲವಾಗುತ್ತಿದೆ” ಎಂದು ಅಳಲು ತೋಡಿಕೊಂಡಿದ್ದಾರೆ. ಸದ್ಯ ಗುರುಚರಣ್ ಸಿಂಗ್ರ ಈ ಹೇಳಿಕೆ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಕೆಲವರು ನಿಮ್ಮ ಯುಪಿಐ ಖಾತೆ ಸಂಖ್ಯೆ ತಿಳಿಸಿ, ಹಣ ವರ್ಗಾವಣೆ ಮಾಡ್ತೇವೆ ಎಂದು ಸಹಾಯಕ್ಕೆ ಮುಂದಾಗಿದ್ದಾರೆ.
ಇದನ್ನೂ ನೋಡಿ: ಕಾರ್ಮಿಕರ ಹೋರಾಗಳಲ್ಲಿ ಸೂರಿ ನೆನಪು | ಕಾಂ ಸೂರಿ ನಾಟಕ Janashakthi Media